ರೈತ ರತ್ನ ಅನಿಲ್ ಬಳಂಜ
ವಿಭಾಗ: ತೋಟಗಾರಿಕೆ 
ಊರು, ಜಿಲ್ಲೆ: ಬಳಂಜ, ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ

ದಕ್ಷಿಣ ಕನ್ನಡ(ಫೆ.12): ಪಿಯುಸಿ ಓದು ಮುಗಿಸಿ ಕೃಷಿ ಕಾಯಕಕ್ಕೆ ಇಳಿದ ಯುವ ಕೃಷಿಕ ಅನಿಲ್ ಬಳಂಜ. ರಬ್ಬರ್ ಮತ್ತು ಅಡಿಕೆ ತೋಟ ಇದೆ. ಒಟ್ಟು 35 ಎಕರೆ ಜಾಗ. ಕುಟುಂಬದವರೇ ಸೇರಿ ದುಡಿಯುತ್ತಾರೆ. ಊರಿನ ರೈತರು ಮಾವಿನ ಹಣ್ಣು ಬೆಳೆದರೆ ಕೆಜಿಗೆ 30 ರೂಪಾಯಿ ಅಷ್ಟೇ ಸಿಗುತ್ತದೆ, ಬೇರೆ ಹಣ್ಣು ಬೆಳೆದು 100, 200 ಸಿಕ್ಕರೆ ರೈತನಿಗೆ ಲಾಭವಾಗುತ್ತದೆ ಎಂದು ಭಾವಿಸಿದ ಅವರು ಬೇರೆ ದೇಶದ ಬೇರೆ ರೀತಿಯ ಹಣ್ಣುಗಳನ್ನು ಬೆಳೆಯತೊಡಗಿದರು. ಅದಕ್ಕಾಗಿ ಅವರು ಫೇಸ್ ಬುಕ್ಕಿನಲ್ಲಿ ಬೇರೆ ದೇಶದ ರೈತರನ್ನು ಸಂಪರ್ಕಿಸಿದರು. ಅವರಿಂದ ಮಾಹಿತಿ ಪಡೆದರು. ಕೆಲವು ಹಣ್ಣಿನ ಬೀಜ ಹಾಕಿದರೆ, ಇನ್ನು ಕೆಲವು ಗಿಡವನ್ನು ತಂದು ಕಸಿ ಮಾಡಿದರು. 

ವಿದೇಶದ ಕೃಷಿ ಮೇಳಗಳಲ್ಲಿ ಪಾಲ್ಗೊಂಡರು. ಅಲ್ಲಿನ ರೈತರನ್ನು ಭೇಟಿ ಮಾಡಿದರು. ಈಗ ಅವರ ತೋಟದಲ್ಲಿ ಸುಮಾರು 30 ದೇಶದ 700 ರೀತಿಯ ಹಣ್ಣುಗಳ ಗಿಡಗಳಿವೆ. ಅದರಲ್ಲಿ 180 ಬಗೆಯ ಹಣ್ಣುಗಳು ಈಗಾಗಲೇ ಫಲ ಕೊಟ್ಟಿವೆ. ಬರ್ಮಾ, ಇಂಡೋನೇಷ್ಯಾ, ಶ್ರೀಲಂಕಾ, ಬ್ರೇಝಿಲ್, ಜಮೈಕಾ, ಹವಾಯಿ ದೇಶಗಳಲ್ಲಿ ಬೆಳೆಯುವ ಹಣ್ಣುಗಳನ್ನು ಇಲ್ಲೂ ಬೆಳೆಯಬಹುದು ಎಂದು ತೋರಿಸಿಕೊಟ್ಟಿದ್ದಾರೆ. 

ಆಸ್ಟ್ರೇಲಿಯಾದ ಸೆಡರ್ ಬಯ ಚೆರ್ರಿ, ಬೊಲಿವಿಯಾದ ಅಚಾಚಾ, ಶ್ರೀಲಂಕಾದ ನಮ್ ನಮ್ ಹಣ್ಣು, ಬರ್ಮಾ ಮರ ದ್ರಾಕ್ಷಿ, ಜಮೈಕಾದ ಕೈಮಿತೋ, ಇಂಡೋನೇಷ್ಯಾದ ಮಕೊತಾದೇವ, ಬ್ರೇಝಿಲ್ನ ಬಾಕುಪಾರಿ ಹೀಗೆ ಕಂಡುಕೇಳರಿಯದ ಹಣ್ಣುಗಳನ್ನು ಬೆಳೆದಿದ್ದಾರೆ. ವಿದೇಶಿ ಹಣ್ಣುಗಳ ಗಿಡಗಳನ್ನು ತಮ್ಮ ನರ್ಸರಿಯಲ್ಲಿ ಅಭಿವೃದ್ಧಿ ಪಡಿಸಿ ತಿರುವನಂತಪುರಂ, ಮುಂಬೈ ಹೀಗೆ ಅನೇಕರಿಗೆ ಕೊಟ್ಟಿದ್ದಾರೆ. ಆ ಮೂಲಕ ವಿದೇಶಿ ಹಣ್ಣುಗಳನ್ನು ದೇಶೀ ಹಣ್ಣುಗಳನ್ನಾಗಿ ಮಾರ್ಪಡಿಸಿದ್ದಾರೆ.

80ರ ವಯಸ್ಸಲ್ಲೂ ಕುಗ್ಗದ ಆಸಕ್ತಿ: ವರ್ಷಕ್ಕೆ 40 ಲಕ್ಷ ಆದಾಯ ಗಳಿಸುವ ರೈತ

ಸಾಧನೆಯ ವಿವರ:

ದಕ್ಷಿಣ ಕನ್ನಡದ ಒಂದು ಪುಟ್ಟ ಹಳ್ಳಿಯಲ್ಲಿ ನಾನಾ ದೇಶದ ಹಣ್ಣುಗಳನ್ನು ಬೆಳೆಯಬಹುದು ಎಂದು ತೋರಿಸಿಕೊಟ್ಟಿದ್ದು. ಬೇರೆ ದೇಶದ ಅನೇಕ ಹಣ್ಣುಗಳನ್ನು ಇಲ್ಲಿ ಆಮದು ಮಾಡಲಾಗುತ್ತದೆ. ಬೆಲೆ ಜಾಸ್ತಿ. ಅಲ್ಲದೇ ದೇಶದ ಆರ್ಥಿಕತೆಗೂ ಅದರಿಂದ ಲಾಭವಿಲ್ಲ. ಅದರ ಬದಲು ಇಲ್ಲೇ ಬೇರೆ ದೇಶದ ಹಣ್ಣು ಬೆಳೆದು ಮಾರುಕಟ್ಟೆ ಮಾಡಿದರೆ ರೈತರಿಗೂ ಲಾಭ ದೇಶಕ್ಕೂ ಲಾಭ ಅನ್ನುವುದು ಇವರ ನಿಲುವು. ಅದಕ್ಕೆ ಸರಿಯಾಗಿ ಇವರಿಂದ ಪ್ರೇರಿತರಾಗಿ ಹತ್ತಾರು ಮಂದಿ ಇವರಿಂದ ಬೇರೆ ದೇಶದ ಹಣ್ಣು ಬೀಜ, ಗಿಡ ಪಡೆದು ಬೆಳೆಸಿದ್ದಾರೆ. ಲಾಭ ಕಾಣುತ್ತಿದ್ದಾರೆ. 

ಗಮನಾರ್ಹ ಅಂಶ:

1. ಇವರು ಹಣ್ಣಿನ ಕೃಷಿ ಕಲಿತಿದ್ದು ಇಂಟರ್ ನೆಟ್ ನಿಂದ. ಗೂಗಲ್, ಫೇಸ್ ಬುಕ್ ಇತ್ಯಾದಿಗಳೇ ಇವರ ದಾರಿಗೆ ಮಾರ್ಗದರ್ಶಿಗಳು. ಸ್ವಂತವಾಗಿ ಕಲಿತಿದ್ದೇ ಸಾಧನೆ. ಸಾಮಾಜಿಕ ಜಾಲತಾಣವನ್ನು ಪಾಸಿಟಿವ್ ಆಗಿ ಹೇಗೆ ಬಳಸಬಹುದು ಎಂಬುದಕ್ಕೆ ಇವರೇ ಪುರಾವೆ.
2. ಇವರ ಫಾರ್ಮಿಗೆ ಸಾವಿರಾರು ವಿದ್ಯಾರ್ಥಿಗಳು ಭೇಟಿ ನೀಡಿದ್ದಾರೆ. ಸಿರಸಿಯ ಕಾಲೇಜೊಂದು ಇವರು ಬೆಳೆದ ಹಣ್ಣಿನ ಪ್ರಯೋಗ ನಡೆಸುತ್ತಿದೆ. ವಿಭಿನ್ನ ದಾರಿ ಹಿಡಿದು ಲಾಭದ ಹಂಗಿಲ್ಲದೆ ಹೊಸ ರೀತಿಯ ಕೃಷಿ ಪರಿಚಯಿಸಿದ್ದೇ ಇವರ ಸಾಧನೆ. ಈಗ ಐದು ಎಕರೆಯಲ್ಲಿ ಹೊಸತೊಂದು ಮ್ಯೂಸಿಯಂ ಥರದ ಫಾರ್ಮ್ ರೂಪಿಸುತ್ತಿದ್ದು, ಅದರಲ್ಲಿ ಎಲ್ಲಾ ಥರದ ಹಣ್ಣಿನ ಗಿಡ ಬೆಳೆಸುತ್ತಿದ್ದಾರೆ. ಆಸಕ್ತಿ ಇರುವ ಎಲ್ಲರಿಗೂ ತಮ್ಮ ಕೃಷಿಯ ಬಗೆಗಿನ ಪ್ರತಿಯೊಂದು ಮಾಹಿತಿ ನೀಡುತ್ತಾರೆ. ಸ್ಫೂರ್ತಿಯಾಗಿದ್ದಾರೆ.