ಹಾಲಿ, ಮಾಜಿಗಳಿಗೆ ಹೊಸ ಮುಖಗಳಿಂದ ಟಕ್ಕರ್‌  ಬೊಮ್ಮಾಯಿ ವಿರುದ್ಧ ಸ್ಪರ್ಧೆಗೆ ಕಾಂಗ್ರೆಸ್‌ನಲ್ಲಿ ಸಾಲು ಸಾಲು ಆಕಾಂಕ್ಷಿಗಳು ಲಿಂಗಾಯತ ಪ್ರಾಬಲ್ಯದ ಜಿಲ್ಲೆಯಲ್ಲಿ ಜೆಡಿಎಸ್‌ ಸಪ್ಪಳವಿಲ್ಲ ಕೋಳಿವಾಡ ಬದಲು ಈ ಬಾರಿ ಪುತ್ರ ಅಖಾಡಕ್ಕೆ ಇಳಿಯುವ ಬಗ್ಗೆ ಚರ್ಚೆ ಹಾನಗಲ್‌ ಟಿಕೆಟ್‌ ರೇಸ್‌ನಲ್ಲಿ ಶಿವಕುಮಾರ್‌ ಉದಾಸಿ ಹೆಸರು

ಹಾವೇರಿ (ನ.22) :ವಿಧಾನಸಭೆ ಚುನಾವಣೆಗೆ ಇನ್ನೂ ಕೆಲ ತಿಂಗಳು ಬಾಕಿ ಇರುವಾಗಲೇ ಜಿಲ್ಲೆಯಲ್ಲಿ ರಾಜಕೀಯದ ಕಾವು ಏರತೊಡಗಿದೆ. ಬಿಜೆಪಿ ಭದ್ರಕೋಟೆಗೆ ಲಗ್ಗೆ ಇಡಲು ಕಾಂಗ್ರೆಸ್‌ ತಂತ್ರಗಾರಿಕೆ ರೂಪಿಸುತ್ತಿದ್ದರೆ, ತನ್ನ ಕ್ಷೇತ್ರ ಉಳಿಸಿಕೊಳ್ಳಲು ಬಿಜೆಪಿ ಪ್ರತಿತಂತ್ರ ರೂಪಿಸಿದೆ. ಹಾವೇರಿಯು ಮುಖ್ಯಮಂತ್ರಿಗಳ ತವರು ಜಿಲ್ಲೆಯಾಗಿರುವುದು ರಾಜಕೀಯವಾಗಿ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.

ಶಿಗ್ಗಾಂವಿ, ಹಾವೇರಿ (ಎಸ್‌ಸಿ ಮೀಸಲು), ರಾಣಿಬೆನ್ನೂರು, ಹಾನಗಲ್‌, ಹಿರೇಕೆರೂರು ಮತ್ತು ಬ್ಯಾಡಗಿ ಸೇರಿ ಆರು ವಿಧಾನಸಭಾ ಕ್ಷೇತ್ರಗಳನ್ನು ಜಿಲ್ಲೆ ಹೊಂದಿದೆ. ಹಾನಗಲ್‌ ಹೊರತುಪಡಿಸಿ ಇನ್ನುಳಿದ ಎಲ್ಲ ಕ್ಷೇತ್ರಗಳು ಬಿಜೆಪಿ ವಶದಲ್ಲಿವೆ. ಸರ್ಕಾರದ ಸಾಧನೆ, ತವರು ಜಿಲ್ಲೆಗೆ ಮುಖ್ಯಮಂತ್ರಿ ಬೊಮ್ಮಾಯಿ ನೀಡಿದ ಹಲವು ಯೋಜನೆ, ಅಭಿವೃದ್ಧಿಗೆ ಹರಿದ ಅನುದಾನ, ಮೋದಿ ಹಾಗೂ ಹಿಂದೂ ಪರ ಅಲೆ, ತಳ ಮಟ್ಟದಲ್ಲಿ ಸಂಘಟನೆ, ಅಧಿಕಾರ ಈ ಎಲ್ಲವನ್ನು ಒಟ್ಟಿಗೆ ಸೇರಿಸಿಕೊಂಡು ಚುನಾವಣೆ ಎದುರಿಸಲು ಬಿಜೆಪಿ ಸನ್ನದ್ಧವಾಗಿದೆ. ಅತ್ತ ಕಾಂಗ್ರೆಸ್‌ ಕೂಡ ಸರ್ಕಾರದ ವೈಫಲ್ಯಗಳನ್ನು ಇಟ್ಟುಕೊಂಡು ಕಳೆದುಕೊಂಡಿದ್ದ ಕೋಟೆ ಮರಳಿ ಪಡೆಯುವತ್ತ ಚಿತ್ತ ನೆಟ್ಟಿದೆ. ಜಿಲ್ಲೆಯಲ್ಲಿ ಜೆಡಿಎಸ್‌ ಸಂಘಟನೆ ಅಷ್ಟಾಗಿ ಇಲ್ಲದ್ದರಿಂದ ಇಲ್ಲೇನಿದ್ದರೂ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವಣ ನೇರ ಫೈಟ್‌ ನಿಶ್ಚಿತ.

ಕರ್ನಾಟಕ ವಿಧಾನಸಭಾ ಚುನಾವಣೆ 2023: ಕಾಂಗ್ರೆಸ್‌ ಅಭ್ಯರ್ಥಿಗಳ ಹೆಸರು ಘೋಷಿಸಿದ ಸಿದ್ದರಾಮಯ್ಯ

ಜಿಲ್ಲೆಯಲ್ಲಿ ಲಿಂಗಾಯತ ಮತ ಪ್ರಾಬಲ್ಯವಿದ್ದು, ಪಂಚಮಸಾಲಿ ಸಮಾಜ ಕೆಲ ಕ್ಷೇತ್ರಗಳಲ್ಲಿ ನಿರ್ಣಾಯಕ ಎನಿಸಿವೆ. ಎಸ್ಸಿ, ಎಸ್ಟಿ, ಕುರುಬ, ಹಿಂದುಳಿದ ಜಾತಿ, ಅಲ್ಪಸಂಖ್ಯಾತ ಮತಗಳು ಕೆಲ ಕ್ಷೇತ್ರಗಳಲ್ಲಿ ಪ್ರಾಬಲ್ಯ ಹೊಂದಿವೆ. ಜಾತಿ ಲೆಕ್ಕಾಚಾರದ ಮೇಲೆಯೇ ಜಿಲ್ಲೆಯ ರಾಜಕೀಯ ನಿಂತಿದ್ದು, ಬಿಜೆಪಿ ಮತ್ತು ಕಾಂಗ್ರೆಸ್‌ ಎರಡೂ ಪಕ್ಷಗಳು ಇದನ್ನು ಗಮನದಲ್ಲಿಟ್ಟುಕೊಂಡೇ ಚುನಾವಣಾ ಸಮೀಕರಣಕ್ಕೆ ಇಳಿದಿವೆ. ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಪ್ರಭಾವ ಕೂಡ ಜಿಲ್ಲೆಯಲ್ಲಿ ಸಾಕಷ್ಟಿದೆ.

1.ಶಿಗ್ಗಾಂವಿ: ಸಿಎಂ ವಿರುದ್ಧ ರೇಸ್‌ಗೆ 13 ಜನ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿನಿಧಿಸುವ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರ ರಾಜ್ಯದ ಗಮನ ಸೆಳೆದಿದೆ. ಮುಸ್ಲಿಂ ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ಹಿಂದಿನ 3 ಚುನಾವಣೆಗಳಲ್ಲಿ ಬೊಮ್ಮಾಯಿ ಹ್ಯಾಟ್ರಿಕ್‌ ಗೆಲುವು ದಾಖಲಿಸಿದ್ದರು. ಈ ಸಲವೂ ಗೆಲುವಿನ ಹಾರಹಾಕಿಕೊಳ್ಳಲು ಸಜ್ಜಾಗಿರುವ ಅವರಿಗೆ ಟಕ್ಕರ್‌ ಕೊಡಲು ಕಾಂಗ್ರೆಸ್‌ ಸೂಕ್ತ ಅಭ್ಯರ್ಥಿಗಾಗಿ ಹುಡುಕಾಟ ನಡೆಸಿದೆ. ಹಿಂದಿನ ಮೂರು ಚುನಾವಣೆಗಳಲ್ಲಿ ಬೊಮ್ಮಾಯಿ ಅವರಿಗೆ ಪೈಪೋಟಿ ನೀಡಿದ್ದ ಅಜ್ಜಂಪೀರ್‌ ಖಾದ್ರಿ ಮತ್ತೊಮ್ಮೆ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ. ಜತೆಗೆ ಷಣ್ಮುಖ ಶಿವಳ್ಳಿ, ಸೋಮಣ್ಣ ಬೇವಿನಮರದ, ಸಂಜೀವ್‌ಕುಮಾರ್‌ ನೀರಲಗಿ, ಯಾಸಿರ್‌ಖಾನ್‌ ಪಠಾಣ, ರಾಜೇಶ್ವರಿ ಪಾಟೀಲ, ಶಾಕೀರ್‌ ಸನದಿ, ಶಶಿಧರ ಯಲಿಗಾರ, ನೂರಮ್ಮದ್‌ ಮಳಗಿ, ಎಫ್‌.ಜಿ,ಪಾಟೀಲ, ಎಸ್‌.ವಿ.ಪಾಟೀಲ ಸೇರಿ 13 ಅಭ್ಯರ್ಥಿಗಳು ಕೈ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ಇಲ್ಲಿ ಜೆಡಿಎಸ್‌ ಪ್ರಾಬಲ್ಯ ತೀರಾ ಕಡಮೆ.

2.ಹಿರೇಕೆರೂರು: ಬಿ.ಸಿ.ಪಾ, ಬಣಕಾರ ಮತ್ತೆ ಫೈಟ್‌

ಹಿರೇಕೆರೂರು ಕ್ಷೇತ್ರದಲ್ಲಿ ಪಕ್ಷ, ಚಿಹ್ನೆಗಿಂತ ಬಿ.ಸಿ.ಪಾಟೀಲ ಮತ್ತು ಯು.ಬಿ.ಬಣಕಾರರ ವೈಯಕ್ತಿಕ ವರ್ಚಿಸ್ಸಿನ ಮೇಲೆಯೇ ಚುನಾವಣೆ ನಡೆದುಕೊಂಡು ಬಂದಿದೆ. 2018ರಲ್ಲಿ ಕಾಂಗ್ರೆಸ್‌ನಿಂದ ಗೆದ್ದಿದ್ದ ಪಾಟೀಲ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿ ಉಪ ಚುನಾವಣೆಯಲ್ಲಿ ಗೆದ್ದು ಮಂತ್ರಿಯಾದರು. ಉಪ ಚುನಾವಣೆಯಲ್ಲಿ ಪಾಟೀಲರಿಗೆ ಬೆಂಬಲವಾಗಿ ನಿಂತಿದ್ದ ಬಣಕಾರ ಈಗ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ್ದಾರೆ. 2004, 2008, 2018, 2019ರಲ್ಲಿ ಹೀಗೆ 4 ಬಾರಿ ಗೆದ್ದಿರುವ ಬಿ.ಸಿ.ಪಾಟೀಲ 5ನೇ ಬಾರಿ ಗೆಲುವಿನತ್ತ ಕಣ್ಣಿಟ್ಟಿದ್ದಾರೆ. 1994ರಲ್ಲಿ ಬಿಜೆಪಿಯಿಂದ ಗೆದ್ದಿದ್ದ ಬಣಕಾರ, 2013ರಲ್ಲಿ ಕೆಜೆಪಿಯಿಂದ ಆಯ್ಕೆಯಾಗಿದ್ದರು. ಬಣಕಾರ, ಪಾಟೀಲ ಇಬ್ಬರೂ ಸಾದರ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದು, ಕ್ಷೇತ್ರದಲ್ಲಿ ಲಿಂಗಾಯತ ಸಮಾಜದ 70 ಸಾವಿರ ಮತಗಳಿವೆ. ಎಸ್ಸಿ, ಎಸ್ಟಿ, ಹಿಂದುಳಿದ ವರ್ಗಗಳು ಸೇರಿ 60 ಸಾವಿರ ಮತಗಳಿವೆ. ಇಬ್ಬರೂ ಒಂದೇ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ಎಸ್ಸಿ, ಎಸ್ಟಿ, ಕುರುಬ ಮತಗಳು ನಿರ್ಣಾಯಕ. ಕಾಂಗ್ರೆಸ್‌ನಿಂದ ಈಗ ಬಿಜೆಪಿ ತೊರೆದು ಬಂದಿರುವ ಬಣಕಾರ ಅಭ್ಯರ್ಥಿಯಾಗುವ ಸಾಧ್ಯತೆಯಿದೆ. ಮಾಜಿ ಶಾಸಕ ಬಿ.ಎಚ್‌.ಬನ್ನಿಕೋಡ ಕೂಡ ಟಿಕೆಟ್‌ ಆಕಾಂಕ್ಷಿಯಾಗಿದ್ದು, ಜೆಡಿಎಸ್‌ನಿಂದ ಜಯಣ್ಣ ಜಾವಣ್ಣನವರ ಕಣಕ್ಕಿಳಿಯುವ ನಿರೀಕ್ಷೆ ಇದೆ.

ವಿಧಾನಸಭಾ ಸಮರಕ್ಕೆ ಜೆಡಿಎಸ್ ಸಜ್ಜು: 'ಪಂಚರತ್ನ'ವೇ ಗೆಲುವಿಗೆ ಪಂಚಾಮೃತ

3.ಹಾವೇರಿ ಮೀಸಲು: ಟಿಕೆಟ್‌ಗಾಗಿ ತೀವ್ರ ಪೈಪೋಟಿ

2008ರಲ್ಲಿ ಕ್ಷೇತ್ರ ಮರುವಿಂಗಡಣೆ ಬಳಿಕ ಇಲ್ಲಿ ನಡೆದ ಮೂರು ಚುನಾವಣೆಗಳಲ್ಲಿ ಎರಡು ಸಲ ಬಿಜೆಪಿಯಿಂದ ನೆಹರು ಓಲೇಕಾರ ಗೆದ್ದಿದ್ದಾರೆ. ಕಾಂಗ್ರೆಸ್‌ನ ರುದ್ರಪ್ಪ ಲಮಾಣಿ 2013ರಲ್ಲಿ ಗೆದ್ದು ಮಂತ್ರಿಯಾಗಿದ್ದರು. ಆದರೆ, ಈ ಸಲ ಎರಡೂ ಪಕ್ಷಗಳಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಹಾಲಿ ಶಾಸಕ ಓಲೇಕಾರ ಅವರಿಗೆ ಟಿಕೆಟ್‌ ತಪ್ಪಿಸಿ ಅಭ್ಯರ್ಥಿಯಾಗಲು ಅನೇಕರು ಲಾಬಿ ನಡೆಸಿದ್ದಾರೆ. ಪರಮೇಶ್ವರಪ್ಪ ಮೇಗಳಮನಿ, ವೆಂಕಟೇಶ ನಾರಾಯಣಿ, ರಾಮು ಮಾಳಗಿ ಆಕಾಂಕ್ಷಿಗಳಿದ್ದಾರೆ. ಕಾಂಗ್ರೆಸ್‌ನಲ್ಲಿ ಮಾಜಿ ಸಚಿವ ರುದ್ರಪ್ಪ ಲಮಾಣಿ ಪ್ರಬಲ ಆಕಾಂಕ್ಷಿಯಾಗಿದ್ದರೂ ಡಾ.ಸಂಜಯ ಡಾಂಗೆ, ಈರಪ್ಪ ಲಮಾಣಿ, ಎಂ.ಎಂ.ಹಿರೇಮಠ, ಚಂದನರಾಣಿ ದೊಡ್ಡಮನಿ, ಜಗದೀಶ ಬೆಟಗೇರಿ, ಶಿವಕುಮಾರ ತಾವರಗಿ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಜೆಡಿಎಸ್‌ನಿಂದ ಕ್ಷೇತ್ರದಲ್ಲಿ ಬಲಿಷ್ಠ ಅಭ್ಯರ್ಥಿ ಕಣಕ್ಕಿಳಿಯುವ ಲಕ್ಷಣ ಸದ್ಯಕ್ಕೆ ಕಾಣುತ್ತಿಲ್ಲ.

4.ಹಾನಗಲ್‌: ಉದಾಸಿ ಕುಟುಂಬ ಸ್ಪರ್ಧಿಸುತ್ತಾ?

ಬಿಜೆಪಿಯಿಂದ ಸಿ.ಎಂ.ಉದಾಸಿ, ಕಾಂಗ್ರೆಸ್‌ನಿಂದ ಮನೋಹರ ತಹಶೀಲ್ದಾರ್‌ ಎಂಬಂತಿದ್ದ ಹಾನಗಲ್ಲ ಕ್ಷೇತ್ರದಲ್ಲಿ ಈಗ ಚಿತ್ರಣ ಬದಲಾಗಿದೆ. ಕ್ಷೇತ್ರದಲ್ಲಿ ಹೊಸ ಮುಖಗಳು ಬಂದಿವೆ. 2018ರಲ್ಲಿ ಬಿಜೆಪಿಯಿಂದ ಗೆದ್ದಿದ್ದ ಸಿ.ಎಂ.ಉದಾಸಿ ನಿಧನದಿಂದ ತೆರವಾಗಿದ್ದ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ಶ್ರೀನಿವಾಸ ಮಾನೆ ಜಯಭೇರಿ ಬಾರಿಸಿದ್ದರು. ಆಡಳಿತಾರೂಢ ಬಿಜೆಪಿಗೆ ಈ ಫಲಿತಾಂಶ ಭಾರೀ ಇರಿಸುಮುರಿಸು ತಂದಿತ್ತು. ಜಿಲ್ಲೆಯ ಏಕೈಕ ಕಾಂಗ್ರೆಸ್‌ ಶಾಸಕ ಶ್ರೀನಿವಾಸ ಮಾನೆ ಇದೀಗ ಮತ್ತೆ ಚುನಾವಣೆಗೆ ಟೊಂಕ ಕಟ್ಟಿನಿಂತಿದ್ದಾರೆ. ಉಪಚುನಾವಣೆಯಲ್ಲಿ ಸೋತಿದ್ದ ಬಿಜೆಪಿಯ ಶಿವರಾಜ ಸಜ್ಜನರ ಕೂಡ ನಿರಂತರವಾಗಿ ಕ್ಷೇತ್ರದಲ್ಲಿದ್ದು ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ. ಶಾಸಕ ಮಾನೆ ಅವರಿಗೆ ಟಿಕೆಟ್‌ ಖಚಿತವಾದರೂ ಮಾಜಿ ಸಚಿವ ಮನೋಹರ ತಹಶೀಲ್ದಾರ್‌, ಪ್ರಕಾಶಗೌಡ ಪಾಟೀಲ, ರಾಘವೇಂದ್ರ ತಹಶೀಲ್ದಾರ್‌ ಕೂಡ ಆಕಾಂಕ್ಷಿಗಳಾಗಿದ್ದಾರೆ. ಇನ್ನು ಬಿಜೆಪಿಯಿಂದ ಸಂಸದ ಶಿವಕುಮಾರ ಉದಾಸಿ ಅಥವಾ ರೇವತಿ ಉದಾಸಿ ಅವರಿಗೆ ಟಿಕೆಟ್‌ ನೀಡಿದರೆ ಗೆಲುವು ಸುಲಭ ಎಂಬುದು ಉದಾಸಿ ಬೆಂಬಲಿಗರ ಅಭಿಪ್ರಾಯ. ಶಿವರಾಜ ಸಜ್ಜನರ, ಕೃಷ್ಣ ಈಳಗೇರ ಕೂಡ ಇಲ್ಲಿ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳು.

5.ಬ್ಯಾಡಗಿ: ಬಿಜೆಪಿ-ಕಾಂಗ್ರೆಸ್‌ ಫೈಟ್‌ ಜೋರು

ಕ್ಷೇತ್ರ ಮರುವಿಂಗಡಣೆ ಬಳಿಕ ಸಾಮಾನ್ಯ ಕ್ಷೇತ್ರವಾದ ಬ್ಯಾಡಗಿಯಿಂದ 2 ಸಲ ಬಿಜೆಪಿ, ಒಮ್ಮೆ ಕಾಂಗ್ರೆಸ್‌ ಗೆದ್ದಿದೆ. ಈ ಸಲ ಯಾವ ಪಕ್ಷ ಗೆಲ್ಲಲಿದೆ ಎನ್ನುವುದಕ್ಕಿಂತ ಯಾರಿಗೆ ಟಿಕೆಟ್‌ ಎಂಬ ಚರ್ಚೆಯೇ ಜೋರಾಗಿದೆ. 2018ರಲ್ಲಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಿಸಿದ್ದರು. ಈ ಸಲವೂ ಮತ್ತೆ ಅದೇ ಹುಮ್ಮಸ್ಸಿನಲ್ಲಿದ್ದಾರೆ. ಮಾಜಿ ಶಾಸಕ ಸುರೇಶಗೌಡ ಪಾಟೀಲ ಕೂಡ ಬಿಜೆಪಿ ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದಾರೆ. ಕಾಂಗ್ರೆಸ್‌ನಿಂದ ಯಾರು ಎಂಬ ಪ್ರಶ್ನೆ ಕಾರ್ಯಕರ್ತರಲ್ಲಿದೆ. ಕಳೆದ ಚುನಾವಣೆಯಲ್ಲಿ ಹಾಲಿ ಶಾಸಕ ಬಸವರಾಜ ಶಿವಣ್ಣನವರಗೆ ಟಿಕೆಟ್‌ ತಪ್ಪಿಸಿ ಎಸ್‌.ಆರ್‌.ಪಾಟೀಲರನ್ನು ಕಣಕ್ಕಿಳಿಸಲಾಗಿತ್ತು. ಇಬ್ಬರ ಒಳಜಗಳದ ಲಾಭ ಬಿಜೆಪಿಗೆ ಲಭಿಸಿತ್ತು. ಈ ಸಲ ಕಾಂಗ್ರೆಸ್‌ನಿಂದ ಮತ್ತದೇ ಜೋಡಿ ಟಿಕೆಟ್‌ಗೆ ಫೈಟ್‌ ನಡೆಸಿದೆ.

ಮೋದಿ ಸಲಹೆಯಂತೆ ದಲಿತ ಮೀಸಲು ಏರಿಕೆ: ಸಿಎಂ ಬೊಮ್ಮಾಯಿ

6.ರಾಣಿಬೆನ್ನೂರು: ಬಿಜೆಪಿಯಲ್ಲಿ ಟಿಕೆಟ್‌ಗೆ ಪೈಪೋಟಿ

2004, 2008ರಲ್ಲಿ ಬಿಜೆಪಿ ಪಾಲಾಗಿದ್ದ ಕ್ಷೇತ್ರದಲ್ಲಿ 2013ರಲ್ಲಿ ಕಾಂಗ್ರೆಸ್‌ನ ಕೆ.ಬಿ.ಕೋಳಿವಾಡ ಗೆದ್ದಿದ್ದರು. 2018ರಲ್ಲಿ ಪಕ್ಷೇತರ ಅಭ್ಯರ್ಥಿ ಆರ್‌.ಶಂಕರ್‌ ಗೆದ್ದು ಇತಿಹಾಸ ಸೃಷ್ಟಿಸಿದ್ದರು. ಆದರೆ, ಅವರಿಗೆ ಪಕ್ಷಾಂತರವೇ ಮುಳುವಾಗಿ ಶಾಸಕ ಸ್ಥಾನ ಅನರ್ಹಗೊಂಡು 2019ರಲ್ಲಿ ನಡೆದ ಉಪಚುನಾವಣೆಯಲ್ಲಿ ಹೊಸ ಮುಖ, ಯುವಕ ಅರುಣಕುಮಾರ ಪೂಜಾರಗೆ ಬಿಜೆಪಿ ಅವಕಾಶ ನೀಡಿತ್ತು. ಅರುಣಕುಮಾರ ಗೆದ್ದು ಶಾಸಕರಾದರು. ಈಗ ಮತ್ತೊಮ್ಮೆ ಕ್ಷೇತ್ರದಲ್ಲಿ ಕಮಲ ಅರಳಿಸಲು ಪೂಜಾರ ಸಜ್ಜಾಗಿದ್ದಾರೆ. ಈ ಮಧ್ಯೆ, ಶಂಕರ್‌ ಮತ್ತೊಮ್ಮೆ ಸ್ಪರ್ಧಿಸಬಹುದು ಎನ್ನಲಾಗುತ್ತಿದೆ. ಯುವ ಮುಖಂಡ ಸಂತೋಷಕುಮಾರ್‌ ಪಾಟೀಲ ಕೂಡ ಆಕಾಂಕ್ಷಿಯಾಗಿದ್ದಾರೆ. ಮಾಜಿ ಸ್ಪೀಕರ್‌ ಕೆ.ಬಿ.ಕೋಳಿವಾಡ ರಾಜಕೀಯ ನಿವೃತ್ತಿ ಮಾತನಾಡುತ್ತಿದ್ದು, ತಮ್ಮ ಪುತ್ರ ಪ್ರಕಾಶ ಕೋಳಿವಾಡಗೆ ಟಿಕೆಟ್‌ ಕೊಡಿಸಲು ಶತಪ್ರಯತ್ನ ನಡೆಸಿದ್ದಾರೆ. ಜಟ್ಟೆಪ್ಪ ಕರಿಗೌಡರ, ಕೃಷ್ಣಪ್ಪ ಕಂಬಳಿ ಕೂಡ ಟಿಕೆಟ್‌ಗಾಗಿ ಪ್ರಯತ್ನ ನಡೆಸಿದ್ದಾರೆ.