ರಾಜ್ಯ ಸರ್ಕಾರ ಜಾರಿಗೊಳಿಸಿರುವ ‘ಶಕ್ತಿ’ ಯೋಜನೆ ವಿರೋಧಿಸಿ ಜು. 31ರಂದು ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ಹÜುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಆಟೋ ಸಂಚಾರ ಸಂಪೂರ್ಣ ಸ್ಥಗಿತವಾಗಲಿದೆ. ‘ಉತ್ತರ ಕರ್ನಾಟಕ ಆಟೋ ರಿಕ್ಷಾ ಚಾಲಕರ ಸಂಘ’, ‘ಹು-ಧಾ ಆಟೋ ಚಾಲಕರ ಒಕ್ಕೂಟ’ ಜಂಟಿಯಾಗಿ ಈ ಬಂದ್‌ ಕರೆ ನೀಡಿದ್ದು, ಈ ಹೋರಾಟಕ್ಕೆ ವಿವಿಧ ಸಂಘ- ಸಂಸ್ಥೆಗಳು ಕೂಡ ಬೆಂಬಲ ನೀಡಿವೆ.

ಹುಬ್ಬಳ್ಳಿ (ಜು.31) :  ರಾಜ್ಯ ಸರ್ಕಾರ ಜಾರಿಗೊಳಿಸಿರುವ ‘ಶಕ್ತಿ’ ಯೋಜನೆ ವಿರೋಧಿಸಿ ಜು. 31ರಂದು ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ಹÜುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಆಟೋ ಸಂಚಾರ ಸಂಪೂರ್ಣ ಸ್ಥಗಿತವಾಗಲಿದೆ. ‘ಉತ್ತರ ಕರ್ನಾಟಕ ಆಟೋ ರಿಕ್ಷಾ ಚಾಲಕರ ಸಂಘ’, ‘ಹು-ಧಾ ಆಟೋ ಚಾಲಕರ ಒಕ್ಕೂಟ’ ಜಂಟಿಯಾಗಿ ಈ ಬಂದ್‌ ಕರೆ ನೀಡಿದ್ದು, ಈ ಹೋರಾಟಕ್ಕೆ ವಿವಿಧ ಸಂಘ- ಸಂಸ್ಥೆಗಳು ಕೂಡ ಬೆಂಬಲ ನೀಡಿವೆ.

ಸರ್ಕಾರಿ ಬಸ್ಸಿನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ‘ಶಕ್ತಿ’ ಯೋಜನೆಯಿಂದಾಗಿ ಆಟೋ ಚಾಲಕರ ಕುಟುಂಬಗಳು ಬೀದಿಗೆ ಬಿದ್ದಿವೆ. ಈ ಯೋಜನೆ ಜಾರಿಯಾದಂದಿನಿಂದ ರಾಜ್ಯಾದ್ಯಂತ ಮಹಿಳೆಯರು ಆಟೋದಲ್ಲಿ ಹತ್ತುತ್ತಿಲ್ಲ. ಇದರಿಂದಾಗಿ ತಮ್ಮ ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದ್ದು, ಹುಬ್ಬಳ್ಳಿ-ಧಾರವಾಡ ನಗರ ವ್ಯಾಪ್ತಿಯಲ್ಲಿ ಉಚಿತ ಪ್ರಯಾಣಕ್ಕೆ ನೀಡಿರುವ ಅವಕಾಶ ನೀಡಬಾರದು ಎನ್ನುವುದು ಆಟೋ ಸಂಘದವರ ಪ್ರಮುಖ ಬೇಡಿಕೆ.

ಖಾಸಗಿ ಸಾರಿಗೆ ಸಂಘಟನೆಗಳ ಜೊತೆ ಇಂದು ಸಚಿವ ರಾಮಲಿಂಗಾರೆಡ್ಡಿ 2ನೇ ಸುತ್ತಿನ ಸಭೆ

5 ಸಾವಿರ ಆಟೋ ಭಾಗಿ:

ಮಹಾನಗರ ವ್ಯಾಪ್ತಿಯಲ್ಲಿ 25 ಸಾವಿರಕ್ಕೂ ಅಧಿಕ ಆಟೋಗಳಿದ್ದು, ಹುಬ್ಬಳ್ಳಿ ನಗರದಲ್ಲಿಯೇ 15 ಸಾವಿರಕ್ಕೂ ಅಧಿಕ ಆಟೋಗಳಿವೆ. ಜು. 31ರಂದು ನಡೆಯುವ ಬಂದ್‌ನಲ್ಲಿ ಎಲ್ಲ ಆಟೋ ಚಾಲಕರು ಬೆಂಬಲ ವ್ಯಕ್ತಪಡಿಸಿದ್ದು, ಬೆಳಗ್ಗೆ 6ರಿಂದ ಸಂಜೆ 6 ಗಂಟೆಯ ವರೆಗೆ ಯಾವುದೇ ಕಾರಣಕ್ಕೂ ಆಟೋಗಳನ್ನು ರಸ್ತೆಗಿಳಿಸದಂತೆ ಚಾಲಕರಲ್ಲಿ ಮನವಿ ಮಾಡಲಾಗಿದೆ.

ಇಂದಿರಾ ಗ್ಲಾಸ್‌ಹೌಸ್‌ನಿಂದ ಬೆಳಗ್ಗೆ 10 ಗಂಟೆಗೆ ಆರಂಭವಾಗುವ ಬೃಹತ್‌ ಪ್ರತಿಭಟನಾ ಮೆರವಣಿಗೆಯಲ್ಲಿ 5 ಸಾವಿರಕ್ಕೂ ಅಧಿಕ ಆಟೋಗಳು ಪಾಲ್ಗೊಳ್ಳಲಿದ್ದು, ಹಳೇ ಬಸ್‌ ನಿಲ್ದಾಣದ ಮೂಲಕ ರಾಣಿ ಚೆನ್ನಮ್ಮ ವೃತ್ತಕ್ಕೆ ಆಗಮಿಸಿ ರಸ್ತೆತಡೆ ನಡೆಸಲಾಗುವುದು. ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಆಗಮಿಸಿ ಸಾರಿಗೆ ಸಚಿವರೊಂದಿಗೆ ಮಾತನಾಡಿ ನಮ್ಮ ಸಮಸ್ಯೆ ಪರಿಹರಿಸುವ ವರೆಗೆ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಉತ್ತರ ಕರ್ನಾಟಕ ಆಟೋ ರಿಕ್ಷಾ ಚಾಲಕರ ಸಂಘದ ಜಿಲ್ಲಾಧ್ಯಕ್ಷ ಶೇಖರಯ್ಯ ಮಠಪತಿ ತಿಳಿಸಿದರು.

ಸಂಘಟನೆಗಳು ಸಾಥ್‌:

ಬೇಂದ್ರೆ ನಗರ ಸಾರಿಗೆ, ಉತ್ತರ ಕರ್ನಾಟಕ ಮೆಕ್ಸಿಕ್ಯಾಬ್‌ ಒಕ್ಕೂಟ, ಯುವ ಕರ್ನಾಟಕ ವೇದಿಕೆ ಸೇರಿದಂತೆ ಟಂಟಂ ಸಂಘಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದು, ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿವೆ ಎಂದು ಸಂಘದ ಉಪಾಧ್ಯಕ್ಷ ಹನುಮಂತಯ್ಯ ಪವಾಡಿ ತಿಳಿಸಿದ್ದಾರೆ.

ಆಟೋ ಬಂದ್‌ಗೆ ಬೆಂಬಲವಿಲ್ಲ

ರಾಜ್ಯ ಸರ್ಕಾರದ ಶಕ್ತಿ ಯೋಜನೆ ವಿರೋಧಿಸಿ ಹು-ಧಾ ಮೂಲಕ ಉತ್ತರ ಕರ್ನಾಟಕದಲ್ಲಿ ಆಟೋ ಬಂದ್‌ ಮಾಡಲು ಉದ್ದೇಶಿಸಿರುವ ಆಟೋ ಚಾಲಕರ ಸಂಘದ ಪ್ರತಿಭಟನೆಗೆ ವಿವಿಧ ದಲಿತ ಸಂಘ ಸಂಸ್ಥೆಗಳ ಮಹಾಮಂಡಳ ಬೆಂಬಲಿಸುತ್ತಿಲ್ಲ ಎಂದು ಮಹಾಮಂಡಳದ ಅಧ್ಯಕ್ಷ ಗುರುನಾಥ ಉಳ್ಳಿಕಾಶಿ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿ, ಜು. 31ರಂದು ರಾಜ್ಯ ಸರ್ಕಾರದ ಶಕ್ತಿ ಯೋಜನೆ ವಿರೋಧಿಸಿ ಹು-ಧಾ ಮಹಾನಗರದಲ್ಲಿ ಆಟೋ ರಿಕ್ಷಾ ಬಂದ್‌ ಹಮ್ಮಿಕೊಂಡಿರುವುದು ಖಂಡನಾರ್ಹ. ಈ ಕೂಡಲೇ ಆಟೋ ಚಾಲಕರು ಬಂದ್‌ ಕೈ ಬಿಡುವಂತೆ ವಿವಿಧ ಸಂಘ-ಸಂಸ್ಥೆಗಳ ಮಹಾಮಂಡಳ ಕೋರುತ್ತದೆ. ಈ ಕುರಿತು ಆಟೋ ಚಾಲಕರ ಬೇಡಿಕೆ ಕುರಿತು ಸರ್ಕಾರದೊಂದಿಗೆ ಚರ್ಚಿಸಲು ಮಹಾಮಂಡಳ ಸಹಕರಿಸಲು ಸಿದ್ಧವಿದ್ದು, ಬಂದ್‌ ಅನವಶ್ಯಕ ಎಂಬುದನ್ನು ಅರಿತುಕೊಳ್ಳಲಿ.

ಶಕ್ತಿ ಯೋಜನೆ ವಿರೋಧಿಸಿ ಜು.27ರಂದು ಆಟೋ, ಟ್ಯಾಕ್ಸಿ, ಖಾಸಗಿ ಬಸ್ ಮಾಲೀಕರ ಮುಷ್ಕರ: ಜಂಟಿ ಸಭೆಗೆ ಸಚಿವರಿಂದ ಆಹ್ವಾನ

ಅನವಶ್ಯಕವಾಗಿ ಬಂದ್‌ಗೆ ಮುಂದಾಗಿ ಜನಪರ ಮಹಿಳಾ ಶಕ್ತಿ ಯೋಜನೆ ವಿರೋಧಿಸಲು ಮುಂದಾದರೆ ಮಹಾಮಂಡಳ ಈ ಬಂದ್‌ಗೆ ಬೆಂಬಲ ನೀಡುವುದಿಲ್ಲ. ಸೂಕ್ತ ಬಸ್‌ ವ್ಯವಸ್ಥೆಯನ್ನು ಅವಶ್ಯಕ ಮಾರ್ಗಗಳಲ್ಲಿ ದ್ವಿಗುಣಗೊಳಿಸಲು ಈ ಮೂಲಕ ಜಿಲ್ಲಾಡಳಿತಕ್ಕೆ ಮಹಾಮಂಡಳ ಒತ್ತಾಯಿಸಿದೆ.