ಬೆಂಗಳೂರು(ಜೂ.05): ಶಾಲಾ ಮಕ್ಕಳ ಮನೆ ಬಾಗಿಲಿಗೆ ಹಾಲಿನ ಪುಡಿ ವಿತರಿಸಲು ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿರುವ ಹಿನ್ನೆಲೆಯಲ್ಲಿ ಕರ್ನಾಟಕ ಹಾಲು ಒಕ್ಕೂಟ ಮಹಾಮಂಡಳಿ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದ್ದಾರೆ.

ಕೋವಿಡ್‌ ಹಿನ್ನೆಲೆಯಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳಿಗೆ ತಿಂಗಳಿಗೆ ಅರ್ಧ ಕೆಜಿ ಕೆನೆಭರಿತ ಪೌಷ್ಟಿಕ ಹಾಲಿನ ಪುಡಿ ವಿತರಿಸಲು ಕೆಎಂಎಫ್‌ ಮನವಿ ಮಾಡಿತ್ತು. ಸರ್ಕಾರ ಇದಕ್ಕೆ ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಬಾಲಚಂದ್ರ ಜಾರಕಿಹೊಳಿ ಅವರು ಯಡಿಯೂರಪ್ಪ ಅವರನ್ನು ಭೇಟಿಯಾಗಿ ಅಭಿನಂದಿಸಿದರು.

ಕೋವಿಡ್‌ನಿಂದಾಗಿ ಶಾಲಾ ಮಕ್ಕಳಿಗೆ ಕ್ಷೀರಭಾಗ್ಯ ಯೋಜನೆಯಡಿ ಹಾಲು ನೀಡಲು ಸಾಧ್ಯವಾಗಿರಲಿಲ್ಲ. ಇದನ್ನು ಮನಗಂಡ ಬಾಲಚಂದ್ರ ಜಾರಕಿಹೊಳಿ ಅವರು, ಮುಂದಿನ ಎರಡು ತಿಂಗಳಿಗೆ ಪ್ರತಿ ತಿಂಗಳಿಗೆ ಒಂದು ಮಗುವಿಗೆ ಅರ್ಧ ಕೆಜಿ ಹಾಲಿನ ಪುಡಿ ನೀಡುವುದು ಸೂಕ್ತ. ರೈತರ ಹಿತ ಕಾಯಲೂ ಸಾಧ್ಯವಾಗುತ್ತದೆ ಎಂದು ಮನವಿ ಮಾಡಿದ್ದರು.

ಪ್ರತಿ ಲೀಟರ್‌ ಜೊತೆ 40 ML ಉಚಿತ ಹಾಲು: ಕೆಎಂಎಫ್‌ ಬಂಪರ್‌

ಕೆಎಂಎಫ್‌ ಮನವಿಯಲ್ಲಿ ಏನಿತ್ತು?

ರಾಜ್ಯದಲ್ಲಿ ಒಟ್ಟು 64 ಲಕ್ಷ ಶಾಲಾ ಮಕ್ಕಳಿದ್ದು ಅವರಿಗೆ ತಿಂಗಳಿಗೆ ಅರ್ಧ ಕೆಜಿ ಕೆನೆಭರಿತ ಹಾಲಿನ ಪುಡಿ ನೀಡಿಬೇಕು. ಅರ್ಧ ಕೆಜಿಗೆ 144.37 ರು. ಆಗಲಿದೆ. (ಸರ್ಕಾರದ ದರ 288.75 ರು. ಪ್ರತಿ ಕೆಜಿಗೆ) ಇದಕ್ಕಾಗಿ ರಾಜ್ಯ ಸರ್ಕಾರವು 92.32 ಕೋಟಿ ರು. ಭರಿಸಿದರೆ ಸಾಕು ಮುಂದಿನ 2 ತಿಂಗಳು ಹಾಲು ಉತ್ಪಾದಕರ ನೆರವಿಗೆ ಸರ್ಕಾರ ಧಾವಿಸಿದಂತಾಗುತ್ತದೆ. ಅಲ್ಲದೆ, ಪ್ರತಿನಿತ್ಯ ಮಕ್ಕಳು 1 ಲೋಟ ಹಾಲನ್ನು ಸೇವಿಸಿದಂತಾಗುತ್ತದೆ ಎಂದು ಕೆಎಂಎಫ್‌ ಮನವಿ ಮಾಡಿತ್ತು.

ಸರ್ಕಾರ ಈ ಯೋಜನೆಗೆ ಹೊಸದಾಗಿ ಹಣ ಹೊಂದಿಸಬೇಕಿಲ್ಲ. ಪ್ರಸಕ್ತ ಸಾಲಿನ ಈ ಯೋಜನೆಗೆ 653 ಕೋಟಿ ರು. ನಿಗದಿಯಾಗಿದ್ದು, ಅದನ್ನೇ ಬಳಸಿಕೊಳ್ಳಬಹುದು. ಜತೆಗೆ ಅರ್ಧ ಕೆಜಿ ಕೆನೆಭರಿತ ಹಾಲಿನ ಪುಡಿಯನ್ನು ರಾಜ್ಯದ 64 ಲಕ್ಷ ಮಕ್ಕಳಿಗೆ ನೀಡಿದರೆ ತಿಂಗಳಿಗೆ 3200 ಮೆಟ್ರಿಕ್‌ ಟನ್‌ ಪುಡಿ ನೀಡಿದಂತಾಗುತ್ತದೆ. ಅಂದರೆ 2.62 ಲಕ್ಷ ಲೀ. ಹಾಲನ್ನು ವಿತರಣೆ ಮಾಡಿದಂತಾಗುತ್ತದೆ. ಮಾತ್ರವಲ್ಲ, ಇಷ್ಟೇ ಪ್ರಮಾಣದ ಹಾಲನ್ನು ರೈತರಿಂದ ಖರೀದಿಸಿದಂತಾಗುತ್ತದೆ ಎಂದು ಕೆಎಂಎಫ್‌ ವಿವರಿಸಿತ್ತು.

ಕೊರೋನಾ ಮೊದಲ ಅಲೆಯ ನಡುವೆಯೂ ಕೆಎಂಎಫ್‌ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿತ್ತು. ಕಟ್ಟಡ ಕಾರ್ಮಿಕರು, ನಿರ್ಗತಿಕರಿಗೆ ನಿತ್ಯ 1 ಲೀಟರ್‌ನಂತೆ 88 ಕೋಟಿ ರು. ಮೌಲ್ಯದ 8 ಲಕ್ಷ ಲೀಟರ್‌ ಹಾಲನ್ನು ಉಚಿತವಾಗಿ ವಿತರಿಸಿತ್ತು.