ಮೈಸೂರು ಚಾಮುಂಡಿ ಬೆಟ್ಟದಲ್ಲಿ ಆಷಾಢದ ಎರಡನೇ ಶುಕ್ರವಾರ ವಿಶೇಷ ಪೂಜೆಗಳು ನೆರವೇರಿದವು. ರಾಜಕಾರಣಿಗಳು, ಸಿನಿಮಾ ತಾರೆಯರು ಸೇರಿದಂತೆ ಹಲವು ಗಣ್ಯರು ಚಾಮುಂಡೇಶ್ವರಿ ದರ್ಶನ ಪಡೆದರು. ಡಿಸಿಎಂ ಡಿಕೆ ಶಿವಕುಮಾರ್ ಕುಟುಂಬ ಸಮೇತರಾಗಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

ಮೈಸೂರು (ಜು.4): ಮೈಸೂರು ಚಾಮುಂಡಿ ಬೆಟ್ಟದಲ್ಲಿ ಆಷಾಢ ಪೂಜಾ ಸಂಭ್ರಮ ಜೋರಾಗಿತ್ತು. ಆಷಾಢದ ಎರಡನೇ ಶುಕ್ರವಾರ ಚಾಮುಂಡಿ ಬೆಟ್ಟಕ್ಕೆ ಭಕ್ತ ಸಾಗರವೇ ಹರಿದು ಬಂದಿತ್ತು. ಉನ್ನತ ಪದವಿ ಮೇಲೆ ಕಣ್ಣಿಟ್ಟಿರುವ ಮಂತ್ರಿಗಳು, ಸಂಭ್ರಮ ಹಾಗೂ ಸಂಕಟದಲ್ಲಿರುವ ನಟರು ಸೇರಿದಂತೆ ಸೆಲೆಬ್ರಿಟಿಗಳು‌ ಇಂದು‌ ಚಾಮುಂಡೇಶ್ವರಿ ದರ್ಶನ ಪಡೆದದ್ದು ವಿಶೇಷವಾಗಿತ್ತು.

ಹೌದು, ಆಷಾಢ ಮಾಸದ ಎರಡನೇ ಶುಕ್ರವಾರ ಇಂದು ಮೈಸೂರಿನ ಬೆಟ್ಟದ ತಾಯಿ ಚಾಮುಂಡೇಶ್ವರಿ ದೇಗುಲದಲ್ಲಿ ಸಂಭ್ರಮ ಜೋರಾಗಿತ್ತು. ಇಂದು ಚಾಮುಂಡೇಶ್ವರಿ ದೇವಿಗೆ ಲಕ್ಷ್ಮೀದೇವಿ ಅಲಂಕಾರ ಮಾಡಿ ಭಕ್ತರ ದರ್ಶ‌ನಕ್ಕೆ ಅನುವು ಮಾಡಿಕೊಡಲಾಗಿತ್ತು. ದೇವಾಲದ ಒಳ ಹಾಗೂ ಹೊರ ಆವರಣವನ್ನು ಮಲ್ಲಿಗೆ, ಸೇವಂತಿ, ಜಾಜಿ, ಗುಲಾಬಿ, ತಾವರೆ ಸೇರಿದಂತೆ ವಿವಿಧ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ಅಲ್ಲದೆ ಕಬ್ಬು, ಬಾಳೆ, ಅನಾನಸ್ ಹಾಗೂ ತೋತಾಪುರಿ ಮಾವು ಬಳಸಿ ದೇವಾಲಯದ ಗೋಡೆಗಳು, ಛಾವಣಿ ಹಾಗೂ ಕಂಬಗಳನ್ನು ಅಲಂಕಾರ ಮಾಡಲಾಗಿತ್ತು. ಮುಂಜಾನೆ ನಾಲ್ಕು ಗಂಟೆಯಿಂದಲೇ ಸಹಸ್ರಾರು ಭಕ್ತಗಣ ಸರತಿ ಸಾಲಿನಲ್ಲಿ ಬಂದು ದೇವಿಯ ದರ್ಶನ ಪಡೆದರು.

ಸಿಎಂ‌ ಕನಸಲ್ಲಿರೋ ಡಿಸಿಎಂರಿಂದ ತಾಯಿಗೆ ಪ್ರಾರ್ಥನೆ:

ಇನ್ನು ರಾಜ್ಯ ರಾಜಕಾರಣದಲ್ಲಿ ಸಿಎಂ ಬದಲಾವಣೆ ಚರ್ಚೆಗಳು ಜೋರಾಗಿರುವ ಹೊತ್ತಲ್ಲೇ ಸಿಎಂ ಕನಸು ಕಾಡುತ್ತಿರೋ ಡಿಸಿಎಂ ಡಿಕೆ.ಶಿವಕುಮಾರ್ ಚಾಮುಂಡಿ ಬೆಟ್ಟಕ್ಕೆ ಪತ್ನಿ, ಮಗಳು ಕುಟುಂಬ ಸಮೇತ ಬಂದು ಚಾಮುಂಡೇಶ್ವರಿ ದರ್ಶನ ಪಡೆದರು. ಸುಮಾರು‌ ಅರ್ಧ ಗಂಟೆಗಳ ಕಾಲ ದೇವಿ ಮುಂದೆ ಪ್ರಾರ್ಥನೆ ಸಲ್ಲಿಸಿದರು. ನಂತರ ದೇವಾಲಯದ ಹೊರಗೆ ಬಂದು ಮುಖ್ಯ ದ್ವಾರದ ಮುಂದೆ ಭಕ್ತಿಯಿಮಂದ ಕೈ ಮುಗಿದು ಹೀಡುಗಾಯಿ ಹೊಡೆದರು.

ಪ್ರಾರ್ಥನೆಯಿಂದ ಫಲ ಸಿಗುತ್ತೆ ಎಂದ ಡಿಕೆಶಿ:

ಇದಾದ ಬಳಿಕ ಮಾದ್ಯಮಗಳ ಜೊತೆ ಮಾತನಾಡಿದ ಡಿಕೆಶಿ ಪ್ರಯತ್ನಕ್ಕಿಂದ ಪ್ರಾರ್ಥನೆಯಿಂದ ಫಲ ಸಿಗುತ್ತೆ ಎಂಬ ನಂಬಿಕೆ ನನಗಿದೆ ಎಂದರು. ಪವರ್ ಶೇರಿಂಗ್ ನ ಗುದ್ದಾಟದಲ್ಲಿರೋ ಶಿವಕುಮಾರ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿ ನಂತರ ಸ್ವಲ್ಪ ತಣ್ಣಗಾಗಿದ್ದು ಹಿರಿಯರು ಬುದ್ದಿ‌ಹೇಳಿ ಸಂದೇಶ ಕೊಟ್ಟಿದ್ದಾರೆ ಎಂದಿದ್ದಾರೆ.

ಇನ್ನು ಸಚಿವ ಚಲುವರಾಯಸ್ವಾಮಿ, ಮಾಜಿ ಸಚಿವ ಹೆಚ್‌ಡಿ.ರೇವಣ್ಣ, ಸೂರಜ್ ರೆವಣ್ಣ ಶಾಸಕ ರವಿಕುಮಾರ್ ಸೇರಿ ಹಲವು ರಾಜಕಾರಣಿಗಳು ಇಂದು ದೇವಿ ದರ್ಶನ ಪಡೆದಿರು. ಸಿಎಂ ಬದಲಾವಣೆ ಕುರಿತು ಶಾಸಕರ ಬಹಿರಂಗ ಹೇಳಿಕೆ ಬಗ್ಗೆ ಮಾತ‌ನಾಡಿದ ಸಚಿವ ಚಲುವರಾಯ ಸ್ವಾಮಿ, ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಬಹಳ‌ ಅನೂನ್ಯವಾಗಿದ್ದಾರೆ. ಯಾರು ಏನೇ ಕುತಂತ್ರ ಮಾಡಿದ್ರು ಅವರನ್ನ ಡಿವೈಡ್ ಆಗಲ್ಲ. ಪೂರ್ಣಾವಧಿ ಸಿಎಂ ಆಗಿ ಸಿದ್ದರಾಮಯ್ಯ ಅವರೇ ಮುಂದುವರಿಯಬೇಕಾ ಬೇಡವಾ ಎನ್ನುವದನ್ನ ನಿರ್ಧಾರ ಮಾಡೋದು ಹೈಕಮಾಂಡ್ ಎಂದು ಸ್ಪಷ್ಟನೆ ನೀಡಿದರು.

ಸಿನಿಮಾ ನಟ-ನಟಿಯರಿಂದಲೂ ದರ್ಶನ:

ರಾಜಕಾರಣಿಗಳಂತೆ ಹಲವು ಸಿನಿಮಾ ನಟರೂ ಇಂದು ಚಾಮುಂಡೇಶ್ವರಿ ದರ್ಶನ ಪಡೆದಿದ್ದಾರೆ. ನಟ ಡಾಲಿ ಧನಂಜಯ್ ಮುಂಜಾನೆಯೇ ಬಂದು ದೇವಿಯ ದರ್ಶನ ಪಡೆದ್ರ, ರೇಣುಕಾಸ್ವಾಮಿ ಕೊಲೆ ಕೇಸ್ ಆರೋಪಿ ನಟ, ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ಸಹೋದರ ದಿನಕರ್ ಜೊತೆ ಬಂದು ಪೂಜೆಸಲ್ಲಿಸಿದ್ರು. ಇದೇ ಕೇಸ್‌ನ ಮತ್ತೊಬ್ಬ ಆರೋಪಿ, ದರ್ಶನ್ ಮ್ಯಾನೇಜರ್ ನಾಗರಾಜ್ ಅಲಿಯಾಸ್ ನಾಗ ದರ್ಶನ ಹೋದ ಅರ್ಧ ಗಂಟೆ ನಂತರ ಬಂದು ದರ್ಶನ ಮಾಡಿದ್ದಾರೆ. ಅಲ್ಲದೆ ದರ್ಶನ್ ಹೆಸರಲ್ಲಿ ಪ್ರಸಾದ ಕೂಡ ಹಂಚಿದ್ದಾನೆ.

ಇನ್ನುಳಿದಂತೆ ನಟ ಧನ್ವೀರ್, ಚಿಕ್ಕಣ, ಕುರಿ ಪ್ರತಾಪ್ ಸೇರಿ ಹಲವರಿಂದ ಆಷಾಢ ಶುಕ್ರವಾರದ ಪೂಜೆ ನಡೆದಿದ್ದು, ಭಕ್ತರ ಅನುಕೂಲಕ್ಕಾಗಿ ಪೊಲೀಸರು ಹಾಗೂ ಪ್ರಾಧಿಕಾರ ಸೂಕ್ತ ಕ್ರಮಗಳನ್ನು ಕೈಗೊಂಡಿತ್ತು. 

ಕ್ಯಾಮೆರಾಮನ್ ನವೀನ್ ಜೊತೆಗೆ ಮಧು.ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಮೈಸೂರು