* ರಾಜ್ಯದಲ್ಲಿ ಹೊಸ ತಳಿ ಪತ್ತೆ ಆಗಿಲ್ಲ: ಆರೋಗ್ಯ ಇಲಾಖೆ* ಕೇಂದ್ರೀಯ ಲ್ಯಾಬ್ ಈ ಮಾಹಿತಿ ಖಚಿತಪಡಿಸಿಲ್ಲ* 2 ಉಪತಳಿ ಪತ್ತೆ ಎಂಬ ವರದಿಗಳ ಬಗ್ಗೆ ಸರ್ಕಾರ ಸ್ಪಷ್ಟನೆ
ಬೆಂಗಳೂರು(ಏ.24): ದೆಹಲಿಯಲ್ಲಿ ಸೋಂಕು ಉಲ್ಬಣಕ್ಕೆ ಕಾರಣವಾದ ಒಮಿಕ್ರೋನ್‌ನ 2 ಹೊಸ ಉಪತಳಿಗಳು ಬೆಂಗಳೂರಿನಲ್ಲೂ ಪತ್ತೆಯಾಗಿರುವುದು ಖಚಿತವಾಗಿಲ್ಲ ಎಂದು ರಾಜ್ಯ ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ.
‘ಒಮಿಕ್ರೋನ್‌ನ ಹೊಸ ರೂಪಾಂತರಿ ಬಿಎ 2.10 ಮತ್ತು ಬಿಎ 2.12 ರಾಜ್ಯದಲ್ಲಿ ಪತ್ತೆ ಆಗಿವೆ. ಇಬ್ಬರು ಬೆಂಗಳೂರಿಗರಲ್ಲಿ ಸೋಂಕು ಕಂಡುಬಂದಿದೆ ಎಂದು ಖಾಸಗಿ ಪ್ರಯೋಗಾಲಯಗಳು ಪತ್ತೆ ಮಾಡಿವೆ’ ಎಂದು ಶನಿವಾರ ಕೆಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು.
ಈ ಬಗ್ಗೆ ಸ್ಪಷ್ಟನೆ ನೀಡಿರುವ ರಾಜ್ಯಆರೋಗ್ಯ ಇಲಾಖೆಯ ಆಯುಕ್ತ ಡಿ. ರಂದೀಪ್ ‘ಕೆಲವು ಮಾಧ್ಯಮಗಳು ಹೊಸ ರೂಪಾಂತರಿ ಪತ್ತೆ ಆಗಿದೆ ಎಂದು ವರದಿ ಮಾಡುತ್ತಿವೆ. ಆದರೆ ಇನ್ಸಾಕಾಗ್ (ಪ್ರಯೋಗಾಲಗಳ ಒಕ್ಕೂಟ) ಈ ಮಾಹಿತಿಯನ್ನು ಆರೋಗ್ಯ ಇಲಾಖೆಗೆ ಖಚಿತ ಪಡಿಸಿಲ್ಲ. ಹಾಗೆಯೇ ಸೋಂಕಿತರ ಆಸ್ಪತ್ರೆಯ ದಾಖಲಾತಿ ಹೆಚ್ಚಾಗಿಲ್ಲ ಮತ್ತು ಕಳೆದ ಎರಡು ವಾರಗಳಿಂದ ಕೋವಿಡ್ ಸಾವು ಘಟಿಸಿಲ್ಲ. ವೈರಾಣುವಿನ ರೂಪಾಂತರಿ ಪತ್ತೆ ಪರೀಕ್ಷೆಗಳು ನಿರಂತರವಾಗಿ ನಡೆಯುತ್ತಿದೆ’ ಎಂದು ತಿಳಿಸಿದ್ದಾರೆ.
"
4 ವಾರದಲ್ಲಿ 4ನೇ ಅಲೆ- ಮಂಜುನಾಥ್:
ಈ ನಡುವೆ ರಾಜ್ಯದಲ್ಲಿ 1 ತಿಂಗಳ ನಂತರ ಸೋಂಕು 100 ಪ್ರಕರಣ ದಾಟಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಯದೇವ ಹೃದ್ರೋಗ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್, ‘ಮುಂದಿನ 4-5 ವಾರದಲ್ಲೇ ರಾಜ್ಯದಲ್ಲಿ ಕೊರೋನಾ ನಾಲ್ಕನೇ ಅಲೆ ಕಾಣಿಸಿಕೊಳ್ಳಲಿದೆ’ ಎಂದಿದ್ದಾರೆ.
‘ವೇಗವಾಗಿ ಹರಡಿದರೂ ಒಮಿಕ್ರೋನ್ ಉಪತಳಿಯ ಸೋಂಕು ಇದಾಗಿದೆ. ಹೀಗಾಗಿ ಸೋಂಕಿನ ತೀವ್ರತೆ ಕಡಿಮೆ ಇರುತ್ತದೆ. ಆಸ್ಪತ್ರೆ ದಾಖಲೀಕರಣ ಹೆಚ್ಚಿರದು. ಮೂರನೇ ಅಲೆ ಮಾದರಿಯಲ್ಲೇ ಒಂದೂವರೆ ತಿಂಗಳಲ್ಲಿ ಕಡಿಮೆಯಾಗಲಿದೆ’ ಎಂದು ಹೇಳಿದ್ದಾರೆ.
‘ಕೊರೋನಾ ಸೋಂಕಿನ ಈ ಹಿಂದಿನ ಮೂರು ಅಲೆಗಳು ಕೂಡಾ ದೆಹಲಿಯಿಂದ ಆರಂಭವಾಗಿ ಮಹಾರಾಷ್ಟ್ರ, ಕೇರಳ ಅನಂತರ ಕರ್ನಾಟಕಕ್ಕೆ ಹರಡಿದ್ದವು. ಸದ್ಯ ದೆಹಲಿಯಲ್ಲಿ ನಾಲ್ಕನೇ ಅಲೆ ಆರಂಭಿಕ ಲಕ್ಷಣಗಳಿದ್ದು, ಅನಂತರ ಮಹಾರಾಷ್ಟ್ರ, ಕೇರಳದಲ್ಲಿ ಆರಂಭವಾಗಲಿದೆ. ಮುಂದಿನ ನಾಲ್ಕು ವಾರಗಳಲ್ಲಿ ಕರ್ನಾಟಕದಲ್ಲಿಯೂ ನಾಲ್ಕನೇ ಅಲೆ ಅಲೆ ಕಾಣಿಸಿಕೊಳ್ಳಲಿದೆ’ ಎಂದು ಡಾ| ಮಂಜುನಾಥ್ ಹೇಳಿದ್ದಾರೆ.
ಹೆಚ್ಚೆಚ್ಚು ಪರೀಕ್ಷೆ ನಡೆಸಿ: ಡಾ| ಮಂಜುನಾಥ್ ಕೋರಿಕೆ
ಬೆಂಗಳೂರು: ‘ರಾಜ್ಯದಲ್ಲೂ ಒಮಿಕ್ರೋನ್ ಉಪತಳಿಗಳು ಹರಡುವ ಭೀತಿ ಇದೆ. ಹೀಗಾಗಿ ಸೋಂಕು ಪರೀಕ್ಷೆ ಮತ್ತು ವಂಶವಾಹಿ ಪರೀಕ್ಷೆಗಳನ್ನು ಹೆಚ್ಚಿಸಬೇಕು. ಪ್ರಸ್ತುತ ಕಡಿಮೆ ಸಂಖ್ಯೆಯ ಪರೀಕ್ಷೆ ನಡೆಯುತ್ತಿದ್ದು, ಹೆಚ್ಚಿನ ಪರೀಕ್ಷೆ ಹಾಗೂ ವಂಶವಾಹಿ ಪರೀಕ್ಷೆ ನಡೆಸಿದರೆ ಸೋಂಕಿನ ಪ್ರಮಾಣ ಅಂದಾಜಿಸಲು ನೆರವಾಗುತ್ತದೆ. ತನ್ಮೂಲಕ ಸಿದ್ಧತೆ ಹಾಗೂ ಚಿಕಿತ್ಸಾ ಕ್ರಮಗಳನ್ನು ಕೈಗೊಳ್ಳಲೂ ಅನುವಾಗುತ್ತದೆ’ ಎಂದು ತಜ್ಞ ಡಾ
ಮಂಜುನಾಥ್ ಅವರು ರಾಜ್ಯ ಸರ್ಕಾರಕ್ಕೆ ಕೋರಿದ್ದಾರೆ.
