ಬೆಂಗಳೂರು[ಫೆ.11]: ನೀರಿನ ಅಭಾವ ನೀಗಿಸುವ ಸಲುವಾಗಿ ದೇಶದ 40 ನದಿಗಳು ಹಾಗೂ ಅವುಗಳ ಉಪನದಿಗಳ ಪುನಶ್ಚೇತನ ಮತ್ತು ಬರಪೀಡಿತ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟಹೆಚ್ಚಿಸುವ ಕೆಲಸ ಮಾಡುತ್ತಿರುವ ಆರ್ಟ್‌ ಆಫ್‌ ಲಿವಿಂಗ್‌ ಸಂಸ್ಥೆ ‘ಲಿಮ್ಕಾ ಬುಕ್‌ ಆಫ್‌ ರೆಕಾರ್ಡ್ಸ್-2019’ ಸೇರಿದೆ.

ಆರ್ಟ್‌ ಆಫ್‌ ಲಿವಿಂಗ್‌ ಸಂಸ್ಥಾಪಕರಾದ ರವಿಶಂಕರ್‌ ಗುರೂಜಿ ಅವರ ನೇತೃತ್ವದಲ್ಲಿ 2013ರಲ್ಲಿ ನದಿ ಪುನಶ್ಚೇತನ ಯೋಜನೆ ಆರಂಭಿಸಿದ್ದು, ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ ಮತ್ತು ಒಡಿಶಾ ಸೇರಿ ನಾಲ್ಕು ರಾಜ್ಯಗಳ 40 ನದಿಗಳು, ಹೊಳೆಗಳು, 26 ಕೆರೆಗಳು ಮತ್ತು ಒಂಬತ್ತು ಜಲಾನಯನ ಪ್ರದೇಶಗಳನ್ನು ಪುನಶ್ಚೇತನಗೊಳಿಸುವ ಕಾರ್ಯವನ್ನು ಕೈಗೊಂಡಿದೆ. ಈವರೆಗೆ 5,055 ಹಳ್ಳಿಗಳ 49.9 ಲಕ್ಷ ಜನರಿಗೆ ಇದರ ಲಾಭ ತಲುಪಿದೆ ಎಂದು ಆರ್ಟ್‌ ಆಫ್‌ ಲಿವಿಂಗ್‌ ತಿಳಿಸಿದೆ.

‘ವೈಯಕ್ತಿಕ ಪರಿವರ್ತನೆಯಿಂದ ಸಾಮಾಜಿಕ ಪರಿವರ್ತನೆ’ ಎಂಬ ತತ್ವದ ಆಧಾರದ ಮೇಲೆ ಈ ಯೋಜನೆ ರೂಪಿಸಲಾಗಿದೆ. ಸ್ಥಳೀಯ ಸಂಸ್ಥೆಗಳು, ಪಾಲಿಕೆಗಳು, ಸರ್ಕಾರದೊಂದಿಗೆ ಚರ್ಚಿಸಿ ನದಿ ಪುನಶ್ಚೇತನ ಕಾರ್ಯ ಕೈಗೊಳ್ಳಲಾಗಿದೆ. ನದಿ ಪುನಶ್ಚೇತನ ಯೋಜನೆ ಅನುಷ್ಠಾನದಿಂದಾಗಿ ಪರಿಸರ, ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿ ಮೇಲೂ ಧನಾತ್ಮಕ ಪರಿಣಾಮ ಉಂಟಾಗಿದೆ.

ಯೋಜನೆಗೆ ಆಯ್ಕೆ ಮಾಡಿಕೊಳ್ಳುವ ಸ್ಥಳಗಳನ್ನು ಭೂ ವಿಜ್ಞಾನಿಗಳು ಮತ್ತು ಪರಿಸರ ವಿಜ್ಞಾನಿಗಳು ಜಲ ವಿಜ್ಞಾನ ತಂತ್ರಜ್ಞಾನ ಮತ್ತು ರಿಮೋಟ್‌ ಸೆನ್ಸಿಂಗ್‌ ತಂತ್ರಜ್ಞಾನದ ಮೂಲಕ ವೈಜ್ಞಾನಿಕ ಸಮೀಕ್ಷೆ ನಡೆಸಲಾಗುತ್ತದೆ. ಆರ್ಟ್‌ ಆಫ್‌ ಲಿವಿಂಗ್‌ನ ಸ್ವಯಂ ಸೇವಕರು ಐದು ಸಾವಿರ ಸ್ಥಳೀಯರ ಸಹಾಯದಿಂದ ಅಂತರ್ಜಲ ಮರುಪೂರಣ ಕಟ್ಟಡಗಳನ್ನು ನಿರ್ಮಿಸಿದ್ದಾರೆ. ದೀರ್ಘಕಾಲಿಕ ಯೋಜನೆಗಳಿಗಾಗಿ ಗಿಡಗಳನ್ನು ನೆಡುವ ಮತ್ತು ವಾತಾವರಣಕ್ಕೆ ಅನುಗುಣವಾಗಿ ಬೆಳೆಗಳನ್ನು ಬೆಳೆಯುವ ಕ್ರಮಗಳನ್ನು ಬದಲಿಸುವ ನಿರ್ಧಾರಗಳನ್ನು ಕೈಗೊಂಡಿರುವುದರಿಂದ ನದಿಗಳ ಪುನಶ್ಚೇತನ ಸಾಧ್ಯವಾಗಿದೆ ಎಂದು ತಿಳಿಸಿದೆ.

ಯೋಜನೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿರುವ ಮಹಾರಾಷ್ಟ್ರ ರಾಜ್ಯದ ಸತಾರಾ ಜಿಲ್ಲಾಧಿಕಾರಿ ಶ್ವೇತಾ ಸಿಂಘಾಲ್‌, ಆರ್ಟ್‌ ಆಫ್‌ ಲಿವಿಂಗ್‌ ಯೋಜನೆ ರೂಪಿಸಿರುವ ಕಡೆ ಘರ್ಷಣೆಗಳು ಕಡಿಮೆಯಾಗಿವೆ. ಜನರು ಒಗ್ಗಟ್ಟಾಗಿ ಯೋಜನೆಗಾಗಿ ಕೆಲಸ ಮಾಡುತ್ತಿದ್ದಾರೆ. ಸತಾರಾದಲ್ಲಿ ಕೈಗೊಂಡಿರುವ ಯೋಜನೆಯಿಂದಾಗಿ ಟ್ಯಾಂಕರ್‌ ನೀರಿನ ಅವಲಂಬನೆಯನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಅಂತರ್ಜಲ ಮಟ್ಟಇತರೆ ಪ್ರದೇಶಗಳಿಗಿಂತಲೂ ಶೇ.20ರಷ್ಟುಹೆಚ್ಚಳವಾಗಿದೆ ಎಂದು ತಿಳಿಸಿದ್ದಾರೆ.