ಸುರಂಗ ಕಾರ್ಮಿಕರ ರಕ್ಷಣೆಯಲ್ಲಿ ಬಂಗಾರಪೇಟೆ ಎಂಜಿನಿಯರ್ ಭಾಗಿ!
ಉತ್ತರಾಖಂಡದ ಉತ್ತರಕಾಶಿ ಬಳಿ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನು ಹೊರತೆಗೆಯಲು ರಾಜ್ಯದಿಂದ ತೆರಳಿದ್ದ 9 ಮಂದಿ ಮೈನಿಂಗ್ ಎಂಜಿನಿಯರ್ ತಂಡದಲ್ಲಿ ಬಂಗಾರಪೇಟೆ ಪಟ್ಟಣದ ಎಚ್.ಎಸ್.ವೆಂಕಟೇಶ್ ಪ್ರಸಾದ್ ಕೂಡ ಸೇರಿದ್ದು ಕಾರ್ಮಿಕರನ್ನು ಹೊರತರಲು ಶ್ರಮಿಸಿದ್ದಾರೆ.
ಬಂಗಾರಪೇಟೆ (ಡಿ.1) : ಉತ್ತರಾಖಂಡದ ಉತ್ತರಕಾಶಿ ಬಳಿ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನು ಹೊರತೆಗೆಯಲು ರಾಜ್ಯದಿಂದ ತೆರಳಿದ್ದ 9 ಮಂದಿ ಮೈನಿಂಗ್ ಎಂಜಿನಿಯರ್ ತಂಡದಲ್ಲಿ ಬಂಗಾರಪೇಟೆ ಪಟ್ಟಣದ ಎಚ್.ಎಸ್.ವೆಂಕಟೇಶ್ ಪ್ರಸಾದ್ ಕೂಡ ಸೇರಿದ್ದು ಕಾರ್ಮಿಕರನ್ನು ಹೊರತರಲು ಶ್ರಮಿಸಿದ್ದಾರೆ.
ರಕ್ಷಣಾ ಇಲಾಖೆ ಹಾಗೂ ಭಾರತೀಯ ಸೇನಾ ಪಡೆಯ ಮೇಲಾಧಿಕಾರಿಗಳ ಸೂಚನೆ ಮೇರೆಗೆ ಬೆಂಗಳೂರಿನ ಸ್ಕ್ವಾಡ್ರೋನ್ ಇನ್ಫ್ರಾ ಆ್ಯಂಡ್ ಮೈನಿಂಗ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಯ ಸಿಇಒ ಸೈರಿಕ್ ಜೋಸೆಪ ನೇತೃತ್ವದಲ್ಲಿ ಕರ್ನಾಟಕದಿಂದ ತೆರಳಿದ್ದ ಮೈನಿಂಗ್ ಎಂಜಿನಿಯರುಗಳ ತಂಡದಲ್ಲಿ ವೆಂಕಟೇಶ್ ಪ್ರಸಾದ್ ಸೇರಿ 9 ಮಂದಿ ಎಂಜಿನಿಯರುಗಳು ಇದ್ದರು.
News Hour: ಸುರಂಗದಿಂದ ಸಾವನ್ನು ಗೆದ್ದ ಬಂದ 41 ಕಾರ್ಮಿಕರು
ವೆಂಕಟೇಶ್ ಪ್ರಸಾದ್ ಪಟ್ಟಣದ ಪತ್ರಕರ್ತರಾದ ಕಲಾವತಿ ಹಾಗೂ ಎಚ್.ಎಲ್.ಸುರೇಶ್ ಅವರ ದ್ವಿತೀಯ ಪುತ್ರ. ಹಿಂದೂಸ್ತಾನ್ ಜಿಂಕ್ ಲಿಮಿಟೆಡ್, ನವಭಾರತ್ ಬಿಲ್ಟಿಂಗ್ ಸ್ಟೋನ್ ಕ್ವಾರಿಯಲ್ಲಿ ಮೈನಿಂಗ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದು, 4 ತಿಂಗಳಿನಿಂದ ಬೆಂಗಳೂರಿನ ಸ್ಕ್ವಾಡ್ರೋನ್ ಇನ್ಫ್ರಾ ಆ್ಯಂಡ್ ಮೈನಿಂಗ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಟೀಮ್ ವರ್ಕ್‌ನ ಶ್ರೇಷ್ಠ ಉದಾಹರಣೆ, ಸಿಲ್‌ಕ್ಯಾರಾ ಸುರಂಗ ಯಶಸ್ವಿ ಕಾರ್ಯಾಚರಣೆಗೆ ಮೋದಿ ಸಂತಸ!
ಈ ಸಂಬಂಧ ವೆಂಕಟೇಶ್ ಪ್ರಸಾದ್ ಮಾತನಾಡಿ, ಉತ್ತರಕಾಶಿಯಲ್ಲಿ ಹೊಸದಾಗಿ ನಿರ್ಮಾಣ ಮಾಡುತ್ತಿದ್ದ ಸುರಂಗ ಮಾರ್ಗದಲ್ಲಿ ಸಿಲುಕಿಕೊಂಡಿದ್ದ ೪೧ ಕಾರ್ಮಿಕರ ಹೊರತೆಗೆಯಲು ನಮ್ಮ ಸಂಸ್ಥೆಗೆ ಕರ್ನಲ್ ದೀಪಕ್ ಪಾಟೀಲ್ ಕರೆ ಮಾಡಿ ನೆರವು ಕೋರಿದ್ದರಿಂದ ೯ ಮಂದಿ ಹೋಗಿದ್ದೆವು. ಅಲ್ಲಿ ಕೆಲಸ ಮಾಡುವಾಗ ಊಟ, ನಿದ್ದೆ ಬಗ್ಗೆ ಗಮನವಿರಲಿಲ್ಲ. ಕೊನೆಗೂ ನಾವು ಹೋದ ಕೆಲಸದಲ್ಲಿ ಯಶಸ್ಸು ಸಿಕ್ಕಿದ್ದರಿಂದ ಸಂತೋಷವಾಗಿದೆ ಎಂದರು.