ಬೆಂಗಳೂರು(ಜು.26): ಕೊರೋನಾ ಬಗ್ಗೆ ನಿರ್ಲಕ್ಷ್ಯ ಬೇಡ. ಹಾಗಂತ ಹೆದರಿ ಭಯಪಡುವ ಅಗತ್ಯವೂ ಇಲ್ಲ. ಸೋಂಕು ಬಂದಾಗ ಧೈರ್ಯವಾಗಿ ಇರಬೇಕು. ಮಾನಸಿಕವಾಗಿ ಎಷ್ಟು ಗಟ್ಟಿಯಾಗಿ ಇರುತ್ತೇವೋ ಅಷ್ಟುಬೇಗ ಗುಣಮುಖರಾಗುತ್ತೇವೆ...

ಕೊರೋನಾ ಸೋಂಕನ್ನು ಧೈರ್ಯವಾಗಿ ಎದುರಿಸಿ ಗುಣಮುಖರಾಗಿರುವ ಬೆಂಗಳೂರು ಜಲಮಂಡಳಿಯ 32 ವರ್ಷದ ಸಹಾಯಕ ಅಭಿಯಂತರ ತಾವು ಸೋಂಕನ್ನು ಎದುರಿಸಿದ ಅನುಭವಗಳನ್ನು ಮುಕ್ತವಾಗಿ ಹಂಚಿಕೊಂಡ ರೀತಿಯಿದು.
ಜೂ.24ರಂದು ಜ್ವರ, ಗಂಟಲು ನೋವು ಕಾಣಿಸಿಕೊಂಡಿತು. ಆರಂಭದಲ್ಲಿ ಸಾಮಾನ್ಯ ಮಾತ್ರೆ ತೆಗೆದುಕೊಂಡಿದ್ದೆ. ಆದರೆ, ಜ್ವರ ಹಾಗೂ ಗಂಟಲು ನೋವು ಕಮ್ಮಿಯಾಗಲಿಲ್ಲ. ಹೀಗಾಗಿ ಕ್ಲಿನಿಕ್‌ವೊಂದಕ್ಕೆ ತೆರಳಿ ತೋರಿಸಿದಾಗ ಕೊರೋನಾ ಪರೀಕ್ಷೆಗೆ ಸೂಚಿಸಿದರು. ಪರೀಕ್ಷಾ ವರದಿಯಲ್ಲಿ ಸೋಂಕಿರುವುದು ದೃಢಪಟ್ಟಿತ್ತು. ಜು.3ರಂದು ಖಾಸಗಿ ಆಸ್ಪತ್ರೆಗೆ ದಾಖಲಾದೆ. ಆಸ್ಪತ್ರೆಯಲ್ಲಿ ಜ್ವರ ಹಾಗೂ ಕೆಮ್ಮಿಗೆ ಮಾತ್ರೆಗಳನ್ನು ಕೊಟ್ಟರು. ಜೊತೆಗೆ ವಿಟಮಿನ್‌ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮಾತ್ರೆಗಳನ್ನೂ ಕೊಡುತ್ತಿದ್ದರು. ಐದು ದಿನಗಳ ಕಾಲ ಉತ್ತಮವಾಗಿ ನೋಡಿಕೊಂಡರು.

ಸೋಂಕಿತರ ಅಂತ್ಯಕ್ರಿಯೆ ವೆಚ್ಚ ಭರಿಸಲಿದೆ BBMP

ಕೊರೋನಾ, ಕೊರೋನಾ ಎಂದು ಎಲ್ಲೆಡೆಯಿಂದ ಕೇಳಿ ಬೇಸರದ ಜೊತೆಗೆ, ಮೊಂಡು ಧೈರ್ಯ ಬಂದಿತ್ತು. ಹೀಗಾಗಿ ಒಂದು ವೇಳೆ ಕೊರೋನಾ ಸೋಂಕು ಬಂದರೂ ಹೆದರೋದು ಬೇಡ ಎಂದು ಮೊದಲೇ ಮಾನಸಿಕವಾಗಿ ಗಟ್ಟಿಯಾಗಿದ್ದೆ. ಹೀಗಾಗಿ ಪಾಸಿಟಿವ್‌ ಇದೆ ಎಂದಾಗ ಭಯವೇ ಆಗಲಿಲ್ಲ. ಆಸ್ಪತ್ರೆಯಲ್ಲಿ ಐದೇ ದಿನಕ್ಕೆ ಸೋಂಕಿನಿಂದ ಗುಣಮುಖನಾಗಿ ಹೊರ ಬಂದೆ. ಈಗ ಹೋಂ ಕ್ವಾರಂಟೈನ್‌ನಲ್ಲಿ ಆರಾಮವಾಗಿ ಇದ್ದೇನೆ ಎಂದು ಹೇಳಿದರು.

ಕೊರೋನಾ ಬಂದರೆ ಹಾಗೆ ಆಗುತ್ತೆ, ಹೀಗೆ ಆಗುತ್ತೆ ಎಂದು ಭಾವಿಸೋದು ಬೇಡ. ಎಲ್ಲ ಸೋಂಕಿನಂತೆ ಇದೂ ಒಂದು ಎಂದು ಭಾವಿಸಿದರೆ ಆಯಿತು. ಹಾಗಂತ ನಿರ್ಲಕ್ಷ್ಯವನ್ನೂ ಮಾಡಬಾರದು. ಮುನ್ನೆಚ್ಚರಿಕಾ ಕ್ರಮಗಳು ಏನಿದೆಯೋ ಅದೆಲ್ಲವನ್ನು ಚಾಚುತಪ್ಪದೆ ಪಾಲಿಸಬೇಕು. ಆರೋಗ್ಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿರುವವರು ಈ ಸೋಂಕಿನ ಬಗ್ಗೆ ಹೆಚ್ಚು ಎಚ್ಚರವಹಿಸಬೇಕು ಎಂದು ಸೋಂಕಿನಿಂದ ಗುಣಮುಖರಾಗಿರುವ ಸಹಾಯಕ ಅಭಿಯಂತರ ಸಲಹೆ ನೀಡಿದರು.