ಕನ್ನಡದ ಹಿರಿಯ ನಟಿ ಲೀಲಾವತಿ ಅವರ ಸ್ಮಾರಕ ನಿರ್ಮಾಣವಾದ ಕೆಲವೇ ದಿನಗಳಲ್ಲಿ ಸರ್ಕಾರದಿಂದ ಕುತ್ತು ಎದುರಾಗಿದೆ. ನೆಲಮಂಗಲದಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಜಾಗ ಅಂತಿಮಗೊಳಿಸಿದ್ದು, ಇದರಿಂದಾಗಿ ಲೀಲಾವತಿ ಸ್ಮಾರಕ ಸ್ಥಳಾಂತರಗೊಳ್ಳುವ ಸಾಧ್ಯತೆ ಇದೆ.

ಬೆಂಗಳೂರು (ಡಿ.8): ಕನ್ನಡದ ಹಿರಿಯ ನಟಿ ನಿಧನವಾಗಿ ಇಂದಿಗೆ (ಡಿಸೆಂಬರ್‌ 8) ಒಂದು ವರ್ಷ. ಅವರ ನೆನಪಿನಲ್ಲಿ ಪುತ್ರ ವಿನೋದ್‌ ರಾಜ್‌ ಡಿಸೆಂಬರ್‌ 5 ರಂದು ತಮ್ಮ ತಾಯಿಯ ನೆನಪಿನಲ್ಲಿ ಸ್ಮಾರಕವನ್ನು ನಿರ್ಮಾಣ ಮಾಡಿದ್ದು ಇದಕ್ಕೆ ಲೀಲಾವತಿ ದೇಗುಲ ಎಂದು ಹೆಸರಿಟ್ಟಿದ್ದಾರೆ. ಆದರೆ, ಲೀಲಾವತಿ ದೇಗುಲ ನಿರ್ಮಾಣವಾದ ಕೆಲವೇ ದಿನಗಳಲ್ಲಿ ಸರ್ಕಾರದಿಂದಲೇ ಇದಕ್ಕೆ ಕುತ್ತು ಎದುರಾಗಿದೆ. ರಾಜ್ಯ ಸರ್ಕಾರ ಈಗಾಗಲೇ ಕುಣಿಗಲ್‌ ಹಾಗೂ ನೆಲಮಂಗಲ ತಾಲೂಕಿನಲ್ಲಿ 2ನೇ ಅಂತಾರಾಷ್ಟ್ರೀಯ ಏರ್‌ಪೋರ್ಟ್‌ಗಾಗಿ 6 ಸಾವಿರ ಎಕರೆ ಜಾಗವನ್ನು ಅಂತಿಮ ಮಾಡಿದ್ದಾಗಿ ಸುದ್ದಿಯಾಗಿದೆ. ಇದರದ್ದು ಎನ್ನಲಾದ ಸ್ಕೆಚ್‌ ಈಗ ವೈರಲ್‌ ಆಗಿದ್ದು, ನೆಲಮಂಗಲ ತಾಲೂಕಿನ ಸ್ಥಳೀಯ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಸುಮಾರು 30 ಹಳ್ಳಿಗಳನ್ನು ಒಳಗೊಂಡಿರುವ ಉದ್ದೇಶಿತ ವಿಮಾನ ನಿಲ್ದಾಣದ ಗಡಿಗಳನ್ನು ತೋರಿಸುವ ನಕ್ಷೆಯು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರಲ್ಲಿ ಭಯ ಹುಟ್ಟಿಸಿದೆ.

ಅಧಿಕಾರಿಗಳು ಜಮೀನಿನ ಸರ್ವೆ ನಡೆಸಿದ್ದು, ನೆಲಮಂಗಲ ತಾಲೂಕಿನ ಭಟ್ಟೇರಹಳ್ಳಿ, ಯೆಂಟಗಾನಹಳ್ಳಿ, ಸೋಲದೇವನಹಳ್ಳಿ, ಮೋಟಗಾನಹಳ್ಳಿ ಗ್ರಾಮಗಳು ಸೇರಿದಂತೆ 6 ಸಾವಿರ ಎಕರೆ ಪ್ರದೇಶದಲ್ಲಿ ಉದ್ದೇಶಿತ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ ಎಂದು ವರದಿಯಾಗಿದೆ. ಈ ಪ್ರಸ್ತಾವನೆಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದು, ಇದರಿಂದ ನೂರಾರು ಕುಟುಂಬಗಳು ನಿರಾಶ್ರಿತರಾಗುವ ಜತೆಗೆ ಫಲವತ್ತಾದ ಕೃಷಿ ಭೂಮಿ ನಾಶವಾಗುವ ಆತಂಕ ಎದುರಾಗಿದೆ. ಈ ಪ್ರದೇಶದ ರೈತರು ತಲೆಮಾರುಗಳಿಂದ ಬೆಳೆಗಳನ್ನು ಬೆಳೆಸುತ್ತಿದ್ದಾರೆ, ತೋಟಗಳನ್ನು ನಿರ್ವಹಿಸುತ್ತಿದ್ದಾರೆ ಮತ್ತು ಹೈನುಗಾರಿಕೆಯಲ್ಲಿ ತೊಡಗಿದ್ದಾರೆ. 

ಇನ್ನು ಈ 6 ಸಾವಿರ ಎಕರೆ ಪ್ರದೇಶದಲ್ಲಿರುವ ಸೋಲದೇವನಹಳ್ಳಿಯ ಪ್ರದೇಶದಲ್ಲಿಯೇ ದಿವಂಗತ ನಟಿ ಡಾ.ಎಂ ಲೀಲಾವತಿ ಅವರ ಸ್ಮಾರಕವನ್ನು ನಿರ್ಮಾಣ ಮಾಡಲಾಗಿದೆ. ಹಾಗೇನಾದರೂ ಸರ್ಕಾರ ಇದೇ ಜಾಗವನ್ನು ಏರ್‌ಪೋರ್ಟ್‌ಗೆ ಅಂತಿಮ ಮಾಡಿದಲ್ಲಿ ಲೀಲಾವತಿ ಸ್ಮಾರಕವನ್ನು ಬೇರೆಡೆಗೆ ಸ್ಥಳಾಂತರ ಮಾಡುವ ಅನಿವಾರ್ಯತೆ ಎದುರಾಗಲಿದೆ. ಉದ್ದೇಶಿತ ವಿಮಾನ ನಿಲ್ದಾಣದ ವಿರುದ್ಧ ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ. ತಮ್ಮ ಸಮಸ್ಯೆಗಳನ್ನು ಪರಿಹರಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆಯನ್ನು ನೀಡಿದ್ದಾರೆ.

ಸೂಪರ್‌ ಸ್ಟಾರ್‌ ಆಗಿರುವ ಮಗ, ಸೊಸೆ ಮೇಲೆ ಹಲ್ಲೆ ಮಾಡಿದ ಟಾಲಿವುಡ್‌ನ ಪ್ರಖ್ಯಾತ ಸ್ಟಾರ್‌!

ಸ್ಥಳೀಯ ನಿವಾಸಿಯೊಬ್ಬರು, “ನಾವು ಹಲವಾರು ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದೇವೆ, ನಮ್ಮ ಪೂರ್ವಜರೂ ಇಲ್ಲಿ ವಾಸಿಸುತ್ತಿದ್ದರು. 4-5 ವರ್ಷಗಳಿಂದ ಸಾಕಷ್ಟು ಶ್ರಮದಿಂದ ತೋಟ ಬೆಳೆಸಿದ್ದೆ. ಕಟಾವಿನ ಸಮಯದಲ್ಲಿ ವಿಮಾನ ನಿಲ್ದಾಣ ನಿರ್ಮಾಣದ ಬಗ್ಗೆ ಸರ್ಕಾರ ಅನಗತ್ಯ ಸುದ್ದಿ ಹಬ್ಬಿಸುತ್ತಿದೆ. ನಾನು ಮರುಪಾವತಿ ಮಾಡಬೇಕಾದ ಸಾಲಗಳನ್ನು ಹೊಂದಿದ್ದೇನೆ. ಈ ಭಾಗದ ರೈತರು ತಮ್ಮ ಫಲವತ್ತಾದ ಭೂಮಿಯನ್ನು ಬಿಟ್ಟುಕೊಡಲು ಸಿದ್ಧರಿಲ್ಲ. ನೆಲಮಂಗಲದಲ್ಲಿ ನಮಗೆ ಯಾವುದೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೇಡ. ಈ ಪ್ರಸ್ತಾವನೆಯನ್ನು ವಿರೋಧಿಸಿ ಈ ಭಾಗದ ಜನರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ' ಎಂದಿದ್ದಾರೆ.

Shivamogga: ಶರಾವತಿ ಪಂಪ್ಡ್‌ ಸ್ಟೋರೇಜ್‌ ಪ್ರಾಜೆಕ್ಟ್‌; ಪಶ್ಚಿಮ ಘಟ್ಟದಲ್ಲಿ ಡ್ರಿಲ್ಲಿಂಗ್‌, ಬ್ಲಾಸ್ಟಿಂಗ್‌, 14 ಸಾವಿರ ಮರ ಕಟ್