ಹುಬ್ಬಳ್ಳಿ[ಫೆ,05]: ಜೆಡಿಎಸ್‌-ಕಾಂಗ್ರೆಸ್‌ನ ಸಮ್ಮಿಶ್ರ ಸರ್ಕಾರಕ್ಕೆ ಕಂಟಕವಿದ್ದು, ಮಾ.5ರೊಳಗಾಗಿ ಸರ್ಕಾರ ಪತನವಾಗಲಿದೆ ಎಂದು ಅಖಿಲ ಕರ್ನಾಟಕ ಜ್ಯೋತಿರ್ವಿಜ್ಞಾನ ಸಂಶೋಧನಾ ಸಂಸ್ಥೆ ಅಧ್ಯಕ್ಷ ವಿದ್ವಾನ್‌ ಗಣೇಶ ಹೆಗಡೆ ಭವಿಷ್ಯ ನುಡಿದಿದ್ದಾರೆ. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಜಾತಕದಲ್ಲಿ ರಾಜಾಧಿಪತಿ ಬುಧ ಅಷ್ಟಮದಲ್ಲಿ ಬಂದಿದ್ದು, ಸಪ್ತಮದಲ್ಲಿ ಶನಿ ಇರುವುದರಿಂದ ಮಿತ್ರರೇ ಶತ್ರುಗಳಾಗಿ ಮೈತ್ರಿ ಸರ್ಕಾರಕ್ಕೆ ಕಂಟಕ ತರಲಿದ್ದಾರೆ. ಸಿದ್ದರಾಮಯ್ಯ ಜಾತಕದಲ್ಲಿ ಗ್ರಹಗಳು ಪ್ರಬಲವಾಗಿದ್ದು, ಅವರ ಕೈ ಮೇಲಾಗುವ ಸಾಧ್ಯತೆ ಇದೆ ಎಂದು ಹೇಳಿದರು.

ಲೋಕಸಭಾ ಚುನಾವಣೆಯ ಒಳಗೆ ಮೈತ್ರಿ ಸರ್ಕಾರ ಬಿದ್ದು, ಯಡಿಯೂರಪ್ಪ ಮುಖ್ಯಮಂತ್ರಿ ಆಗಲಿದ್ದಾರೆ. ಆಂತರಿಕ ಜಗಳದಿಂದ ಕಾಂಗ್ರೆಸ್‌, ಜೆಡಿಎಸ್‌ಗಳು ಹೊಡೆದಾಡಿಕೊಂಡು ಸಮ್ಮಿಶ್ರ ಸರ್ಕಾರ ಪತನಗೊಳ್ಳಲಿದೆ ಎಂದಿರುವ ಅವರು, ಲೋಕಸಭಾ ಚುನಾವಣೆಯಲ್ಲಿ 285ಕ್ಕಿಂತ ಹೆಚ್ಚಿನ ಸ್ಥಾನ ಪಡೆಯುವ ಮೂಲಕ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗುವುದು ಖಚಿತ. ಕರ್ನಾಟಕದಲ್ಲಿ 15ಕ್ಕಿಂತ ಹೆಚ್ಚು ಸ್ಥಾನಗಳು ಬಿಜೆಪಿಗೆ ಬರುತ್ತವೆ ಎಂದು ಭವಿಷ್ಯ ನುಡಿದರು.