80ರ ವಯಸ್ಸಲ್ಲೂ ಕುಗ್ಗದ ಆಸಕ್ತಿ: ವರ್ಷಕ್ಕೆ 40 ಲಕ್ಷ ಆದಾಯ ಗಳಿಸುವ ರೈತ
ಕೃಷಿಯ ಜತೆಗೆ ಕೋಳಿ, ಕುರಿ ಸಾಕಿ ಉತ್ತಮ ಆದಾಯ ಪಡೆಯಬಹುದು ಎಂಬುದು ರೈತ ಬಸವರಾಜ ವಿಭೂತಿ ಅಭಿಪ್ರಾಯ
ರೈತ ರತ್ನ ಬಸವರಾಜ ವಿಭೂತಿ
ವಿಭಾಗ: ಸುಸ್ಥಿರ ಕೃಷಿ
ಊರು: ಹೊನ್ನಾಪೂರ, ಅಳ್ನಾವರ ತಾಲೂಕು, ಧಾರವಾಡ ಜಿಲ್ಲೆ
ಧಾರವಾಡ(ಫೆ.12): ಎಂಎಸ್ಸಿ ಪದವೀಧರರಾಗಿರುವ ಬಸವರಾಜ ವಿಭೂತಿ 45 ವರ್ಷಗಳಿಂದ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಣ್ಣ ಪ್ರಮಾಣದಲ್ಲಿ ಆರಂಭವಾದ ಇವರ ಕೃಷಿ ಈಗ ವಾರ್ಷಿಕ 40 ಲಕ್ಷ ರು.ಗಳಿಗೂ ಮಿಕ್ಕಿ ಆದಾಯ ತರುವ ಹಂತಕ್ಕೆ ತಲುಪಿದೆ. ಕುಟುಂಬದಿಂದ ಬಳುವಳಿಯಾಗಿ ಬಂದಿರುವ 15 ಎಕರೆಯಲ್ಲಿ ಪೇರಲ, ತೆಂಗು, ತೇಗ, ಮಾವು, ಅಡಕೆ, ಏಲಕ್ಕಿ, ಬಾಳೆ, ಮೆಣಸು ಹೀಗೆ ವಿವಿಧ ಬೆಳೆ ಬೆಳೆಯುತ್ತಿದ್ದಾರೆ. ಇದರ ಮಧ್ಯೆ ವರ್ಷದ 4 ತಿಂಗಳು ಚೆಂಡು ಹೂ ಬೆಳೆದು ಮಾರಾಟ ಮಾಡುತ್ತಾರೆ. 15 ವರ್ಷಗಳಿಂದ ಸಾವಯವ ಕೃಷಿಯತ್ತ ಹೊರಳಿದ್ದಾರೆ. ಇವರು ಕೋಲ್ಕತಾ ತಳಿಯ 4,400 ಪೇರಲ ಬೆಳೆಯುತ್ತಿದ್ದಾರೆ.
ಕರ್ನಾಟಕದಲ್ಲಿ ಅಪರೂಪವಾದ ಈ ತಳಿಯ ಒಂದು ಹಣ್ಣು ಸುಮಾರು ಅರ್ಧ ಕೆಜಿ ತೂಗುತ್ತದೆ. ಇವರದು ನೀರಾವರಿ ಆಶ್ರಿತ ಭೂಮಿ. ಎರಡು ಬೋರ್ ಕೊರೆಸಿದ್ದಾರೆ. ಹನಿ ನೀರಾವರಿ ಮೂಲಕ ಬೆಳೆಗಳಿಗೆ ನೀರುಣಿಸುತ್ತಾರೆ. 15 ಸಾವಿರ ಕೋಳಿ, 100 ಕುರಿಯನ್ನೂ ಸಾಕುತ್ತಿದ್ದು, ಇದರಿಂದಲೇ ವಾರ್ಷಿಕ 10 ಲಕ್ಷ ಆದಾಯ ಗಳಿಸುತ್ತಿದ್ದಾರೆ. ಲಾಕ್‌ಡೌನ್ ಅವಧಿಯಲ್ಲಿ ಕೃಷಿ ವಿವಿಯ ಸ್ಟಾರ್ಟ್‌ಅಪ್ ಯೋಜನೆಯಡಿ ಪೇರಲೆ ಚಹಾಪುಡಿ ಸಿದ್ಧಪಡಿಸುವ ಸಾಹಸಕ್ಕೆ ಕೈಹಾಕಿದ್ದಾರೆ. ಸದ್ಯ ಈ ಪುಡಿ ಧಾರವಾಡ ಸುತ್ತಮುತ್ತ ಮಾರಾಟವಾಗುತ್ತಿದೆ. ಮುಂದೆ ಇದನ್ನು ‘ವೈಶಾಲಿ’ ಬ್ರ್ಯಾಂಡ್ ಹೆಸರಲ್ಲಿ ಸಾವಯವ ಉತ್ಪನ್ನವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡುವ ಉದ್ದೇಶವಿದೆ.
ಪಿಯುಸಿ ಫೇಲ್ ಆದ ಹುಡುಗ : ಕೃಷಿಯಲ್ಲಿ ಪ್ರಯೋಗಗಳ ಮೂಲಕಲೇ ಯಶಸ್ಸು ಕಂಡ
ಸಾಧನೆ ವಿವರ:
ಆಸಕ್ತಿ, ಬದ್ಧತೆ ಇದ್ದರೆ ಕೃಷಿಯಲ್ಲಿ ಉತ್ತಮ ಆದಾಯ ಪಡೆಯಬಹುದು ಎಂಬುದು ಇವರ ನಿಲುವು. ಸಾಂಪ್ರದಾಯಿಕವಷ್ಟೇ ಅಲ್ಲ, ಅದರ ಜತೆಗೆ ಆಧುನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡರೆ ಕಡಿಮೆ ಖರ್ಚಿನಲ್ಲಿ ಉತ್ತಮ ಇಳುವರಿ ಪಡೆಯಬಹುದು. ಕೃಷಿಯ ಜತೆಗೆ ಕೋಳಿ, ಕುರಿ ಸಾಕಿ ಉತ್ತಮ ಆದಾಯ ಪಡೆಯಬಹುದು ಎಂಬುದು ಇವರ ಅಭಿಪ್ರಾಯ.
ಗಮನಾರ್ಹ ಅಂಶ:
1. ಎಂಬತ್ತರ ವಯಸ್ಸಲ್ಲೂ ಕೃಷಿಯಲ್ಲಿ ಹೊಸ ಸಾಧ್ಯತೆಗಳನ್ನು ಹುಡುಕುತ್ತಿದ್ದಾರೆ. ಬೆಳೆ ವೈವಿಧ್ಯ, ನೀರಿನ ಮಿತಬಳಕೆಯ ಮೂಲಕ ಹೆಚ್ಚಿನ ಲಾಭ ಗಳಿಸಿದ್ದಾರೆ.
2. ಅಡಕೆ ಟೀ ಮಾದರಿಯಲ್ಲೇ ಪೇರಲೆ ಎಲೆಯಿಂದಲೂ ಆರೋಗ್ಯಕರ ಟೀಪುಡಿ ಸಿದ್ಧಪಡಿಸುವ ಪ್ರಯೋಗಕ್ಕಿಳಿದಿದ್ದಾರೆ. ತಮ್ಮದೇ ಬ್ರ್ಯಾಂಡ್‌ನಲ್ಲಿ ಮಾರಾಟಕ್ಕೆ ಮುಂದಾಗಿದ್ದಾರೆ.
3. ಕೃಷಿ ವಿವಿಯ ಹಲವು ವೆಬಿನಾರ್‌ಗಳಲ್ಲಿ ಪಾಲ್ಗೊಂಡು ಇತರೆ ರೈತರಿಗೂ ಮಾರ್ಗದರ್ಶನ ನೀಡುತ್ತಿದ್ದಾರೆ. ಜಮೀನಿಗೆ ಭೇಟಿಕೊಡುವ ರೈತರಿಗೆ ಕೃಷಿ ಪಾಠವನ್ನೂ ಮಾಡುತ್ತಾರೆ.