ಅರ್ಧ ದಾರಿಯಲ್ಲೇ ಕೈಕೊಟ್ಟ ಕಾರು, ಬೆಂಗಾವಲು ವಾಹನದಲ್ಲಿ ತೆರಳಿದ ಸಚಿವ ಅಶ್ವತ್ಥ್ ನಾರಾಯಣ
* ಅರ್ಧ ದಾರಿಯಲ್ಲೇ ಕೈಕೊಟ್ಟ ಕಾರು
* ಬೆಂಗಾವಲು ವಾಹನದಲ್ಲಿ ಏರ್‌ಪೋರ್ಟ್‌ಗೆ ತೆರಳಿದ ಸಚಿವ ಅಶ್ವತ್ಥ್ ನಾರಾಯಣ
* ಯಾದಗಿರಿಯಿಂದ ಕಲಬುರಗಿಗೆ ವಾಪಸ್ಸಾಗುತ್ತಿದ್ದಾಗ ಘಟನೆ
ಕಲಬುರಗಿ. (ಫೆ.13): ಯಾದಗಿರಿಯಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಕಲಬುರಗಿಗೆ ವಾಪಸ್ಸು ಬರುತ್ತಿದ್ದ ಉನ್ನತ ಶಿಕ್ಷಣ, ಐಟಿ,ಬಿಟಿ, ಕೌಶಲ್ಯಾಭಿವೃದ್ಧಿ ಸಚಿವ ಸಚಿವ ಡಾ. ಸಿಎನ್ ಅಶ್ವತ್ಥ್ ನಾರಾಯಣ ಅವರು ಪ್ರಯಾಣಿಸುತ್ತಿದ್ದ ಕಾರಿನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಸಚಿವರು ತಮ್ಮ ಜೊತೆಗಿದ್ದ ಪೋಲೀಸ್ ಬೆಂಗಾವಲು ವಾಹನ (ಎಸ್ಕಾರ್ಟ್ ವೆಹಿಕಲ್) ಹತ್ತಿ ಏರ್‌ಪೋರ್ಟ್ ತಲುಪಿದ್ದಾರೆ.
ಯಾದಗಿರಿ ಹಾಗೂ ಸುರಪುರದಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸಚಿವರು ಮಧ್ಯಾಹ್ನ ಕಲಬುರಗಿ ಏರ್‌ಪೋರ್ಟ್‌ಗೆ ಬಂದು ಇಲ್ಲಿಂದ ಸಂಜೆ 4. 20ಕ್ಕೆ ವಿಮಾನದ ಮೂಲಕ ಬೆಂಗಳೂರಿಗೋ ಹೋಗೋದಿತ್ತು. ಈ ಹಂತದಲ್ಲಿ ಯಾದಗಿರಿಯಿಂದ ಅವರು ಕಲಬುರಗಿಗೆ ಮರಳುತ್ತಿರುವಾಗ ದಾರಿಯಲ್ಲಿ ಫರತಾಬಾದ್ ಬಳಿ ಅವರು ಪ್ರಯಾಣಿಸುತ್ತಿದ್ದ ಕಾರು ಏಕಾಏಕಿ ರಸ್ತೆ ಮೇಲೆ ಬಂದ್ ಆಗಿದೆ.
ಗುಲ್ಬರ್ಗ ವಿವಿಯಲ್ಲಿ ಹೇಮರೆಡ್ಡಿ ಮಲ್ಲಮ್ಮ ಅಧ್ಯಯನ ಪೀಠದ ನೂತನ ಕಟ್ಟಡ ಉದ್ಘಾಟನೆ
ಕಾರಿನಲ್ಲಿ ಇಂಧನ ಕಾಲಿಯಾಯ್ತೋ, ತಾಂತ್ರಿಕ ದೋಷ ಕಾಡಿತೋ ಒಂದು ಗೊತ್ತಾಗಲಿಲ್ಲ, ಕಾರಿನ ಚಾಲಕ ಅದೇನೇನೋ ಮಾಡಿದರೂ ಬಂದ್ ಆದಂತಹ ಕಾರು ಪುನಃ ಚಾಲು ಆಗಲೇ ಇಲ್ಲ. ಕಾರಿನ ಸಮಸ್ಯೆ ಕಂಡ ಚಾಲಕ ಇದು ಪುನಃ ಆರಂಭವಾಗಬೇಕಾದರೆ ಮೆಕ್ಯಾನಿಕ್ ಬರಲೇಬೇಕು. ಅದಕ್ಕೆಲ್ಲಾ ತುಂಬ ವಿಳಂಬವಾಗುತ್ತದೆ ಎಂದು ಸಚಿವರ ಗಮನಕ್ಕೆ ತಂದ. ಇತ್ತ ಸಂಜೆ ಫ್ಲೈಟ್ ಹತ್ತಿ ಬೆಂಗಳೂರು ತಲುಪಲೇಬೇಕಿದ್ದ ಸಚಿವರು ತಕ್ಷಣ ಕಾರಿನಿಂದ ಇಳಿದು ತಮ್ಮ ಜೊತೆಗಿದ್ದ ಪೊಲೀಸ್ ಬೆಂಗಾವಲು ವಾಹನ ಹತ್ತಿದರು.
ಸಚಿವರ ಜೊತೆಗೆ ಅವರ ಆಪ್ತ ಸಿಬ್ಬಂದಿಗಳೂ ಬೆಂಗಾವಲು ವಾಹನ ಹತ್ತಿ ವಿಮಾನ ನಿಲ್ದಾಣ ತಲುಪಿದರು. ಸರಿ ಸುಮಾರು 25 ರಿಂದ 30 ಕಿಮೀ ವರೆಗೂ ಸಚಿವರು ಪೊಲೀಸ್ ಬೆಂಗಾವಲು ವಾಹನದಲ್ಲೇ ಕುಳಿತು ಪಯಣಿಸಿದರು.
ಸಚಿವರ ಜೊತೆಗೆ ಪ್ರತ್ಯೇಕ ವಾಹನದಲ್ಲಿ ಬರುತ್ತಿದ್ದ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್ ಅವರ ಕಾರಿನ ಡೀಸೆಲ್ ಕೂಡಾ ದಾರಿಯಲ್ಲೇ ಖಾಲಿಯಾಯ್ತು. ಹೀಗಾಗಿ ಆಯುಕ್ತರೂ ಸಹ ಕಲಬುರಗಿ ಏರ್‌ಪೋರ್ಟ್ ತಲುಪಲು ತುಂಬ ಪರದಾಡಬೇಕಾಯ್ತು. ಅವರೂ ಸಹ ಮತ್ತೊಂದು ಪೊಲೀಸ್ ಬೆಂಗಾವಲು ವಾಹನ ಹತ್ತಿ ಕಲಬುರಗಿಗೆ ಹೊರಟರು. ಇವರಿಗೆ ಗುಲ್ಬರ್ಗ ವಿವಿಗೆ ಸೇರಿದ್ದ ವಾಹನ ಬಳಕೆಗೆ ನೀಡಲಾಗಿತ್ತು.
ಸಚಿವರಿಗಾಗಿ ಅರ್ಧ ಗಂಟೆ ನಿಂತ ವಿಮಾನ
ಇತ್ತ ಸಂಜೆ 4.20ಕ್ಕೆ ವಿಮಾನ ಹೊರಡೋದಿತ್ತು. ಆದ್ರೆ, ಸಮಯಕ್ಕೆ ಸರಿಯಾಗಿ ಸಚಿವರು ಬಾರದೆ ಇದ್ದುದರಿಂದ ಅವರಗಾಗಿ ಅರ್ಧ ಗಂಟೆ ವಿಮಾನವನ್ನು ಸ್ಟಾಪ್ ಮಾಡಿಸಲಾಗಿದೆ. ಈ ವಿಚಾರವನ್ನು ಮುಂಚೆಯೇ ವಾಕಿಟಾಕಿಯಲ್ಲಿ ಹೇಳಿಯಾಗಿತ್ತು.
ಆದಾಗ್ಯೂ ಸಚಿವರು ಬೆಂಗಾವಲು ವಾಹನದಲ್ಲಿ ಕುಳಿತು ಬರುತ್ತಿರುವ ಸುದ್ದಿ ಗೊತ್ತಾದ ತಕ್ಷಣ ಸಚಿವರೊಂದಿಗೆ ಪಯಣಿಸಲು ಏರ್‌ಪೋರ್ಟ್ ಏರ್‌ಪೋರ್ಟ್‌ನಲ್ಲಿದ್ದ ಸಚಿವರ ಆಪ್ತರಾದ ಹಣಮಂತ ಭೂಸನೂರ್, ಗುಲ್ಬರ್ಗ ವಿವಿ ಕುಲಪತಿ ಡಾ. ದಯಾನಂದ ಅಗಸರ್ ಇವರು ತಮ್ಮ ವಾಹನ ಕಳುಹಿಸುವ ಮೂಲಕ ಸಚಿವರಿಗೆ ಬೇಗ ನಿಲ್ದಾಣಕ್ಕೆ ಕರೆ ತರುವ ಯತ್ನ ಮಾಡಿದರಾದರೂ ಸಚಿವರು ಅಷ್ಟೊತ್ತಿಗಾಗಲೇ ಬೆಂಗಾವಲು ವಾಹನದಲ್ಲೇ ಪಯಣಿಸಿ ಕಲಬುರಗಿ ನಗರ ಪ್ರವೇಶಿಸಿದ್ದರು.
ವಿಮಾನ ನಿಗದಿತ ಸಮಯಕ್ಕಿಂತ ಅರ್ಧಗಂಟೆ ತಡವಾಗಿ ಹಾರುವಂತಾಯ್ತು. ಸಚಿವರು ವಿಮಾನ ನಿಲ್ದಾಣಕ್ಕೆ ಬೆಂಗಾವಲು ವಾಹನದಲ್ಲಿ ಬಂದಿಳಿದಾಗ ಸಮಯ 4. 55 ಗಂಟೆಯಾಗಿತ್ತು. ಸಚಿವರು ಹತ್ತಿದ ತಕ್ಷಣ ವಿಮಾನ ಸಂಚಾರ ಶುರು ಮಾಡಿತು.
ಸಂಚಾರ, ಅವರಿಗೆ ವಾಹನ, ಅತಿಥಿ ಗೃಹ, ಊಟೋಪಚಾರ ಇತ್ಯಾದಿ ಸಂಗತಿಗಳನ್ನೆಲ್ಲ ಜಿಲ್ಲಾಡಳಿತದಲ್ಲಿರುವ ಶಿಷ್ಟಾಚಾರ ವಿಭಾಗವೇ ನೋಡಿಕೊ್ಳ್ಳುತ್ತದೆ. ಆದರೆ ಉನ್ನತ ಶಿಕ್ಷಣ ಸಚಿವರ ಕಾರು ಬಂದ್ ಆಗಿದ್ದು, ಡೀಸೆಲ್ ಖಾಲಿಯಾದ ವಿಚಾರದಲ್ಲಿ ಮಾತ್ರ ನಿಖರವಾಗಿ ಗೊತ್ತಾಗಿಲ್ಲ. ತಾಂತ್ರಿಕ ದೋಷದಿಂದ ಕಾರು ನಿಂತಿತೋ, ಇಂಧನ ಕೊರತೆಯಿಂದ ಹೀಗಾಯ್ತೋ? ಎಂಬುದು ನಿಗೂಢವಾಗಿದೆ.
ಏತನ್ಮದ್ಯೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿರುವ ಜಿಲ್ಲಾಡಳಿತ ಹೆಚ್ಚುವರಿ ಡಿಸಿ ಶಂಕರ್ ವಣಕ್ಯಾಳ್, ತಾಂತ್ರಿಕ ದೋಷದಿಂದ ಸಚಿವರು ತಾವಿರುವ ಕಾರಿನಿಂದ ಇಳಿದು ಬೆಂಗಾವಲು ವಾಹನದಲ್ಲಿ ಸಂಚರಿಸಿದ್ದಾರೆ. ಇಂತಹ ಘಟನೆ ನಡೆಯಬಾರದಿತ್ತು. ಗಣ್ಯರು ಸಂಚರಿಸುವ ವಾಹನಗಳ ಸುಸ್ಥಿತಿಯಲ್ಲಿಟ್ಟುಕೊಳ್ಳುವಂತೆ ಕಾರಿನ ಚಾಲಕ, ಸಂಬಂಧಿತ ಲೈಸನ್ ಅಧಿಕಾರಿಗೆ ಸೂಚಿಸಲಾಗುತ್ತದೆ ಎಂದರು.
ಸಚಿವರು, ಗಣ್ಯರು ಬಂದಾಗ ಅವರಿಗೆ ಜಿಲ್ಲಾಡಳಿತವೇ ವಾಹನ ಪೂರೈಸುತ್ತದೆ. ಸಚಿವರ ಸಂಚಾರದಲ್ಲಿಯೂ ಅದೇ ನಿಯಮ ಅನ್ವಯವಾಗಿತ್ತಾದರೂ ದಾರಿಯಲ್ಲೇ ಇಂಧನ ಖಾಲಿಯಾಯ್ತೋ, ತಾಂತ್ರಿಕವಾಗಿ ದೋಷ ಕಾಡಿತೋ ಗೊತ್ತಾಗಿಲ್ಲವೆಂದು ಶಿಷ್ಠಾಚರ ವಿಭಾಗದಲ್ಲಿರುವ ಹಲವರು ಹೇಳುತ್ತಿದ್ದಾರೆ.