ಬೆಂಗಳೂರು[ಜ.25]: ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ರೂಪಿಸಲಾಗಿದ್ದ ಮೌಢ್ಯ ಪ್ರತಿಬಂಧಕ ಕಾಯ್ದೆಯನ್ನು ಕೆಲವು ಬದಲಾವಣೆಗಳೊಂದಿಗೆ ಜಾರಿಗೊಳಿಸಲಾಗುತ್ತಿದೆ. ಜ್ಯೋತಿಷ್ಯ ಒಂದು ವಿಜ್ಞಾನ ಎಂದು ಸಾಬೀತಾಗಿರುವುದರಿಂದ ಅದನ್ನು ನಿಷೇಧಿಸಲಾಗಿಲ್ಲ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ಹೇಳಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜ್ಯೋತಿಷ್ಯದ ಹೆಸರಿನಲ್ಲಿ ಹಣ ವಸೂಲಿ ಮಾಡುವವರು ಹಾಗೂ ಜನರನ್ನು ತಪ್ಪು ದಾರಿಗೆ ಎಳೆಯುವವರ ಬಗ್ಗೆ ದೂರುಗಳಿವೆ. ಅಂತಹ ನಕಲಿ ಜ್ಯೋತಿಷಿಗಳ ವಿರುದ್ಧ ದೂರು ನೀಡಿದರೆ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಅಕ್ರಮ ತಡೆಗೆ ರೆವಿನ್ಯೂ ಸೈಟ್‌ ನೋಂದಣಿ ಸ್ಥಗಿತ: ಅಶೋಕ್

ಕಾಂಗ್ರೆಸ್‌ ಅಧಿಕಾರಾವಧಿಯಲ್ಲಿ ಬಿಜೆಪಿ ಈ ಕಾಯ್ದೆಯನ್ನು ವಿರೋಧಿಸಿತ್ತಲ್ಲ ಎಂಬ ಪ್ರಶ್ನೆಗೆ, ಆ ಸರ್ಕಾರ ಕಾಯ್ದೆಯಲ್ಲಿ ಧರ್ಮದ ವಿಷಯವನ್ನೂ ಬೆರೆಸಿದ್ದರಿಂದ ವಿರೋಧಿಸಿದ್ದೆವು. ಮೌಢ್ಯ ಹರಡುವುದನ್ನು ಬಿಜೆಪಿ ಯಾವತ್ತೂ ವಿರೋಧಿಸುತ್ತದೆ. ಮೌಢ್ಯ ನಿಷೇಧಕ್ಕೆ ಬೆಂಬಲವಿದೆ. ಎಲ್ಲಾ ಧರ್ಮದಲ್ಲಿರುವ ಮೌಢ್ಯಗಳು ನಿಷೇಧವಾಗಬೇಕು. ಜನರಿಗೆ ಹಿಂಸೆ ನೀಡುವಂತಹ ಮೌಢ್ಯಗಳು ಯಾವುದೇ ಧರ್ಮದಲ್ಲಿದ್ದರೂ ಆಚರಿಸುವಂತಹುದಲ್ಲ. ಹಾಗಾಗಿ ಕೆಲ ಮಾರ್ಪಾಡುಗಳನ್ನು ಮಾಡಿ ಕಾಯ್ದೆ ಜಾರಿಗೊಳಿಸಲಾಗುತ್ತಿದೆ ಎಂದು ಅಶೋಕ್‌ ಸಮರ್ಥಿಸಿಕೊಂಡರು.

ವಿಪಕ್ಷಗಳಿಗೆ ಕಷ್ಟಆಗುತ್ತೆಂದು ಜ್ಯೋತಿಷ್ಯ ನಿಷೇಧಿಸಿಲ್ಲ!

ಜ್ಯೋತಿಷ್ಯ ನಿಷೇಧ ಮಾಡಿದರೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ನವರಿಗೆ ತೊಂದರೆಯಾಗುತ್ತದೆ. ಏಕೆಂದರೆ ಆ ಪಕ್ಷಗಳ ನಾಯಕರು ನಿರಂತರವಾಗಿ ಜ್ಯೋತಿಷಿಗಳ ಮನೆ ಬಾಗಿಲಿಗೆ ಹೋಗುತ್ತಿರುತ್ತಾರೆ. ಜ್ಯೋತಿಷ್ಯ ಕೇಳುವುದರಲ್ಲಿ ಮತ್ತು ನಂಬುವುದರಲ್ಲಿ ಅವರು ನಿಪುಣರು. ಹಾಗಾಗಿ ಜ್ಯೋತಿಷ್ಯ ನಿಷೇಧಿಸುವುದಿಲ್ಲ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ವ್ಯಂಗ್ಯವಾಡಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಮತ್ತು ಜೆಡಿಎಸ್‌ನವರೇ ಜ್ಯೋತಿಷ್ಯ ಕೇಳುವುದರಲ್ಲಿ ಮತ್ತು ನಂಬುವುದರಲ್ಲಿ ಪ್ರಮುಖರು. ಅವರು ನಿರಂತರವಾಗಿ ಜ್ಯೋತಿಷಿಗಳ ಮನೆ ಬಾಗಿಲಿಗೆ ಹೋಗುತ್ತಿರುತ್ತಾರೆ. ಮೊನ್ನೆ ಕಾಂಗ್ರೆಸ್‌ ನಾಯಕ ಡಿ.ಕೆ.ಶಿವಕುಮಾರ್‌ ಮಧ್ಯಪ್ರದೇಶದಲ್ಲಿ ಹೋಮ ಮಾಡಿಸಲಿಲ್ಲವೇ? ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಯಾವಾಗಲೂ ಜ್ಯೋತಿಷ್ಯವನ್ನು ನಂಬುತ್ತಾರೆ. ನಾವು ಜ್ಯೋತಿಷ್ಯ ನಿಷೇಧಿಸಿದರೆ ಅವರಿಗೆ ಕಷ್ಟವಾಗುತ್ತದೆ. ಹಾಗಾಗಿ ಜ್ಯೋತಿಷ್ಯ ನಿಷೇಧಿಸುವುದಿಲ್ಲ ಎಂದು ಕಾಲೆಳೆದರು.

'ಪಾಕಿಸ್ತಾನ ಪರ ಇರೋರಿಗೆ ಗುಂಡಿಕ್ಕಿ, ಪಾಕ್ ಧ್ವಜ ಕಂಡ್ರೆ ಸಿಟ್ಟು ಬರುತ್ತೆ'