ಮುಂದಿನ ಮೂರು ತಿಂಗಳೊಳಗೆ ನೋಂದಾಯಿತ ಎಲ್ಲರಿಗೂ ‘ಆಯುಷ್ಮಾನ್‌ ಭಾರತ್‌-ಆರೋಗ್ಯ ಕರ್ನಾಟಕ’ ಕಾರ್ಡ್‌ ವಿತರಣೆ ಮಾಡಲಾಗುವುದು ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ತಿಳಿಸಿದ್ದಾರೆ.

ಧಾನ ಪರಿಷತ್‌ (ಫೆ.21) : ಮುಂದಿನ ಮೂರು ತಿಂಗಳೊಳಗೆ ನೋಂದಾಯಿತ ಎಲ್ಲರಿಗೂ ‘ಆಯುಷ್ಮಾನ್‌ ಭಾರತ್‌-ಆರೋಗ್ಯ ಕರ್ನಾಟಕ’ ಕಾರ್ಡ್‌(Ayushman Bharat-Arogya Karnataka' card) ವಿತರಣೆ ಮಾಡಲಾಗುವುದು ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌(Dr Sudhakar) ತಿಳಿಸಿದ್ದಾರೆ.

ಸೋಮವಾರ ಕಾಂಗ್ರೆಸ್‌ನ ಕೆ. ಹರೀಶ್‌ಕುಮಾರ್‌(K Harish kumar), ಯು.ಬಿ. ವೆಂಕಟೇಶ್‌(UB Venkatesh) ಅವರು ಪ್ರತ್ಯೇಕವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ ಮೂರು ವರ್ಷಗಳಲ್ಲಿ ಈ ಯೋಜನೆಯಡಿ 39.48 ಕೋಟಿ ಜನರು ಚಿಕಿತ್ಸೆ ಪಡೆದಿದ್ದು, 3 ಸಾವಿರ ಕೋಟಿ ರು.ಗಿಂತ ಹೆಚ್ಚು ವೆಚ್ಚ ಮಾಡಲಾಗಿದೆ. ತುರ್ತು ಸಂದರ್ಭದಲ್ಲಿ ರಾಜ್ಯದ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಯಾವುದೇ ದಾಖಲೆ ಇಲ್ಲದೆ ಇದ್ದರೂ ಚಿಕಿತ್ಸೆ ನೀಡಬೇಕು. ಈ ಸಂಬಂಧ ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿ ಹಾಗೂ ಇತರ ಸಿಬ್ಬಂದಿಗಳು ಅನುಸರಿಸಬೇಕಾದ ಕ್ರಮಗಳ ಸೂಚನೆಯಲ್ಲಿ ತಿಳಿಸಲಾಗಿದೆ. ವೈದ್ಯರ ಶಿಫಾರಸು ಪತ್ರದೊಂದಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವಂತಹ ವ್ಯವಸ್ಥೆ ರದ್ದು ಮಾಡಲು ಸಾಧ್ಯವಿಲ್ಲ. ಶಿಫಾರಸು ಪತ್ರವಿಲ್ಲದೆ ಚಿಕಿತ್ಸೆ ನೀಡಲು ಆರಂಭಿಸಿದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಯಾರೂ ಮುಂದೆ ಬರುವುದಿಲ್ಲ ಎಂದು ಸಚಿವರು ಸ್ಪಷ್ಟನೆ ನೀಡಿದರು.

ಚಿಕ್ಕಮಗಳೂರು: ಗುಡ್ಡ ಹತ್ತಿ ಆಯುಷ್ಮಾನ್ ಕಾರ್ಡ್ ನೋಂದಣಿ: ಇದೇನಾ ಡಿಜಿಟಲ್‌ ಇಂಡಿಯಾ?

ಬಾಕಿ ಪಾವತಿ 15 ದಿನಕ್ಕೆ ಇಳಿಕೆಗೆ ಯತ್ನ:

ಯೋಜನೆಯಡಿ ಚಿಕಿತ್ಸಾ ಮೊತ್ತವನ್ನು ಪಡೆಯಲು ಖಾಸಗಿ ಆಸ್ಪತ್ರೆಗಳು ಆರೆಂಟು ತಿಂಗಳು ಕಾಯಬೇಕಿತ್ತು. ಈಗ ಒಂದು ತಿಂಗಳಿಗೆ ಇಳಿಸಲಾಗಿದೆ. ಮುಂದಿನ ದಿನಗಳಲ್ಲಿ 15 ದಿನಕ್ಕೆ ಇಳಿಸಲು ಪ್ರಯತ್ನ ಮಾಡಲಾಗುತ್ತಿದೆ ಎಂದು ಸುಧಾಕರ್‌ ಉತ್ತರಿಸಿದರು.

1.78 ಕೋಟಿ ಜನರ ನೋಂದಣಿ:

ಕಳೆದ ಮೂರು ವರ್ಷಗಳಲ್ಲಿ ಯೋಜನೆಯಡಿ 1,78,03,648 ಜನರು ನೋಂದಣಿ ಮಾಡಿಕೊಂಡಿದ್ದಾರೆ. ಕಳೆದ ಸೆಪ್ಟೆಂಬರ್‌ 2022ರಿಂದ ಈ ವರ್ಷದ ಜನವರಿ 31ರವರೆಗೆ ಉಚಿತ ಪಿವಿಸಿ ಕಾರ್ಡ್‌ಗಾಗಿ 1.28 ಕೋಟಿ ಫಲಾನುಭವಿಗಳು ನೋಂದಣಿ ಮಾಡಿಕೊಂಡಿದ್ದು, ನೋಂದಣಿ ಕಾರ್ಯ ಮುಂದುವರೆದಿದೆ. ಸದರಿ ಕಾರ್ಡ್‌ಗಳನ್ನು ಬಳಸಿ ದೇಶದ ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಆಯುಷ್ಮಾನ್‌ ಭಾರತಕ್ಕೆ ಡಿಜಿಟಲ್‌ ವೇಗದ ಸ್ಪರ್ಶ: ಸಚಿವ ಸುಧಾಕರ್‌

ಆಯುಷ್‌ ಆಸ್ಪತ್ರೆಗೆ ಆದ್ಯತೆ:

ಇತ್ತೀಚೆಗೆ ಆಯುಷ್‌ ಚಿಕಿತ್ಸೆ(Ayush treatment)ಗೆ ಹೆಚ್ಚಿನ ಒಲವು ವ್ಯಕ್ತವಾಗುತ್ತಿರುವುದರಿಂದ ಆಯುಷ್‌ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಒಟ್ಟಾರೆ ರಾಜ್ಯದ 135 ಆಸ್ಪತ್ರೆಗಳಲ್ಲಿ 1460 ಹಾಸಿಗೆ ಸೌಲಭ್ಯಗಳಿವೆ. ಬಹುತೇಕ ಆಸ್ಪತ್ರೆಗಳು 5ರಿಂದ 10 ಹಾಸಿಗೆಗಳನ್ನು ಹೊಂದಿವೆ. ಹೀಗಾಗಿ ಇಂತಹ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಿದ ನಂತರ ತಜ್ಞ ವೈದ್ಯರು ಹಾಗೂ ಇತರ ಸೌಲಭ್ಯ ಕಲ್ಪಿಸಲು ಸಾಧ್ಯ. ಈ ಬಗ್ಗೆ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.