'ಕನ್ನಡದಿಂದಾಗಿಯೇ ಬೆಂಗಳೂರು ಕುಸಿಯುತ್ತದೆ..' Diljit Dosanjh ಶೋ ವೇಳೆ ಯುವತಿಗೆ ಕಿರುಕುಳ!
ಬೆಂಗಳೂರಿನಲ್ಲಿ ನಡೆದ ದಿಲ್ಜಿತ್ ದೊಸಾಂಜ್ ಶೋ ಸೂಪರ್ ಹಿಟ್ ಆಗಿತ್ತು. ಆದರೆ, ಈ ಶೋನಲ್ಲಿ ಭಾಗವಹಿಸಿದ್ದ ಮಹಿಳೆಯೊಬ್ಬಳು ತನಗೆ ಕಿರುಕುಳ ನೀಡಲಾಗಿದೆ ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಬೆಂಗಳೂರು (ಡಿ.8): ಬೆಂಗಳೂರಿನಲ್ಲಿ ದಿಲ್ಜಿತ್ ದೋಸಾಂಜ್ ಅವರ ಬಹು ನಿರೀಕ್ಷಿತ ದಿಲ್-ಲುಮಿನಾಟಿ ಟೂರ್ ಮ್ಯೂಸಿಕ್ ಕಾನ್ಸರ್ಟ್ ಭಾಷಾ ವಿವಾದದ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ. ಈ ಇವೆಂಟ್‌ನಲ್ಲಿ ಭಾಗವಹಿಸಿದ್ದ ಎಕ್ಸ್ ಯೂಸರ್ ಒಬ್ಬರು ಈ ಬಗ್ಗೆ ಬರೆದುಕೊಂಡಿದ್ದಾರೆ. ಹಿಂದಿ-ಕನ್ನಡ ಚರ್ಚೆಯ ನಡುವೆ ತಮಗೆ ಆಗಿರುವ ಕಿರುಕುಳದ ಬಗ್ಗೆ ಅವರು ಪೋಸ್ಟ್‌ನಲ್ಲಿ ಬರೆದಿದ್ದಾರೆ. ತನೀಶಾ ಸಬರ್‌ವಾಲ್ ಕಾನ್ಸರ್ಟ್‌ನಲ್ಲಿ ತಮಗಾದ ಅನುಭವದ ಬಗ್ಗೆ ಪೋಸ್ಟ್ ಮಾಡಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ಮಹಿಳೆಯೊಬ್ಬಳು ನನ್ನನ್ನು ತಳ್ಳಿದ್ದಳು. ಸಾಮಾನ್ಯವಾಗಿ ಇಂಥ ಕಾರ್ಯಕ್ರಮದ ವೇಳೆ ಇದಾಗುತ್ತದೆ. ಆದರೆ, ಸ್ವಲ್ಪ ಜಾಗ ಬಿಡಿ ಎಂದು ಆ ಮಹಿಳೆಗೆ ಹೇಳಿದ ಬೆನ್ನಲ್ಲಿಯೇ ಅಲ್ಲಿ ಭಾಷಾ ಸಮಸ್ಯೆ ಉಲ್ಭಣವಾಗಿ ಹೋಯಿತು ಎಂದು ಸಬರ್‌ವಾಲ್ ಬರೆದುಕೊಂಡಿದ್ದಾರೆ. ಆದ ತಪ್ಪಿಗೆ ಮಹಿಳೆ ಕ್ಷಮೆ ಕೇಳೋದು ಬಿಟ್ಟು, ನನ್ನ ಮೇಲೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಲ್ಲದೆ, ನನಗೆ ಕನ್ನಡದಲ್ಲಿ ಮಾತನಾಡುವಂತೆ ಪದೇ ಪದೇ ಹೇಳುತ್ತಿದ್ದಳು ಎಂದು ಬರೆದಿದ್ದಾರೆ.
ಈ ಹಂತದಲ್ಲಿ ಸ್ನೇಹಿತೆಯೊಬ್ಬಳು ನನ್ನ ಪರವಾಗಿ ಮಾತನಾಡಿದ ಕಾರಣ ಪರಿಸ್ಥಿತಿ ಇನ್ನಷ್ಟು ವಿಕೋಪಕ್ಕೆ ತಿರುಗಿತು. ಮಹಿಳೆ ಇನ್ನಷ್ಟು ಹಿಂಸಾತ್ಮಕವಾಗಿದ್ದಲ್ಲದೆ, ನನ್ನ ಸ್ನೇಹಿತೆಯ ಕೈಗಳನ್ನು ಹಿಡಿದು ತಿರುಚಲು ಬಿಗಿಯಾಗಿ ತಿರುಚಲು ಆರಂಭಿಸಿದಳು. ಬಳಿಕ ಅದೇ ಮಹಿಳೆ ಪೊಲೀಸ್‌ಅನ್ನೂ ಕರೆದಿದ್ದಳು. ಆದರೆ, ತಾನು ಅದಕ್ಕಾಗಿ ಸಿದ್ದವಾಗಿದ್ದೆ ಎಂದು ತನೀಶಾ ಸಬರ್‌ವಾಲ್ ಹೇಳಿದ್ದಾರೆ. ಇಡೀ ಘಟನೆಯನ್ನು ನಾನು ರೆಕಾರ್ಡ್ ಮಾಡಿದ್ದರಿಂದ, ಪೊಲೀಸ್ ಅಧಿಕಾರಿಗಳ ಬಂದಾಗ ಅವರ ಎದುರು ದಾಖಲೆಗಳನ್ನು ಇಟ್ಟು ಮಾತನಾಡಿದ್ದಲ್ಲದೆ, ಅಲ್ಲಾಗಿರುವ ಎಲ್ಲಾ ಘಟನೆಯನ್ನು ವಿವರಿಸಿದೆ ಎಂದಿದ್ದಾಳೆ.
'ನಾನು ಎಂದೂ ಈ ಮಾತನ್ನು ಆಡುತ್ತೇನೆ ಎಂದು ಅಂದುಕೊಂಡಿರಲೇ ಇಲ್ಲ. ಆದರೆ, ಇಷ್ಟು ವರ್ಷಗಳ ಕಾಲ ಇಲ್ಲಿ ವಾಸವಿದ್ದ ಬಳಿಕ ಈಗಂತೂ ಅರ್ಥವಾಗಿದೆ. ಈ ಭಾಷಾ ವಿವಾದದಿಂದ ಬೆಂಗಳೂರು ಶೀಘ್ರದಲ್ಲಿಯೇ ಕುಸಿಯಲಿದೆ. ನೀವೇನಾದರೂ 'ಹಾಗಿದ್ದರೆ ಕಲಿಯಿರಿ..' ಎಂದು ಹೇಳುವವರಾಗಿದ್ದರೆ, ಅದನ್ನು ಹೇಳಬಹುದು. ಆದರೆ, ಇಲ್ಲಾಗಿರುವ ಘಟನೆಯನ್ನೊಮ್ಮೆ ಓದಿ. ನಿನ್ನೆಯ ದಿಲ್ಜಿತ್ ಕಾನ್ಸರ್ಟ್‌ನ ಅನುಭವ ನನಗೆ ಅತ್ಯಂತ ಕೆಟ್ಟದಾಗಿತ್ತು' ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಪೊಲೀಸರು ಬಂದು ಹೋದ ಬಳಿಕ ಮಹಿಳೆ ಅಳಲು ಆರಂಭಿಸಿದ್ದಲ್ಲದೆ, ಕುಸಿದು ಬೀಳುವಂತೆ ನಟಿಸಲು ಶುರುಮಾಡಿದಳು. ಬಳಿಕ ಇಡೀ ಘಟನೆಯ ವಿಡಿಯೋ ಡಿಲೀಟ್ ಮಾಡುವಂತೆ ಬೇಡಿಕೆ ಇಟ್ಟಳು ಎಂದು ತಿಳಿಸಿದ್ದಾರೆ.
ಉದ್ಘಾಟನೆ ಆದ ಬೆನ್ನಲ್ಲೇ ಎದುರಾಯ್ತು ಲೀಲಾವತಿ ದೇಗುಲಕ್ಕೆ ಕುತ್ತು!
'ಎಲ್ಲವನ್ನು ತಿಳಿಸಿದ ಬಳಿಕ ಪೊಲೀಸರು ಅಲ್ಲಿಂದ ಹೋದವರು ಮತ್ತೆ ಬರಲೇ ಇಲ್ಲ. ಈಗ ಆಕೆಯ ಬಳಿ ಇದ್ದದ್ದು ವುಮೆನ್ ಕಾರ್ಡ್ ಪ್ಲೇ ಮಾಡೋದು ಮಾತ್ರ. ಅಳಲು ಆರಂಭ ಮಾಡಿದರು. ಕುಸಿದು ಬೀಳುವಂತೆ ನಟಿಸಿ 'ಡ್ರಾಮಾ' ಶುರು ಮಾಡಿದರು. ನೆನಪಿರಲಿ. ಆಕೆಯ ಅಕ್ಕಪಕ್ಕದಲ್ಲಿ ಯಾರೂ ಇರಲಿಲ್ಲ. ಗಲಾಟೆ ಆರಂಭಿಸಿದ ಬಳಿಕ ಆಕೆಯ ಸ್ನೇಹಿತೆಯರೆಲ್ಲಾ ಬಿಟ್ಟು ಹೋಗಿದ್ದರು. ಇದ್ದೊಬ್ಬ ಗೆಳತಿ ಆಕೆಯನ್ನು ಸೀಟಿಂಗ್ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಲ್ಲದೆ, ನನ್ನ ಬಳಿ ಆ ವಿಡಿಯೋ ಡಿಲೀಟ್ ಮಾಡಿ ಎಂದು ಕೇಳಿದರು. ನಮ್ಮ ದೇಶದಲ್ಲಿ ಈ ರೀತಿ ಆಗುತ್ತಿರುವುದಕ್ಕೆ ಬೇಸರವಾಗುತ್ತಿದೆ. ನಾನು ಈ ಭಾಷಾ ಕಲ್ಪನೆ ಮತ್ತು ಈ ನಕಲಿ ಸ್ತ್ರೀವಾದವನ್ನು ದ್ವೇಷಿಸುತ್ತೇನೆ. ಹಾಗೆ ಉಳಿಸಿದ ಏಕೈಕ ವಿಷಯವೆಂದರೆ ವೀಡಿಯೊ. ನಿಮ್ಮ ಸ್ವಂತ ಜನರನ್ನೇ ನೀವು ಈ ರೀತಿ ಕಾಣುತ್ತಿದ್ದೀರಿ ಎಂದಾದರೆ, ವಿದೇಶದಲ್ಲಿ ಆಗುವ ವರ್ಣಬೇಧದ ನೀತಿಯ ಬಗ್ಗೆ ಮಾತನಾಡುವ ಯಾವ ಹಕ್ಕೂ ನಿಮಗಿರೋದಿಲ್ಲ' ಎಂದು ಎಕ್ಸ್‌ನಲ್ಲಿ ಬರೆದಿದ್ದಾರೆ.
ಎಂದಿನಂತೆ ತನೀಶಾ ಅವರ ಪೋಸ್ಟ್ ಎಕ್ಸ್‌ನಲ್ಲಿ ಸಾಕಷ್ಟು ಚರ್ಚೆಗಳಿಗೆ ಕಾರಣವಾಗಿದೆ. ಅನೇಕ ಬಳಕೆದಾರರು ಭಾಷೆ ಮತ್ತು ಪ್ರಾದೇಶಿಕ ಹೆಮ್ಮೆಯ ವಿವಾದಾತ್ಮಕ ವಿಷಯದ ಬಗ್ಗೆ ಕಾಮೆಂಟ್ ಪೋಸ್ಟ್ ಮಾಡಿದ್ದಾರೆ. ಇನ್ನೂ ಕೆಲವರು, ಕನ್ನಡವಲ್ಲದ ಯಾವ ಶೋಗೆ ಆಕೆ ಬಂದಿದ್ದಾರೋ ಆ ಶೋನಲ್ಲಿ ಇಷ್ಟೆಲ್ಲಾ ರಾದ್ದಾಂತ ಮಾಡಿರುವುದು ವಿಪರ್ಯಾಸ ಎಂದಿದ್ದಾರೆ. ಅಚ್ಚರಿ ಏನೆಂದರೆ, ದಿಲ್ಜಿತ್ ಕನ್ನಡದಲ್ಲಿ ಹಾಡು ಹೇಳಿಲ್ಲ. ಆತ ಪಂಜಾಬಿಯಲ್ಲಿ ಹಾಡಿದ್ದ. ಇದು ಹಿಂದಿಗೆ ಸ್ವಲ್ಪ ಸನಿಹದ ಭಾಷೆ. ಉತ್ತರ ಭಾರತೀಯರು ಹೆಚ್ಚಿನವರು ಪಂಜಾಬಿಯನ್ನು ಅರ್ಥಮಾಡಿಕೊಳ್ಳಬಲ್ಲವರು. ಅಷ್ಟಾಗಿ ಭಾಷೆಯ ಬಗ್ಗೆ ಮಾತನಾಡುವವರು ದಿಲ್ಜಿತ್ ಶೋಗೆ ಬಂದಿದ್ದೇ ಅಚ್ಚರಿ ಎಂದಿದ್ದಾರೆ.