ಅರುಣ್ ಸಿಂಗ್ ನಾಳೆ ರಾಜ್ಯಕ್ಕೆ: 3 ದಿನದ ಭೇಟಿ ನಂತರ ವರಿಷ್ಠರಿಗೆ ವರದಿ ಸಲ್ಲಿಕೆ!
* ಅರುಣ್ ಸಿಂಗ್ ಬುಧವಾರ ರಾಜ್ಯಕ್ಕೆ
* ಶಾಸಕರು, ಸಚಿವರ ಜತೆ ಮುಖಾಮುಖಿ ಚರ್ಚೆ
* ಬಳಿಕ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಭಾಗಿ
* 3 ದಿನದ ಭೇಟಿ ನಂತರ ವರಿಷ್ಠರಿಗೆ ವರದಿ ಸಲ್ಲಿಕೆ
ಬೆಂಗಳೂರು(ಜೂ.15): ನಾಯಕತ್ವ ಬದಲಾವಣೆ, ರಾಜ್ಯ ಸರ್ಕಾರದ ಹಾಗೂ ಪಕ್ಷದ ವರ್ಚಸ್ಸು ಹೆಚ್ಚಿಸುವ ಸಂಬಂಧ ಶಾಸಕರು ಮತ್ತು ಸಚಿವರೊಂದಿಗೆ ಮುಖಾಮುಖಿ ಚರ್ಚಿಸಿ ಅಭಿಪ್ರಾಯ ಸಂಗ್ರಹಿಸಲು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ 3 ದಿನಗಳ ಭೇಟಿಗಾಗಿ ಬುಧವಾರ ರಾಜ್ಯಕ್ಕೆ ಆಗಮಿಸಲಿದ್ದಾರೆ.
ಶಾಸಕರೊಬ್ಬರು ಫೋನ್ ಮಾಡಿ ನಾನೇ CM, ಸಹಕಾರ ಕೊಡಿ ಅಂದ್ರು: ರೇಣುಕಾಚಾರ್ಯ ಬಾಂಬ್
ಬಳಿಕ ದೆಹಲಿಗೆ ತೆರಳಿ ಈ ಅಭಿಪ್ರಾಯಗಳನ್ನು ಒಳಗೊಂಡ ವಿಸ್ತೃತ ವರದಿಯನ್ನು ವರಿಷ್ಠರಿಗೆ ನೀಡಲಿದ್ದಾರೆ. ಇದರ ಆಧಾರದ ಮೇಲೆ ವರಿಷ್ಠರು ನಾಯಕತ್ವ ಸೇರಿದಂತೆ ಇತರ ಬದಲಾವಣೆಗಳ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ. ಹಾಗಂತ ವರಿಷ್ಠರು ತಕ್ಷಣಕ್ಕೆ ಯಾವುದೇ ನಿರ್ಧಾರ ಕೈಗೊಳ್ಳದೇ ಇರಬಹುದು. ಆದರೆ, ಈ ವರದಿಯಿಂದ ಮುಂದೇನು ಮಾಡಬೇಕು ಎಂಬುದರ ಬಗ್ಗೆ ಸ್ಪಷ್ಟತೆ ಪಡೆಯುವ ಸಂಭವವೂ ಇದೆ ಎನ್ನಲಾಗಿದೆ.
ಕೆಲ ಸಚಿವರು ಹಾಗೂ ಶಾಸಕರು ಪದೇ ಪದೇ ದೆಹಲಿಗೆ ತೆರಳಿ ವರಿಷ್ಠರಿಗೆ ದೂರು ನೀಡಿದ್ದರಿಂದ ಅಂತಿಮವಾಗಿ ಎಲ್ಲ ಸಚಿವರು-ಶಾಸಕರಿಂದ ಅಭಿಪ್ರಾಯ ಸಂಗ್ರಹಿಸಲು ನಿರ್ಧರಿಸಿ ಉಸ್ತುವಾರಿಯನ್ನು ರಾಜ್ಯಕ್ಕೆ ಕಳುಹಿಸಲಾಗುತ್ತಿದೆ. ಈ ಮೂರು ದಿನಗಳ ಸಭೆ ಬಳಿಕ ರಾಜ್ಯ ಬಿಜೆಪಿಯಲ್ಲಿನ ಆಂತರಿಕ ತಿಕ್ಕಾಟಕ್ಕೆ ತಾರ್ಕಿಕ ಅಂತ್ಯ ಸಿಗಬಹುದು ಎಂಬ ನಿರೀಕ್ಷೆಯಿದೆ.
ನಾಯಕತ್ವ ಬದಲಾವಣೆ ಕೂಗು: ಮಠಾಧೀಶರಿಂದ ಬಿಜೆಪಿ ಹೈಕಮಾಂಡ್ಗೆ ಒಕ್ಕೊರಲ ಸಂದೇಶ ರವಾನೆ
ಬುಧವಾರ ಮಧ್ಯಾಹ್ನ ದೆಹಲಿಯಿಂದ ಬೆಂಗಳೂರಿಗೆ ಆಗಮಿಸುವ ಅರುಣ್ ಸಿಂಗ್ ಅವರು ಶುಕ್ರವಾರ ರಾತ್ರಿವರೆಗೆ ಬಿಡುವಿಲ್ಲದೆ ಸಭೆಗಳನ್ನು ನಡೆಸಲಿದ್ದಾರೆ. ಮೊದಲ ದಿನವಾದ ಬುಧವಾರ ಸಂಜೆ ಅವರು ಸಚಿವರ ಜೊತೆ ಸುದೀರ್ಘ ಸಭೆ ನಡೆಸಿ ಕಳೆದ ಎರಡು ವರ್ಷಗಳಲ್ಲಿ ಕೋವಿಡ್ ನಿರ್ವಹಣೆ ಸೇರಿದಂತೆ ಸರ್ಕಾರದ ಸಾಧನೆಗಳ ಪರಾಮರ್ಶೆ ನಡೆಸಲಿದ್ದಾರೆ. ಮರುದಿನ ಗುರುವಾರ ತಮ್ಮ ಇಡೀ ದಿನವನ್ನು ಶಾಸಕರಿಗಾಗಿಯೇ ಮೀಸಲಿಟ್ಟಿದ್ದಾರೆ. ಅಂದು ಬೆಳಗ್ಗೆಯಿಂದ ಸಂಜೆವರೆಗೆ ಶಾಸಕರು ಆಗಮಿಸಿ ಸರ್ಕಾರ ಮತ್ತು ಪಕ್ಷದ ಬಗ್ಗೆ ತಮ್ಮ ಅಭಿಪ್ರಾಯ, ಅಹವಾಲು ಸಲ್ಲಿಸಬಹುದಾಗಿದೆ. ಪ್ರತಿ ಶಾಸಕರು ಪ್ರತ್ಯೇಕವಾಗಿ ಭೇಟಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಯಾರಿಗೂ ನಿರ್ಬಂಧವಿಲ್ಲ. ತಮಗೆ ಅನಿಸಿದ್ದನ್ನು ನೇರವಾಗಿ ಹೇಳಬಹುದಾಗಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ಮೂರನೆಯ ದಿನವಾದ ಶುಕ್ರವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಪಕ್ಷದ ಪ್ರಧಾನ ಕಾರ್ಯದರ್ಶಿಗಳು ಹಾಗೂ ವಿವಿಧ ಮೋರ್ಚಾಗಳ ಅಧ್ಯಕ್ಷರ ಜೊತೆ ಸಭೆ ನಡೆಸಿ ಸಂಘಟನೆ ಬಲಗೊಳಿಸುವ ಕುರಿತು ಸಮಾಲೋಚನೆ ಮಾಡಲಿದ್ದಾರೆ.
ಸಿಎಂ ಬದಲಾವಣೆ ವಿಚಾರದಲ್ಲಿ ದೇವೇಗೌಡ್ರ ಕುಟುಂಬ ಎಳೆಯುವುದು ಬೇಡ: ಎಚ್‌ಡಿಕೆ ಮನವಿ
ಸಂಜೆ ಸಚಿವರು, ಶಾಸಕರು ಹಾಗೂ ಪದಾಧಿಕಾರಿಗಳ ಅಭಿಪ್ರಾಯಗಳನ್ನು ಆಧರಿಸಿ ಪಕ್ಷದ ಹಿರಿಯ ರಾಜ್ಯ ನಾಯಕರನ್ನು ಒಳಗೊಂಡ ಕೋರ್ ಕಮಿಟಿ ಸಭೆ ನಡೆಸಲಿದ್ದಾರೆ. ಅಲ್ಲಿ ಸರ್ಕಾರದ ವರ್ಚಸ್ಸು ಮತ್ತು ಪಕ್ಷದ ಸಂಘಟನೆ ಬಗ್ಗೆ ಅರುಣ್ ಸಿಂಗ್ ಅವರು ಸಲಹೆ- ಸೂಚನೆಗಳನ್ನು ನೀಡುವ ನಿರೀಕ್ಷೆಯಿದೆ.
ಬಳಿಕ ಅದೇ ದಿನ ರಾತ್ರಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ವಾಪಸ್ ಆಗಲಿದ್ದಾರೆ.