* ವೀರಶೈವ ಲಿಂಗಾಯರ ಮಠಾಧಿಪತಿಗಳ ವೇದಿಕೆಯಿಂದ ಸುದ್ದಿಗೋಷ್ಠಿ* ಸಿಎಂ ಯಡಿಯೂರಪ್ಪನವರ ಬೆಂಬಲಕ್ಕೆ ನಿಂತ ವೀರಶೈವ ಲಿಂಗಾಯತ ಮಠದ ಸ್ವಾಮಿಜಿಗಳು* ಮಠಾಧಿಪತಿಗಳ ವೇದಿಕೆಯ ಅಧ್ಯಕ್ಷ ರುದ್ರಮುನಿ ಸ್ವಾಮಿಜಿ ಸೇರಿದಂತೆ ೧೦ ಕ್ಕೂ ಹೆಚ್ಚು ಮಠಾಧಿಪತಿಗಳ ಉಪಸ್ಥಿತಿ

ತುಮಕೂರು, (ಜೂನ್.14): ರಾಜ್ಯ ಬಿಜೆಪಿಯಲ್ಲಿ ನಾಕಯತ್ವ ಬದಲಾವಣೆ ಚರ್ಚೆ ಜೋರಾಗುತ್ತಿದೆ. ಇದರ ಮಧ್ಯೆಸಿಎಂ ಯಡಿಯೂರಪ್ಪರ ಬೆಂಬಲಕ್ಕೆ ವೀರಶೈವ-ಲಿಂಗಾಯತ ಮಠದ ಸ್ವಾಮೀಜಿಗಳು ನಿಂತಿದ್ದಾರೆ.

ಸಿಎಂ ಬದಲಾವಣೆ ‌ವಿಚಾರಕ್ಕೆ ಸಂಬಂಧಿಸಿದಂತೆ ತುಮಕೂರು ಜಿಲ್ಲೆ ತಿಪಟೂರಿನ ಷಡಕ್ಷರಿ ಮಠದಲ್ಲಿ ಇಂದು (ಸೋಮವಾರ) 10ಕ್ಕೂ ಹೆಚ್ಚು ಮಠಾಧೀಶರು ಸುದ್ದಿಗೋಷ್ಠಿ ನಡೆಸಿದರು.

ರಾಜ್ಯದ ಮುಖ್ಯಮಂತ್ರಿ ಸ್ಥಾನದಿಂದ ಬಿ ಎಸ್​ ಯಡಿಯೂರಪ್ಪ ಅವರನ್ನು ಕೆಳಗಿಳಿಸಬಾರದು ಎಂದು ವೀರಶೈವ ಲಿಂಗಾಯತ ಮಠಾಧೀಶರು ಬಿಜೆಪಿ ಹೈಕಮಾಂಡ್​ಗೆ ಒಕ್ಕೊರಲಿನ ಒತ್ತಾಯದ ಸಂದೇಶ ರವಾನಿಸಿದರು.

ಮಹತ್ವದ ನಿರ್ಧಾರ ಕೈಗೊಂಡ ಶಾಸಕರ ನಿಯೋಗ: ರಾಜ್ಯ ಬಿಜೆಪಿಯಲ್ಲಿ ರಾಜಕೀಯ ಚಟುವಟಕೆ ಬಿರುಸು

 ಸಿಎಂ ಯಡಿಯೂರಪ್ಪ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಕೆಲವು ವ್ಯಕ್ತಿಗಳು ಸಿಎಂ ಸ್ಥಾನಕ್ಕೆ ಧಕ್ಕೆ ತರುವಂತಹ ಹೇಳಿಕೆ ನೀಡಿದ್ದಾರೆ. ಇಂತಹ ಹೇಳಿಕೆಗಳಿಂದ ಮಾನಸಿಕವಾಗಿ ನೋವುಂಟಾಗುತ್ತಿದೆ. ಆದರೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಬಿಎಸ್​ವೈ ಅವರು ಕಾರಣ ಎಂದರು.

ಸಿಎಂ ಸ್ಥಾನದಿಂದ BSY ಕೆಳಗಿಳಿಸಲು ಹುನ್ನಾರ ನಡೆಯುತ್ತಿದೆ. ಸಿಎಂ ಯಡಿಯೂರಪ್ಪಗೆ ವಯಸ್ಸಾಗಿದೆ, ನಡೆಯಲು ಆಗಲ್ಲ. ಕಿವಿ ಕೇಳಿಸುವುದಿಲ್ಲ, ಉಸಿರಾಡಲು ಆಗಲ್ಲವೆಂದು ಅಪಪ್ರಚಾರ ನಡೆದಿದೆ. ಕರುಣಾನಿಧಿ ವ್ಹೀಲ್​ಚೇರ್​ನಲ್ಲಿ ಕುಳಿತು ಆಡಳಿತ ಮಾಡಿಲ್ವೇ? ನಮ್ಮ ಯಡಿಯೂರಪ್ಪಗೆ ಅಷ್ಟೊಂದು ವಯಸ್ಸಾಗಿದೆಯೇ? ಬಿಎಸ್‌ವೈ ಅಧಿಕಾರ ಪೂರ್ಣಗೊಳಿಸುವವರೆಗೆ ಅಡ್ಡಿಪಡಿಸಬಾರದು ಎಂದರು.

 ಯಡಿಯೂರಪ್ಪ ಕರ್ನಾಟಕದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದವರು. ಅಂಥವರನ್ನು ತುಳಿಯಲು, ಮೂಲೆಗುಂಪು ಮಾಡಲು ಪಿತೂರಿ ನಡೆದಿದೆ ಎಂದು ಮಠಾಧೀಶರು ಆರೋಪಿಸಿದರು.

ಸುದ್ದಿಗೋಷ್ಟಿಯಲ್ಲಿ ಜಂಗಮ ಮಠದ ಸಿದ್ದಲಿಂಗ ಮಹಾಸ್ವಾಮೀಜಿ, ಅಭಿನವ ಮಲ್ಲಿಕಾರ್ಜುನ ಸ್ವಾಮೀಜಿಗಳು, ಬೆಳ್ಳಾವಿ ಕಾರದ ವೀರಬಸವ ಮಹಾಸ್ವಾಮಿಗಳು, ವಿರಕ್ತಮಠದ ಶಶಿಶೇಖರ ಬಸವ ಮಹಾಸ್ವಾಮಿಗಳು, ಕುಣಿಗಲ್ ಮಠದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಗಳು, ಹೊನ್ನವಳ್ಳಿ ಮಠದ ಶಿವಪ್ರಕಾಶ ಶಿವಾಚಾರ್ಯ ಮಹಾಸ್ವಾಮೀಜಿಗಳು ಹಾಜರಿದ್ದರು.