Asianet Suvarna News Asianet Suvarna News

ಐವರು ಕೇಂದ್ರ ಸಚಿವರನ್ನು ಭೇಟಿಯಾದ ಸಚಿವ ಅಶ್ವತ್ಥನಾರಾಯಣ

* ಐವರು ಕೇಂದ್ರ ಸಚಿವರನ್ನು ಭೇಟಿಯಾದ ಸಚಿವ ಡಾ.ಅಶ್ವತ್ಥನಾರಾಯಣ
* ನಾನಾ ಯೋಜನೆಗಳು ಮತ್ತು ಪ್ರಸ್ತಾವನೆಗಳಿಗೆ ಕೇಂದ್ರ ಸಚಿವರ ಭೇಟಿ
* ಹೈಬ್ರಿಡ್ ಕಾರ್ಯ ಮಾದರಿಗೆ ಕಾರ್ಯನೀತಿ ಬೆಂಬಲ ಕೋರಿಕೆ 

Ashwath narayan Meets Few Union Minister at Delhi On Nov 2nd rbj
Author
Bengaluru, First Published Nov 2, 2021, 10:17 PM IST

ನವದೆಹಲಿ, (ನ.02): ತಮ್ಮ ಖಾತೆಗಳಿಗೆ ಸಂಬಂಧಿಸಿದ ನಾನಾ ಯೋಜನೆಗಳು ಮತ್ತು ಪ್ರಸ್ತಾವನೆಗಳಿಗೆ ಕೇಂದ್ರದ ನೆರವು ಕೋರಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ (Dr CN Ashwath Narayan) ಅವರು ಮಂಗಳವಾರ ಕೇಂದ್ರದ ಐವರು ಸಚಿವರನ್ನು(Union Ministers) ಭೇಟಿಯಾಗಿ, ಕೂಲಂಕಷವಾಗಿ ಚರ್ಚಿಸಿದರು. 

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ (New Delhi) ಇಂದು (ನ.02) ದಿನವಿಡೀ ವಿವಿಧ ಸಭೆಗಳಲ್ಲಿ ಪಾಲ್ಗೊಂಡಿದ್ದ ಅವರು, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಐಟಿ-ಬಿಟಿ ಸಚಿವ ಅಶ್ವಿನಿ ವೈಷ್ಣವ್, ಆಹಾರ ಸಂಸ್ಕರಣಾ ಸಚಿವ ಪಶುಪತಿ ಪಾರಸ್, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತಿರಾಜ್ ಸಚಿವ ಗಿರಿರಾಜ್ ಸಿಂಗ್ ಅವರನ್ನು ಭೇಟಿಯಾದರು. 

ಶಿಕ್ಷಣ ವ್ಯವಸ್ಥೆ ಡಿಜಿಟಲ್ ರೂಪಾಂತರ; ಮಾಹಿತಿ ನೀಡಿದ ಉನ್ನತ ಶಿಕ್ಷಣ ಸಚಿವರು

ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯಾವುದೇ ಸ್ಥಳದಿಂದ ಕೆಲಸ ಮಾಡುವುದಕ್ಕೆ ಐಟಿ ಕ್ಷೇತ್ರದವರಿಗೆ ಅವಕಾಶ ಮಾಡಿಕೊಡುವ ಹೈಬ್ರಿಡ್ ಕಾರ್ಯ ಮಾದರಿಗೆ ಸೂಕ್ತ ಕಾರ್ಯನೀತಿಗಳ ಬೆಂಬಲದೊಂದಿಗೆ ಮನ್ನಣೆ ನೀಡುವಂತೆ ಅಶ್ವಿನಿ ವೈಷ್ಣವ್ ಅವರನ್ನು ಕೋರಲಾಗಿದೆ ಎಂದು ತಿಳಿಸಿದರು. ನ,17ರಿಂದ ಆರಂಭವಾಗುವ ಬೆಂಗಳೂರು ತಂತ್ರಜ್ಞಾನ ಶೃಂಗದ (ಬಿಟಿಎಸ್-2021) ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ವೈಷ್ಣವ್ ಅವರನ್ನು ಆಹ್ವಾನಿಸಲಾಗಿದೆ ಎಂದೂ ಅವರು ಹೇಳಿದರು. 

ರಾಜ್ಯದಲ್ಲಿ ಉದ್ಯೋಗ ಸೃಷ್ಟಿಯ ದೃಷ್ಟಿಯಿಂದ ಅದಕ್ಕೆ ತಕ್ಕ ವಾತಾವರಣ ನಿರ್ಮಾಣ, ಹಲವು ಪ್ರಸ್ತಾವನೆಗಳನ್ನು ಕಾರ್ಯರೂಪಕ್ಕೆ ತರುವ ಜರೂರು ಮತ್ತು ಈಗಾಗಲೇ ಪ್ರಗತಿಯಲ್ಲಿರುವ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗಬೇಕಾಗಿದೆ. ಕೇಂದ್ರ ಸಚಿವರುಗಳೊಂದಿಗೆ ಇವೆಲ್ಲವನ್ನೂ ಕುರಿತು ಚರ್ಚಿಸಲಾಯಿತು,’ ಎಂದರು. 

ಐಟಿ-ಬಿಟಿ ಸಚಿವ ಅಶ್ವಿನಿ ವೈಷ್ಣವ್ ಅವರೊಂದಿಗೆ ಐಟಿ ಸೇವೆಗಳು ಮತ್ತು ಜಿಸಿಸಿ (ಗ್ಲೋಬಲ್ ಕೇಪಬಿಲಿಟಿ ಸೆಂಟರ್)ಗಳಿಗೆ ಬಿಯಾಂಡ್ ಬೆಂಗಳೂರು ಉಪಕ್ರಮದಡಿ ಘೋಷಿಸಿರುವ ಉತ್ಪಾದನೆ ಆಧರಿತ ಪ್ರೋತ್ಸಾಹಕ ಭತ್ಯೆಗಳನ್ನು ಉದ್ಯೋಗ ಸೃಷ್ಟಿಯೊಂದಿಗೆ ಬೆಸೆಯುವ ಅಗತ್ಯದ ಬಗ್ಗೆ ಚರ್ಚಿಸಲಾಯಿತು. ಜಿಜಿಸಿಗಳು ರಾಜ್ಯದ 5 ಕಡೆಗಳಲ್ಲಿ ಹೈಬ್ರಿಡ್ ಮಾದರಿಯಲ್ಲಿ ಈ ವ್ಯವಸ್ಥೆಯನ್ನು ಪ್ರಾರಂಭಿಸಲು ಅವಕಾಶವಿದೆ ಎಂದು ವಿವರಿಸಿದರು. 

ಇದರ ಜತೆಗೆ ಎಸ್ಇಜೆಡ್ ವಲಯಗಳಲ್ಲಿ ಸಿಬ್ಬಂದಿ ವರ್ಗಕ್ಕೆ ಮನೆಯಿಂದಲೇ ಕೆಲಸ ಮಾಡುವ ಅವಕಾಶ, ಭವಿಷ್ಯದ ತಂತ್ರಜ್ಞಾನ ವಲಯಗಳನ್ನು ಗುರುತಿಸಿ ಮುಂದಿನ 10 ವರ್ಷಗಳಿಗೆ ಅನ್ವಯವಾಗುವಂತೆ ವಿಶೇಷ ವರ್ಗಾವಣೆ ದರ ನಿಗದಿ ಮತ್ತು ಹೆಚ್ಚುವರಿಯಾಗಿ ಪ್ರೋತ್ಸಾಹಕ ಭತ್ಯೆಗಳನ್ನು ಕೊಡುವ ಬಗ್ಗೆ ವಿಚಾರ ವಿನಿಮಯ ನಡೆಸಲಾಯಿತು ಎಂದು ಹೇಳಿದರು. 

ರಾಜ್ಯ ಸರಕಾರವು ಪ್ರವರ್ಧಮಾನಕ್ಕೆ ಬರುತ್ತಿರುವ ತಂತ್ರಜ್ಞಾನ ವಲಯಗಳಲ್ಲಿ ಪಿಪಿಪಿ ಮಾದರಿಯಲ್ಲಿ 3-4 ಕಡೆಗಳಲ್ಲಿ `ಟ್ಯಾಲೆಂಟ್ ಡೆವಲಪ್ಮೆಂಟ್ ಲ್ಯಾಬ್ ಸೆಂಟರ್’ ಮತ್ತು ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರಗಳನ್ನು ಆರಂಭಿಸಲು ನಿರ್ಧರಿಸಿದೆ. ಇಲ್ಲಿ ವಿಎಲ್ಎಸ್ಎಲ್, ಎಬೆಂಡೆಡ್ ತಂತ್ರಜ್ಞಾನ, ಕ್ಲೌಡ್, ಬ್ಲಾಕ್ ಚೈನ್ ಮುಂತಾದ ಆಧುನಿಕ ತಂತ್ರಜ್ಞಾನಗಳಿಗೆ ಸಂಬಂಧಿಸಿದ ತರಬೇತಿ ನೀಡಲಾಗುವುದು. ರಾಜ್ಯದ ಈ ಉಪಕ್ರಮವನ್ನು ಅಶ್ವಿನಿ ವೈಷ್ಣವ್ ಅವರಿಗೆ ತಿಳಿಸಲಾಯಿತು ಎಂದರು. 

ಪರಿಷ್ಕೃತ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕ್ಲಸ್ಟರ್ ಗಳ ನಿಯಮದಡಿ ಈಗ ಕನಿಷ್ಠ 200 ಎಕರೆ ಭೂಮಿಯನ್ನು ಹೊಂದಬೇಕೆಂಬ ಬಿಗಿ ನಿಯಮವಿದೆ. ಸೆಮಿಕಂಡಕ್ಟರ್ ವಲಯದ ಬೆಳವಣಿಗೆಯ ಹಿತದೃಷ್ಟಿಯಿಂದ ಇದನ್ನು ಸಡಿಲಿಸುವ ಅಗತ್ಯದ ಬಗ್ಗೆ ಕೇಂದ್ರ ಸಚಿವರೊಂದಿಗೆ ಚರ್ಚಿಸಲಾಯಿತು ಎಂದು ಅಶ್ವತ್ಥನಾರಾಯಣ ಮಾಹಿತಿ ನೀಡಿದರು. 

ರಾಜ್ಯ ಸರಕಾರವು `ಬಿಯಾಂಡ್ ಬೆಂಗಳೂರು’ ಯೋಜನೆಯಡಿ ಬೆಳಗಾವಿಯಲ್ಲಿ750 ಎಕರೆ ಪ್ರದೇಶದಲ್ಲಿ ಐಟಿ ಪಾರ್ಕ್ ಸ್ಥಾಪಿಸಲು ತೀರ್ಮಾನಿಸಿದೆ. ಆದರೆ, ಈ ಭೂಮಿ ಸದ್ಯ  ರಕ್ಷಣಾ ಇಲಾಖೆ ಸ್ವಾಧೀನದಲ್ಲಿದೆ. ಹೀಗಾಗಿ, ಈ ಭೂಮಿಯನ್ನು ಪುನಃ ರಾಜ್ಯ ಸರಕಾರಕ್ಕೆ ಹಸ್ತಾಂತರಿಸಬೇಕೆಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಕೋರಲಾಗಿದೆ ಎಂದರು. 

ಕೇಂದ್ರ ಆಹಾರ ಸಂಸ್ಕರಣೆ ಸಚಿವ ಪಶುಪತಿ ಪಾರಸ್ ಅವರೊಂದಿಗೆ ರಾಮನಗರದಲ್ಲಿ ಪಿಪಿಪಿ ಮಾದರಿಯಲ್ಲಿ ಆಹಾರ ಸಂಸ್ಕರಣೆ ಪಾರ್ಕ್ ಸ್ಥಾಪನೆಗೆ ಕೇಂದ್ರದ ನೆರವಿನ ಬಗ್ಗೆ ಸಂವಾದ ಮಾಡಲಾಯಿತು ಎಂದು ಅವರು ತಿಳಿಸಿದರು. 

ಕೇಂದ್ರ ಪಂಚಾಯತ್ ರಾಜ್ ರಾಜ್ಯ ಸಚಿವ ಗಿರಿರಾಜ್ ಸಿಂಗ್ ಅವರೊಂದಿಗೆ ರಾಜ್ಯದಲ್ಲಿ ಎನ್.ಆರ್.ಎಲ್.ಎಂ. ಕಾರ್ಯಕ್ರಮಗಳಲ್ಲಿ ಆಗಿರುವ ಪ್ರಗತಿಗಳ ಬಗ್ಗೆ ಚರ್ಚಿಸಲಾಯಿತು ಎಂದು ಅಶ್ವತ್ಥ ನಾರಾಯಣ ಹೇಳಿದರು. 

ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರೊಂದಿಗಿನ ಸಭೆಯಲ್ಲಿ, ರಾಜ್ಯದಲ್ಲಿ ಎನ್ಇಪಿ ಜಾರಿಯಲ್ಲಿ ಆಗಿರುವ ಪ್ರಗತಿಯ ಬಗ್ಗೆ ವಿಷಯ ಹಂಚಿಕೊಳ್ಳಲಾಯಿತು. ಇದೇ ವೇಳೆ, ಉನ್ನತ ಶಿಕ್ಷಣ ಇಲಾಖೆಗೆ ಹೆಚ್ಚಿನ ಅನುದಾನ ಕೋರಲಾಗಿದೆ. ಧರ್ಮೇಂದ್ರ ಪ್ರಧಾನ್ ಅವರು ಕರ್ನಾಟಕದಲ್ಲಿ ಎನ್ಇಪಿ ಜಾರಿ ಸಂಬಂಧ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಪ್ರತಿ 2 ತಿಂಗಳಿಗೊಮ್ಮೆ ರಾಜ್ಯಕ್ಕೆ ಭೇಟಿ ಕೊಡುವುದಾಗಿ ತಿಳಿಸಿದ್ದಾರೆ ಎಂದರು. 

ಇದಕ್ಕೂ ಮುನ್ನ ಸಚಿವರ ಕರ್ನಾಟಕದ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿಯಾಗಿ ರಾಜ್ಯದ ಸ್ವಸಹಾಯ ಸಂಘದವರು ತಯಾರಿಸಿರುವ ಮಣ್ಣಿನ ದೀಪಗಳನ್ನು ಕೊಟ್ಟು ಶುಭ ಕೋರಿದರು. ಸಚಿವರು ಕೇಂದ್ರ ಸಚಿವರಾದ ಪಶುಪತಿ ಪರಸ್ ಮತ್ತು ಗಿರಿರಾಜ್ ಸಿಂಗ್ ಅವರಿಗೆ ಸಂಜೀವಿನಿ ಮಣ್ಣಿನ ದೀಪಗಳನ್ನು ಕೊಟ್ಟು ದೀಪಾವಳಿ ಶುಭಾಶಯಗಳನ್ನು ಕೋರಿದರು.

Follow Us:
Download App:
  • android
  • ios