ಸಿಎಂಗೆ ಮತ್ತೊಂದು ಸಂಕಷ್ಟ: ಮುಡಾ ಬೆನ್ನಲ್ಲೇ ಸಿದ್ದು ವಿರುದ್ಧ ಕೋರ್ಟ್‌ಗೆ ಮತ್ತೊಂದು ದೂರು..!
2013-2018ರ ಅವಧಿಯಲ್ಲಿ ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಸರ್ಕಾರದ ಸಾಧನೆಗಳ ಪ್ರಚಾರ ಕಾರ್ಯಗಳಿಗಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಪಾಲಿಕೆಯ ಒಡೆತನದ 493 ಬಸ್ ತಂಗುದಾಣಗಳನ್ನು ಬಳಸಿಕೊಳ್ಳಲಾಗಿತ್ತು. ಈ ವೇಳೆ ಬಿಬಿಎಂಪಿಗೆ ಕಾನೂನು ರೀತಿ ರಾಜ್ಯ ಸರ್ಕಾರವು ಪಾವತಿಸಬೇಕಿದ್ದ 68.14 ಕೋಟಿ ರು. ಪಾವತಿಸದೆ ವಂಚಿಸಲಾಗಿದೆ ಎಂದು ದೂರಲಾಗಿದೆ.
ಬೆಂಗಳೂರು(ಸೆ.14): ಮುಡಾ ಹಗರಣ ಸಂಕಷ್ಟದ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಮತ್ತೊಂದು ದೂರು ದಾಖಲಾಗಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಉದ್ದೇಶಪೂರ್ವಕವಾಗಿ 68 ಕೋಟಿ ರು.ಗಿಂತ ಹೆಚ್ಚು ಮೊತ್ತವನ್ನು ವಂಚಿಸಲಾಗಿದೆ ಎಂದು ಆರೋಪಿಸಲಾಗಿದೆ.
ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಅವರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವ ಕೆ.ಜೆ.ಜಾರ್ಜ್, ಐಎಎಸ್ ಅಧಿಕಾರಿಗಳಾದ ಎಂ.ಲಕ್ಷ್ಮೀನಾರಾಯಣ, ಮಣಿವಣ್ಣನ್ ವಿರುದ್ಧ ತನಿಖೆಗೆ ಆದೇಶಿಸುವಂತೆ ಕೋರಿ ದೂರು ನೀಡಲಾಗಿದೆ.
ಸಿದ್ದು ಕುರ್ಚಿಗೆ 'ಮುಡಾ' ಕಂಟಕ: ಟೈಂ ಬಾಂಬ್ ಸ್ಫೋಟ ಯಾವಾಗ?
ವಂಚನೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪೂರ್ಣ ದಾಖಲೆಗಳ ಸಹಿತ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರೂ, ಪಕ್ಷಪಾತ ಧೋರಣೆಯಿಂದ ಮತ್ತು ಸಿದ್ದರಾಮಯ್ಯ ಒತ್ತಡದಿಂದ ಪ್ರಕರಣ ಮುಕ್ತಾಯಗೊಳಿಸಿರುವ ಪೊಲೀಸರ ನಡೆಯನ್ನು ಸಹ ವಿರೋಧಿಸಿ ದೂರು ದಾಖಲಿಸಲಾಗಿದೆ.
2013-2018ರ ಅವಧಿಯಲ್ಲಿ ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಸರ್ಕಾರದ ಸಾಧನೆಗಳ ಪ್ರಚಾರ ಕಾರ್ಯಗಳಿಗಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಪಾಲಿಕೆಯ ಒಡೆತನದ 493 ಬಸ್ ತಂಗುದಾಣಗಳನ್ನು ಬಳಸಿಕೊಳ್ಳಲಾಗಿತ್ತು. ಈ ವೇಳೆ ಬಿಬಿಎಂಪಿಗೆ ಕಾನೂನು ರೀತಿ ರಾಜ್ಯ ಸರ್ಕಾರವು ಪಾವತಿಸಬೇಕಿದ್ದ 68.14 ಕೋಟಿ ರು. ಪಾವತಿಸದೆ ವಂಚಿಸಲಾಗಿದೆ. 2015-2017ರ ಎರಡು ವರ್ಷಗಳ ಅವಧಿಯಲ್ಲಿ ಬಿಬಿಎಂಪಿಯ 493 ಬಸ್ ತಂಗುದಾಣಗಳನ್ನು ತಮ್ಮ ಸರ್ಕಾರದ ಸಾಧನೆಗಳ ಪ್ರಚಾರ ಕಾರ್ಯಗಳಿಗೆಂದು ಬಳಸಿಕೊಂಡು, ನಯಾಪೈಸೆಯಷ್ಟೂ ಜಾಹಿರಾತು ಶುಲ್ಕ ಪಾವತಿಸಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಬಗ್ಗೆ ಎಸಿಬಿ ಮತ್ತು ಲೋಕಾಯುಕ್ತದಲ್ಲಿ ದೂರು ದಾಖಲಾದ ಬಳಿಕ ಎಚ್ಚೆತ್ತುಕೊಂಡಿದ್ದ ಅಂದಿನ ವಿಶೇಷ ಆಯುಕ್ತರು (ಹಣಕಾಸು) 12.98 ಕೋಟಿ ರು. ಮೊತ್ತವನ್ನು ಪಾಲಿಕೆಗೆ ಪಾವತಿಸುವಂತೆ ರಾಜ್ಯ ಸರ್ಕಾರಕ್ಕೆ ನೊಟೀಸ್ ಜಾರಿಗೊಳಿಸಿದ್ದರು. ಆದರೆ, ಸರ್ಕಾರ ನೊಟೀಸ್‌ಗೆ ಸೊಪ್ಪು ಹಾಕಿರಲಿಲ್ಲ. ಸಿದ್ದರಾಮಯ್ಯನವರು 2ನೇ ಬಾರಿ ಸಿಎಂ ಆದ ಬಳಿಕ ಅವರ ಪ್ರಭಾವಕ್ಕೊಳಗಾಗಿ ಲೋಕಾಯುಕ್ತ ಪೋಲೀಸರು, ಯಾವುದೇ ಮಾಹಿತಿ ನೀಡದೆ ಇದೇ ವರ್ಷದ ಜು.26ರಂದು ಪ್ರಕರಣವನ್ನು ಮುಕ್ತಾಯಗೊಳಿಸಿದ್ದಾರೆ ಎಂದು ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣ ಸಂಬಂಧ ಸೂಕ್ತ ತನಿಖೆ ನಡೆಸುವಂತೆ ಕೋರಿ ಕೋರ್ಟ್‌ಗೆ ದೂರು ನೀಡಲಾಗಿದೆ.