ಬೆಂಗಳೂರು (ಸೆ.24): ಕೃಷಿ ಉತ್ಪನ್ನ ಮಾರುಕಟ್ಟೆಸಮಿತಿ (ಎಪಿಎಂಸಿ) ಕಾಯ್ದೆ ಬಗ್ಗೆ ರೈತರ ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಹೇಳಿದ್ದಾರೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಿದ್ದುಪಡಿಯಲ್ಲಿ ರೈತರಿಗೆ ಮಾರಕವಾಗುವ ಯಾವುದೇ ಅಂಶಗಳಿಲ್ಲ. ಬದಲಿಗೆ ರೈತರಿಗೆ ಅನುಕೂಲಕರವಾಗಿರುವ ಅಂಶಗಳಿವೆ. ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿರುವ ಕೇಂದ್ರ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ರೈತರು ತಿದ್ದುಪಡಿ ಕಾಯ್ದೆಯಲ್ಲಿನ ಅಂಶಗಳ ಬಗ್ಗೆ ಅರಿತುಕೊಳ್ಳಬೇಕು. ಎಪಿಎಂಸಿ ಒಳಗೆ ವ್ಯಾಪಾರಕ್ಕೆ ಏನೆಲ್ಲ ಸೌಲಭ್ಯ ಅಗತ್ಯವಿದೆಯೋ ಅದನ್ನೆಲ್ಲಾ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ತಿಳಿಸಿದರು.

ರಾಜ್ಯ ವಿಧಾನಮಂಡಲ ಸದನದಲ್ಲಿ ಎಲ್ಲರ ಗಮನಸೆಳೆದ ಕಾಂಗ್ರೆಸ್ ಶಾಸಕನ ಮಾಸ್ಕ್..! ..

ಸುಮಾರು 50ಕ್ಕೂ ಹೆಚ್ಚು ಬಹು ರಾಷ್ಟ್ರೀಯ ಕಂಪನಿಗಳಿಗೆ ಕೃಷಿ ಉತ್ಪನ್ನ ಮಾರಾಟಕ್ಕೆ ಹಿಂದಿನ ಸರ್ಕಾರವೇ ಅನುಮತಿ ನೀಡಿತ್ತು. ಅದರಿಂದ ರೈತರಿಗೆ ಯಾವುದೇ ಸಮಸ್ಯೆಯಾಗಿಲ್ಲ. ಹೊಸ ಕಾಯ್ದೆಯಿಂದ ಪೈಪೋಟಿ ತೀವ್ರವಾದರೆ ಬೆಲೆ ಹೆಚ್ಚಳವಾಗಿ ರೈತರಿಗೆ ಅನುಕೂಲವಾಗಲಿದೆ. ಸ್ಥಳೀಯ ಎಪಿಎಂಸಿಗೆ ಅಧಿಕಾರವಿಲ್ಲದಿದ್ದರೂ ರಾಜ್ಯ ಮಟ್ಟದ ಎಪಿಎಂಸಿ ಮಂಡಳಿಗೆ ಅಧಿಕಾರವಿದೆ. ಬಹುರಾಷ್ಟ್ರೀಯ ಕಂಪನಿಗಳು ರೈತರಿಗೆ ಸರಿಯಾಗಿ ಹಣ ನೀಡದಿರುವ ಬಗ್ಗೆ ದೂರು ನೀಡಿದರೆ ಎಪಿಎಂಸಿ ರಾಜ್ಯ ಮಟ್ಟದ ಮಂಡಳಿಯು ಪರವಾನಗಿ ರದ್ದುಪಡಿಸಲಿದೆ. ನಾನು ಈವರೆಗೆ 17 ಎಪಿಎಂಸಿ ಮಾರುಕಟ್ಟೆಗಳಿಗೆ ಭೇಟಿ ನೀಡಿ ಚರ್ಚಿಸಿದ್ದೇನೆ. ಎಲ್ಲಿಯೂ ಈ ಕಾಯ್ದೆ ಸರಿಯಿಲ್ಲ ಎಂದು ಯಾರೂ ದೂರಿಲ್ಲ. ಕಾಯ್ದೆಯಲ್ಲಿ ರೈತರಿಗೆ ಅನುಕೂಲವಾಗುವ ಸಾಕಷ್ಟುಅಂಶಗಳಿವೆ ಎಂದು ತಿಳಿಸಿದರು.

ಮುಖ್ಯಮಂತ್ರಿಗಳ ಸೂಚನೆಯಂತೆ ಕಾರ್ಮಿಕ ಸಚಿವರು, ಕಾರ್ಮಿಕ ಇಲಾಖೆ ಆಯುಕ್ತರು ಪ್ರತಿಭಟನಾನಿರತರೊಂದಿಗೆ ಮಾತುಕತೆ ನಡೆಸಿದ್ದಾರೆ. ಸರ್ಕಾರಕ್ಕಾಗಲಿ, ನನಗಾಗಲಿ ಯಾವುದೇ ಹಟ ಪ್ರತಿಷ್ಠೆ ಇಲ್ಲ. ಸಹಕಾರ ಸಚಿವನಾಗಿ ಸಹಕಾರ ನೀಡುತ್ತೇನೆಯೇ ಹೊರತು ಅಸಹಕಾರ ಇಲ್ಲ. ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂದರು.

ಸುಗ್ರಿವಾಜ್ಞೆ ಹಿಂಪಡೆಯಿರಿ, ಇಲ್ಲ ಉಗ್ರ ಹೋರಾಟ ಎದುರಿಸಿ: ಸರ್ಕಾರಕ್ಕೆ ರೈತರ ವಾರ್ನಿಂಗ್ ...

ಈ ವೇಳೆ ವಿಧಾನ ಪರಿಷತ್‌ ಸದಸ್ಯರಾದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ್‌ ಉಪಸ್ಥಿತರಿದ್ದರು.

ಏನೇನು ಪ್ರಯೋಜನ? :  ರೈತರು ತಮ್ಮ ಉತ್ಪನ್ನಗಳನ್ನು ಎಲ್ಲಿಗೆ ಬೇಕಾದರೂ, ಯಾರಿಗಾದರೂ ಮಾರಲು ಅವಕಾಶ ಕಲ್ಪಿಸಲಾಗಿದೆ. ಬೆಳೆ ಹೊಲದಲ್ಲಿದ್ದಾಗಲೇ ರೈತ ಮಾರಲು ಅವಕಾಶವಿರುವುದರಿಂದ ಸಾಗಣೆ, ದಾಸ್ತಾನು ವೆಚ್ಚ ಕಳೆದು ಉತ್ತಮ ಬೆಲೆ ಸಿಗಲಿದೆ. ರಾಜ್ಯದಲ್ಲಿ 167 ಎಪಿಎಂಸಿ ಮಾರುಕಟ್ಟೆಪೈಕಿ 162 ಕಾರ್ಯ ನಿರ್ವಹಿಸುತ್ತಿದ್ದು, ರೈತರು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು. ಆಯಾ ದಿನದ ಅತಿ ಹೆಚ್ಚು ಬೆಲೆಯನ್ನು ಗೊತ್ತುಪಡಿಸಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಸಚಿವ ಸೋಮಶೇಖರ್‌ ಹೇಳಿದರು.

ಹಿಂದೆ ರೈತರು ಎಪಿಎಂಸಿ ವ್ಯಾಪ್ತಿಯ ಹೊರಗೆ ಕೃಷಿ ಉತ್ಪನ್ನ ಮಾರಾಟ ಮಾಡಲು ಅವಕಾಶವಿರಲಿಲ್ಲ. ಎಪಿಎಂಸಿ ಹೊರಗೆ ಮಾರಾಟ ಮಾಡಿದರೆ ನೋಟಿಸ್‌ ನೀಡುವುದು, ದಂಡ ಹಾಕುವುದು ಸೇರಿದಂತೆ ಹಲವು ನಿರ್ಬಂಧವಿತ್ತು. ಈಗ ಅದನ್ನೆಲ್ಲಾ ತೆಗೆದು ಹಾಕಲಾಗಿದೆ. ಯಾವುದೇ ಕಾರಣಕ್ಕೂ ಎಪಿಎಂಸಿಯನ್ನು ಮುಚ್ಚುವುದಿಲ್ಲ. ಎಪಿಎಂಸಿಯ ಯಾವುದೇ ಅಧಿಕಾರವನ್ನೂ ಮೊಟಕುಗೊಳಿಸುವುದಿಲ್ಲ ಎಂದು ವಿವರಿಸಿದರು.