ಬೆಳಗಾವಿ(ಡಿ.06): ಭಗತ್ ಸಿಂಗ್ ಹಾಗೂ ಅಂಬೇಡ್ಕರ್ ಅವರನ್ನು ಮೂಲಭೂತವಾದಿ ಸಂಘಟನೆಗಳು ಹೈಜಾಕ್ ಮಾಡಿಕೊಂಡಿವೆ ಎಂದು ಸಾಹಿತಿ ಡಾ.ಬರಗೂರ ರಾಮಚಂದ್ರಪ್ಪ ವಿಷಾದ ವ್ಯಕ್ತಪಡಿಸಿದ್ದಾರೆ.

ಸದಾಶಿವ ನಗರದ ಸ್ಮಶಾನದಲ್ಲಿ ಅಂಬೇಡ್ಕರ ಪರಿನಿರ್ವಾಣ ದಿನದ ಅಂಗವಾಗಿ ಮಾನವ ಬಂಧುತ್ವ ವೇದಿಕೆ ವತಿಯಿಂದ ನಡೆಯುತ್ತಿರುವ ಮೌಢ್ಯ ವಿರೋಧಿ ಪರಿವರ್ತನಾ ದಿನದಲ್ಲಿ ಬರಗೂರು ರಾಮಚಂದ್ರಪ್ಪ ಮಾತನಾಡಿದರು.

ಓಟಿಗಾಗಿ ಅಂಬೇಡ್ಕರ್ ಅಪಹರಣವಾಗುತ್ತಿದ್ದು, ಇವರನ್ನು ಬಿಡುಗಡೆಗೊಳಿಸುವ ಕೆಲಸ ನಡೆಯಬೇಕಿದೆ ಎಂದು ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು. ಓಟಿಗಾಗಿ ಅಂಬೇಡ್ಕರ್ ಅವರನ್ನು ಬಳಸಿಕೊಳ್ಳುತ್ತಿರುವ ಮೂಢರಿಗೆ ಅವರ ಶಬ್ದ ಕೂಡ ಗೊತ್ತಿರಲಿಲ್ಲ ಎಂದು ಅವರು ಹರಿಹಾಯ್ದರು. 

ದೇವರು ಎನ್ನುವುದೇ ಶೋಷಣೆಯ ಸರಕಾಗಿರುವ ಇಂದಿನ ದಿನಗಳಲ್ಲಿ ಈ ದೇಶದ ಪ್ರಗತಿಪರರು ದೊಡ್ಡ ಸವಾಲು ಎದುರಿಸಿ ನಿಲ್ಲಬೇಕಿದೆ ಎಂದು ಬರಗೂರು ರಾಮಚಂದ್ರಪ್ಪ ಕರೆ ನೀಡಿದರು.

ವಿಧಾನಸಭೆ, ಲೋಕಸಭೆ ಮೌಡ್ಯ ಮುಕ್ತವಾಗಬೇಕು ಎಂದು ಆಗ್ರಹಿಸಿದ ಹಿರಿಯ ಸಾಹಿತಿ, ಸ್ಮಶಾನದಿಂದ ಸಿಂಹಾಸನದ ಕಡೆ ನಮ್ಮ ನಡಿಗೆ ಹೋಗಬೇಕಿದೆ. ಇದು ಸಿಂಹಾಸನ ಅಲ್ಲ ಪ್ರಜಾ ಆಸನ ಎನ್ನುವುದನ್ನು ತೋರಿಸಿ ಕೊಡಬೇಕಿದೆ ಎಂದು ಗುಡುಗಿದರು.