ತಂದೆ ಸುಂದರ ಶೆಟ್ಟಿ ನಿಧನದ ಹಿನ್ನೆಲೆಯಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಭೂಗತ ಪಾತಕಿ ಬನ್ನಂಜೆ ರಾಜ 14 ದಿನಗಳ ಪೆರೋಲ್ ಮೇಲೆ ಉಡುಪಿಗೆ ಆಗಮಿಸಿ, ಮಲ್ಪೆಯಲ್ಲಿ ಅಂತ್ಯಕ್ರಿಯೆ ನೆರವೇರಿಸಿದ್ದಾನೆ. ಬೆಳಗಾವಿ ಹಿಂಡಲಗಾ ಜೈಲಿನಲ್ಲಿದ್ದ ರಾಜನಿಗೆ ಹೈಕೋರ್ಟ್ ಪೆರೋಲ್ ಮಂಜೂರು ಮಾಡಿದೆ. ಕಟ್ಟುನಿಟ್ಟಿನ ಷರತ್ತುಗಳೊಂದಿಗೆ ಮೇ ೧೪ರವರೆಗೆ ಪೆರೋಲ್ ನೀಡಲಾಗಿದೆ.

ಉಡುಪಿ (ಮೇ.4): ಭೂಗತ ಪಾತಕಿ ಬನ್ನಂಜೆ ರಾಜಾ ತಂದೆ ವಿಧಿವಶವಾಗಿರುವ ಹಿನ್ನೆಲೆಯಲ್ಲಿ ಜೈಲಿನಲ್ಲಿದ್ದ ಭೂಗತ ಪಾತಕಿ ಬನ್ನಂಜೆ ರಾಜ ಪೆರೋಲ್ ಮೇಲೆ ತನ್ನ ಹುಟ್ಟೂರಿಗೆ ಬಂದಿದ್ದಾನೆ. ತನ್ನ ತಂದೆ ಸುಂದರ ಶೆಟ್ಟಿಗಾರ್ (86) ಏಪ್ರಿಲ್ 27ರಂದು ಮೃತಪಟ್ಟ ಹಿನ್ನೆಲೆಯಲ್ಲಿ 14 ದಿನಗಳ ಪೆರೋಲ್ ರಜೆಯಲ್ಲಿ ಉಡುಪಿಗೆ ಆಗಮಿಸಿದ್ದು, ಮಲ್ಪೆ ಬಾಪುತೋಟದಲ್ಲಿ ಸುಂದರ ಶೆಟ್ಟಿಗಾರ್ ಅಂತಿಮ ವಿಧಿ ವಿಧಾನ ನೆರವೇರಿದೆ. ಮಲ್ಪೆ ಹಿಂದೂ ರುದ್ರ ಭೂಮಿಯಲ್ಲಿ ಬನ್ನಂಜೆ ರಾಜಾ ತನ್ನ ತಂದೆಯ ಅಂತ್ಯಸಂಸ್ಕಾರ ನೆರವೇರಿಸಿದ್ದಾನೆ. ಕುಟುಂಬ ಸದಸ್ಯರು ನೂರಾರು ಆಪ್ತರು ಗ್ರಾಮಸ್ಥರು ಈ ವೇಳೆ ಭಾಗಿಯಾಗಿದ್ದರು.

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಉದ್ಯಮಿ ಆರ್‌.ಎನ್‌.ನಾಯಕ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಬನ್ನಂಜೆ ರಾಜ ಬೆಳಗಾವಿಯಲ್ಲಿ ಹಿಂಡಲಗಾ ಜೈಲಿನಲ್ಲಿದ್ದ. ತಂದೆ ತಂದೆ ಸುಂದರ ಶೆಟ್ಟಿ ಮರಣದ ಹಿನ್ನೆಲೆ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಬೇಕೆಂದು ಹೈಕೋರ್ಟ್‌ಗೆ ಪೆರೋಲ್ ಅರ್ಜಿ ಸಲ್ಲಿಸಿದ್ದ. ಕೋಟ್ ಪೆರೋಲ್ ನೀಡಿದ್ದು, ಬಿಗಿ ಪೊಲೀಸ್ ಭದ್ರತೆಯಲ್ಲಿ ಬನ್ನಂಜೆ ರಾಜಾನನ್ನು ಉಡುಪಿಗೆ ಕರೆತರಲಾಗಿದೆ. ಹೀಗಾಗಿ ಪೆರೋಲ್ ಮೇಲೆ ಮನೆಯಲಿ ಇರಲಿದ್ದು, ಮೇ.14ರವರೆಗೆ ಇರಲಿದ್ದಾನೆ. ಈ ಪೆರೋಲ್ ಅವಧಿಯಲ್ಲಿ ಹಲವಾರು ಕಟ್ಟುನಿಟ್ಟಿನ ಷರತ್ತುಗಳನ್ನು ವಿಧಿಸಲಾಗಿದೆ. ಮೊಬೈಲ್ ಫೋನ್ ಬಳಸಲು ಅಥವಾ ಇಂಟರ್ನೆಟ್ ಬಳಸಲು ಅನುಮತಿ ಇಲ್ಲ. ಅಂತ್ಯಕ್ರಿಯೆಯ ಆಚರಣೆಗಳಲ್ಲಿ ಪಾಲ್ಗೊಳ್ಳುವುದನ್ನು ಹೊರತುಪಡಿಸಿ, ಅವರು ತಮ್ಮ ಮನೆಯಿಂದ ಹೊರಗೆ ಹೋಗಲು ಅವಕಾಶವಿಲ್ಲ.

2015ನೇ ಇಸವಿಯಲ್ಲಿ ಭೂಗತ ಪಾತಕಿ ಬನ್ನಂಜೆ ರಾಜನನ್ನು ದಕ್ಷಿಣ ಆಫ್ರಿಕಾದ ಮೊರಾಕೋ ದೇಶದಲ್ಲಿ ಬಂಧಿಸಿದ್ದು, ಬಳಿಕ ಭಾರತಕ್ಕೆ ಹಸ್ತಾಂತರಿಸಲಾಗಿತ್ತು. ಭಾರತಕ್ಕೆ ಹಸ್ತಾಂತರಿಸಿದ ನಂತರ ಆತನ ವಿರುದ್ಧ ದಾಖಲಾದ ಎಲ್ಲ ಪ್ರಕರಣಗಳಲ್ಲಿ ಪೊಲೀಸರು ಹೆಚ್ಚುವರಿ ತನಿಖೆ ನಡೆಸಿ ಹೆಚ್ಚುವರಿ ದೋಷಾರೋಪಣಾ ಪಟ್ಟಿಸಲ್ಲಿಸಿದ್ದರು. ಬನ್ನಂಜೆ ರಾಜಾ ಒಟ್ಟು 23 ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದಾನೆ. ಕೆಲವು ಪ್ರಕರಣವನ್ನು ರದ್ದು ಮಾಡಲಾಗಿದೆ.