ಬಳ್ಳಾರಿಯ ಬ್ಯಾನರ್ ಗಲಾಟೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿಯೇ ಪ್ರಮುಖ ಆರೋಪಿಯಾಗಿದ್ದು, ಅವರ ವಿರುದ್ಧ ದ್ವೇಷಭಾಷಣ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಬೇಕೆಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.
ಹುಬ್ಬಳ್ಳಿ: ಬಳ್ಳಾರಿಯಲ್ಲಿ ಬ್ಯಾನರ್ ಗಲಾಟೆ ನಡೆಸಿದ್ದು, ಹಲ್ಲೆ ನಡೆಸಿದ್ದು, ಗುಂಡು ಹೊಡೆದಿದ್ದು ಹಾಗೂ ಸತ್ತಿದ್ದು ಕಾಂಗ್ರೆಸ್ ಪಕ್ಷದವರು. ಆದರೆ, ಪ್ರಕರಣ ದಾಖಲಾಗಿದ್ದು ಮಾತ್ರ ಬಿಜೆಪಿಯ ಜನಾರ್ದನ ರೆಡ್ಡಿ, ಶ್ರೀರಾಮುಲು ಹಾಗೂ ಇತರರ ವಿರುದ್ಧ ಏಕೆ ಎಂದು ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದರು.
ಬ್ಯಾನರ್ ಘಟನೆಯ ಪ್ರಮುಖ ಆರೋಪಿ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ ಆಗಿದ್ದು, ಸರ್ಕಾರ ಇವರ ಮೇಲೆ ದ್ವೇಷಭಾಷಣ ಕಾಯ್ದೆಯಡಿ ಮೊದಲ ಪ್ರಕರಣ ದಾಖಲಿಸಿ ಬಂಧಿಸುವಂತೆ ಶನಿವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು. ಬಳ್ಳಾರಿಯಲ್ಲಿ ಬ್ಯಾನರ್ ಅಳವಡಿಸಿದಾಗ ನಡೆದ ಗಲಾಟೆಯ ವೇಳೆ ಶಾಸಕ ಜನಾರ್ದನ ರೆಡ್ಡಿ ಸ್ಥಳದಲ್ಲಿರಲಿಲ್ಲ. ಆಗ ಸ್ಥಳಕ್ಕೆ ಬಂದ ಶಾಸಕ ಭರತ್ ರೆಡ್ಡಿ, ಐದು ನಿಮಿಷದಲ್ಲಿ ಜನಾರ್ದನ ರೆಡ್ಡಿ ಅವರ ಮನೆ ಸುಟ್ಟು ಹಾಕುತ್ತಿದ್ದೆ, ಮೂರ್ತಿ ಪ್ರತಿಷ್ಠಾಪನೆಯಿಂದಾಗಿ ಬಿಟ್ಟಿದ್ದೇನೆ ಎಂದು ಬೆದರಿಕೆ ಹಾಕಿದ್ದರು. ಇದು ದ್ವೇಷ ಭಾಷಣ ಕಾಯ್ದೆಯಡಿ ಬರುವುದಿಲ್ಲವೇ? ಎಂದು ಪ್ರಶ್ನಿಸಿದರು.
ಸರ್ಕಾರಿ ಗನ್ ಮ್ಯಾನ್‌ಗಳು ಬಳಸುವ ಗುಂಡಿಗೆ ಕಡ್ಡಾಯವಾಗಿ ಲೆಕ್ಕ ನೀಡಬೇಕು. ಈಗಿನ ಶಾಸಕರು ಖಾಸಗಿಯಾಗಿ ಸಾಕಷ್ಟು ಮಂದಿ ಗನ್ ಮ್ಯಾನ್‌ಗಳನ್ನು ಇಟ್ಟುಕೊಂಡಿದ್ದಾರೆ. ಗುಂಡು ಹಾರಿಸಿ ಎಲ್ಲೋ ತಲೆ ಮರೆಸಿಕೊಳ್ಳುತ್ತಾರೆ. ಅವರು ಬಳಸುವ ಗುಂಡಿಗೆ ಲೆಕ್ಕ ಏಕೆ ಇಲ್ಲ? ಗುಂಪುಗೂಡಿದ್ದು ಎಂದು ಹರಿಹಾಯ್ದರು.
ಸಿಎಂ ಸಮರ್ಥಿಸಿಕೊಂಡಿಲ್ಲ
ಬಳ್ಳಾರಿಯಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಕಾರಣ ಯಾರು ಎನ್ನುವುದು ಮುಖ್ಯಮಂತ್ರಿಗಳಿಗೆ ಸ್ಪಷ್ಟವಾಗಿ ತಿಳಿದಿದೆ. ಹೀಗಾಗಿಯೇ ಈ ಘಟನೆಯನ್ನು ಅವರು ಸಮರ್ಥಿಸಿಕೊಂಡಿಲ್ಲ. ಶಾಸಕ ಭರತ್ ರೆಡ್ಡಿ ದೂರವಾಣಿ ಕರೆ ಮಾಡಿದರೂ ಸಿಎಂ ಅವರ ಜೊತೆ ಮಾತನಾಡಲಿಲ್ಲ. ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಜತೆ ಮಾತನಾಡಿ, ಶಾಸಕರಿಗೆ ಬುದ್ಧಿ ಹೇಳುವಂತೆ ಸೂಚಿಸಿದ್ದಾರೆ. ಮುಖ್ಯಮಂತ್ರಿ ಯಾರು ತನ್ನವರು ಎಂದುಕೊಂಡಿದ್ದರೋ ಅವರಿಂದಲೇ ಹೆಸರು ಹಾಳಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಇದನ್ನೂ ಓದಿ: ಬಳ್ಳಾರಿ ಗೋಲಿ ಕೇಸ್ ಸಿಐಡಿಗೆ ? - ಸರ್ಕಾರದ ಉನ್ನತ ಮಟ್ಟದಲ್ಲಿ ಚರ್ಚೆ
ಬಳ್ಳಾರಿಯಿಂದ ಬೆಂಗಳೂರಿಗೆ ಪಾದಯಾತ್ರೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಹಿಂದೆ ರಿಪಬ್ಲಿಕ್ ಆಫ್ ಬಳ್ಳಾರಿ ಆಗಿದೆಯೆಂದು ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ಬಂದಿದ್ದರು. ಆದರೆ, ಈಗ ರಿಪಬ್ಲಿಕ್ ಆಫ್ ಕಾಂಗ್ರೆಸ್ ಆಗಿದೆ. ಮೊನ್ನೆ ನಡೆದ ಗಲಭೆಯ ಹಿನ್ನೆಲೆಯಲ್ಲಿ ಶಾಸಕ ನಾರಾ ಭರತ ರೆಡ್ಡಿ ಅವರ ಬೆಂಬಲಿಗ ಸತೀಶ ರೆಡ್ಡಿ ಅವರು ಸೇರಿದಂತೆ ಎಲ್ಲರನ್ನೂ ಬಂಧಿಸಬೇಕು ಇಲ್ಲವಾದರೆ ಬಳ್ಳಾರಿಯಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡುವುದಾಗಿ ಮಾಜಿ ಸಚಿವ ಶ್ರೀರಾಮುಲು ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಲಭೆ ಪ್ರಕರಣದ ಖಾಸಗಿ ಗನ್ ಮ್ಯಾನ್‌ಗಳು ಕಾಣೆಯಾಗಿದ್ದಾರೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ. ಶಾಸಕ ಭರತ್ ರೆಡ್ಡಿ ಬೆಂಬಲಿಗ ಸತೀಶ್ ರೆಡ್ಡಿ ಪ್ರಕರಣದ ಪ್ರಮುಖ ರೂವಾರಿ. ಆದರೆ ಪೊಲೀಸರು ಅವರನ್ನು ಬಂಧಿಸಲು ಮೀನಮೇಷ ಎಣಿಸುತ್ತಿದ್ದಾರೆ. ಅವರನ್ನು ಕೂಡಲೇ ಬಂಧನ ಮಾಡದಿದ್ದರೆ ಬಳ್ಳಾರಿಯಿಂದ ಪಾದಯಾತ್ರೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಇದನ್ನೂ ಓದಿ: ಬಳ್ಳಾರಿ ಬ್ಯಾನರ್ ಗಲಾಟೆಗೆ ಜನರ ಕ್ಷಮೆಯಾಚಿಸಿದ ಸಂಸದ ತುಕಾರಾಂ; ಬಂಧನ ಭೀತಿಯಿಂದಾಗಿ ಊರು ಬಿಡುತ್ತಿರುವ ಜನ



