ಆ್ಯಪ್‌ ಆಧಾರಿತ ಸಾರಿಗೆ ಸೇವೆ ನೀಡುವ ಸಂಸ್ಥೆಗಳಿಂದ ಆಟೋ ಮತ್ತು ಟ್ಯಾಕ್ಸಿ ಚಾಲಕರು, ಮಾಲೀಕರ ಮೇಲಾಗುತ್ತಿರುವ ಕಿರುಕುಳ ತಪ್ಪಿಸಲು ಹಾಗೂ ಜನರಿಗೆ ಕಡಿಮೆ ಬೆಲೆಯಲ್ಲಿ ಉತ್ತಮ ಸೇವೆ ದೊರೆಯುವಂತೆ ಮಾಡಲು ಸಾರಿಗೆ ಇಲಾಖೆಯಿಂದಲೇ ಬೆಂಗಳೂರು ನಗರದ ವ್ಯಾಪ್ತಿಯಲ್ಲಿ ಆ್ಯಪ್‌ ಆಧಾರಿತ ಆಟೋ, ಟ್ಯಾಕ್ಸಿ ಸೇವೆ ಆರಂಭಿಸಲು ನಿರ್ಧರಿಸಲಾಗಿದೆ.

ಬೆಂಗಳೂರು (ಆ.5) :  ಆ್ಯಪ್‌ ಆಧಾರಿತ ಸಾರಿಗೆ ಸೇವೆ ನೀಡುವ ಸಂಸ್ಥೆಗಳಿಂದ ಆಟೋ ಮತ್ತು ಟ್ಯಾಕ್ಸಿ ಚಾಲಕರು, ಮಾಲೀಕರ ಮೇಲಾಗುತ್ತಿರುವ ಕಿರುಕುಳ ತಪ್ಪಿಸಲು ಹಾಗೂ ಜನರಿಗೆ ಕಡಿಮೆ ಬೆಲೆಯಲ್ಲಿ ಉತ್ತಮ ಸೇವೆ ದೊರೆಯುವಂತೆ ಮಾಡಲು ಸಾರಿಗೆ ಇಲಾಖೆಯಿಂದಲೇ ಬೆಂಗಳೂರು ನಗರದ ವ್ಯಾಪ್ತಿಯಲ್ಲಿ ಆ್ಯಪ್‌ ಆಧಾರಿತ ಆಟೋ, ಟ್ಯಾಕ್ಸಿ ಸೇವೆ ಆರಂಭಿಸಲು ನಿರ್ಧರಿಸಲಾಗಿದೆ.

ಓಲಾ, ಉಬರ್‌ ಸೇರಿದಂತೆ ಆ್ಯಪ್‌ ಆಧಾರಿತ ಸಾರಿಗೆ ಸೇವೆ ನೀಡುವ ಸಂಸ್ಥೆಗಳು ಆಟೋ ಮತ್ತು ಟ್ಯಾಕ್ಸಿ ಚಾಲಕರನ್ನು ಶೋಷಿಸುತ್ತಿವೆ. ಜತೆಗೆ ಪ್ರಯಾಣಿಕರಿಂದ ಹೆಚ್ಚಿನ ಹಣ ಸುಲಿಗೆ ಮಾಡುತ್ತಿವೆ. ಇದಕ್ಕೆ ಪರಿಹಾರ ನೀಡುವಂತೆ ಸಾರಿಗೆ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ಸಂಘಟನೆಗಳು ಸಾರಿಗೆ ಇಲಾಖೆಗೆ ಮನವಿ ಮಾಡಿದ್ದವು. ಕಳೆದ ವಾರ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ ಸಾರಿಗೆ ಸಂಘಟನೆಗಳ ಸಭೆಯಲ್ಲೂ ಈ ಕುರಿತು ಪ್ರಸ್ತಾಪಿಸಲಾಗಿತ್ತು. ಅದಕ್ಕಾಗಿ ಸಾರಿಗೆ ಇಲಾಖೆಯಿಂದಲೇ ಆ್ಯಪ್‌ ಅಭಿವೃದ್ಧಿಪಡಿಸಿ ಬೆಂಗಳೂರಿನಲ್ಲಿ ಸಾರಿಗೆ ಸೇವೆ ನೀಡುವ ಬಗ್ಗೆ ಚಿಂತನೆ ನಡೆಸಲಾಗಿತ್ತು.

ಶಕ್ತಿ ಯೋಜನೆ ವಿರೋಧಿಸಿ ಜು.27ರಂದು ಆಟೋ, ಟ್ಯಾಕ್ಸಿ, ಖಾಸಗಿ ಬಸ್ ಮಾಲೀಕರ ಮುಷ್ಕರ: ಜಂಟಿ ಸಭೆಗೆ ಸಚಿವರಿಂದ ಆಹ್ವಾನ

ಇದೀಗ ಅದು ಕಾರ್ಯರೂಪಕ್ಕೆ ಬರುತ್ತಿದ್ದು, ಶೀಘ್ರದಲ್ಲಿ ಆ್ಯಪ್‌ ಅಭಿವೃದ್ಧಿ ಮಾಡುವ ಸಂಸ್ಥೆಯನ್ನು ಗುರುತಿಸಿ ಜವಾಬ್ದಾರಿ ವಹಿಸಲಾಗುತ್ತಿದೆ. ಈ ಕುರಿತಂತೆ ಶುಕ್ರವಾರ ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳ ಸಚಿವ ರಾಮಲಿಂಗಾರೆಡ್ಡಿ ಸಭೆ ನಡೆಸಿದ್ದು, ಆ್ಯಪ್‌ ಅಭಿವೃದ್ಧಿ, ಅದರ ನಿರ್ವಹಣೆ, ಆಟೋ, ಟ್ಯಾಕ್ಸಿ ಚಾಲಕರಿಗೆ ಅದರಿಂದಾಗುವ ನೆರವಿನ ಬಗ್ಗೆ ಸಮಗ್ರವಾಗಿ ಚರ್ಚೆ ನಡೆಸಿದ್ದಾರೆ. ಅಲ್ಲದೆ, ಈ ವರ್ಷದ ಅಂತ್ಯದೊಳಗೆ ಆ್ಯಪ್‌ ಸಿದ್ಧಗೊಂಡು ಸೇವೆಗೆ ನೀಡಬೇಕು ಎಂದೂ ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಚಾಲಕರ, ಪ್ರಯಾಣಿಕರ ಹಿತದೃಷ್ಟಿ: ಸಾರಿಗೆ ಇಲಾಖೆ ರೂಪಿಸಿರುವ ಯೋಜನೆಯಂತೆ ಓಲಾ, ಉಬರ್‌ ಮಾದರಿಯಲ್ಲಿಯೇ ಆ್ಯಪ್‌ ಸಿದ್ಧಪಡಿಸಲಾಗುತ್ತದೆ. ನಂತರ ಆ ಆ್ಯಪ್‌ಗೆ ಟ್ಯಾಕ್ಸಿ, ಕ್ಯಾಬ್‌ ಚಾಲಕರು ನೋಂದಣಿ ಮಾಡಿಕೊಳ್ಳಬೇಕಿದೆ. ಆ್ಯಪ್‌ ಕಾರ್ಯ ಆರಂಭವಾದ ನಂತರ ಪ್ರಯಾಣಿಕರು ತಮ್ಮ ಮೊಬೈಲ್‌ನಲ್ಲಿ ಆ್ಯಪ್‌ ಮೂಲಕ ಆಟೋ ಅಥವಾ ಟ್ಯಾಕ್ಸಿಯನ್ನು ಬುಕ್‌ ಮಾಡಿಕೊಳ್ಳಬಹುದು. ಆ ಪ್ರಯಾಣಿಕರ ಸಮೀಪದಲ್ಲಿರುವ ಆಟೋ ಅಥವಾ ಕ್ಯಾಬ್‌ ಚಾಲಕರಿಗೆ ಅದರ ಬಗ್ಗೆ ಸಂದೇಶ ಹೋಗಲಿದ್ದು, ಅವರು ಅದನ್ನಾಧರಿಸಿ ಪ್ರಯಾಣಿಕರಿಗೆ ಸೇವೆ ನೀಡಬಹುದಾಗಿದೆ.

ದೇಶದಲ್ಲಿಯೇ ಅತ್ಯಧಿಕ ವಿಮೆ ಕೊಟ್ಟ ಕೆಎಸ್‌ಆರ್‌ಟಿಸಿ: ಮೃತರ ಕುಟುಂಬಕ್ಕೆ 1 ಕೋಟಿ ರೂ. ಚೆಕ್‌