ಆಷಾಢ ಶುಕ್ರವಾರಗಳಂದು ಚಾಮುಂಡಿ ಬೆಟ್ಟದಲ್ಲಿ ಹೆಚ್ಚಿನ ಭದ್ರತೆ ಮಾಡಲಾಗಿದೆ. ಖಾಸಗಿ ವಾಹನಗಳ ಪ್ರವೇಶ ನಿರ್ಬಂಧಿಸಲಾಗಿದೆ ಮತ್ತು ಭಕ್ತರಿಗೆ ವಿಶೇಷ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ದೇವಿಗೆ ಲಕ್ಷ್ಮೀ ಅಲಂಕಾರ ಮಾಡಲಾಗುವುದು.
ಮೈಸೂರು (ಜೂ.26) : ಆಷಾಢ ಶುಕ್ರವಾರಗಳಂದು ಚಾಮುಂಡಿಬೆಟ್ಟದಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ಮಾಡಲಾಗಿದೆ. 4 ಡಿಸಿಪಿ, 2 ಎಸಿಪಿಗಳು 1470 ಪೊಲೀಸರು ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ತಿಳಿಸಿದರು.
ಸ್ಥಳೀಯವಾಗಿರುವ 1 ಸಾವಿರ ಪೊಲೀಸರು, 4 ಕೆಎಸ್ಆರ್ ಪಿ ತುಕಡಿ, 1 ಮಹಿಳಾ ಕೆಎಸ್ಆರ್ ಪಿ ತುಕಡಿ, ಗೃಹ ರಕ್ಷಕ ದಳವನ್ನು ಸಹ ಭದ್ರತೆಗೆ ನಿಯೋಜಿಸಲಾಗುತ್ತಿದೆ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.ಚಾಮುಂಡಿಬೆಟ್ಟಕ್ಕೆ ಶುಕ್ರವಾರ, ಶನಿವಾರ ಮತ್ತು ಭಾನುವಾರ ಹಾಗೂ ವರ್ಧಂತಿ ದಿನದಂದು ಖಾಸಗಿ ವಾಹನಗಳನ್ನು ನಿರ್ಬಂಧಿಸಲಾಗಿದೆ. ಚಾಮುಂಡಿಬೆಟ್ಟಕ್ಕೆ ರಸ್ತೆ ಸಂಪರ್ಕ ಕಲ್ಪಿಸುವ ಎಲ್ಲಾ ಮಾರ್ಗಗಳನ್ನು ಬಂದ್ ಮಾಡುತ್ತೇವೆ.
ಗುರುವಾರ ರಾತ್ರಿ 10 ರಿಂದಲೇ ಎಲ್ಲಾ ರಸ್ತೆಗಳು ಬಂದ್ ಆಗುತ್ತವೆ. ಚಾಮುಂಡಿಬೆಟ್ಟದ ನಿವಾಸಿಗಳಿಗೆ ಮಾತ್ರ ಬೆಟ್ಟದ ಮೇಲಕ್ಕೆ ಹೋಗಲು ಅವಕಾಶ ಇರುತ್ತದೆ ಎಂದರು.ಹಲವೆಡೆ ಸಿಸಿಟಿವಿ ಅಳವಡಿಸಲಾಗಿದೆ.
ಯಾವುದೇ ಅಹಿತಕರ ಘಟನೆ ನಡೆಯದ ರೀತಿ ಭದ್ರತೆ ಮಾಡಿಕೊಂಡಿದ್ದೇವೆ. ಮಹಿಷಾಸುರ ಪ್ರತಿಮೆಯ ದ್ವಾರದಿಂದ ಚಾಮುಂಡೇಶ್ವರಿ ದೇವಸ್ಥಾನದವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಭಕ್ತರು ತಮ್ಮ ವಾಹನಗಳನ್ನು ಲಲಿತಮಹಲ್ ಮೈದಾನದಲ್ಲಿ ನಿಲುಗಡೆಗೊಳಿಸಬೇಕು. ದ್ವಿಚಕ್ರ ಮತ್ತು ನಾಲ್ಕುಚಕ್ರ ವಾಹನಗಳಿಗೆ ಪ್ರತ್ಯೇಕ ನಿಲುಗಡೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು
ಆಷಾಢ ಶುಕ್ರವಾರಗಳಂದು ಚಾಮುಂಡೇಶ್ವರಿಗೆ ಲಕ್ಷ್ಮೀ ಅಲಂಕಾರಆಷಾಢ ಶುಕ್ರವಾರಗಳಂದು ವಿಶೇಷವಾಗಿ ಚಾಮುಂಡೇಶ್ವರಿ ದೇವಿಗೆ ಲಕ್ಷ್ಮೀ ಅಲಂಕಾರಗಳನ್ನು ಮಾಡಲಾಗುವುದು ಎಂದು ಚಾಮುಂಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ತಿಳಿಸಿದರು.
ಆಷಾಢ ವಿಶೇಷವಾದ ಮಾಸವಾಗಿದೆ
ಆಷಾಢ ಮಾಸದಲ್ಲಿ ಸಾಮಾನ್ಯವಾಗಿ ಶಕ್ತಿ ದೇವತೆಗಳ ಆರಾಧನೆ ಹೆಚ್ಚು ಇರುತ್ತದೆ.ಮೈಸೂರಿನಲ್ಲಿ ಹಲವು ಶಕ್ತಿ ದೇವತೆಗಳ ಆರಾಧನೆ ನಡೆಯುತ್ತದೆ. ತ್ರಿನೇಶ್ವರಿ, ತ್ರಿಪುರಸುಂದರಿ, ಕಾಮ ಕಾಮೇಶ್ವರಿ ದೇವಾಲಯಗಳು ಸೇರಿದಂತೆ ಹಲವು ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಹೋಮ ಹವನಗಳು ನಡೆಯುತ್ತವೆ. ಅದರಂತೆ ಚಾಮುಂಡಿಬೆಟ್ಟದಲ್ಲೂ ಆಷಾಢ ಮಾಸದ ನಾಲ್ಕು ಶುಕ್ರವಾರ ದೇವಿಗೆ ವಿಶೇಷ ಅಭಿಷೇಕ, ಪೂಜೆ, ಹೋಮ, ಹವನಗಳು ನಡೆಯುತ್ತವೆ ಎಂದು ಅವರು ಹೇಳಿದರು.
ಅಷಾಢ ಶುಕ್ರವಾರಗಳಂದು ಮುಂಜಾನೆ 3:30ಕ್ಕೆ ಪೂಜಾ ಕೈಂಕರ್ಯಗಳು ಆರಂಭವಾಗುತ್ತವೆ. ಬೆಳಗ್ಗೆ 5.30 ರಿಂದ ರಾತ್ರಿ 10 ಗಂಟೆಯವರೆಗೆ ದೇವಿಯ ದರ್ಶನ ಪಡೆಯಲು ಭಕ್ತರಿಗೆ ಅವಕಾಶ ಇರುತ್ತದೆ. ವರ್ಧಂತಿ ದಿನದಂದು ಮಾತ್ರ ಬೆಳಗ್ಗೆ 8 ರಿಂದ ರಾತ್ರಿ 10 ಗಂಟೆಯವರೆಗೂ ದೇವಿಯ ದರ್ಶನಕ್ಕೆ ಅವಕಾಶ ಇರುತ್ತದೆ
ಯಾವುದೇ ಸ್ಥಳದಿಂದ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಗೂಗಲ್ ಮ್ಯಾಪ್ ಅಥವಾ ವಾಯ್ಸ್ ಸರ್ಚ್ ಉಪಯೋಗಿಸಿ ಲಲಿತಮಹಲ್ ಪಾಕಿಂಗ್ ಸ್ಥಳವನ್ನು ಸುಲಭವಾಗಿ ತಲುಪಬಹುದು. ಕ್ಯೂಆರ್ ಕೋಡ್ ಬಳಕೆಯ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕವೂ ಪ್ರಚಾರ ನಡೆಸಲಾಗಿದೆ.
ವಿವಿಐಪಿ ಹಾಗೂ ಸರ್ಕಾರಿ ವಾಹನಗಳಿಗೆ ವಿಶೇಷ ನಿಲುಗಡೆ ಸ್ಥಳ ಗುರುತಿಸಲಾಗಿದೆ ಎಂದು ಅವರು ಹೇಳಿದರು.ಮೆಟ್ಟಿಲು ಮೂಲಕ ಬೆಟ್ಟಕ್ಕೆ ತೆರಳುವ ಭಕ್ತಾಧಿಗಳಿಗೆ ಮುಂಜಾನೆ 5 ಗಂಟೆಯಿಂದ ಪ್ರವೇಶ ಕಲ್ಪಿಸಲಾಗುವುದು.
ಈ ಭಕ್ತಾಧಿಗಳು ಪಿಂಜರಪೋಲ್ ಬಳಿಯ ಮೈದಾನದಲ್ಲಿ ವಾಹನಗಳನ್ನು ನಿಲುಗಡೆ ಮಾಡುವುದು. ಬೆಟ್ಟದಲ್ಲಿರುವ ನಿವಾಸಿಗಳು ಮುಕ್ತ ಸಂಚಾರಕ್ಕಾಗಿ ಅಗತ್ಯ ದಾಖಲಾತಿಗಳನ್ನು ಹಾಜರುಪಡಿಸಿ ಪ್ರವೇಶ ಪಡೆಯುವುದು. ಉಚಿತ ದಾಸೋಹ (ಅನ್ನದಾನ) ವ್ಯವಸ್ಥೆಗೆ ಪ್ರತ್ಯೇಕ ಸ್ಥಳ ಗುರುತಿಸಲಾಗಿದೆ ಎಂದರು.
ಭಕ್ತರಿಗೆ ಇದೇ ಮೊದಲ ಬಾರಿಗೆ ಪ್ರಸಾದ ಪ್ಯಾಕೆಟ್ ವಿತರಣೆ:
ಚಾಮುಂಡಿ ಬೆಟ್ಟಕ್ಕೆ ಆಗಮಿಸುವ ಭಕ್ತರಿಗೆ ಇದೇ ಮೊದಲ ಬಾರಿಗೆ ಪ್ರಸಾದದ ಪ್ಯಾಕೆಟ್ ವಿತರಣೆ ಮಾಡಲಾಗುತ್ತಿದೆ. ಪ್ಯಾಕೆಟ್‌ನಲ್ಲಿ ಗೋಡಂಬಿ ದ್ರಾಕ್ಷಿ, ಕಲ್ಲು ಸಕ್ಕರೆ, ಅಮ್ಮನವರ ಕುಂಕುಮವಿರುವ ಪ್ಯಾಕೆಟ್ ವಿತರಣೆ ಮಾಡಲಾಗುತ್ತೆ. ಧರ್ಮ ದರ್ಶನದ ಸಾಲು ಹಾಗೂ, ಮೆಟ್ಟಿಲು ಹತ್ತಿ ಬರುವ ಭಕ್ತರಿಗೆ ಪ್ರಸಾದದ ಪ್ಯಾಕೇಟ್ ವಿತರಣೆ. ಇದಕ್ಕಾಗಿ ನೂರಾರು ಸಿಬ್ಬಂದಿ ಪ್ರಸಾದದ ಪ್ಯಾಕೆಟ್ ಸಿದ್ಧತೆ ನಡೆಸಲಾಗಿದೆ.
ಚಾಮುಂಡಿ ಬೆಟ್ಟ ಪ್ಲಾಸ್ಟಿಕ್ ಮುಕ್ತ ಪ್ರದೇಶವಾಗಿ ಘೋಷಿಸಲಾಗಿದೆ. ಈ ಹಿನ್ನೆಲೆ ಪ್ರಾಧಿಕಾರದ ವತಿಯಿಂದ ಗಾಜಿನ ಬಾಟಲ್ ಮೂಲಕ ನೀರಿನ ಬಾಟಲ್ ವಿತರಣೆ.
ಅರ್ಧ ಲಿಟರ್ಗೆ 50 ರೂಪಾಯಿ, 250 ml ಗೆ 30 ರೂ ನಿಗದಿ ಮಾಡಲಾಗಿದೆ. ಖಾಲಿ ಬಾಟಲ್ ವಾಪಸ್ ಮಾಡಿದರೆ ಅರ್ಧ ಲೀಟರ್ ವಾಟರ್ ವಾಟಲ್ ಗೆ 30ರೂಪಾಯಿ, 250ml ವಾಟರ್ ಬಾಟಲ್ ಗೆ 20 ರೂಪಾಯಿ ವಾಪಸ್ ಮಾಡಲಾಗುತ್ತೆ. ಪ್ರಾಧಿಕಾರದ ವತಿಯಿಂದ ದೇವರ ವಿಗ್ರಹಗಳ ಮಾರಾಟ. ಚಾಮುಂಡೇಶ್ವರಿ ವಿಗ್ರಹ ಗಂಡಬೇರುಂಡ ವಿಗ್ರಹ, ದಸರಾ ಜಂಬೂ ಸವಾರಿ ಹೊತ್ತ ಆನೆಯ ವಿಗ್ರಹ ಜೊತೆಗೆ ಕೈಗೆ ಕಟ್ಟುವ ಧಾರ ಕುಂಕುಮ ಹಾಗೂ ಕುಂಕುಮದ ಡಬ್ಬಿ ವಿತರಣೆ ಮಾಡಲಾಗುತ್ತದೆ
