ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯಾ ಅತ್ಯಾ*ಚಾರ ಮತ್ತು ಕೊ*ಲೆ ಪ್ರಕರಣದ ಮರು ತನಿಖೆಗಾಗಿ ರಚಿಸಲಾದ ವಿಶೇಷ ತನಿಖಾ ತಂಡದಿಂದ (ಎಸ್ಐಟಿ) ತಮ್ಮನ್ನು ಕೈಬಿಡುವಂತೆ ಎಎಸ್ಪಿ ಡಾ. ವೆಂಕಟೇಶ್ ಪ್ರಸನ್ನ ರಾಜ್ಯ ಸರ್ಕಾರಕ್ಕೆ ಲಿಖಿತ ಮನವಿ ಮಾಡಿದ್ದಾರೆ.
ಬೆಂಗಳೂರು: ಮೃತ ವಿದ್ಯಾರ್ಥಿನಿಯ ತಾಯಿಯ ಆಕ್ಷೇಪದ ಹಿನ್ನೆಲೆಯಲ್ಲಿ ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯಾ ಅತ್ಯಾ*ಚಾರ ಹಾಗೂ ಕೊ*ಲೆ ಪ್ರಕರಣದ ವಿಶೇಷ ತನಿಖಾ ತಂಡದಿಂದ (ಎಸ್ಐಟಿ) ಹೊರ ಬರಲು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಾ.ವೆಂಕಟೇಶ್ ಪ್ರಸನ್ನ ನಿರ್ಧರಿಸಿದ್ದಾರೆ.
ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಲಿಖಿತವಾಗಿ ಎಎಸ್ಪಿ ವೆಂಕಟೇಶ್ ಪ್ರಸನ್ನ ಮನವಿ ಮಾಡಿದ್ದು, ‘ಕನ್ನಡಪ್ರಭ’ಕ್ಕೆ ಅವರು ಖಚಿತಪಡಿಸಿದ್ದಾರೆ. ಇದರೊಂದಿಗೆ ರಾಷ್ಟ್ರ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿರುವ ಸೌಜನ್ಯಾ ಕೊ*ಲೆ ಪ್ರಕರಣದ ತನಿಖೆಗೆ ಆರಂಭದಲ್ಲೇ ಆಡಚಣೆ ಎದುರಾಗಿದೆ. ಎಎಸ್ಪಿ ಅವರ ಮನವಿಯನ್ನು ಸರ್ಕಾರ ಪುರಸ್ಕರಿಸಲಿದೆಯೇ ಅಥವಾ ಅವರನ್ನೇ ಮುಂದುವರೆಸಲಿದೆಯೇ ಎಂಬುದು ಇನ್ನಷ್ಟೇ ನಿರ್ಧಾರವಾಗಬೇಕಿದೆ.
ಐಜಿಪಿ ಶಶಿಕುಮಾರ್ ನೇತೃತ್ವದಲ್ಲಿ ಎಸ್‌ಐಟಿ
ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಸೌಜನ್ಯಾ ಕೊ*ಲೆ ಪ್ರಕರಣದ ಮರು ತನಿಖೆಗೆ ಐಜಿಪಿ ಶಶಿಕುಮಾರ್ ನೇತೃತ್ವದಲ್ಲಿ ಎಸ್‌ಐಟಿಯನ್ನು ಸರ್ಕಾರ ರಚಿಸಿದೆ. ಈ ತಂಡದಲ್ಲಿ ಮಂಗಳೂರು ಪೊಲೀಸ್ ಆಯುಕ್ತ ಮತ್ತು ಡಿಐಜಿ ಸಿ.ಎಚ್.ಸುಧೀರ್ ಕುಮಾರ್ ರೆಡ್ಡಿ, ಗುಪ್ತದಳದ ಎಸ್ಪಿ ನಿಶಾ ಜೇಮ್ಸ್, ಸಿಐಡಿ ಎಸ್ಪಿ ಲೋಕೇಶ್ ಜಗಲಸಾರ್ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಎಸ್ಪಿ ವೆಂಕಟೇಶ್ ಪ್ರಸನ್ನ ಸೇರಿ ನಾಲ್ವರು ಅಧಿಕಾರಿಗಳು ಸದಸ್ಯರಾಗಿದ್ದರು. ಆದರೆ ಎಸ್‌ಐಟಿಯ ಕೆಲ ಅಧಿಕಾರಿಗಳ ಬಗ್ಗೆ ಮೃತ ವಿದ್ಯಾರ್ಥಿನಿ ಸೌಜನ್ಯಾ ಕುಟುಂಬದವರು ಹಾಗೂ ಸಾಮಾಜಿಕ ಹೋರಾಟಗಾರರಿಂದ ಆಕ್ಷೇಪ ವ್ಯಕ್ತವಾಯಿತು.
ಪತ್ರ ಬರೆದಿದ್ದು ನಿಜ-ಎಎಸ್ಪಿ
ಎಸ್‌ಐಟಿ ತಂಡದಲ್ಲಿ ತಮ್ಮ ಹೆಸರನ್ನು ಕೈ ಬಿಡುವಂತೆ ಕೋರಿ ರಾಜ್ಯ ಸರ್ಕಾರಕ್ಕೆ ಲಿಖಿತವಾಗಿ ಎಎಸ್ಪಿ ವೆಂಕಟೇಶ್ ಪ್ರಸನ್ನ ಪತ್ರ ಬರೆದು ಮನವಿ ಮಾಡಿದ್ದಾರೆ. ತಮ್ಮ ಮೇಲೆ ಮೃತರ ಕುಟುಂಬದವರು ಅವಿಶ್ವಾಸ ವ್ಯಕ್ತಪಡಿಸಿರುವುದರಿಂದ ತನಿಖಾ ತಂಡದಲ್ಲಿ ಮುಂದುವರೆಯಲು ನೈತಿಕ ಪ್ರಶ್ನೆ ಎದುರಾಗಿದೆ ಎಂದು ಅವರು ವಿನಂತಿಸಿದ್ದಾರೆ.


