Asianet Suvarna News Asianet Suvarna News

ಅಡಕೆ ರೈತರಿಗೆ ಗುಡ್ ನ್ಯೂಸ್ : ಸಿಎಂ ಯಡಿಯೂರಪ್ಪ

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅಡಕೆ ಬೆಳೆಗಾರರಿಗೆ ಭರವಸೆ ನೀಡಿದ್ದಾರೆ. ಅವರನ್ನು ಭೇಟಿಯಾ ನಿಯೋಗದೊಂದಿಗೆ ಈ ಬಗ್ಗೆ ಚರ್ಚಿಸಿದ್ದಾರೆ

Araga Jnanendra Meets CM Bs Yediyurappa Over Arecanut Issues snr
Author
Bengaluru, First Published Oct 15, 2020, 7:51 AM IST

ಬೆಂಗಳೂರು (ಅ.15):  ಅಡಕೆ ಬೆಳೆಗಾರರ ಹಿತರಕ್ಷಣೆಗೆ ರಾಜ್ಯ ಸರ್ಕಾರ ಬದ್ಧವಾಗಿದೆ. ಸ್ವತಃ ಅಡಕೆ ಬೆಳೆಗಾರನಾದ ನನಗೆ ಬೆಳೆಗಾರರ ಸಂಕಷ್ಟಗೊತ್ತು. ಎಂತಹ ಸಂದರ್ಭದಲ್ಲೂ ಬೆಳೆಗಾರರಿಗೆ ತೊಂದರೆಯಾಗದಂತೆ ಸರ್ಕಾರ ಎಚ್ಚರಿಕೆ ವಹಿಸಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಭರವಸೆ ನೀಡಿದ್ದಾರೆ.

ಬುಧವಾರ ಗೃಹ ಕಚೇರಿ ಕೃಷ್ಣಾದಲ್ಲಿ ತಮ್ಮನ್ನು ಭೇಟಿ ಮಾಡಿದ ಅಡಕೆ ಕಾರ್ಯಪಡೆ ಅಧ್ಯಕ್ಷ ಆರಗ ಜ್ಞಾನೇಂದ್ರ ಅವರ ನೇತೃತ್ವದ ನಿಯೋಗಕ್ಕೆ ಮುಖ್ಯಮಂತ್ರಿ ಈ ಭರವಸೆ ನೀಡಿದರು. ಇದೇ ವೇಳೆ ಬೆಳೆಗಾರರ ಹಿತರಕ್ಷಣೆಗೆ ಆಯವ್ಯಯದಲ್ಲಿ ಪ್ರಕಟಿಸಿರುವ 10 ಕೋಟಿ ರು. ಅನುದಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ನಿರ್ದೇಶಿಸಿದರು.

ಪಾನ್‌ ಮಸಾಲಾ ಬ್ಯಾನ್‌ : ಅಡಕೆ ಬೆಳೆಗಾರರಿಗೆ ಕಾದಿದ್ಯಾ ಆಘಾತ ...

ಶಾಸಕ ಹಾಗೂ ಅಡಕೆ ಕಾರ್ಯಪಡೆ ಅಧ್ಯಕ್ಷ ಆರಗ ಜ್ಞಾನೇಂದ್ರ ಮಾತನಾಡಿ, ಅಡಕೆ ಆರೋಗ್ಯಕ್ಕೆ ಹಾನಿಕಾರಕವಲ್ಲ ಎಂಬ ಅಂಶದ ಕುರಿತು ಸಂಶೋಧನೆ ನಡೆದಿದೆ. ಗುಟ್ಕಾವನ್ನು ತಂಬಾಕು ಹಾಗೂ ಅಡಕೆ ಸೇರಿಸಿ ಮಾಡಲಾಗುತ್ತದೆ. ಇದರಿಂದ ಸ್ವಲ್ಪ ಸಮಸ್ಯೆಯಾಗಬಹುದು. ಆದರೆ ಅಡಕೆಯಿಂದ ಯಾವುದೇ ಸಮಸ್ಯೆಯಿಲ್ಲ. ಈ ಕುರಿತು ಸಂಶೋಧನಾ ವರದಿ ಬಿಡುಗಡೆವರೆಗೆ ಸುಪ್ರೀಂಕೋರ್ಟ್‌ನಲ್ಲಿ ಬಾಕಿ ಉಳಿದಿರುವ ಅರ್ಜಿ ವಿಚಾರಣೆ ಆಧರಿಸಿ ಆದೇಶ ಹೊರಡಿಸಬಾರದು ಎಂಬ ರಾಜ್ಯದ ನಿಲುವನ್ನು ವಕೀಲರ ಮೂಲಕ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವಂತೆ ಮನವಿ ಮಾಡಿದರು.

ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ, ಗುಟ್ಕಾ ರದ್ದಿನ ನೆಪದಲ್ಲಿ ಅಡಕೆ ವಹಿವಾಟಿಗೆ ತೊಂದರೆಯಾಗದಂತೆ ಕ್ರಮ ವಹಿಸಲಾಗುವುದು. ಈ ಕುರಿತು ಸುಳ್ಳು ಸುದ್ದಿಗಳನ್ನು ನಂಬಬೇಡಿ. ಸರ್ಕಾರ ಸದಾ ಅಡಕೆ ಬೆಳೆಗಾರರ ಪರವಾಗಿದೆ ಎಂದು ತಿಳಿಸಿದರು.

ಜತೆಗೆ, ನಿಯೋಗದ ಬೇಡಿಕೆಯಂತೆ ಅಡಕೆ ಕಾರ್ಯಪಡೆ ಕಾರ್ಯನಿರ್ವಹಣೆಗೆ ಅನುಕೂಲವಾಗುವಂತೆ ಅಗತ್ಯ ಮೂಲಸೌಕರ್ಯ ಒಳಗೊಂಡ ಕಚೇರಿ ಒದಗಿಸಬೇಕು. ಅಡಕೆ ಸಂಶೋಧನೆ ಮಾಡುತ್ತಿರುವ ರಾಮಯ್ಯ ವಿವಿಗೆ ಹಾಗೂ ಇತರ ಕಾರ್ಯಕ್ಕೆ ಎರಡು ಕೋಟಿ ರು. ಬಿಡುಗಡೆಗೊಳಿಸಬೇಕು. ಬೆಳೆಗಾರರ ಹಿತರಕ್ಷಣೆಗೆ ಆಯವ್ಯಯದಲ್ಲಿ ಪ್ರಕಟಿಸಿರುವ 10 ಕೋಟಿ ರು. ಅನುದಾನ ಬಿಡುಗಡೆ ಮಾಡಬೇಕು ಎಂದು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ನಿರ್ದೇಶಿಸಿದರು.

ಅಡಕೆ ಕಾರ್ಯಪಡೆ ನಿಯೋಗದಲ್ಲಿ ಶಾಸಕ ಎಚ್‌.ಹಾಲಪ್ಪ, ಕಾರ್ಯಪಡೆ ಉಪಾಧ್ಯಕ್ಷ ಎಚ್‌.ಎಸ್‌. ಶಿವಕುಮಾರ್‌, ಸದಸ್ಯ ಹರಿಪ್ರಕಾಶ್‌ ಕೋಣೆಮನೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪಶ್ಚಿಮ ಘಟ್ಟವರದಿ ಬಗ್ಗೆಯೂ ಚರ್ಚೆ

ಕಸ್ತೂರಿ ರಂಗನ್‌ ವರದಿ ಮಲೆನಾಡಿಗರಿಗೆ ತೂಗುಗತ್ತಿಯಾಗಿದೆ. ಈ ವರದಿ ಜಾರಿಯಿಂದ ತೀರ್ಥಹಳ್ಳಿಯಲ್ಲಿ 146 ಗ್ರಾಮಗಳು, ಸಾಗರ ತಾಲೂಕಿನಲ್ಲಿ 134 ಹಳ್ಳಿಗಳು, ಹೊಸನಗರದ 126 ಹಳ್ಳಿಗಳು ಪಶ್ಚಿಮ ಘಟ್ಟದ ವ್ಯಾಪ್ತಿಗೆ ಒಳಪಡಲಿವೆ. ಇಷ್ಟುಗ್ರಾಮಗಳು ಸೇರಿದರೆ ಇಡೀ ತಾಲೂಕುಗಳೇ ನಿಷೇಧಿತ ಪ್ರದೇಶವಾಗಲಿವೆ. ಆದ್ದರಿಂದ ಈ ಕುರಿತು ಶೀಘ್ರದಲ್ಲೇ ಕೇಂದ್ರ ಸಚಿವರ ಜತೆ ಚರ್ಚೆ ಮಾಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ ಎಂದು ಶಾಸಕ ಆರಗ ಜ್ಞಾನೇಂದ್ರ ತಿಳಿಸಿದರು.

Follow Us:
Download App:
  • android
  • ios