ರಾಜ್ಯದಲ್ಲಿ ಸರ್ಕಾರ ಶಕ್ತಿ ಯೋಜನೆ ಜಾರಿಗೊಳಿಸಿ ಮಹಿಳೆಯರಿಗೆ ಉಚಿತ ಬಸ್​ ಪ್ರಯಾಣ ಆರಂಭಿಸಿರೋ ಬೆನ್ನಲ್ಲೆ ಟ್ಯಾಕ್ಸಿ ಮಾಲೀಕರು ಮತ್ತು ಚಾಲಕರಿಗೆ ಇನ್ನಿಲ್ಲದ ಸಂಕಷ್ಟ ಶುರುವಾಗಿದೆ.

ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್ 

ಬಾಗಲಕೋಟೆ (ಜೂ.22): ರಾಜ್ಯದಲ್ಲಿ ಸರ್ಕಾರ 5 ಗ್ಯಾರಂಟಿಗಳ ಪೈಕಿಯೊಂದಾಗಿರೋ ಶಕ್ತಿ ಯೋಜನೆ ಜಾರಿಗೊಳಿಸಿ ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಬಸ್​ ಪ್ರಯಾಣ ಆರಂಭಿಸಿರೋ ಬೆನ್ನಲ್ಲೆ ಇತ್ತ ಟ್ಯಾಕ್ಸಿ ಚಾಲಕರು ಬಾಡಿಗೆ ಸಿಗದೇ ಕಂಗಾಲಾಗಿದ್ದು, ನಿತ್ಯದ ಬದುಕಿಗೆ ಹೆಣಗಾಡಬೇಕಾದಂತಹ ಪರಿಸ್ಥಿತಿ ಬಂದೊದಿಗಿದೆ. ಈ ಮಧ್ಯೆ ಪ್ರತಿಭಟನೆ ನಡೆಸಿರೋ ಬಾಗಲಕೋಟೆ ಜಿಲ್ಲೆಯ ಟ್ಯಾಕ್ಸಿ ಮಾಲೀಕರು ಮತ್ತು ಚಾಲಕರು ಸರ್ಕಾರ ಶಕ್ತಿ ಯೋಜನೆ ಬಂದ್​ ಮಾಡಲಿ ಇಲ್ಲವಾದರೆ ನಮಗೂ ಕೆಲವೊಂದು ಸೌಲಭ್ಯ ಒದಗಿಸಿ ಕೊಡಲಿ ಎಂಬ ಒತ್ತಾಯವನ್ನ ಮಾಡಿದ್ದಾರೆ. ಈ ಕುರಿತ ವರದಿ ಇಲ್ಲಿದೆ. 

ಎಲ್ಲಿ ನೋಡಿದರೂ ಓಡಾಡದೇ ನಿಂತಲ್ಲಿ ನಿಲ್ಲುವ ಟ್ಯಾಕ್ಸಿಗಳು, ಬಾಡಿಗೆ ಸಿಗದೇ ಕಂಗಾಲಾಗಿ ಟ್ಯಾಕ್ಸಿ ಸ್ಟ್ಯಾಂಡ್​​ನಲ್ಲೇ ಖಾಲಿ ಕುಳಿತಿರುವ ಚಾಲಕರು, ಇವುಗಳ ಮಧ್ಯೆ ತಮ್ಮ ಬದುಕಿನ ಬಂಡಿ ಸಾಗಿಸುವ ಚಿಂತೆಯಲ್ಲಿರುವ ಚಾಲಕರು. ಅಂದಹಾಗೆ ಇಂತಹವೊಂದು ದೃಶ್ಯ ಕಂಡು ಬಂದಿದ್ದು ಬಾಗಲಕೋಟೆ ಜಿಲ್ಲೆಯಲ್ಲಿ. ರಾಜ್ಯದಲ್ಲಿ ಸರ್ಕಾರ ಶಕ್ತಿ ಯೋಜನೆ ಜಾರಿಗೊಳಿಸಿ ಮಹಿಳೆಯರಿಗೆ ಉಚಿತ ಬಸ್​ ಪ್ರಯಾಣ ಆರಂಭಿಸಿರೋ ಬೆನ್ನಲ್ಲೆ ಟ್ಯಾಕ್ಸಿ ಮಾಲೀಕರು ಮತ್ತು ಚಾಲಕರಿಗೆ ಇನ್ನಿಲ್ಲದ ಸಂಕಷ್ಟ ಶುರುವಾಗಿದೆ. ಯಾಕಂದ್ರೆ ಬಹುತೇಕವಾಗಿ ಈಗ ಬಾಡಿಗೆಗಳೇ ಇವರಿಗೆ ಸಿಗುತ್ತಿಲ್ಲ. ನಿತ್ಯ ಒಂದಿಲ್ಲೊಂದು ಬಾಡಿಗೆ ಪಡೆದು ಹೊರಡುತ್ತಿದ್ದವರೆಲ್ಲಾ ಬಾಡಿಗೆ ಸಿಗದೇ ಅತಂತ್ರ ಪರಿಸ್ಥಿತಿ ಎದುರಿಸುತ್ತಿದ್ದಾರೆ.

9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೂ ಶಾಲೆಗಳಲ್ಲಿ ಮೊಟ್ಟೆ ವಿತರಣೆಗೆ ಶಿಕ್ಷಣ ಸಚಿವರ

ಮೊದಲೆಲ್ಲಾ ಜನರು ಮಹಿಳೆಯರಿಗಾಗಿಯೇ ಟ್ಯಾಕ್ಸಿಗಳನ್ನ ಬಾಡಿಗೆ ಮಾಡಿಕೊಂಡು ಹೋಗಿ ಬರುತ್ತಿದ್ದರು. ಆದ್ರೆ ಈಗ ಎಲ್ಲ ಮಹಿಳೆಯರಿಗೂ ಬಸ್​ ಪ್ರಯಾಣ ಉಚಿತವಾಗಿರೋದ್ರಿಂದ ಯಾರೂ ಸಹ ಬಾಡಿಗೆ ಸಂಭಂದ ಟ್ಯಾಕ್ಸಿಗಳ ಕಡೆಗೆ ಮುಖ ಮಾಡುತ್ತಿಲ್ಲ. ಹೀಗಾಗಿ ಟ್ಯಾಕ್ಸಿ ಚಾಲಕರ ಬದುಕು ಅಯೋಮಯವಾಗಿದೆ. ಮನೆ ಬಾಡಿಗೆ, ಮಕ್ಕಳ ಶಾಲೆ ಫೀ, ಕಾರಿನ ಸಾಲ, ವಾಹನಗಳ ಟ್ಯಾಕ್ಸ್​ ಸೇರಿದಂತೆ ಎಲ್ಲವನ್ನ ಮುನ್ನಡೆಸಿಕೊಂಡು ಹೋಗಬೇಕಿರೋದು ಇದೀಗ ಚಾಲಕರಿಗೆ ತೊಂದರೆಯಾಗಿದ್ದು, ಇದ್ರಿಂದ ಚಾಲಕರ ಕುಟುಂಬಗಳು ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ ಅಂತಾರೆ ಚಾಲಕ ಶಿವಣ್ಣ. 

ಸಂಕಷ್ಟ ಎದುರಿಸುತ್ತಿರುವ ಜಿಲ್ಲೆಯ 6 ಸಾವಿರಕ್ಕೂ ಅಧಿಕ ಟ್ಯಾಕ್ಸಿ ಚಾಲಕರ ಕುಟುಂಬಗಳು:
ಇನ್ನು ಜಿಲ್ಲೆಯಾದ್ಯಂತ ಅಂದಾಜು 6ಸಾವಿರಕ್ಕೂ ಅಧಿಕ ಟ್ಯಾಕ್ಸಿ ಚಾಲಕರಿದ್ದು, ಅವರ ಕುಟುಂಬಗಳು ಅತಂತ್ರ ಪರಿಸ್ಥಿತಿಯನ್ನ ಎದುರಿಸುತ್ತಿವೆ. ಯಾಕಂದ್ರೆ ಬಾಡಿಗೆ ಸಿಗದೇ ಸ್ಟ್ಯಾಂಡ್​ನಲ್ಲಿ ಟ್ಯಾಕ್ಸಿಗಳನ್ನ ನಿಲ್ಲಿಸಿ ಕೆಲ್ಸವಿಲ್ಲದೆ ಕಾಲಕಳೆಯುವಂತಹ ಪರಿಸ್ಥಿತಿ ಎದುರಾಗಿದೆ.

ಹಿಜಾಬ್ ವಿವಾದ ಭುಗಿಲೆದ್ದಿದ್ದ ಮಂಗಳೂರಿನ ಕಾಲೇಜಿನಲ್ಲಿ ಮತ್ತೊಂದು ವಿವಾದ!

ಇದ್ರಿಂದ ಅಸಮಾಧಾನಗೊಂಡ ಬಾಗಲಕೋಟೆ ಜಿಲ್ಲೆಯ ಟ್ಯಾಕ್ಸಿ ಮಾಲೀಕರು ಮತ್ತು ಚಾಲಕರು ಸರ್ಕಾರದ ವಿರುದ್ದ ಧಿಕ್ಕಾರ ಕೂಗಿ ತಮ್ಮ ಆಕ್ರೋಶವನ್ನ ಹೊರಹಾಕಿದ್ರು. ಸರ್ಕಾರ ಶಕ್ತಿ ಯೋಜನೆಯನ್ನ ಬಂದ್​ಗೊಳಿಸಬೇಕು ಇಲ್ಲವಾದಲ್ಲಿ ಅದನ್ನು ಮುಂದುವರೆಸುವುದಾದರೆ ನಮ್ಮ ಖಾಸಗಿ ಟ್ಯಾಕ್ಸಿ ಚಾಲಕರಿಗೆ ಟ್ಯಾಕ್ಸಿ ಮೇಲೆ ಪಡೆದ ಸಾಲಗಳನ್ನ ಮನ್ನಾ ಮಾಡಬೇಕು ಮತ್ತು ಟ್ಯಾಕ್ಸ್​ಗಳನ್ನ ಕಡಿತಗೊಳಿಸಬೇಕು, ಆ ಮೂಲಕವಾದ್ರೂ ನಮ್ಮ ಚಾಲಕರಿಗೆ ಅನುಕೂಲತೆ ಕಲ್ಪಿಸಬೇಕು ಎಂದು ಚಾಲಕ ಶೇಖರ್​ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. 

ಒಟ್ಟಿನಲ್ಲಿ ಅತ್ತ ಶಕ್ತಿ ಯೋಜನೆಯಿಂದ ಮಹಿಳೆರಿಗೆ ಉಚಿತ ಬಸ್​ ಪ್ರಯಾಣದಿಂದ ಅನುಕೂಲವಾಗಿದ್ದರೆ ಇತ್ತ ಖಾಸಗಿ ಟ್ಯಾಕ್ಸಿ ಚಾಲಕರ ಕುಟುಂಬಗಳು ಅತಂತ್ರ ಪರಿಸ್ಥಿತಿ ಎದುರಿಸುತ್ತಿದ್ದು, ಆದಷ್ಟು ಸರ್ಕಾರ ಟ್ಯಾಕ್ಸಿ ಚಾಲಕರು ಕುಟುಂಬಗಳಿಗೆ ನೆರವು ನೀಡಿ ನೆಮ್ಮದಿ ಬದುಕು ಕಾಣವಂತೆ ಮಾಡಲಿ ಅನ್ನೋದು ನಮ್ಮಯ ಆಶಯ.