Asianet Suvarna News Asianet Suvarna News

ದೇಶದಲ್ಲೇ ಕೆಎಂಎಫ್‌ ನಂ.1 ಮಾಡುವೆ : ಬಾಲಚಂದ್ರ

  • ನಂದಿನಿ ಉತ್ಪನ್ನಗಳನ್ನು ದೇಶಾದ್ಯಂತ ವಿಸ್ತರಿಸಿ ಕೆಎಂಎಫ್‌ ಅನ್ನು ಹಾಲು ಉತ್ಪಾದನಾ ಸಂಸ್ಥೆಗಳಲ್ಲೇ ದೇಶದ ನಂ.1 ಸಂಸ್ಥೆಯನ್ನಾಗಿ ಪರಿವರ್ತಿಸುವ ಗುರಿ
  • ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್‌) ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ
balachandra jarkiholi says KMF will try to make number one in country snr
Author
Bengaluru, First Published Sep 5, 2021, 7:49 AM IST

 ಬೆಂಗಳೂರು (ಸೆ.05):  ನಂದಿನಿ ಉತ್ಪನ್ನಗಳನ್ನು ದೇಶಾದ್ಯಂತ ವಿಸ್ತರಿಸಿ ಕೆಎಂಎಫ್‌ ಅನ್ನು ಹಾಲು ಉತ್ಪಾದನಾ ಸಂಸ್ಥೆಗಳಲ್ಲೇ ದೇಶದ ನಂ.1 ಸಂಸ್ಥೆಯನ್ನಾಗಿ ಪರಿವರ್ತಿಸುವ ಗುರಿ ಹೊಂದಿದ್ದೇನೆ ಎಂದು ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್‌) ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.

ನಗರದ ಖಾಸಗಿ ಹೋಟೆಲ್‌ನಲ್ಲಿ ಕೆಎಂಎಫ್‌ ಅಧ್ಯಕ್ಷರಾಗಿ ಎರಡು ವರ್ಷ ಪೂರೈಸಿದ ಅಂಗವಾಗಿ ನಡೆದ ಸಂಸ್ಥೆಯ ಆಡಳಿತ ಮಂಡಳಿ ಮತ್ತು ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಕಳೆದ ಎರಡು ವರ್ಷಗಳಿಂದ ಕೆಎಂಎಫ್‌ ಅಧ್ಯಕ್ಷರಾಗಿ ಸಲ್ಲಿಸಿರುವ ಸೇವೆ ತೃಪ್ತಿ ತಂದಿದೆ. ಮುಂದೆಯೂ ಸಂಸ್ಥೆಯ ನಂದಿನಿ ಉತ್ಪನ್ನಗಳನ್ನು ಜಾಗತಿಕ ಮಟ್ಟದಲ್ಲಿ ವಿಸ್ತರಿಸಲು ಶ್ರಮಿಸುವುದಾಗಿ ಹೇಳಿದರು.

ಹಾಲಿನ ದರ ಹೆಚ್ಚಳ: ಕೆಎಂಎಫ್‌ ಅಧ್ಯಕ್ಷ ಜಾರಕಿಹೊಳಿ ಪ್ರತಿಕ್ರಿಯೆ

2021-22ನೇ ಸಾಲಿನಲ್ಲಿ 90.62 ಲಕ್ಷ ಲೀಟರ್‌ ಹಾಲು ಶೇಖರಿಸಿದ್ದು, ಇದೊಂದು ಗರಿಷ್ಠ ದಾಖಲೆಯಾಗಿದೆ. ಮುಂದಿನ ಮೂರು ವರ್ಷದ ಅವಧಿಯಲ್ಲಿ 1.35 ಕೋಟಿ ಲೀಟರ್‌ ಹಾಲು ಶೇಖರಣೆ ಮಾಡುವ ಗುರಿ ಹೊಂದಲಾಗಿದೆ. ಈ ಹಿಂದೆ ಬೆಂಗಳೂರು, ಕೋಲಾರ ಮತ್ತು ತುಮಕೂರು ಹಾಲು ಒಕ್ಕೂಟಗಳಲ್ಲಿ ಮಾತ್ರ ರಾಸುಗಳನ್ನು ವಿಮೆಗೊಳಪಡಿಸಲಾಗಿತ್ತು. ಆದರೆ ಪ್ರಸಕ್ತ ಸಾಲಿನಿಂದ ಎಲ್ಲಾ ಜಿಲ್ಲಾ ಹಾಲು ಒಕ್ಕೂಟಗಳಲ್ಲಿ ರಾಸುಗಳನ್ನು ವಿಮೆಗೆ ಒಳಪಡಿಸಿದ್ದು, ಪ್ರಸ್ತುತ 8 ಲಕ್ಷ ರಾಸುಗಳಿಗೆ ಗುಂಪು ವಿಮೆಗೆ ಒಳಪಡಿಸಲಾಗಿದೆ ಎಂದು ತಿಳಿಸಿದರು.

ಶೇ.50 ಅನುದಾನ:

ತಾವು ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಕೋವಿಡ್‌ ಅಲೆ ಪ್ರಾರಂಭವಾಯಿತು. ದೇಶವ್ಯಾಪಿ ಲಾಕ್‌ಡೌನ್‌ನಿಂದ ಸಮಸ್ಯೆ ಎದುರಾದರೂ ಹಾಲು ಉತ್ಪಾದಕರಿಗೆ ಶೇಖರಣಾ ದರವನ್ನು ಕಡಿಮೆ ಮಾಡಲಿಲ್ಲ. ಸಂಸ್ಥೆಗೆ ರಜಾ ಘೋಷಿಸದೆ ಉತ್ಪಾದಿಸಿದ ಎಲ್ಲ ಹಾಲನ್ನು ಉತ್ಪಾದಕರಿಂದ ಖರೀದಿ ಮಾಡಲಾಗಿದೆ. ಜತೆಗೆ ರಾಸುಗಳಲ್ಲಿ ಕಾಣಿಸಿಕೊಳ್ಳುವ ಕೆಚ್ಚಲು ಬಾವು ರೋಗವನ್ನು ತಡೆಗಟ್ಟಿಗುಣಮಟ್ಟದ ಹಾಲು ಶೇಖರಣೆ ಮತ್ತು ಇದರ ರೋಗ ನಿಯಂತ್ರಣಕ್ಕಾಗಿ ಆದ್ಯತೆ ನೀಡಲಾಗಿದೆ. ಈ ಅವಧಿಯಲ್ಲಿ 62 ಲಕ್ಷ ಅಂದರೆ ಶೇ.50ರಷ್ಟುಅನುದಾನವನ್ನು ಒಕ್ಕೂಟಗಳಿಗೆ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ರೋಗ ನಿಯಂತ್ರಣಕ್ಕೆ 2 ಕೋಟಿ ರು.ಗಳನ್ನು ಮೀಸಲು ಇಡಲಾಗಿದೆ ಎಂದು ಹೇಳಿದರು.

3 ಹೊಸ ಪಶು ಆಹಾರ ಘಟಕ:  ಪ್ರಥಮ ಬಾರಿಗೆ ಬಲ್ಕ್ ಮಿಲ್ಕ್ ಕೂಲರ್‌ ಡೇಟಾ ಲಾಗರ್‌ ಕಿಟ್‌ ಅನ್ನು ಸಂಸ್ಥೆ ವ್ಯಾಪ್ತಿಯ ಹಾಲು ಒಕ್ಕೂಟಗಳ ಸಂಘಗಳಲ್ಲಿ ಅಳವಡಿಸಲಾಗಿದೆ. ಇದಕ್ಕೆ ಸಂಸ್ಥೆ ವತಿಯಿಂದ ಶೇ.25ರಷ್ಟುಅನುದಾನ ನೀಡಲಾಗುತ್ತಿದೆ. ಜೊತೆಗೆ ಪ್ರತಿ ಮೆಟ್ರಿಕ್‌ ಟನ್‌ ಪಶು ಆಹಾರಕ್ಕೆ ಎರಡು ವರ್ಷದಲ್ಲಿ 500 ರಿಂದ 2 ಸಾವಿರ ರು.ವರೆಗೆ ರಿಯಾಯಿತಿ ನೀಡಲಾಗಿದೆ. 14 ಜಿಲ್ಲಾ ಹಾಲು ಒಕ್ಕೂಟಗಳಿಗೆ ಅವಶ್ಯವಿರುವ ಪಶು ಆಹಾರವನ್ನು 55 ರಿಂದ 63 ಸಾವಿರ ಮೆಟ್ರಿಕ್‌ ಟನ್‌ನಷ್ಟುಉತ್ಪಾದಿಸಿ ಉತ್ಪಾದಕರ ಬೇಡಿಕೆ ಅನುಸಾರ ಸರಬರಾಜು ಮಾಡಲಾಗುತ್ತಿದೆ. ಹೊಸದಾಗಿ ಮಂಡ್ಯ, ಅರಕಲಗೂಡು ಹಾಗೂ ಸಾದಲಿಯಲ್ಲಿ ಪಶು ಆಹಾರ ಘಟಕಗಳನ್ನು ನಿರ್ಮಿಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.

5 ಸಾವಿರ ಹೊಸ ಮಳಿಗೆ:  ಹಾಲು ಮಾರಾಟಗಾರರು ಮತ್ತು ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಮಾರಾಟಗಾರರಿಗೆ ಲಾಭಾಂಶ ಹೆಚ್ಚಳ ಮಾಡಲಾಗಿದೆ. ಗ್ರಾಹಕರಿಗೆ ಪ್ರತಿ ಲೀಟರ್‌ ಹಾಲಿನೊಂದಿಗೆ 40 ಎಂಎಲ್ ಉಚಿತ ಹಾಲನ್ನು ನೀಡಲಾಗಿದೆ. ರಾಜ್ಯಾದ್ಯಂತ 150 ಹೊಸ ನಂದಿನಿ ಪಾರ್ಲರ್‌ಗಳನ್ನು ತೆರೆಯಲಾಗಿದೆ. ‘ನಂದಿನಿ ಕೆಫೆ ಮೂ’ ಎಂಬ ಆಧುನಿಕ ಶೈಲಿಯ ಪಾರ್ಲರ್‌ಗಳನ್ನು ತೆರೆಯಲಾಗಿದೆ. ಮುಂದಿನ ದಿನಗಳಲ್ಲಿ 5 ಸಾವಿರ ಹೊಸ ನಂದಿನಿ ಮಳಿಗೆಗಳು ಮತ್ತು 100 ಕೆಫೆ ಮೂ ಮಳಿಗೆಗಳನ್ನು ಆರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ್‌, ಮಾರುಕಟ್ಟೆವಿಭಾಗದ ಮೃತ್ಯುಂಜಯ ಕುಲಕರ್ಣಿ, ರಘುನಂದನ್‌ ಸೇರಿದಂತೆ ಇತರರು ಉಪಸ್ಥಿತರಿದ್ದರು.

Follow Us:
Download App:
  • android
  • ios