ಮೂರನೇ ಅಲೆಯಲ್ಲಿ ಕೋವಿಡ್‌ ಸೋಂಕು ಹರಡುವುದು ಜಾಸ್ತಿಯಾದರೂ ಗಂಭೀರತೆ ಕಡಿಮೆ ಎಂದು ತಜ್ಞರು ಅಭಿಪ್ರಾಯಪಟ್ಟಿರುವ ಹಿನ್ನೆಲೆಯಲ್ಲಿ 1ನೇ ತರಗತಿಯಿಂದ 5ನೇ ತರಗತಿವರೆಗೆ ಮಾತ್ರ ಶಾಲೆಗಳನ್ನು ಬಂದ್‌ ಮಾಡಿ, 6ನೇ ತರಗತಿಯಿಂದ ಶಾಲೆಗಳನ್ನು ಮಾರ್ಗಸೂಚಿಗಳ ಪಾಲನೆಯೊಂದಿಗೆ ನಡೆಸಬೇಕು ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಆಗ್ರಹಿಸಿದ್ದಾರೆ.

ಬೆಂಗಳೂರು (ಜ. 16): ಮೂರನೇ ಅಲೆಯಲ್ಲಿ ಕೋವಿಡ್‌ ಸೋಂಕು (Covid Third Wave) ಹರಡುವುದು ಜಾಸ್ತಿಯಾದರೂ ಗಂಭೀರತೆ ಕಡಿಮೆ ಎಂದು ತಜ್ಞರು ಅಭಿಪ್ರಾಯಪಟ್ಟಿರುವ ಹಿನ್ನೆಲೆಯಲ್ಲಿ 1ನೇ ತರಗತಿಯಿಂದ 5ನೇ ತರಗತಿವರೆಗೆ ಮಾತ್ರ ಶಾಲೆಗಳನ್ನು ಬಂದ್‌ ಮಾಡಿ, 6ನೇ ತರಗತಿಯಿಂದ ಶಾಲೆಗಳನ್ನು ಮಾರ್ಗಸೂಚಿಗಳ ಪಾಲನೆಯೊಂದಿಗೆ ನಡೆಸಬೇಕು ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ (Basavaraj Horatti) ಆಗ್ರಹಿಸಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲೆಗಳನ್ನು ಬಂದ್‌ ಮಾಡಿದರೆ ಮಕ್ಕಳ ಕಲಿಕೆ ಮೇಲೆ ಪರಿಣಾಮ ಬೀರಲಿದೆ. ಕೋವಿಡ್‌ ಮೂರನೇ ಅಲೆ ಗಂಭೀರವಾಗಿಲ್ಲ. ಈ ಹಿನ್ನೆಲೆಯಲ್ಲಿ ಶಾಲೆಗಳಿಗೆ ಬಿಡುವು ನೀಡುವುದು ಬೇಡ, ಸಾಮಾಜಿಕ ಅಂತರ, ನಿಯಮಗಳನ್ನು ಪಾಲಿಸಿ ಶಾಲೆ ನಡೆಸುವುದು ಉತ್ತಮ. ಪೋಷಕರ ಆತಂಕವನ್ನು ದೂರ ಮಾಡಿ ಶಾಲೆಗಳನ್ನು ನಡೆಸಬೇಕು. 

ಶಾಲೆಗಳ ವಿಚಾರದಲ್ಲಿ ಸರ್ಕಾರ ಸ್ಪಷ್ಟನಿರ್ಧಾರ ಕೈಗೊಳ್ಳಬೇಕು. ಜಿಲ್ಲಾಧಿಕಾರಿಗಳಿಗೆ ಅಧಿಕಾರ ಕೊಡುವುದು ಸರಿಯಲ್ಲ. ಒಂದೊಂದು ಜಿಲ್ಲೆಗೆ ಒಂದೊಂದು ರೀತಿ ಬೇಡ. ತೆಗೆದುಕೊಂಡರೆ ಒಂದೇ ತೀರ್ಮಾನ ಇರಬೇಕು. ‘ವಿದ್ಯಾಗಮನ’ ಕಾರ್ಯಕ್ರಮದಿಂದ ಮಕ್ಕಳಿಗೆ ಯಾವುದೇ ಪ್ರಯೋಜನವಾಗಲಿಲ್ಲ. ಗುಡಿಯಲ್ಲಿ, ಮರದ ಕೆಳಗೆ ಪಾಠ ಮಾಡುವುದು ಸರಿಯಲ್ಲ ಎಂದು ಹೇಳಿದರು.

Karnataka Politics: ರಾಜೀನಾಮೆ ನೀಡಲು ಮುಂದಾದ ಸ್ಪೀಕರ್‌ ಹೊರಟ್ಟಿ

ಗ್ರಾಮೀಣ ಮಕ್ಕಳಿಗೆ ಆನ್‌ಲೈನ್‌ ಉಪಯೋಗವಿಲ್ಲ: ‘ಅನ್‌ಲೈನ್‌ ಶಿಕ್ಷಣ ನಗರ ಪ್ರದೇಶಗಳ ಮಕ್ಕಳಿಗೆ ಅನುಕೂಲವಾಗುತ್ತದೆ, ಆದರೆ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಆಗಲ್ಲ. ನೆಟ್‌ವರ್ಕ್, ವಿದ್ಯುತ್‌ ಸಮಸ್ಯೆ ಇರುತ್ತದೆ. ಬಹಳಷ್ಟು ಮಕ್ಕಳಲ್ಲಿ ಮೊಬೈಲ್‌ ಇರಲ್ಲ. ಬಡಮಕ್ಕಳ ಬಳಿ ಏನೂ ಇರಲ್ಲ. ಅಂತಹವರು ಎಲ್ಲಿ ಹೋಗಬೇಕು? ಆನ್‌ಲೈನ್‌ ತರಗತಿಯಿಂದ ಶ್ರೀಮಂತರ ಮಕ್ಕಳು ಕಲಿಯುತ್ತಾರೆ, ಬಡವರ ಮಕ್ಕಳು ಕಲಿಕೆಯಿಂದ ದೂರ ಉಳಿಯುತ್ತಾರೆ’ ಎಂದು ಆತಂಕ ವ್ಯಕ್ತಪಡಿಸಿದರು. 

ಆದ್ದರಿಂದ ಪರಿಸ್ಥಿತಿ ನೋಡಿಕೊಂಡು ಸರ್ಕಾರ ಸೂಕ್ತ ತೀರ್ಮಾನ ಮಾಡಬೇಕು. ಹಳ್ಳಿಯಲ್ಲೊಂದು, ಪಟ್ಟಣದಲ್ಲೊಂದು ನಿರ್ಧಾರ ಬೇಡ. ಒಂದೇ ರೀತಿಯ ಶಿಕ್ಷಣ ಮಕ್ಕಳಿಗೆ ಸಿಗಬೇಕು ಎಂದರು. ‘ಲಾಕ್‌ಡೌನ್‌ ಮಾಡುವುದು, ಬಿಡುವುದು ಸರ್ಕಾರಕ್ಕೆ ಬಿಟ್ಟವಿಚಾರ. ಆದರೆ ಲಾಕ್‌ಡೌನ್‌ ಮಾಡಿದರೆ ಸಮಸ್ಯೆ ಹೆಚ್ಚಳವಾಗಲಿದೆ. ವಿಮಾನ, ರೈಲು, ಬಸ್‌ಗಳಿಗೆ ಅವಕಾಶ ನೀಡಿ ಲಾಕ್‌ಡೌನ್‌ ಮಾಡಲು ಬರುವುದಿಲ್ಲ. ಲಾಕ್‌ಡೌನ್‌ ಕೋವಿಡ್‌ ಪರಿಹಾರವೂ ಅಲ್ಲ’ ಎಂದು ಹೇಳಿದರು.

ಪ್ರತ್ಯೇಕ ರಾಜ್ಯ ಬೇಡ, ಸಮಗ್ರ ಕರ್ನಾಟಕವೇ ಇರಲಿ: ಇತ್ತೀಚಿನ ವರ್ಷಗಳಲ್ಲಿ ಆಗಾಗ ಉತ್ತರ ಕರ್ನಾಟಕ (North Karnataka) ಪ್ರತ್ಯೇಕ ರಾಜ್ಯದ ಧ್ವನಿ ಅಲ್ಲಲ್ಲಿ ಕೇಳಿ ಬರುತ್ತಿವೆ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ (Separate State) ಧ್ವನಿ ಎತ್ತುವುದು ಸರಿಯಲ್ಲ. ನಮಗೆ ಅದು ಬೇಡ. ಸಮಗ್ರ ಕರ್ನಾಟಕ ಬೇಕು ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.

Teacher Recruitment: ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಸರ್ಕಾರಕ್ಕೆ ಗಡುವು ನೀಡಿದ ಸಭಾಪತಿ

ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಕಲ್ಯಾಣಮಂಟಪದಲ್ಲಿ ಎಸ್‌.ಎಂ. ಅಗಡಿ ಅವರು 35 ವರ್ಷಗಳಿಂದ ಶಿಕ್ಷಕರಾಗಿ, ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಪ್ರಯುಕ್ತ ಶ್ರೀಗಳಿಗೆ, ಗಣ್ಯರಿಗೆ ಆಯೋಜಿಸಿದ್ದ ಗುರುವಂದನೆ ಹಾಗೂ ಕೃತಜ್ಞತಾ ಸಮರ್ಪಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾವು ಸಮಗ್ರ ಕರ್ನಾಟಕದಲ್ಲಿ ಇದ್ದು, ಸಮಗ್ರ ಕರ್ನಾಟಕದಿಂದಲೇ (Karnataka) ಅಭಿವೃದ್ಧಿ ಮಾಡೋಣ ಎಂದರು.