ಆರ್‌ಎಸ್‌ಎಸ್ ಹಿರಿಯ ಪ್ರಚಾರಕ ಮೈ.ಚ. ಜಯದೇವ ಅವರ ಜೀವನ ಪಯಣವನ್ನು ಸಾರುವ 'ಅವಿಶ್ರಾಂತ ಧ್ಯೇಯಜೀವಿ' ಪುಸ್ತಕವು ಮೇ 14 ರಂದು ಬೆಂಗಳೂರಿನಲ್ಲಿ ಲೋಕಾರ್ಪಣೆಗೊಳ್ಳಲಿದೆ. ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಮತ್ತು ಶ್ರೀ ದತ್ತಾತ್ರೇಯ ಹೊಸಬಾಳೆ ಭಾಗವಹಿಸಲಿದ್ದಾರೆ.

ಬೆಂಗಳೂರು (ಮೇ 13): ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಹಿರಿಯ ಪ್ರಚಾರಕರು ಹಾಗೂ ಕರ್ನಾಟಕದಲ್ಲಿ ಸಂಘದ ತಳಹದಿಯನ್ನು ಗಟ್ಟಿಗೊಳಿಸಿದ ಶಿಸ್ತಿನ ಸಿಪಾಯಿ ಮೈ.ಚ. ಜಯದೇವ (ಮೈಸೂರು ಚನ್ನಬಸಪ್ಪ ಜಯದೇವ) ಅವರ ಜೀವನ ಪಯಣವನ್ನು ಸಾರುವ ‘ಅವಿಶ್ರಾಂತ ಧ್ಯೇಯಜೀವಿ‘ ಪುಸ್ತಕ ಲೋಕಾರ್ಪಣ ಕಾರ್ಯಕ್ರಮವನ್ನು ಮೇ 14 ರಂದು ಹಮ್ಮಿಕೊಳ್ಳಲಾಗಿದೆ.

Add Asianetnews Kannada as a Preferred SourcegooglePreferred

ಕಾರ್ಯಕ್ರಮದ ವಿವರ:

ರಾಷ್ಟ್ರೋತ್ಥಾನ ಪರಿಷತ್ ಆಯೋಜಿಸಿರುವ ಈ ವಿಶೇಷ ಸಮಾರಂಭವು ಮೇ 14, ಗುರುವಾರ ಸಂಜೆ 6.30ಕ್ಕೆ ಬೆಂಗಳೂರಿನ ಪುಟ್ಟಣ್ಣಚೆಟ್ಟಿ ಪುರಭವನದಲ್ಲಿ (ಟೌನ್‌ಹಾಲ್‌) ನಡೆಯಲಿದೆ. ಸುತ್ತೂರು ಶ್ರೀಕ್ಷೇತ್ರದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಪುಸ್ತಕವನ್ನು ಲೋಕಾರ್ಪಣೆ ಮಾಡಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಆರ್‌ಎಸ್‌ಎಸ್‌ನ ಸರಕಾರ್ಯವಾಹರಾದ ಶ್ರೀ ದತ್ತಾತ್ರೇಯ ಹೊಸಬಾಳೆ ಅವರು ಕೃತಿಯ ಕುರಿತು ಮಾತನಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಲೇಖಕರಾದ ಡಾ. ಬಾಬು ಕೃಷ್ಣಮೂರ್ತಿ, ಶ್ರೀ ಬೇಳೂರು ಸುದರ್ಶನ ಹಾಗೂ ರಾಷ್ಟ್ರೋತ್ಥಾನ ಪರಿಷತ್ತಿನ ಅಧ್ಯಕ್ಷರಾದ ಎಂ.ಪಿ. ಕುಮಾರ್ ಉಪಸ್ಥಿತರಿರಲಿದ್ದಾರೆ.

ಮೈ.ಚ. ಜಯದೇವ: ಒಂದು ಧೈಯನಿಷ್ಠ ಜೀವನ

ಮೈ.ಚ. ಜಯದೇವ ಅವರು 1965ರ ಆರಂಭದ ದಿನಗಳಿಂದಲೇ ರಾಷ್ಟ್ರೋತ್ಥಾನ ಪರಿಷತ್ತನ್ನು ಕಟ್ಟಿ ಬೆಳೆಸಿದವರು. ಸಂಘಟನಾ ಚತುರರಾಗಿದ್ದ ಇವರು, 'ಒಂದು ಜೀವನ, ಒಂದು ಧೈಯ' ಎಂಬ ಸೂತ್ರಕ್ಕೆ ಬದ್ಧರಾಗಿದ್ದವರು. ಅಸಾಮಾನ್ಯ ದಕ್ಷತೆ ಮತ್ತು ದೂರದರ್ಶಿತ್ವದ ಮೂಲಕ ರಾಷ್ಟ್ರೋತ್ಥಾನ ಪರಿಷತ್ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸ್ಥಿರವಾದ ಹೆಜ್ಜೆಗಳನ್ನು ಇಡಲು ಕಾರಣಕರ್ತರಾದರು.

ಐದು ದಶಕಗಳಿಗೂ ಹೆಚ್ಚು ಕಾಲ ಸಂಘದ ವಿವಿಧ ಜವಾಬ್ದಾರಿಗಳನ್ನು (ಮಹಾನಗರ ಕಾರ್ಯವಾಹದಿಂದ ಅಖಿಲ ಭಾರತೀಯ ಕಾರ್ಯಕಾರಿಣಿಯವರೆಗೆ) ನಿರ್ವಹಿಸಿದ್ದ ಜಯದೇವ ಅವರು, ಕೇವಲ ಸಂಘಟನೆಯಷ್ಟೇ ಅಲ್ಲದೆ ಬೆಂಗಳೂರಿನ ಅನೇಕ ಸಾಮಾಜಿಕ ಸಂಸ್ಥೆಗಳಿಗೆ ದಾರಿದೀಪವಾಗಿದ್ದರು. ಮಿಥಿಕ್ ಸೊಸೈಟಿ, ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ, ಅಮೃತ ಶಿಶುನಿವಾಸ ಮತ್ತು ಅಬಲಾಶ್ರಮದಂತಹ ಸಂಸ್ಥೆಗಳು ಸ್ವತಂತ್ರವಾಗಿ ಬೆಳೆಯಲು ಅವರು ತೆರೆಯ ಹಿಂದೆ ನಿಂತು ಮಾರ್ಗದರ್ಶನ ನೀಡಿದ್ದರು.

ಮೈ.ಚ. ಜಯದೇವ ಅವರ ಈ ಎಲ್ಲ ಆದರ್ಶಮಯ ಬದುಕು ಮತ್ತು ಹಿರಿಯರು ಹಂಚಿಕೊಂಡ ನೆನಪುಗಳ ಸಂಕಲನವೇ ಈ ‘ಅವಿಶ್ರಾಂತ ಧ್ಯೇಯಜೀವಿ‘ ಪುಸ್ತಕ. ಸಮಾಜಮುಖಿ ಕಾರ್ಯಕರ್ತರಿಗೆ ಮತ್ತು ಸಂಘದ ಕಾರ್ಯಶೈಲಿಯನ್ನು ಅರಿಯಬಯಸುವವರಿಗೆ ಈ ಪುಸ್ತಕ ಅತ್ಯಮೂಲ್ಯ ಆಕರ ಗ್ರಂಥವಾಗಲಿದೆ.