'ಬೇರೆ ರಾಜ್ಯಗಳಲ್ಲಿ ಬಿಜೆಪಿ ಗೆದ್ದಾಗ ಇಲ್ಲಿನವರು ಪೇಡೆ ಹಂಚುತ್ತಾರೆ. ಆದರೆ ರಾಜ್ಯದಲ್ಲಿ ಏನು ಮಾಡಿದ್ದೀರಿ? ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್, ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇಲ್ಲಿ ಎಲ್ಲವೂ ಗೊಡ್ಡಿಯಾಗಿದೆ, ಹೀಗಿರುವಾಗ ಫಲಿತಾಂಶ ಎಲ್ಲಿಂದ ಬರಬೇಕು? ಎಂದು ಪ್ರಶ್ನಿಸಿದರು.

ಕೊಪ್ಪಳ (ಮೇ 08): 'ಬೇರೆ ರಾಜ್ಯಗಳಲ್ಲಿ ಬಿಜೆಪಿ ಗೆದ್ದಾಗ ಇಲ್ಲಿನವರು ಪೇಡೆ ಹಂಚುತ್ತಾರೆ. ಆದರೆ ರಾಜ್ಯದಲ್ಲಿ ಏನು ಮಾಡಿದ್ದೀರಿ? ಇಲ್ಲಿ ಎಲ್ಲವೂ ಗೊಡ್ಡಿಯಾಗಿದೆ, ಹೀಗಿರುವಾಗ ಫಲಿತಾಂಶ ಎಲ್ಲಿಂದ ಬರಬೇಕು? ಮಕ್ಕಳಾಗಲು ಸಾಧ್ಯವೇ?' ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಪ್ರಶ್ನಿಸಿದರು.

ಕೊಪ್ಪಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸ್ವಪಕ್ಷದ ನಾಯಕರ ವಿರುದ್ಧವೇ ಮತ್ತೊಮ್ಮೆ ಗುಡುಗಿದ್ದಾರೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, 'ಈ ತಂದೆ-ಮಕ್ಕಳು ಇರುವವರೆಗೂ ನಾನು ಬಿಜೆಪಿ ಕಚೇರಿ ಮೆಟ್ಟಿಲು ಹತ್ತಲ್ಲ' ಎಂದು ಗುಡುಗಿದ್ದಾರೆ.

ಇಲ್ಲಿ ಎಲ್ಲವೂ ಗೊಡ್ಡು, ಎಲ್ಲಿಂದ ಮಕ್ಕಳಾಗುತ್ತವೆ?

ಬಿಜೆಪಿಯ ಪ್ರಸ್ತುತ ಸ್ಥಿತಿಯ ಬಗ್ಗೆ ವ್ಯಂಗ್ಯವಾಡಿದ ಯತ್ನಾಳ್, 'ಬೇರೆ ರಾಜ್ಯಗಳಲ್ಲಿ ಬಿಜೆಪಿ ಗೆದ್ದಾಗ ಇಲ್ಲಿನವರು ಪೇಡೆ ಹಂಚುತ್ತಾರೆ. ಆದರೆ ರಾಜ್ಯದಲ್ಲಿ ಏನು ಮಾಡಿದ್ದೀರಿ? ಇಲ್ಲಿ ಎಲ್ಲವೂ ಗೊಡ್ಡಿಯಾಗಿದೆ, ಹೀಗಿರುವಾಗ ಫಲಿತಾಂಶ ಎಲ್ಲಿಂದ ಬರಬೇಕು? ಮಕ್ಕಳಾಗಲು ಸಾಧ್ಯವೇ?' ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು. ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಮೇಲೆ ನಡೆದ ಎಲ್ಲಾ ಚುನಾವಣೆಗಳಲ್ಲೂ ಬಿಜೆಪಿ ಸೋತಿದೆ. 25 ಸಂಸದರಿದ್ದ ಸ್ಥಾನ ಈಗ 17ಕ್ಕೆ ಇಳಿದಿದೆ. ಇದೆಲ್ಲವೂ ಅವರ 'ಡೀಲಿಂಗ್' ರಾಜಕಾರಣದ ಫಲ ಎಂದು ಆರೋಪಿಸಿದರು.

ಯಡಿಯೂರಪ್ಪ ಅಭಿಮಾನೋತ್ಸವದ ಹಿಂದಿದೆ 'ರಿನಿವಲ್' ತಂತ್ರ!

ಶೀಘ್ರದಲ್ಲೇ ನಡೆಯಲಿರುವ ಯಡಿಯೂರಪ್ಪ ಅಭಿಮಾನೋತ್ಸವದ ಬಗ್ಗೆ ಕಿಡಿಕಾರಿದ ಅವರು, 'ಯಾವ ಪುರುಷಾರ್ಥಕ್ಕೆ ಈ ಉತ್ಸವ ಮಾಡುತ್ತಿದ್ದಾರೆ? ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿ ಬಂದವರಿಗಾ ಈ ಸಂಭ್ರಮ? ವಿಜಯೇಂದ್ರ ಅವರ ರಾಜ್ಯಾಧ್ಯಕ್ಷ ಅವಧಿ ನವೆಂಬರ್‌ಗೆ ಮುಕ್ತಾಯವಾಗಲಿದೆ. ಆ ಸ್ಥಾನವನ್ನು ಉಳಿಸಿಕೊಳ್ಳಲು (ರಿನಿವಲ್) ಹೈಕಮಾಂಡ್ ಮುಂದೆ ತಾವು ದೊಡ್ಡ ಲಿಂಗಾಯತ ನಾಯಕರು ಎಂದು ಬಿಂಬಿಸಿಕೊಳ್ಳಲು ಈ ನಾಟಕವಾಡುತ್ತಿದ್ದಾರೆ' ಎಂದು ಲೇವಡಿ ಮಾಡಿದರು.

ಸಾವಿರಾರು ಕೋಟಿ ಗಳಿಸಿದ್ದೀರಿ, ಸಮಾಜಕ್ಕೆ ನಿಮ್ಮ ಕೊಡುಗೆ ಏನು?

ಯಡಿಯೂರಪ್ಪ ಕುಟುಂಬದ ಆಸ್ತಿಪಾಸ್ತಿ ಬಗ್ಗೆ ವಾಗ್ದಾಳಿ ನಡೆಸಿದ ಅವರು, 'ಒಂದು ಕಾಲದಲ್ಲಿ ನಿಮ್ಮ ಮನೆಯಲ್ಲಿ ಒಂದು ಕಾರ್ ಇರಲಿಲ್ಲ. ಈಗ ಪ್ರದರ್ಶನಕ್ಕಿಟ್ಟಿರುವ ಹಳೆಯ ಅಂಬಾಸಿಡರ್ ಕಾರ್ ಕೂಡ ಬಿಜೆಪಿಯದ್ದು. ಸಾವಿರಾರು ಕೋಟಿ ರೂಪಾಯಿ ಗಳಿಸಿದ್ದೀರಿ, ಆದರೆ ಸಮಾಜಕ್ಕೆ ನಿಮ್ಮ ವೈಯಕ್ತಿಕ ಕೊಡುಗೆ ಏನು?' ಎಂದು ಪ್ರಶ್ನಿಸಿದರು. ಕೇವಲ ಅಧಿಕಾರ ಹಿಡಿದು ಹಣ ಮಾಡುವುದೇ ಇವರ ಗುರಿ ಎಂದು ಕಿಡಿಕಾರಿದರು.

ಡಿ.ಕೆ. ಶಿವಕುಮಾರ್ ವಿರುದ್ಧ ಆಕ್ರೋಶ!

ಇದೇ ವೇಳೆ ಕಾಂಗ್ರೆಸ್ ನಾಯಕರ ಬಗ್ಗೆಯೂ ಮಾತನಾಡಿದ ಯತ್ನಾಳ್, 'ಡಿ.ಕೆ. ಶಿವಕುಮಾರ್ ಅವರಂತಹ ಅಯೋಗ್ಯ ಮತ್ತು ರಾಕ್ಷಸ ರಾಜಕಾರಣಿ ಯಾರೂ ಇಲ್ಲ. ಅವರಿಗಿಂತ ಸಿದ್ದರಾಮಯ್ಯ ಎಷ್ಟೋ ಉತ್ತಮ' ಎಂದರು. ಅಲ್ಲದೆ, ಹಿಂದುತ್ವದ ವಿಚಾರಧಾರೆ ಇರುವವರು ಪಕ್ಷದ ನೇತೃತ್ವ ವಹಿಸಿಕೊಂಡರೆ ಮಾತ್ರ ನಾನು ಸಕ್ರಿಯವಾಗಿ ಭಾಗವಹಿಸುತ್ತೇನೆ. ಅಲ್ಲಿಯವರೆಗೆ ಈ ಭ್ರಷ್ಟ ತಂದೆ-ಮಕ್ಕಳ ಜೊತೆ ಗುರುತಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.