ಅಲ್ಪಸಂಖ್ಯಾತರಾದ್ರೆ ಹೇಗೆ ಫೀಲ್ ಆಗುತ್ತೆ ಅಂತಾ ನನಗೆ ಅಮೆರಿಕದಲ್ಲಿ ಗೊತ್ತಾಯ್ತು: ಸೌಮ್ಯ ರೆಡ್ಡಿ
ಅಮೆರಿಕದಲ್ಲಿ ವಿದ್ಯಾಭ್ಯಾಸ ಮಾಡುವಾಗ ನನಗೆ ಯಾವುದೇ ದೇಶದಲ್ಲಿ ಅಲ್ಪಸಂಖ್ಯಾತರಾದಲ್ಲಿ ಹೇಗೆ ಫೀಲ್ ಆಗುತ್ತದೆ ಅನ್ನೋದು ನನಗೆ ಅರಿವಾಯ್ತು ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಹೇಳಿದ್ದಾರೆ.
ಬೆಂಗಳೂರು (ಏ.22): ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ, ಇತ್ತೀಚೆಗೆ ಯೂಟ್ಯೂಬ್ ಸಂದರ್ಶನದಲ್ಲಿ ತಮ್ಮ ರಾಜಕೀಯ ಜೀವನದ ಆರಂಭಿಕ ದಿನಗಳು. ಅಮೆರಿಕದಲ್ಲಿ ವಿದ್ಯಾಭ್ಯಾಸ ಮಾಡಿದ ದಿನಗಳ ಬಗ್ಗೆ ಮಾತನಾಡಿದ್ದಾರೆ. ಆರ್‌ಜೆ ರಾಪಿಡ್ ರಶ್ಮಿ ಶೋನಲ್ಲಿ ಮಾತನಾಡಿರುವ ಸೌಮ್ಯ ರೆಡ್ಡಿ, ಅಂದಾಜು 1 ಗಂಟೆಯ ಶೋನಲ್ಲಿ ಹಲವು ವಿಚಾರಗಳ ಬಗ್ಗೆ ತಿಳಿಸಿದ್ದಾರೆ. ಅದರೊಂದಿಗೆ ಒಂದು ದೇಶದಲ್ಲಿ ಅಲ್ಪಸಂಖ್ಯಾತರಾದ್ರೆ ಹೇಗೆ ಫೀಲ್ ಆಗುತ್ತೆ ಅನ್ನೋದು ನನಗೆ ಅಮೆರಿಕದಲ್ಲಿ ಫೀಲ್ ಆಯ್ತು ಎಂದು ಹೇಳಿದ್ದಾರೆ. ಸೌಮ್ಯ ರೆಡ್ಡಿ, ಸಚಿವ ರಾಮಲಿಂಗ ರೆಡ್ಡಿ ಅವರ ಪುತ್ರಿ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಅಲ್ಪ ಮತಗಳ ಅಂತರದಲ್ಲಿ ಸೋಲು ಕಂಡಿದ್ದ ಸೌಮ್ಯ ರೆಡ್ಡಿ, ಈ ಬಾರಿ ಹಾಲಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕಣಕ್ಕಿಳಿದಿದ್ದಾರೆ. ಭರ್ಜರಿ ಪ್ರಚಾರ ಕೈಗೊಂಡಿರುವ ಸೌಮ್ಯ ರೆಡ್ಡಿ ಜಯದ ನಿರೀಕ್ಷೆಯಲ್ಲೂ ಇದ್ದಾರೆ.
ನಾನು ಅಮೆರಿಕದಲ್ಲಿ ಮೂರು ವರ್ಷವಿದ್ದೆ. ಆರ್‌ವಿ ಕಾಲೇಜಿನಲ್ಲಿ ಕೆಮಿಕಲ್ ಇಂಜಿನಿಯರಿಂಗ್ ಪೂರೈಸಿದ ಬಳಿಕ, ಎನ್ವಿರಾರ್ನಮೆಂಟಲ್ ಟೆಕ್ನಾಲಜಿ ಓದುವ ಸಲುವಾಗಿ ಅಮೆರಿಕದ ನ್ಯೂಯಾರ್ಕ್‌ಗೆ ಹೋಗಿದ್ದೆ. ಅಲ್ಲಿ ಮೂರು ವರ್ಷಗಳ ಕಾಲ ನಾನು ವಿದ್ಯಾಭ್ಯಾಸ ಮಾಡಿದ್ದೆ. ನನ್ನ ಜೀವನದಲ್ಲಿ ಮೊಟ್ಟಮೊದಲ ಬಾರಿಗೆ ಜನಾಂಗೀಯ ನಿಂದನೆಯನ್ನು ಎದುರಿಸಿದ್ದೆ ಎಂದು ಸೌಮ್ಯ ರೆಡ್ಡಿ ಹೇಳಿದ್ದಾರೆ.
ಜನಾಂಗೀಯ ನಿಂದನೆಯನ್ನು ಎದುರಿಸುವಾಗ ನಾನು ಹೆಮ್ಮೆಯಿಂದ ಅಂದುಕೊಳ್ಳುತ್ತಿದ್ದೆ. ನಮ್ಮ ದೇಶದಲ್ಲಂತೂ ಈ ರೀತಿ ಆಗೋದಿಲ್ಲ. ನಾವು ಏನ್ ಬೇಕಾದರೂ ಹೇಳಬಹುದು. ಯಾರೂ ನಮ್ಮನ್ನು ಜೈಲಿಗೆ ಹಾಕೋದಿಲ್ಲ. ಆದರೆ, ನನ್ನ ಜೀವನದಲ್ಲಿ ಮೊಟ್ಟಮೊದಲ ಬಾರಿಗೆ ಒಂದು ದೇಶದಲ್ಲಿ ನಾವು ಮೈನಾರಿಟಿಯಾದ್ರೆ ಹೇಗೆ ಫೀಲ್ ಆಗುತ್ತೆ ಅನ್ನೋದು ನನಗೆ ಅಲ್ಲಿ ಗೊತ್ತಾಯಿತು. ಇದೆಲ್ಲವೂ ಆಗಿದ್ದು ಅಮೆರಿಕದಲ್ಲಿ. ಅಲ್ಲಿ ನಾನು ಜನಾಂಗೀಯ ನಿಂದನೆ ಎದುರಿಸಿದ್ದೆ. ನ್ಯೂಯಾರ್ಕ್ ಟ್ರಾನ್ಸಿಟ್ ಅಂತಾ ಇದೆ. ಟ್ರೇನ್‌ನಲ್ಲಿ ಪ್ರಯಾಣ ಮಾಡೋವಾಗ ಯಾರೋ ಸಡನ್ ಆಗಿ ಯಾರೋ ಬಂದು ಬಿಡೋರು. ಟ್ರೇನ್ ಟಿಕೆಟ್ ಎಲ್ಲಿ ಅಂತಾ ಕೇಳ್ತಿದ್ದರು. ನನ್ನಲ್ಲಿ ಟ್ರೇನ್ ಟಿಕೆಟ್ ಇತ್ತು. ಆದರೂ ಸಹ 10-20 ಸಾರಿ ಟ್ರೇನ್ ಟಿಕೆಟ್ ಕೇಳ್ತಾ ಇದ್ರು. ಆತನೇನೂ ಟಿಕೆಟ್ ಕಲೆಕ್ಟರ್ ಕೂಡ ಆಗಿರಲಿಲ್ಲ. ನಾನು ಟಿಕೆಟ್ ಇಲ್ಲದೆ ಪ್ರಯಾಣ ಮಾಡ್ತಿದ್ದೆ ಅಂತಾ ಆತ ಅಂದುಕೊಂಡಿದ್ದ. ನಾನು ಇಂಡಿಯನ್ ಆಗಿದ್ದ ಕಾರಣಕ್ಕೆ ಇದೆಲ್ಲವೂ ಆಗಿತ್ತು ಎಂದು ಹೇಳಿದ್ದಾರೆ.
ನಾನು ಇರೋ ಪ್ರದೇಶದಲ್ಲೂ ತುಂಬಾ ಭಾರತೀಯರೇ ಇದ್ದರು. ಆ ಬಳಿಕ ನನಗೆ ಅನಿಸಿದ್ದು ಏನೆಂದರೆ, ಯಾಕೆ ಇಲ್ಲಿರಬೇಕು ಅಂತಾ? ದಿನದ ಕೊನೆಗೆ ಅನಿಸೋದು ಏನೆಂದರೆ, ನಾನು ಆ ದೇಶಕ್ಕೆ 2ನೇ ದರ್ಜೆಯ ಪ್ರಜೆ ಮಾತ್ರ. ಇದರಿಂದಾಗಿ ಆಗಲೇ ನನಗೆ ದೇಶಸೇವೆ ಮಾಡಬೇಕು ಅಂತಾ ಅನಿಸಿತ್ತು. ಚಿಕ್ಕವಯಸ್ಸಿನಿಂದಲೂ ಇದ್ದ ಆಸೆಗೆ ಇಲ್ಲಿ ರೂಪ ಸಿಕ್ಕಿತ್ತು. ಹಾಗಾಗಿ ವಿದ್ಯಾಭ್ಯಾಸ ಮುಗಿದ ಬಳಿಕ ಭಾರತಕ್ಕೆ ವಾಪಸ್ ಆಗಿದ್ದೆ. ಫ್ರೆಂಡ್ ಮದುವೆಗಾಗಿ ನಾನು ಭಾರತಕ್ಕೆ ಬಂದಿದ್ದೆ. ಅದೇ ದಿನ ಸೆಕ್ಷನ್ 377 ವಾಪಾಸ್ ತೆಗೆದುಕೊಳ್ಳಲಾಗಿತ್ತು. ಹಾಗೆ ಬಂದವಳು ನಾನು ವಾಪಾಸ್ ಹೋಗಲೇ ಇಲ್ಲ. ನನ್ನ ಬಟ್ಟೆ-ಗಿಟ್ಟೆ ಎಲ್ಲವೂ ಅಮೆರಿಕದಲ್ಲಿಯೇ ಉಳಿಯಿತು. ಅದಾದ ಬಳಿಕ, ಪ್ರಾಣಿ ಸಂರಕ್ಷಣೆ, ವೈಲ್ಡ್‌ಲೈಫ್ ಹಾಗೂ ಪರಿಸರ ಸಂರಕ್ಷಣೆಯಲ್ಲಿ ಕೆಲಸ ಮಾಡಿದೆ ಎಂದು ಸೌಮ್ಯ ರೆಡ್ಡಿ ಹೇಳಿದ್ದಾರೆ.
ಬೆಂಗಳೂರು ನಗರವನ್ನು ಗಾರ್ಬೇಜ್ ಸಿಟಿ ಮಾಡಿದ ಬಿಜೆಪಿ: ಸೌಮ್ಯಾರೆಡ್ಡಿ
ನಾನು ರಾಜಕೀಯಕ್ಕೆ ಬರೋದು ಅಪ್ಪ-ಅಪ್ಪನಿಗೆ ಇಷ್ಟವೇ ಇರಲಿಲ್ಲ. ಮನೆ ಮುಂದೆ ಕಸ ಬಿದ್ದಿದ್ದರೆ ಸಾಕು ನಾನು ರಾಮಲಿಂಗಾ ರೆಡ್ಡಿ ಮಗಳು ಅಂತಾ ಜನ ಸುಮ್ನೆ ಇರೋದಿಲ್ಲ. ಇಡೀ ದಿನ ಫುಲ್ ಬೈಗುಳವೇ. ಆದರೆ, ರಾಜಕೀಯಕ್ಕೆ ಬರಬೇಕು ಅನ್ನೋದು ನಿರ್ಧಾರವಾಗಿತ್ತು ಅನ್ಸುತ್ತೆ. ಅದಕ್ಕಾಗಿಯೇ ಈ ಫೀಲ್ಡ್‌ಗೆ ಬಂದೆ ಎಂದು ಸೌಮ್ಯ ರೆಡ್ಡಿ ಹೇಳಿದ್ದಾರೆ.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಗ್ಯಾರಂಟಿ ಕರಪತ್ರ ಹಂಚಿದ ಕೈ ಅಭ್ಯರ್ಥಿ ಸೌಮ್ಯಾರೆಡ್ಡಿ ಮೇಲೆ ಎಫ್‌ಐಆರ್!