Asianet Suvarna News Asianet Suvarna News

ಬೈಕ್‌ ಟ್ಯಾಕ್ಸಿ ವಿರುದ್ಧ ಇಂದು ಆಟೋ ಬಂದ್‌: ಮಧ್ಯರಾತ್ರಿವರೆಗೂ ರಸ್ತೆಗಿಳಿಯಲ್ಲ ಆಟೋ

: ನಗರದಲ್ಲಿ ಅಕ್ರಮ ವೈಟ್‌ ಬೋರ್ಡ್‌ ಬೈಕ್‌ ಟ್ಯಾಕ್ಸಿಗಳ ನಿಷೇಧಿಸುವಂತೆ ಪಟ್ಟು ಹಿಡಿದಿರುವ ಆಟೋ ಚಾಲಕರು ಸಂಘಟನೆಗಳು ಭಾನುವಾರ ಮಧ್ಯರಾತ್ರಿಯಿಂದ ಸೋಮವಾರ ಮಧ್ಯರಾತ್ರಿವರೆಗೆ ಆಟೋ ರಿಕ್ಷಾ ಬಂದ್‌ ನಡೆಸಲು ನಿರ್ಧರಿಸಿದ್ದು, ಜನರು ಸಂಚಾರ ಸಮಸ್ಯೆಗೆ ಸಿಲುಕುವ ಸಾಧ್ಯತೆ ಇದೆ.

Auto bandh today against bike taxi at bengaluru rav
Author
First Published Mar 20, 2023, 6:08 AM IST

ಬೆಂಗಳೂರು (ಮಾ.20) : ನಗರದಲ್ಲಿ ಅಕ್ರಮ ವೈಟ್‌ ಬೋರ್ಡ್‌ ಬೈಕ್‌ ಟ್ಯಾಕ್ಸಿಗಳ ನಿಷೇಧಿಸುವಂತೆ ಪಟ್ಟು ಹಿಡಿದಿರುವ ಆಟೋ ಚಾಲಕರು ಸಂಘಟನೆಗಳು ಭಾನುವಾರ ಮಧ್ಯರಾತ್ರಿಯಿಂದ ಸೋಮವಾರ ಮಧ್ಯರಾತ್ರಿವರೆಗೆ ಆಟೋ ರಿಕ್ಷಾ ಬಂದ್‌ ನಡೆಸಲು ನಿರ್ಧರಿಸಿದ್ದು, ಜನರು ಸಂಚಾರ ಸಮಸ್ಯೆಗೆ ಸಿಲುಕುವ ಸಾಧ್ಯತೆ ಇದೆ.

ಆಟೋ(Autorikshaw) ಬಂದ್‌ನಿಂದಾಗಿ ಬಿಎಂಟಿಸಿ ಬಸ್‌(BMTC Bus), ಮೆಟ್ರೋ(Metro), ಖಾಸಗಿ ವಾಹನ, ಟ್ಯಾಕ್ಸಿ ಹಾಗೂ ಓಲಾ, ಊಬರ್‌ ಸೇರಿ ಇತರೆ ವಾಹನಗಳನ್ನು ಹೆಚ್ಚಾಗಿ ಅವಲಂಬಿಸುವುದು ಅನಿವಾರ್ಯವಾಗಲಿದೆ.

ಬೈಕ್‌ಟ್ಯಾಕ್ಸಿ ನಿಷೇಧಕ್ಕಾಗಿ ಬೆಂಗ್ಳೂರಲ್ಲಿ ಆಟೋ ಸೇವೆ ಬಂದ್‌..!

ಕಳೆದ ಮೂರು ದಿನಗಳಿಂದ ಆಟೋಗಳಿಗೆ ಕಪ್ಪು ಪಟ್ಟಿಧರಿಸಿ ಪ್ರತಿಭಟನೆ ನಡೆಸಿದ್ದ ಸಂಘಟನೆಗಳು ಬೈಕ್‌ ಟ್ಯಾಕ್ಸಿ(Bike taxi ban) ನಿಷೇಧಿಸುವಂತೆ ಆದೇಶಿಸಬೇಕೆಂದು ಗಡುವು ನೀಡಿದ್ದವು. ಆದರೂ ಯಾವುದೇ ಸ್ಪಂದನೆ ಸಿಗದ ಕಾರಣ ಬಂದ್‌ ನಡೆಸುತ್ತಿದ್ದೇವೆ. ಸೋಮವಾರ ಬೆಳಗ್ಗೆ 11ಕ್ಕೆ ಸಂಗೊಳ್ಳಿ ಕ್ರಾಂತಿವೀರ ರಾಯಣ್ಣ ರೈಲ್ವೆ ನಿಲ್ದಾಣದ ಬಳಿಯಿಂದ ಸಾವಿರಾರು ಆಟೋ ಚಾಲಕರು ಪಾದಯಾತ್ರೆ ಮೂಲಕ ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಹಾಕುವುದಾಗಿ ಆಟೋ ಚಾಲಕರ ಸಂಘಟನೆಗಳ ಒಕ್ಕೂಟ ತಿಳಿಸಿದೆ.

ಬೇಡಿಕೆಗಳಿವು

ಆ್ಯಪ್‌ ಆಧಾರಿತ ಅನಧಿಕೃತ ವೈಟ್‌ಬೋರ್ಡ್‌ ಬೈಕ್‌ ಟ್ಯಾಕ್ಸಿ(Whiteboard Bike Taxi)ಗಳ ಹಾವಳಿ ಹೆಚ್ಚಿದೆ. ಸಾರಿಗೆ ಇಲಾಖೆಯ ಕಣ್ಗಾವಲು ತಪ್ಪಿಸಿ ಇವರು ಕಾರ್ಯಾಚರಣೆ ಮಾಡುತ್ತಿದ್ದಾರೆ. ಇವರಿಂದ ಆಟೋ ಚಾಲಕರ ಬದುಕು ಸಂಕಷ್ಟಕ್ಕೆ ಸಿಲುಕಿರುವುದು ಮಾತ್ರವಲ್ಲ, ಸರ್ಕಾರಕ್ಕೂ ಆರ್ಥಿಕ ನಷ್ಟವಾಗುತ್ತಿದೆ. ಇದರ ಭಾಗವಾಗಿ ರಾರ‍ಯಪಿಡೋ ಬೈಕ್‌ ಟ್ಯಾಕ್ಸಿ ಆ್ಯಪ್‌ ಬ್ಯಾನ್‌ ಮಾಡಬೇಕು ಹಾಗೂ ಬೌನ್ಸ್‌ ಎಲೆಕ್ಟ್ರಿಕ್‌ ಬೈಕ್‌ಗೆ ನೀಡಿರುವ ಅನುಮತಿ ಹಿಂಪಡೆಯಬೇಕು ಎಂದು ಸಂಘಟನೆ ಒತ್ತಾಯಿಸಿದೆ.

ಈ ಅಕ್ರಮದಿಂದಾಗಿ ಮೆಕ್ಯಾನಿಕ್‌ಗಳು, ಟಾಪ್‌ ಟಿಂಕರಿಂಗ್‌ ಕೆಲಸಗಾರರು, ಮೀಟರ್‌ ದುರಸ್ತಿಗಾರರು, ಬಿಡಿಭಾಗ ಮಾರಾಟಗಾರರು ಸೇರಿ ಹಲವರು ಆರ್ಥಿಕ ನಷ್ಟಅನುಭವಿಸಲಿದ್ದಾರೆ. ಸಾರಿಗೆ ವ್ಯವಸ್ಥೆಗೆ ಮಾರಕವಾಗಿರುವ ಈ ಅಕ್ರಮಕ್ಕೆ ಸರ್ಕಾರ ತಕ್ಷಣ ನಿಷೇಧ ಹೇರಬೇಕು ಎಂದು ಆಟೋ ಚಾಲಕರು ಆಗ್ರಹಿಸಿದ್ದಾರೆ.

ರಸ್ತೆಗೆ ಇಳಿಯಲ್ಲ 2.10 ಲಕ್ಷ ಆಟೋ

ನಗರದಲ್ಲಿ ಸುಮಾರು 2.10 ಲಕ್ಷ ಆಟೋಗಳು ಪ್ರತಿನಿತ್ಯ ಸಂಚಾರ ನಡೆಸುತ್ತಿವೆ. ಸಂಘಟನೆಗಳ ಪ್ರಕಾರ ದಿನಕ್ಕೆ 40 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಆಟೋಗಳಲ್ಲಿ ಓಡಾಡುತ್ತಾರೆ. ಬಂದ್‌ನಿಂದ ಸಾರ್ವಜನಿಕರು ತೊಂದರೆಗೆ ಸಿಲುಕುವ ಸಾಧ್ಯತೆ ಇದೆ.

ಬೆಂಬಲಿಸಿರುವ ಸಂಘಟನೆಗಳು

ಆದರ್ಶ ಆಟೋ ಆ್ಯಂಡ್‌ ಟ್ಯಾಕ್ಸಿ ಡ್ರೈವರ್ಸ್‌ ಯೂನಿಯನ್‌, ಸಿಐಟಿಯು ಆಟೋರಿಕ್ಷಾ ಯೂನಿಯನ್‌, ಪೀಸ್‌ ಆಟೋ ಆ್ಯಂಡ್‌ ಟ್ಯಾಕ್ಸಿ ಡ್ರೈವರ್ಸ್‌ ಅಸೋಸಿಯೇಶನ್‌, ಕರ್ನಾಟಕ ಜನಾಶ್ರಯ ಆಟೋ ಸಂಘ, ಭಾರತ್‌ ಟ್ರಾನ್ಸ್‌ಪೋರ್ಚ್‌ ಅಸೋಸಿಯೇಶನ್‌, ಓಲಾ, ಊಬರ್‌ ಡ್ರೈವರ್ಸ್‌ ಓವರ್ಸ್‌ ಅಸೋಸಿಯೇಶನ್‌, ಕರವೇ ಆಟೋ ಘಟಕ, ಜಯ ಕರ್ನಾಟಕ ಆಟೋ ಘಟಕ, ನಮ್ಮ ಚಾಲಕರ ಟ್ರೇಡ್‌ ಯೂನಿಯನ್‌, ಬೆಂಗಳೂರು ಆಟೋ ಸೇನೆ ಸೇರಿ 21 ಸಂಘಟನೆಗಳು ಬಂದ್‌ಗೆ ಬೆಂಬಲಿಸಿವೆ.

ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಿ

ಆಸ್ಪತ್ರೆ, ಶಾಲಾ ಕಾಲೇಜು, ಕೋರ್ಚ್‌, ಕಚೇರಿ, ಪರೀಕ್ಷೆಗಳಿಗೆ ತೆರಳಬೇಕಾಗಿರುವವರು ಹಾಗೂ ಬೇರೆ ಊರಿಗೆ ಹೋಗಲು ರೈಲ್ವೆ, ಬಸ್‌ ನಿಲ್ದಾಣಗಳಿಗೆ ಹೋಗುವವರು ಬಸ್‌, ಮೆಟ್ರೋ ಮುಂತಾದ ವ್ಯವಸ್ಥೆಗಳನ್ನು ಮಾಡಿಕೊಳ್ಳುವುದು ಉತ್ತಮ

ಬೆಂಗ್ಳೂರಲ್ಲಿ ಬೈಕ್‌ ಟ್ಯಾಕ್ಸಿ ನಿಷೇಧಿಸಲು ಸರ್ಕಾರಕ್ಕೆ 3 ದಿನ ಗಡುವು

ಬಿಎಂಟಿಸಿ ಸಿದ್ಧತೆ

ಪ್ರಯಾಣಿಕರಿಂದ ಬೇಡಿಕೆ ಬಂದು ಅಗತ್ಯ ಬಿದ್ದಲ್ಲಿ ಮೆಜಸ್ಟಿಕ್‌, ಮಾರುಕಟ್ಟೆ, ಶಾಂತಿನಗರ, ಶಿವಾಜಿನಗರ, ಯಶವಂತಪುರ ಸೇರಿ ಇತರೆ ಪ್ರಮುಖ ನಿಲ್ದಾಣ, ಸ್ಥಳಗಳಿಂದ ಹೆಚ್ಚಿನ ಬಸ್‌ ಕಾರ್ಯಾಚರಿಸುವುದಾಗಿ ಬಿಎಂಟಿಸಿ ತಿಳಿಸಿದೆ.

ಕಳೆದ ಮೂರು ವರ್ಷದಿಂದ ಅಕ್ರಮವಾಗಿರುವ ವೈಟ್‌ ಬೋರ್ಡ್‌ ಬೈಕ್‌ ಟ್ಯಾಕ್ಸಿಗಳನ್ನು ನಿಷೇಧಿಸಲು ಒತ್ತಾಯಿಸುತ್ತಿದ್ದೇವೆ. ಆದರೆ, ಸರ್ಕಾರ ನಮ್ಮ ಬೇಡಿಕೆಗೆ ಓಗೊಟ್ಟಿಲ್ಲ. ಅನಿವಾರ್ಯವಾಗಿ ಬಂದ್‌ ಮಾಡುತ್ತಿದ್ದೇವೆ. ಜನತೆ ಸಹಕರಿಸಬೇಕು.

-ಎಂ.ಮಂಜುನಾಥ್‌, ಆದರ್ಶ ಆಟೋ ಆ್ಯಂಡ್‌ ಟ್ಯಾಕ್ಸಿ ಡ್ರೈವರ್ಸ್‌ ಯೂನಿಯನ್‌ ಅಧ್ಯಕ್ಷ

ನಗರದಲ್ಲಿ ಆಟೋರಿಕ್ಷಾ ನಂಬಿ 10 ಲಕ್ಷ ಜನರು ಬದುಕು ನಡೆಸುತ್ತಿದ್ದಾರೆ. ಅಕ್ರಮ ಬೈಕ್‌ ಟ್ಯಾಕ್ಸಿಗಳಿಂದಾಗಿ ಆಟೋ ಚಾಲಕರು, ಅವರ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಸರ್ಕಾರ ಎಚ್ಚೆತ್ತುಕೊಂಡು ನಮ್ಮ ಬೇಡಿಕೆ ಈಡೇರಿಸಬೇಕು.

-ಸಿ.ಎನ್‌.ಶ್ರೀನಿವಾಸ್‌, ಸಿಐಟಿಯು ಆಟೋರಿಕ್ಷಾ ಡ್ರೈವರ್ಸ್‌ ಯೂನಿಯನ್‌

Follow Us:
Download App:
  • android
  • ios