ಬೆಂಗಳೂರು (ಡಿ.14):  ‘ಸಾರಿಗೆ ನೌಕರರ ಒಕ್ಕೂಟಕ್ಕೆ ನಾನು ಚುನಾವಣೆ ಮೂಲಕ ಆಯ್ಕೆಯಾಗಿದ್ದೇನೆ. ಕೋಡಿಹಳ್ಳಿ ಚಂದ್ರಶೇಖರ್‌ರಂತೆ ಆಕಾಶದಿಂದ ಇಳಿದುಬಂದು ಮಾಧ್ಯಮಗಳು ಮುಂದೆ ದಿಢೀರ್‌ ಆಗಿ ಅಧ್ಯಕ್ಷನಾಗಿಲ್ಲ. ಕೋಡಿಹಳ್ಳಿ ಚಂದ್ರಶೇಖರ್‌ ಯಾವತ್ತೂ ಜನರ ಮಧ್ಯೆ ಇದ್ದವರಲ್ಲ. ಅವರು ಮೊದಲು ಕಬ್ಬು ಬೆಳೆಗಾರರಿಗೆ ಹಣ ಕೊಡಿಸಲಿ’ ಎಂದು ಎಐಯುಟಿಸಿ ಸಂಯೋಜಿತ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮತ್ತು ನೌಕರರ ಒಕ್ಕೂಟದ ಅಧ್ಯಕ್ಷ ಅನಂತ ಸುಬ್ಬರಾವ್‌ ಕಿಡಿ ಕಾರಿದ್ದಾರೆ.

ಅಲ್ಲದೆ, ‘ನಾನು ಲೀಡರ್‌ ಹೊರತು ಡೀಲರ್‌ ಅಲ್ಲ’ ಎಂದು ಪರೋಕ್ಷವಾಗಿ ಕೋಡಿಹಳ್ಳಿ ಅವರನ್ನು ಟೀಕಿಸಿದ್ದಾರೆ.

ನಕಲಿ ನಾಯಕರಿಗೆ ಶಾಸ್ತಿ ಕಾದಿದೆ: ಕೋಡಿಹಳ್ಳಿ ಚಂದ್ರಶೇಖರ್‌ಗೆ ಖಡಕ್‌ ಎಚ್ಚರಿಕೆ ಕೊಟ್ಟ ಸಚಿವ ..

‘ಕೋಡಿಹಳ್ಳಿ ಅವರು ನನ್ನನ್ನು ನಿಮ್ಮನ್ನು ಹೈಜಾಕ್‌ ಮಾಡಬಹುದು ಆದರೆ ಒಕ್ಕೂಟವನ್ನು ಹೈಜಾಕ್‌ ಮಾಡಲು ಸಾಧ್ಯವಿಲ್ಲ. ಮಂತ್ರಕ್ಕೆ ಮಾವಿನ ಕಾಯಿ ಉದುರುವುದಿಲ್ಲ. ಎಲ್ಲರೂ ಅಮಿತಾಭ್‌ ಬಚ್ಚನ್‌ ಆಗಲು ಸಾಧ್ಯವಿಲ್ಲ. ಯೂನಿಯನ್‌ ನಮ್ಮಪ್ಪನ ಆಸ್ತಿ ಅಲ್ಲ. ನೀವೂ ಒಂದು ಯೂನಿಯನ್‌ ಮಾಡಿ’ ಸುದ್ದಿಗಾರರ ಜತೆ ಮಾತನಾಡಿ ಸವಾಲು ಹಾಕಿದರು.

‘ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಿ ಎಂಬುದು ನಮ್ಮ ಬೇಡಿಕೆಯಲ್ಲ. ಈ ರೀತಿ ಬೇಡಿಕೆ ಇಡುತ್ತಿರುವವರು ಅನುಕೂಲ, ಅನಾನುಕೂಲಗಳನ್ನು ಪರಿಶೀಲಿಸಲಿ. ಆಂಧ್ರಪ್ರದೇಶದ ಉದಾಹರಣೆ ಕೊಡುವ ಮೊದಲು ಅಲ್ಲಿನ ನೌಕರರು ಕಣ್ಣೀರಲ್ಲಿ ಕೈತೊಳೆಯುತ್ತಿರುವುದನ್ನು ನೋಡಿ’ ಎಂದರು.

‘ಕೋಡಿಹಳ್ಳಿ ಚಂದ್ರಶೇಖರ್‌ ಮಾಡುತ್ತಿರುವ ಉಪವಾಸದಿಂದ ಒಂದೂವರೆ ಕೋಟಿ ಜನರಿಗೆ ಸಾರಿಗೆ ಸೌಲಭ್ಯ ಸಿಗದೆ ಸಮಸ್ಯೆಯಾಗುತ್ತಿದೆ. ಕಾನೂನಿನಡಿ ನೋಟಿಸ್‌ ನೀಡಿ ಮುಷ್ಕರ ಹಮ್ಮಿಕೊಳ್ಳಬೇಕಿತ್ತು’ ಎಂದು ಹೇಳಿದರು.