ನ್ಯಾಯಾಂಗಕ್ಕೆ ಇದು ಕಪ್ಪು ಚುಕ್ಕೆ: ಬಾಬ್ರಿ ತೀರ್ಪಿಗೆ ಮಾಜಿ ಸಿಎಂ ಮಗನ ಪ್ರತಿಕ್ರಿಯೆ!
ಬಾಬ್ರಿ ಧ್ವಂಸ ಪ್ರಕರಣ ಸಂಬಂಧ ಐತಿಹಾಸಿಕ ತೀರ್ಪು| ಅಡ್ವಾಣಿಯವರು ಹಾಗೂ ಬಿಜೆಪಿ ದೇಶದ ಉದ್ದಗಲಕ್ಕೂ ರಕ್ತಯಾತ್ರೆ ನಡೆಸಿ ಕೋಮು ಗಲಭೆಗಳಿಗೆ ಕಾರಣರಾದರು| ಮಾಜಿ ಸಿಎಂ ಮಗನ ಟ್ವೀಟ್ ವೈರಲ್
ಬೆಂಗಳೂರು(ಸೆ.30): ಬಾಬ್ರಿ ಧ್ವಂಸ ಪ್ರಕರಣ ಸಂಬಂಧ ಐತಿಹಾಸಿಕ ತೀರ್ಪು ಹೊರ ಬಿದ್ದಿದೆ. ಅಡ್ವಾಣಿ, ಜೋಷಿ ಸೇರಿ ಎಲ್ಲಾ ಆರೋಪಿಗಳು ನಿರ್ದೋಷಿಗಳೆಂದು ನ್ಯಾಯಾಲಯ ತೀರ್ಪು ನೀಡಿದೆ. ಈ ತೀರ್ಪು ಹೊರಬಿದ್ದ ಬೆನ್ನಲ್ಲೇ ಬಿಜೆಪಿ ಪಾಳಯದಲ್ಲಿ ಸಂಭ್ರಮ ಮನೆ ಮಾಡಿದೆ. ಈ ನಡುವೆ ಮಾಜಿ ಸಿಎಂ ಸಿದ್ದರಾಮಯ್ಯ ಮಗ, ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಈ ಸಂಬಂಧ ಅಸಮಾಧಾನ ವ್ಯಕ್ತಪಡಿಸಿದ್ದು, ಇದು ನ್ಯಾಯಾಂಗಕ್ಕೆ ಕಪ್ಪು ಚುಕ್ಕೆ ಎಂದಿದ್ದಾರೆ.
ಹೌದು ಈ ಸಂಬಂಧ ಟ್ವೀಟ್ ಮಾಡಿರುವ ಯತೀಂದ್ರ ಸಿದ್ದರಾಮಯ್ಯ 'ಅಡ್ವಾಣಿಯವರು ಹಾಗೂ ಬಿಜೆಪಿ ದೇಶದ ಉದ್ದಗಲಕ್ಕೂ ರಕ್ತಯಾತ್ರೆ ನಡೆಸಿ ಕೋಮು ಗಲಭೆಗಳಿಗೆ ಕಾರಣರಾದರು. ಬಾಬ್ರಿ ಮಸೀದಿ ನೆಲಸಮವಾದದ್ದು ಪೂರ್ವ ನಿಯೋಜಿತ ಕೃತ್ಯವಲ್ಲವಂತೆ. ನ್ಯಾಯಾಂಗಕ್ಕೆ ಇದು ಕಪ್ಪು ಚುಕ್ಕೆಯಲ್ಲವೇ' ಎಂದು ಬರೆದಿದ್ದಾರೆ.
ಬಾಬ್ರಿ ಮಸೀದಿ ಧ್ವಂಸ ಪ್ರಕರಣ: ಅಡ್ವಾಣಿ, ಜೋಶಿ ಸೇರಿ ಎಲ್ಲಾ ಆರೋಪಿಗಳು ಖುಲಾಸೆ!
ನ್ಯಾಯಾಲಯದ ತೀರ್ಪಿನಲ್ಲೇನಿದೆ?
ಎರಡು ಸಾವಿರ ಪುಟಗಳ ತೀರ್ಪು ಬರೆದಿರುವ ಜಡ್ಜ್ ಎಲ್ಲಾ ಆರೋಪಿಗಳನ್ನು ನಿರ್ದೋಷಿಗಳೆಂದು ತೀರ್ಪು ನೀಡಿದೆ. ಈ ಮೂಲಕ ರಾಜಕೀಯ ಸೇರಿದಂತೆ ಇನ್ನಿತರ ಕಾರಣಗಳಿಗಾಗಿ ನೆನೆಗುದಿಗೆ ಬಿದ್ದಿದ್ದ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ಈ ಘಟನೆ ಸಂಭವಿಸಿ 28 ವರ್ಷಗಳ ಬಳಿಕ ಹಾಗೂ ಅಯೋಧ್ಯೆಯ ರಾಮಮಂದಿರ-ಬಾಬ್ರಿ ಮಸೀದಿ ಕುರಿತಾಗಿ ಸುಪ್ರೀಂ ಕೋರ್ಟ್ ತೀರ್ಪನ್ನು ಪ್ರಕಟಿಸಿದ ಒಂದೇ ವರ್ಷದಲ್ಲಿ ಪ್ರಕಟವಾಗಿದೆ.
ಕಳೆದ ವರ್ಷದ ನವೆಂಬರ್‌ನಲ್ಲಿ ಅಯೋಧ್ಯೆ ರಾಮಜನ್ಮಭೂಮಿ ಪೂರ್ಣವಾಗಿ ಹಿಂದೂಗಳಿಗೆ ಸೇರಿದ್ದು ಎಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ಪ್ರಕಟಿಸಿತ್ತು. ಆದರೆ, 16ನೇ ಶತಮಾನದ ಬಾಬ್ರಿ ಮಸೀದಿಯನ್ನು 1992ರಲ್ಲಿ ಧ್ವಂಸ ಮಾಡಿದ್ದನ್ನು ತಪ್ಪು ಎಂದು ಸಾರಿತ್ತು. ಅಲ್ಲದೆ, ಈ ಕುರಿತಾದ ವಿಚಾರಣೆಯನ್ನು ನಡೆಸಿ ಸೆ.30ರ ಒಳಗಾಗಿ ತೀರ್ಪು ನೀಡಬೇಕು ಎಂದು ಸಿಬಿಐ ಕೋರ್ಟ್‌ಗೆ ನಿರ್ದೇಶನ ನೀಡಿತ್ತು. ಆ ಪ್ರಕಾರ, ಆರೋಪಿಗಳ ವಿರುದ್ಧ ಸಿಬಿಐ ಒದಗಿಸಿರುವ 350 ಸಾಕ್ಷಿದಾರರು ಮತ್ತು 600 ದಾಖಲಾತಿಗಳನ್ನು ಪರಿಶೀಲಿಸಿ, ನ್ಯಾಯಾಧೀಶ ಯಾದವ್ ಅವರು ಅಂತಿಮ ತೀರ್ಪು ಬರೆಯವ ಕೆಲಸದಲ್ಲಿ ಕಾರ್ಯಪ್ರವೃತ್ತರಾಗಿದ್ದರು.