ಬೆಂಗಳೂರು(ಆ.16): ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿ ಗಲಭೆ ವೇಳೆ ಪೊಲೀಸರು ಹಾರಿಸಿದ್ದ ಅಶ್ರುವಾಯು ಶೆಲ್‌ನಿಂದ ಗಾಯಗೊಂಡಿದ್ದ ಆರೋಪಿಯೊಬ್ಬ ಚಿಕಿತ್ಸೆ ಫಲಿಸದೆ ಶನಿವಾರ ಸಾವನ್ನಪ್ಪಿದ್ದಾನೆ. ಕೆ.ಜಿ.ಹಳ್ಳಿ ಸೈಯದ್‌ ನದೀಮ್‌ (24) ಮೃತನಾಗಿದ್ದು, ಬೌರಿಂಗ್‌ ಆಸ್ಪತ್ರೆಯಲ್ಲಿ ಗಾಯಾಳುವಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮಧ್ಯಾಹ್ನ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದರೊಂದಿಗೆ ಗೋಲಿಬಾರ್‌ನಲ್ಲಿ ಮೃತಪಟ್ಟವರ ಸಂಖ್ಯೆ 4ಕ್ಕೇರಿದೆ.

"

ಇನ್ನೊಂದು ವಿಚಾರವೆಂದರೆ ಮರಣೋತ್ತರವಾಗಿ ಆತನಿಗೆ ಕೊರೋನಾ ವೈರಸ್‌ ಸೋಂಕು ದೃಢಪಟ್ಟಿದೆ. ಗಲಭೆ ಪ್ರಕರಣ ಸಂಬಂಧ ಆ.12 ರಂದು ನದೀಮ್‌ನನ್ನು ಬಂಧಿಸಲಾಗಿತ್ತು. ಆ ದಿನ ವೈದ್ಯಕೀಯ ತಪಾಸಣೆ ವೇಳೆ ಆತ ಆರೋಗ್ಯವಾಗಿದ್ದಾನೆ ಎಂಬ ವರದಿ ಬಂದಿತ್ತು. ಆದರೆ ಪರಪ್ಪನ ಅಗ್ರಹಾರ ಸೆಂಟ್ರಲ್‌ ಜೈಲು ಸೇರಿದ ನಂತರ ಆರೋಪಿ ಆರೋಗ್ಯದಲ್ಲಿ ವ್ಯತ್ಯಾಸವಾಗಿದೆ. ಕೂಡಲೇ ಜೈಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರೂ ಆತ ಗುಣಮುಖವಾಗಿಲ್ಲ. ಬಳಿಕ ಜಯನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ಕಾರಾಗೃಹದ ಅಧಿಕಾರಿಗಳು, ಹೆಚ್ಚಿನ ಚಿಕಿತ್ಸೆಗೆ ಬೌರಿಂಗ್‌ ಆಸ್ಪತ್ರೆಗೆ ಆರೋಪಿಯನ್ನು ದಾಖಲಿಸಿದ್ದರು. ಆತನಿಗೆ ಬೌರಿಂಗ್‌ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನಡೆಸಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಆತ ಮೃತಪಟ್ಟಿದ್ದಾನೆ ಎಂದು ಹೆಚ್ಚುವರಿ ಆಯುಕ್ತ (ಪೂರ್ವ) ಎಸ್‌.ಮುರುಗನ್‌ ತಿಳಿಸಿದ್ದಾರೆ. 

'ಗಲಭೆಕೋರರು ಮನೆ ಮಾರಿಯಾದರೂ ನಷ್ಟ ಭರಿಸಬೇಕು'

ಗಲಭೆಯಲ್ಲಿ ನಿರತನಾಗಿದ್ದಾಗ ಶೆಲ್‌ ಹೊಟ್ಟೆಗೆ ತಗುಲಿದ್ದರಿಂದ ದೇಹದೊಳಗೆ ಗಂಭೀರವಾಗಿ ಪೆಟ್ಟಾಗಿದೆ. ಎರಡ್ಮೂರು ದಿನಗಳ ಬಳಿಕ ಅದರ ನೋವು ಕಾಣಿಸಿಕೊಂಡು ಜೀವಕ್ಕೆ ಕುತ್ತು ತಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.