ನಿವೇದನ್ ನೆಂಪೆಯಿಂದ ಅಡಕೆಯಿಂದ ಸ್ಯಾನಿಟೈಸರ್ ತಯಾರಿಕೆ
ಈಗಾಗಲೇ ಅಡಕೆಯಿಂದ ಟೀ, ಫಮ್ರ್ಯೂಮ್,ಜ್ಯೂಸ್ ಇತ್ಯಾದಿ ತಯಾರಿಸಿರುವ ನಿವೇದನ್ ಇದೀಗ ಅಡಕೆಯಿಂದ ಸ್ಯಾನಿಟೈಸರ್ ತಯಾರಿಕೆಗೆ ಮುಂದಾಗಿದ್ದಾರೆ. ಅಡಕೆಯಲ್ಲಿರುವ ಆ್ಯಂಟಿ ಮೈಕ್ರೋಬಿಯಲ್ ಪದಾರ್ಥ ತೆಗೆದು ಸ್ಯಾನಿಟೈಸರ್ ತಯಾರು ಮಾಡಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಶಿವಮೊಗ್ಗ(ಜೂ.20): ಅಡಕೆ ಟೀ ಮೂಲಕ ಅಡಕೆಗೆ ಮಾನ ಒದಗಿಸಿದ ನೆಂಪೆ ನಿವೇದನ್ ಅವರು ಇದೀಗ ಅಡಕೆಯಿಂದ ಸ್ಯಾನಿಟೈಸರ್ ತಯಾರಿಸಿದ್ದು, ಕೊರೋನಾ ವೈರಾಣುವಿಗೆ ಅಡಕೆಯನ್ನೇ ಮಾಸ್ಕ್ ಮಾಡುವ ಪ್ರಯತ್ನದಲ್ಲಿ ಮುನ್ನಡಿಯಿಟ್ಟಿದ್ದಾರೆ.
ಅಡಕೆಯಲ್ಲಿ ಕ್ಯಾನ್ಸರ್‌ಕಾರಕ ಅಂಶವಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ನಿರಪೇಕ್ಷಣಾ ಪತ್ರ ನೀಡಿದೆ ಎಂಬ ಸುದ್ದಿಯ ಬೆನ್ನಲ್ಲೇ ಅಡಕೆ ಬೆಳೆಗಾರರಲ್ಲಿ ಆತಂಕ ಶುರುವಾಗಿತ್ತು. ಇದರ ಬೆನ್ನಲ್ಲೇ ಅ ಡಕೆ ಬೆಳೆಗಾರರಲ್ಲಿ ಮತ್ತೆ ಆತ್ಮ ವಿಶ್ವಾಸ ತುಂಬುವಲ್ಲಿ ಈ ಯುವ ಉದ್ಯಮಿ ನೆಂಪೆ ನಿವೇದನ್ ಪ್ರಯತ್ನ ಆರಂಭಿಸಿದ್ದಾರೆ. ಅಡಕೆಯಿಂದ ಇನ್ನೊಂದು ಹೊಸ ಉತ್ಪನ್ನ ಕಂಡುಕೊಂಡು ಮಾರುಕಟ್ಟೆಗೆ ಅದನ್ನು ಪರಿಚಯಿಸುವ ಯತ್ನದಲ್ಲಿದ್ದಾರೆ.
ಕೊರೋನಾ ಹಿನ್ನೆಲೆ ಮಾಸ್ಕ್ ಮತ್ತು ಸ್ಯಾನಿಟೈಸರ್‌ಗೆ ಬೇಡಿಕೆ ಹೆಚ್ಚಾಗಿದೆ. ಈ ಅವಕಾಶ ಬಳಸಿಕೊಂಡು ಅಡಕೆ ಇನ್ನಷ್ಟು ಮಾನ ತುಂಬುವ ಪ್ರಯತ್ನದಲ್ಲಿ ನಿವೇದನ್ ಇದ್ದಂತೆ ಕಾಣುತ್ತಿದೆ. ಪ್ರತಿ ಸಂದರ್ಭದಲ್ಲಿಯೂ ಅಡಕೆ ಪರವಾಗಿ ತಮ್ಮ ಸಂಶೋಧನೆ ಮುನ್ನಡೆಸುವ ನಿವೇದನ್ ಇದೀಗ ಕೊರೋನಾ ಪರಿಸ್ಥಿತಿಯನ್ನು ಅಡಕೆಗೆ ಪೂರಕವಾಗಿ ಬಳಸಿಕೊಳ್ಳಲು ನಿರ್ಧರಿಸಿದಂತೆ ಕಾಣುತ್ತಿದೆ.
ಈಗಾಗಲೇ ಅಡಕೆಯಿಂದ ಟೀ, ಫಮ್ರ್ಯೂಮ್,ಜ್ಯೂಸ್ ಇತ್ಯಾದಿ ತಯಾರಿಸಿರುವ ನಿವೇದನ್ ಇದೀಗ ಅಡಕೆಯಿಂದ ಸ್ಯಾನಿಟೈಸರ್ ತಯಾರಿಕೆಗೆ ಮುಂದಾಗಿದ್ದಾರೆ. ಅಡಕೆಯಲ್ಲಿರುವ ಆ್ಯಂಟಿ ಮೈಕ್ರೋಬಿಯಲ್ ಪದಾರ್ಥ ತೆಗೆದು ಸ್ಯಾನಿಟೈಸರ್ ತಯಾರು ಮಾಡಲಾಗಿದೆ. ಇದರಲ್ಲಿ ಗ್ಯಾಲಿಕ್ ಆ್ಯಸಿಡ್, ಟ್ಯಾನಿಚ್ ಸೇರಿದಂತೆ ಇತರೆ ಅಂಶಗಳನ್ನು ಬಳಸಿಕೊಳ್ಳಲಾಗಿದೆ. ಇವುಗಳ ಮೇಲೆ ಸಂಶೋಧನೆ ನಡೆಸಿದ ನಿವೇದನ್ ಈಗ ಹ್ಯಾಂಡ್ ಸ್ಯಾನಿಟೈಸರ್ ತಯಾರಿಸಿದ್ದಾರೆ.
ಬೆಂಗಳೂರಿನಲ್ಲಿ ಜೋರಾಯ್ತು ಕೊರೋನಾ ಮರಣಮೃದಂಗ..!
ಸರ್ಕಾರ ನಿಗದಿಪಡಿಸಿದಂತೆ ಇದಕ್ಕೆ ಶೇ. 70 ರಷ್ಟು ಆಲ್ಕೋಹಾಲಿಕ್ ಅಂಶವನ್ನೂ ಬಳಕೆ ಮಾಡಿದ್ದಾರೆ. ಅಡಕೆಯಲ್ಲಿ ಆ್ಯಂಟಿ ವೈರಲ್ ಪ್ರಾಪರ್ಟಿ ಇದೆ. ಅದನ್ನು ಬಳಸಿಕೊಳ್ಳಲಾಗಿದೆ. ಆದರೆ ಯಾವುದೇ ಸಿಂಥೆಟಿಕ್ ಬಳಸಿಲ್ಲ. ಬದಲಾಗಿ ಸಂಪೂರ್ಣವಾಗಿ ನೈಸರ್ಗಿಕ ವಸ್ತುಗಳನ್ನೇ ಬಳಕೆ ಮಾಡಿದ್ದು, ಪರಿಮಳಕ್ಕಾಗಿ ಬರಲು ಕಿತ್ತಳೆ ಆಯಿಲ್ ಬಳಸಲಾಗಿದೆ ಎನ್ನುತ್ತಾರೆ ನಿವೇದನ್.