ಕನ್ನಡಿಗರ ಮೇಲೆ ಕೇಂದ್ರ ಸರ್ಕಾರಕ್ಕೆ ಯಾಕಿಷ್ಟುದ್ವೇಷ: ಪ್ರಿಯಾಂಕ್ ಖರ್ಗೆ
ಕೇಂದ್ರ ಸರ್ಕಾರಕ್ಕೆ ಕನ್ನಡಿಗರ ಮೇಲೆ ಯಾಕಿಷ್ಟುದ್ವೇಷ? ಪ್ರಧಾನಿ ನರೇಂದ್ರ ಮೋದಿ ನೋಡಿ ಮತ ಹಾಕಲಿಲ್ಲ ಎಂದು ದ್ವೇಷ ತೀರಿಸಿಕೊಳ್ಳುತ್ತಿದ್ದಾರೆಯೇ? ಎಂದು ಪಂಚಾಯತ್‌ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಖಾರವಾಗಿ ಪ್ರಶ್ನಿಸಿದ್ದಾರೆ.
ಬೆಂಗಳೂರು (ಜೂ.20) ಕೇಂದ್ರ ಸರ್ಕಾರಕ್ಕೆ ಕನ್ನಡಿಗರ ಮೇಲೆ ಯಾಕಿಷ್ಟುದ್ವೇಷ? ಪ್ರಧಾನಿ ನರೇಂದ್ರ ಮೋದಿ ನೋಡಿ ಮತ ಹಾಕಲಿಲ್ಲ ಎಂದು ದ್ವೇಷ ತೀರಿಸಿಕೊಳ್ಳುತ್ತಿದ್ದಾರೆಯೇ? ಎಂದು ಪಂಚಾಯತ್‌ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಖಾರವಾಗಿ ಪ್ರಶ್ನಿಸಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ನಾವೇನು ಪುಕ್ಸಟ್ಟೆಯಾಗಿ ಅಕ್ಕಿ ಕೇಳುತ್ತಿದ್ದೇವೆಯೇ? ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ರಾಜ್ಯದಲ್ಲಿ ಬಿಜೆಪಿ ಗೆಲ್ಲಿಸದಿದ್ದರೆ ಕೇಂದ್ರದಿಂದ ಆರ್ಶೀವಾದ ಸಿಗುವುದಿಲ್ಲ ಎಂದು ಧಮಕಿ ಹಾಕಿದ್ದರು. ಅದನ್ನೇ ಅನುಷ್ಠಾನಕ್ಕೆ ತರಲಾಗುತ್ತಿದೆಯೇ? ಬಿಜೆಪಿಗೆ ಕಾನೂನು, ಆಡಳಿತ ಮರೆತುಹೋಗಿದೆ. ಅವರ ಆಡಳಿತ ನೋಡಿಯೇ ಜನರು ಅವರನ್ನು ಪ್ರತಿಪಕ್ಷದಲ್ಲಿ ಇಟ್ಟಿದ್ದಾರೆ. ಅಕ್ಕಿ ಖರೀದಿ ಮಾಡಲು ಅಗುತ್ತಿಲ್ಲ ಎನ್ನುತ್ತಿದ್ದಾರೆ. ಯಾವುದೇ ರಾಜ್ಯ ಸರ್ಕಾರವಾದರೂ ಕೇಂದ್ರದ ಮೊರೆ ಹೋಗುವುದು ಸಹಜ. ಕೇಂದ್ರದಿಂದಲೇ ಖರೀದಿ ಮಾಡಬೇಕು ಎಂಬ ನಿಯಮ ಇದೆ ಎಂದು ಟೀಕಾಪ್ರಹಾರ ನಡೆಸಿದರು.
ರಾಜ್ಯಗಳಿಗೆ ಅಕ್ಕಿ ಮಾರಾಟ ವಿಚಾರ: ಕೇಂದ್ರ ಸರ್ಕಾರದ ಆದೇಶದ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಕಿಡಿ
ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆಗೆ ಸಾವಿರಾರು ಕೋಟಿ ರು. ವೆಚ್ಚವಾಗಲಿದ್ದು, ಯೋಜನೆಯನ್ನು ಮುಂದುವರೆಸುತ್ತೇವೆ. ಮಾತುಕೊಟ್ಟಂತೆ ನಾಲ್ಕು ಸಾರಿಗೆ ಸಂಸ್ಥೆಗಳ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿದ್ದೇವೆ. ಒಂದು ವಾರದಲ್ಲಿ ಉಚಿತ ಪ್ರಯಾಣಕ್ಕೆ 70 ಕೋಟಿ ರು. ವೆಚ್ಚವಾಗಿದೆ. ಬಿಜೆಪಿಯವರು ದೇವಾಲಯಕ್ಕೆ ಹೋಗಿ ಎಂದರೂ ಯಾರೂ ಹೋಗುತ್ತಿರಲಿಲ್ಲ. ಶಕ್ತಿ ಯೋಜನೆ ಜಾರಿ ಬಳಿಕ ಎಲ್ಲರೂ ದೇವಾಲಯಕ್ಕೆ ಹೋಗುತ್ತಿದ್ದಾರೆ. ದೇವಾಲಯಕ್ಕೆ ಉಚಿತವಾಗಿ ಹೋಗುವುದು ಸರಿಯಲ್ಲ ಎಂದು ಪ್ರಯಾಣಿಸುವವರ ಬಾಯಲ್ಲಿ ಹೇಳಿಸಲಿ, ಬಿಜೆಪಿಯವರು ಇದನ್ನು ವಿರೋಧಿಸುತ್ತಾರೆಯೇ? ಎಂದರು.
ಮಂಗಳವಾರ ಕೇಂದ್ರದ ವಿರುದ್ಧ ಕಾಂಗ್ರೆಸ್ ನಡೆಸುವ ಪ್ರತಿಭಟನೆಯಲ್ಲಿ ಬಿಜೆಪಿಗೂ ಆಹ್ವಾನ ಇದೆ. ಬಿಜೆಪಿ ಪಕ್ಷದ ನಾಯಕರು, ಸಂಸದರು ಬಂದು, ಧಮ್ಮು, ತಾಕತ್ತು ಎನ್ನುವವರು ಪ್ರತಿಭಟನೆಗೆ ಬಂದು ತೋರಿಸಲಿ ಎಂದು ಹೇಳಿದರು.