ಕೊಡಗು ಜಿಲ್ಲೆಯ ಕಾಫಿ ಬೆಳೆಗಾರರಿಗೆ 10 ಹೆಚ್ಪಿ ವರೆಗಿನ ಮೋಟಾರ್‌ಗಳಿಗೆ ಉಚಿತ ವಿದ್ಯುತ್ ನೀಡುವ ಸರ್ಕಾರದ ಯೋಜನೆ ಫ್ರೂಟ್ ತಂತ್ರಾಂಶದ ತೊಂದರೆಯಿಂದಾಗಿ ಸ್ಥಗಿತಗೊಂಡಿದೆ. ಆರ್.ಟಿ.ಸಿಗಳಲ್ಲಿ ಕಾಫಿ ಬೆಳೆ ಎಂದು ನಮೂದಾಗಿಲ್ಲದ ಕಾರಣ, ಸಾವಿರಾರು ರೈತರು ಯೋಜನೆಯ ಲಾಭ ಪಡೆಯಲು ಸಾಧ್ಯವಾಗುತ್ತಿಲ್ಲ.
ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಫೆ.8) : ಕೊಡಗು ಜಿಲ್ಲೆಯ ಸಾವಿರಾರು ರೈತರ ಹಲವು ವರ್ಷಗಳ ನಿರಂತರ ಹೋರಾಟದ ಫಲವಾಗಿ ಕೊನೆಗೂ ಅಲ್ಲಿನ 10 ಹೆಚ್ಪಿ ವರೆಗಿನ ಮೋಟಾರ್ ಬಳಸುವ ಕಾಫಿ ಬೆಳೆಗಾರರಿಗೆ ಉಚಿತ ವಿದ್ಯುತ್ ನೀಡಲು ಸರ್ಕಾರ ನಿರ್ಧರಿಸಿದೆ. ಆದರೆ ಫ್ರೂಟ್ ತಂತ್ರಾಂಶದಲ್ಲಿ ಆಗಿರುವ ತೊಂದರೆಯಿಂದ ಕೊಡಗಿನ ಸಾವಿರಾರು ರೈತರಿಗೆ ಇಂದಿಗೂ ಉಚಿತ ವಿದ್ಯುತ್ ಪಡೆಯಲು ಸಾಧ್ಯವಾಗುತ್ತಿಲ್ಲ.
ಹೌದು ಕೊಡಗು ಜಿಲ್ಲೆಯಲ್ಲಿ ಐದು ಸಾವಿರಕ್ಕೂ ಹೆಚ್ಚೂ ಕಾಫಿ ಬೆಳೆಗಾರರು 10 ಹೆಚ್.ಪಿ. ವರೆಗಿನ ಮೋಟಾರ್ಗಳನ್ನು ಬಳಸುವವರಿದ್ದಾರೆ. ಅವರೆಲ್ಲರೂ ಕಳೆದ ಹಲವು ವರ್ಷಗಳಿಂದಲೂ ಇತರೆ ಜಿಲ್ಲೆಗಳಲ್ಲಿ 10 ಹೆಚ್.ಪಿ. ವರೆಗಿನ ಮೋಟರ್ ಬಳಸುತ್ತಿರುವ ರೈತರಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಆದರೆ ಕೊಡಗಿನ ಕಾಫಿ ಬೆಳೆಗಾರರಿಗೆ ಮಾತ್ರ ಕಾಫಿ ವಾಣಿಜ್ಯ ಬೆಳೆಯಾಗಿರುವುದರಿಂದ ಕೊಡಗಿನ ರೈತರಿಗೆ ಉಚಿತ ವಿದ್ಯುತ್ ನೀಡಲು ಸಾಧ್ಯವಿಲ್ಲ ಎಂದು ನಿರಾಕರಿಸಿತ್ತು. ಆದರೆ ರೈತರು ಹಲವು ವರ್ಷಗಳಿಂದ ನಿರಂತರ ಹೋರಾಟ ನಡೆಸಿದ ಫಲವಾಗಿ ಅದಕ್ಕೆ ಮಣಿದಿರುವ ಕಾಂಗ್ರೆಸ್ ಸರ್ಕಾರ ಉಚಿತ ವಿದ್ಯುತ್ ನೀಡಲು ಮುಂದಾಗಿದೆ. ಅದರ ಖುಷಿಯಲ್ಲಿರುವ ಕೊಡಗಿನ ರೈತರು ಸರ್ಕಾರದ ಸೇವಾ ಸಿಂಧು ಫ್ರೂಟ್ ತಂತ್ರಾಂಶದಲ್ಲಿ ತಮ್ಮ ಆರ್ಟಿಸಿ ನೀಡಿ ನೋಂದಾಯಿಸಿಕೊಳ್ಳಬೇಕು. ವಿಪರ್ಯಾಸವೆಂದರೆ ಫ್ರೂಟ್ ತಂತ್ರಾಂಶದಲ್ಲಿ ನೋಂದಾಯಿಸಲು ಮುಂದಾದ ಬಹುತೇಕ ರೈತರಿಗೆ ಆರ್.ಟಿ.ಸಿಗಳು ನೋಂದಣಿಯೇ ಆಗುತ್ತಿಲ್ಲ.
ಇದನ್ನೂ ಓದಿ: ಸಾಲ ವಸೂಲಿಗಾಗಿ ಜನರಿಗೆ ಕಿರುಕುಳ ನೀಡಿದ್ರೆ ಸುಮೊಟೋ ಕೇಸ್: ಜಿಲ್ಲಾಧಿಕಾರಿ ವೆಂಕಟ್ ರಾಜಾ ಸೂಚನೆ
ಕೊಡಗು ಚೆಸ್ಕಾಂ ಇಲಾಖೆ ಇದುವರೆಗೆ 3946 ರೈತರ ಆಧಾರ್ ಕಾರ್ಡ್ ಪಹಣಿ ಸಂಗ್ರಹಿಸಿ ನೋಂದಣಿಗೆ ಮುಂದಾಗಿದೆ. ಆದರೆ ಅದರಲ್ಲಿ 879 ರೈತರಿಗೆ ಮಾತ್ರವೇ ಫ್ರೂಟ್ ತಂತ್ರಾಂಶದಲ್ಲಿ ಪಹಣಿ ಹೊಂದಾಣಿಕೆ ಆಗಿದೆ. ಉಳಿದಂತೆ 3067 ರೈತರ ಆರ್ ಟಿಸಿಗಳು ಫ್ರೂಟ್ ತಂತ್ರಾಂಶದಲ್ಲಿ ಹೊಂದಾಣಿಕೆಯೇ ಆಗುತ್ತಿಲ್ಲ. ಹೌದು ಫ್ರೂಟ್ ತಂತ್ರಾಂಶದಲ್ಲಿ ನೋಂದಾಯಿಸುವಾಗ ಅದರಲ್ಲಿ ಕಾಫಿ ಬೆಳೆ ಎಂದು ನಮೂದಾಗಿರಬೇಕು. ಆದರೆ ರೈತರು ತಮ್ಮ ಆರ್ಟಿಸಿ ಕೊಟ್ಟರೆ ಅದರಲ್ಲಿ ಕಾಳು ಮೆಣಸು ಮತ್ತು ಇತರೆ ಬೆಳೆಗಳನ್ನು ತೋರಿಸುತ್ತಿದೆ. ಇದರಿಂದಾಗಿ ಸರ್ಕಾರ ನೀಡುತ್ತಿರುವ ಉಚಿತ ವಿದ್ಯುತ್ ಯೋಜನೆಯನ್ನು ಪಡೆದುಕೊಳ್ಳಲು ಅನರ್ಹಗೊಳ್ಳುತ್ತಿದ್ದಾರೆ ಎನ್ನುತ್ತಾರೆ ಕೊಡಗು ಚೆಸ್ಕಾ ಕಾರ್ಯಪಾಲಕ ಅಭಿಯಂತರ ರಾಮಚಂದ್ರ.
ಇದನ್ನೂ ಓದಿ: ಗೋ ಶಾಲೆಗೆ ನಯಾಪೈಸೆ ಕೊಡದ ಕಾಂಗ್ರೆಸ್ ಸರ್ಕಾರ, ಮೇವಿಲ್ಲದೆ ಬಡಕಲು ಬಿದ್ದು ನರಳುತ್ತಿವೆ ಗೋವುಗಳು!
ಜಿಲ್ಲೆಯಲ್ಲಿ 5042 ರೈತರು ಉಚಿತ ವಿದ್ಯುತ್ಯೋಜನೆ ಪಡೆಯಲು ಅರ್ಹರಾಗಿದ್ದರೂ ಸರ್ಕಾರದ ಎಡವಟ್ಟಿನಿಂದಾಗಿ ರೈತರು ಯೋಜನೆಯಿಂದ ಹೊರಗೆ ಉಳಿಯುವಂತೆ ಆಗಿದೆ. ಈಗಾಗಲೇ ಕೊಡಗು ಜಿಲ್ಲೆಯಲ್ಲಿ ಕಾಫಿ ಕೊಯ್ಲು ಮುಗಿದ್ದಿದ್ದು, ಇದೀಗ ಕಾಫಿ ಮತ್ತೆ ಮೊಗ್ಗಾಗಿದೆ. ಇದು ಅರಳಿ ಮುಂದಿನ ಬೆಳೆಗೆ ಫಸಲು ಹಿಡಿಯಬೇಕಾದರೆ ಕಾಫಿ ಹೂವನ್ನು ಅರಳಿಸಲೇಬೇಕು. ಅದಕ್ಕೆ ನೀರಿನ ಅಗತ್ಯವಿದೆ. ಆದರೆ ಈಗ ಮಳೆಯೂ ಇಲ್ಲ, ಇತ್ತ 10 ಎಚ್ಪಿ ವರೆಗಿನ ಮೋಟಾರ್ ಬಳಸಿ ನೀರು ಹಾಯಿಸೋಣ ಎಂದರೂ ಅದಕ್ಕೆ ಭಾರೀ ವಿದ್ಯುತ್ ಬಿಲ್ಲು ಬರುತ್ತಿದೆ. 5042 ರೈತರಿಗೆ ಇದುವರೆಗೆ 29.62 ಕೋಟಿ ವಿದ್ಯುತ್ ಶುಲ್ಕ ಬಾಕಿ ಉಳಿದಿದೆ. ಸರ್ಕಾರದ ಯೋಜನೆ ಬಳಸಿಕೊಂಡು ನೀರು ಹಾಯಿಸುವುದಕ್ಕೆ ಫ್ರೂಟ್ ತಂತ್ರಾಂಶದ ತೊಂದರೆಯಿಂದಾಗಿ ಅದೂ ಕೂಡ ಸಾಧ್ಯವಾಗುತ್ತಿಲ್ಲ. ಇದು ಕಂದಾಯ ಇಲಾಖೆಯ ಎಡವಟ್ಟಿನಿಂದಾಗಿ ಆಗುತ್ತಿರುವ ಸಮಸ್ಯೆ ಇದಾಗಿದ್ದು ಇದನ್ನು ಸರಿಪಡಿಸಬೇಕು ಎಂದು ರೈತರು ಆಗ್ರಹಿಸುತ್ತಿದ್ದಾರೆ. ಇಲ್ಲದಿದ್ದರೆ ರೈತರು ಸರ್ಕಾರದ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸುತ್ತಿದ್ದಾರೆ.
