ವಿಶಿಷ್ಟ ನಡೆನುಡಿಗಳಿಂದ ವಿಭಿನ್ನವಾಗಿ ಗುರುತಿಸಿಕೊಳ್ಳುತ್ತಿದ್ದ ಸಿಎಮ ಬೊಮ್ಮಾಯಿ ಕೆ.ಆರ್‌. ವೃತ್ತದಲ್ಲಿನ ಸರ್‌ ಎಂ ವಿಶ್ವೇಶ್ವರಯ್ಯ ಪ್ರತಿಮೆಗೆ ಐಟಿಐ ಓದಿ ಪ್ರಸ್ತುತ ಬೆಸ್ಕಾಂ ಸಿಬ್ಬಂದಿಯಾಗಿರುವ ಚಂದನ್‌ ಎಂಬವರಿಂದ ಮಾಲಾರ್ಪಣೆ ಮಾಡಿಸಿದರು

ಬೆಂಗಳೂರು(ಸೆ.16) : ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾದ ಬಳಿಕ ತಮ್ಮ ವಿಶಿಷ್ಟ ನಡೆನುಡಿಗಳಿಂದ ವಿಭಿನ್ನವಾಗಿ ಗುರುತಿಸಿಕೊಳ್ಳುತ್ತಿದ್ದು ಕೆ.ಆರ್‌. ವೃತ್ತದಲ್ಲಿನ ಸರ್‌ ಎಂ ವಿಶ್ವೇಶ್ವರಯ್ಯ ಪ್ರತಿಮೆಗೆ ಐಟಿಐ ಓದಿ ಪ್ರಸ್ತುತ ಬೆಸ್ಕಾಂ ಸಿಬ್ಬಂದಿಯಾಗಿರುವ ಚಂದನ್‌ ಎಂಬವರಿಂದ ಮಾಲಾರ್ಪಣೆ ಮಾಡಿಸಿದರು.

ಬಳಿಕ ತಮ್ಮ ನಡೆಯನ್ನು ಸಮರ್ಥಿಸಿಕೊಂಡ ಬೊಮ್ಮಾಯಿ, ವಿಶ್ವೇಶ್ವರಯ್ಯ ಅವರ ಜೀವನದ ಧ್ಯೇಯ ಶ್ರಮ ಮತ್ತು ಬುದ್ಧಿಯನ್ನು ಉಪಯೋಗಿಸಿ ನಾಡು ಕಟ್ಟುವುದಾಗಿತ್ತು. ನಿಜವಾಗಿ ನಾಡು ಕಟ್ಟುವವರು ಕೈಯಲ್ಲಿ ಕೆಲಸ ಮಾಡುವ ಶ್ರಮಿಕ ವರ್ಗ. ಹೊಲದಲ್ಲಿ ರೈತರು ಮತ್ತು ಕಾರ್ಮಿಕರಿದ್ದು ಪಿರಮಿಡ್‌ನ ತಳಮಟ್ಟದಲ್ಲಿರುವ ಈ ಜನರು ದೇಶದ ಆರ್ಥಿಕತೆಯನ್ನು ಬೆಳೆಸುವ ಮೂಲ ಪುರುಷರಾಗಿದ್ದಾರೆ. ಸರ್‌ ಎಂ. ವಿಶ್ವೇಶ್ವರಯ್ಯ ಇವರೆಲ್ಲರನ್ನು ಪ್ರತಿನಿಧಿಸುತ್ತಾರೆ. ಈ ಹಿನ್ನೆಲೆಯಲ್ಲಿ ಸರ್‌ ಎಂವಿ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಚಂದನ್‌ ಅತ್ಯಂತ ಅರ್ಹ ವ್ಯಕ್ತಿ ಎಂದು ಹೇಳಿದರು.

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಬಗ್ಗೆ ಆತಂಕ ಬೇಡ, ಮುಕ್ತ ಚರ್ಚೆಗೆ ಸಿದ್ಧ ಎಂದ ಸಿಎಂ

ಸರ್‌ಎಂವಿ ಸಾಧನೆ ಅಪಾರವಾದದ್ದು. ಕೆಆರ್‌ಎಸ್‌ ಅಣೆಕಟ್ಟಿನಿಂದ ಹಿಡಿದು ಅನೇಕ ಶಿಕ್ಷಣ ಸಂಸ್ಥೆ, ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು, ಹಲವಾರು ಕಾರ್ಖಾನೆ, ಮಹಿಳೆಯರಿಗೆ ಮೀಸಲಾತಿ ಮುಂತಾದ ಪ್ರಗತಿ ಪರ ಚಿಂತನೆಯಿಂದ ನಾಡು ಕಟ್ಟಿದ್ದಾರೆ. ನಾವು ಸಹ ಅವರ ಹಾದಿಯಲ್ಲಿ ನಡೆದು ಅವರಂತೆ ನಾಡು ಕಟ್ಟಲು ಸಂಕಲ್ಪ ಮಾಡುವ ದಿನವಿದು ಎಂದು ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಹೇಳಿದರು.

ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್‌, ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಶಿವಾಜಿನಗರ ಶಾಸಕ ರಿಜ್ವಾನ್‌ ಅರ್ಷದ್‌ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.