Asianet Suvarna News Asianet Suvarna News

ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಜತೆ ಅಶ್ವತ್ಥ ನಾರಾಯಣ ಮಹತ್ವದ ಚರ್ಚೆ

* ರಾಜ್ಯದಲ್ಲಿ ‘ಕೌಶಲ ಬೇಡಿಕೆ ನಿರ್ಧಾರಣಾ ಸಮೀಕ್ಷೆ’ ನಡೆಸಲು ನಿರ್ಧಾರ
* ರಾಜೀವ್ ಚಂದ್ರಶೇಖರ್ ಜೊತೆಗಿನ ಸಭೆಯಲ್ಲಿ ತೀರ್ಮಾನ 
* ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಮಾಹಿತಿ

Ashwath Narayan Meets Union Minister rajeev chandrasekhar at Delhi rbj
Author
Bengaluru, First Published Nov 4, 2021, 12:29 AM IST
  • Facebook
  • Twitter
  • Whatsapp

ನವದೆಹಲಿ, (ನ.03): ಯೋಜಿತ ಕೌಶಲ ತರಬೇತಿಗೆ ಅನುಕೂಲವಾಗುವಂತೆ ಕರ್ನಾಟಕ ರಾಜ್ಯದಲ್ಲಿ ‘ಕೌಶಲ ಬೇಡಿಕೆ ನಿರ್ಧಾರಣಾ ಸಮೀಕ್ಷೆ’ ನಡೆಸಲು ಬುಧವಾರ ಇಲ್ಲಿ ನಿರ್ಧರಿಸಲಾಯಿತು. ಕೇಂದ್ರದ ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತಾ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ (Rajeev Chandrasekhar ) ಅವರೊಂದಿಗೆ ಕರ್ನಾಟಕದ ಕೌಶಲಾಭಿವೃದ್ಧಿ ಹಾಗೂ ಐಟಿ/ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ (Dr CN Ashwath Narayan) ಅವರು ನಡೆಸಿದ ಸಭೆಯ ವೇಳೆ ಈ ನಿರ್ಧಾರ ಹೊರಹೊಮ್ಮಿತು.

ಈ ರೀತಿಯ ಸಮೀಕ್ಷೆ ಮಾಡಿಸುವುದರಿಂದ ರಾಜ್ಯದ ಯಾವ್ಯಾವ ವಲಯದಲ್ಲಿ ಎಂತೆಂತಹ ಕೌಶಲಗಳಿಗೆ ಬೇಡಿಕೆ ಇದೆ ಎಂಬುದರ ಸ್ಪಷ್ಟ ಚಿತ್ರಣ ಸಿಗುತ್ತದೆ. ಇದನ್ನು ಆಧರಿಸಿ ಪ್ರಸ್ತುತ ಬೇಡಿಕೆಗಳಿಗೆ ಅನುಸಾರವಾಗಿ ಯುವಜನತೆಯನ್ನು ತರಬೇತುಗೊಳಿಸಲು ಅನುಕೂಲವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಐವರು ಕೇಂದ್ರ ಸಚಿವರನ್ನು ಭೇಟಿಯಾದ ಸಚಿವ ಅಶ್ವತ್ಥನಾರಾಯಣ

ಇದೇ ವೇಳೆ ರಾಜೀವ್ ಚಂದ್ರಶೇಖರ್ ಅವರು, ರಾಷ್ಟ್ರೀಯ ಮಟ್ಟದ ಐ.ಟಿ.ಸಚಿವರ ಸಮಾವೇಶವೊಂದನ್ನು ನಡೆಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಆಗ ಅಶ್ವತ್ಥ ನಾರಾಯಣ ಅವರು, ಇಂತಹ ಸಮಾವೇಶವನ್ನು ಕರ್ನಾಟಕದಲ್ಲೇ ನಡೆಸಲು ಕೋರಿದರು. ಇದರಿಂದ ಐಟಿ ಹಾಗೂ ಐಟಿಇಎಸ್ ಆಧಾರಿತ ಹೊಸ ತಾಂತ್ರಿಕತೆಗಳಲ್ಲಿ ರಾಜ್ಯದಲ್ಲಿ ಆಗಿರುವ ಬೆಳವಣಿಗೆಗಳನ್ನು ಪ್ರದರ್ಶಿಸಲು ಅವಕಾಶವಾಗುತ್ತದೆ ಎಂದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ರಾಜೀವ್ ಅವರು, ಈ ಸಂಬಂಧವಾಗಿ ಕೇಂದ್ರ ಇಲಾಖೆಗೆ ಪತ್ರವನ್ನು ಬರೆಯಲು ಸಲಹೆ ನೀಡಿದರು.

ಸಚಿವ ಅಶ್ವತ್ಥ ನಾರಾಯಣ ಅವರು ‘ಮೇಕ್ ಇನ್ ಇಂಡಿಯಾ’ ರೀತಿಯಲ್ಲಿ ‘ಮೇಕ್ ಇನ್ ಕರ್ನಾಟಕ’ಕ್ಕೆ ಆದ್ಯತೆ ಕೊಡಬೇಕಾದ ಅಗತ್ಯವಿದೆ ಎಂದರು. ಜೊತೆಗೆ, ಕೈಮಗ್ಗದವರು ಸೇರಿದಂತೆ ರಾಜ್ಯದೆಲ್ಲೆಡೆ ಇರುವ ಕುಶಲಕರ್ಮಿಗಳ ಮ್ಯಾಪಿಂಗ್ ಸಿದ್ಧಪಡಿಸಬೇಕಾದ ಮಹತ್ವದ ಬಗ್ಗೆ ಪ್ರಸ್ತಾಪಿಸಿದರು. ರಾಜ್ಯದಲ್ಲಿ ಅರೆವಾಹಕ ಮತ್ತು ಎಲೆಕ್ಟ್ರಾನಿಕ್ಸ್ ವಲಯಗಳ ಬೆಳವಣಿಗೆಗೆ ಒತ್ತು ಕೊಡುವುದಾಗಿ ಇದೇ ಸಂದರ್ಭದಲ್ಲಿ ತಿಳಿಸಿದರು.

ಇದಕ್ಕೆ ಮುನ್ನ ಸಚಿವ ನಾರಾಯಣ ಅವರು ಮಂಗಳವಾರ ಐವರು ಕೇಂದ್ರ ಸಚಿವರನ್ನು ಭೇಟಿಯಾಗಿ ತಮ್ಮ ಇಲಾಖೆಗಳ ಪ್ರಸ್ತಾವಗಳ ಬಗ್ಗೆ ಚರ್ಚಿಸಿ ಸಹಕಾರ ಕೋರಿದ್ದರು.

ಐವರು ಕೇಂದ್ರ ಸಚಿವರ ಭೇಟಿ
ತಮ್ಮ ಖಾತೆಗಳಿಗೆ ಸಂಬಂಧಿಸಿದ ನಾನಾ ಯೋಜನೆಗಳು ಮತ್ತು ಪ್ರಸ್ತಾವನೆಗಳಿಗೆ ಕೇಂದ್ರದ ನೆರವು ಕೋರಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ (Dr CN Ashwath Narayan) ಅವರು ಮಂಗಳವಾರ ಕೇಂದ್ರದ ಐವರು ಸಚಿವರನ್ನು(Union Ministers) ಭೇಟಿಯಾಗಿ, ಕೂಲಂಕಷವಾಗಿ ಚರ್ಚಿಸಿದರು. 

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ (New Delhi) ಇಂದು (ನ.02) ದಿನವಿಡೀ ವಿವಿಧ ಸಭೆಗಳಲ್ಲಿ ಪಾಲ್ಗೊಂಡಿದ್ದ ಅವರು, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಐಟಿ-ಬಿಟಿ ಸಚಿವ ಅಶ್ವಿನಿ ವೈಷ್ಣವ್, ಆಹಾರ ಸಂಸ್ಕರಣಾ ಸಚಿವ ಪಶುಪತಿ ಪಾರಸ್, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತಿರಾಜ್ ಸಚಿವ ಗಿರಿರಾಜ್ ಸಿಂಗ್ ಅವರನ್ನು ಭೇಟಿಯಾದರು. 

ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯಾವುದೇ ಸ್ಥಳದಿಂದ ಕೆಲಸ ಮಾಡುವುದಕ್ಕೆ ಐಟಿ ಕ್ಷೇತ್ರದವರಿಗೆ ಅವಕಾಶ ಮಾಡಿಕೊಡುವ ಹೈಬ್ರಿಡ್ ಕಾರ್ಯ ಮಾದರಿಗೆ ಸೂಕ್ತ ಕಾರ್ಯನೀತಿಗಳ ಬೆಂಬಲದೊಂದಿಗೆ ಮನ್ನಣೆ ನೀಡುವಂತೆ ಅಶ್ವಿನಿ ವೈಷ್ಣವ್ ಅವರನ್ನು ಕೋರಲಾಗಿದೆ ಎಂದು ತಿಳಿಸಿದರು. ನ,17ರಿಂದ ಆರಂಭವಾಗುವ ಬೆಂಗಳೂರು ತಂತ್ರಜ್ಞಾನ ಶೃಂಗದ (ಬಿಟಿಎಸ್-2021) ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ವೈಷ್ಣವ್ ಅವರನ್ನು ಆಹ್ವಾನಿಸಲಾಗಿದೆ ಎಂದೂ ಅವರು ಹೇಳಿದರು. 

ರಾಜ್ಯದಲ್ಲಿ ಉದ್ಯೋಗ ಸೃಷ್ಟಿಯ ದೃಷ್ಟಿಯಿಂದ ಅದಕ್ಕೆ ತಕ್ಕ ವಾತಾವರಣ ನಿರ್ಮಾಣ, ಹಲವು ಪ್ರಸ್ತಾವನೆಗಳನ್ನು ಕಾರ್ಯರೂಪಕ್ಕೆ ತರುವ ಜರೂರು ಮತ್ತು ಈಗಾಗಲೇ ಪ್ರಗತಿಯಲ್ಲಿರುವ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗಬೇಕಾಗಿದೆ. ಕೇಂದ್ರ ಸಚಿವರುಗಳೊಂದಿಗೆ ಇವೆಲ್ಲವನ್ನೂ ಕುರಿತು ಚರ್ಚಿಸಲಾಯಿತು,’ ಎಂದರು. 

Follow Us:
Download App:
  • android
  • ios