ಮತ್ತೆ ಸಿಡಿದೆದ್ದ ಜಯ ಮೃತ್ಯುಂಜಯ ಸ್ವಾಮೀಜಿ: ಸರ್ಕಾರಕ್ಕೆ ಖಡಕ್ ಎಚ್ಚರಿಕೆ ಸಂದೇಶ
* ಪಂಚಮಸಾಲಿಗೆ 2A ಮೀಸಲಾತಿ ವಿಚಾರ
* ಮತ್ತೆ ಸಿಡಿದೆದ್ದ ಜಯ ಮೃತ್ಯುಂಜಯ ಸ್ವಾಮೀಜಿ
* ರಾಜ್ಯ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ಸಂದೇಶ ರವಾನೆ
ಮೈಸೂರು, (ಜುಲೈ.05): ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ವಿಚಾರವಾಗಿ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಮತ್ತೆ ಸಿಡಿದೆದ್ದಿದ್ದು, ಮುಂಚಿತವಾಗಿಯೇ ರಾಜ್ಯ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.
ಮೈಸೂರಿನಲ್ಲಿ ಇಂದು (ಸೋಮವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ ಕೊಟ್ಟ ಮಾತಿನಂತೆ ಭರವಸೆ ಈಡೇರಿಸಬೇಕು. ಇಲ್ಲವಾದರೆ ಮತ್ತೆ ಹೋರಾಟ ಅನಿವಾರ್ಯ. ಈ ಬಾರಿಯೂ ಅರಮನೆ ಮೈದಾನದಲ್ಲೇ ಹೋರಾಟ ಎಂದು ಎಚ್ಚರಿಸಿದರು.
ಬಿಜೆಪಿ ನಾಯಕತ್ವ ಬದಲಾವಣೆ ಮಧ್ಯೆ ಪಂಚಮಸಾಲಿ ಸ್ವಾಮೀಜಿಗಳ ಸಭೆ: ಮೀಟಿಂಗ್ ನಡೆಸಿದ್ದೇಕೆ?
20ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸಿ ಹೋರಾಟ ನಡೆಸಲಾಗುವುದು. ಒಂದು ಬಾರಿ ನಮ್ಮ ಹೋರಾಟ ನಿರ್ಲಕ್ಷ್ಯ ಮಾಡಿ ಬಿಜೆಪಿ ನಷ್ಟ ಅನುಭವಿಸಿದೆ. ಎರಡು ಉಪ ಚುನಾವಣೆಯಲ್ಲೂ ಕೈ ಸುಟ್ಟುಕೊಂಡಿದೆ. ಮತ್ತೆ ಈ ತಪ್ಪು ಮಾಡಬೇಡಿ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಸರ್ಕಾರಕ್ಕೆ ಕಿವಿ ಮಾತು ಹೇಳಿದರು.
ಯತ್ನಾಳರಂತಹ ನಾಯಕರು ವಿಧಾನಸಭೆಯಲ್ಲಿ ಇದ್ದಿದ್ದಕ್ಕೆ ನಮ್ಮ ಪರ ಧ್ವನಿ ಆಯ್ತು. ಇದೇ ಕಾರಣಕ್ಕೆ ಸದನದಲ್ಲೂ ಅದು ರೆಕಾರ್ಡ್ ಆಯ್ತು.
ಯಡಿಯೂರಪ್ಪ ನಮ್ಮ ಸಮುದಾಯದ ಪ್ರಶ್ನಾತೀತ ನಾಯಕ. ಅವರ ಅವಧಿಯಲ್ಲೇ ನಮಗೆ ಮೀಸಲಾತಿ ಸಿಗಬೇಕು ಜಯ ಮೃತ್ಯುಂಜಯ ಸ್ವಾಮೀಜಿ ಒತ್ತಾಯಿಸಿದರು.