ಅನನ್ಯಾ ಭಟ್ ಪ್ರಕರಣದಲ್ಲಿ ಸುಜಾತಾ ಭಟ್ ಸ್ಪೋಟಕ ಹೇಳಿಕೆ ನೀಡಿದ್ದಾರೆ. ವಾಸಂತಿ ಶ್ರೀವತ್ಸ ಜೀವಂತವಿದ್ದಾರೆ ಎಂದು ಹೇಳಿರುವ ಅವರು, ನದಿಯಲ್ಲಿ ಪತ್ತೆಯಾದ ಶವ ವಾಸಂತಿಯದ್ದಲ್ಲ ಎಂದು ಹೇಳಿದ್ದಾರೆ. ಕಟ್ಟುಕಥೆಗಳಿಂದ ತುಂಬಿರುವ ಈ ಪ್ರಕರಣ ಮತ್ತಷ್ಟು ಗೊಂದಲಮಯವಾಗಿದೆ.
ಬೆಂಗಳೂರು/ಮಡಿಕೇರಿ: ಬಹು ಚರ್ಚೆಗೆ ಕಾರಣವಾಗಿದ್ದ ಅನನ್ಯ ಭಟ್ ಮಿಸ್ಸಿಂಗ್ ಪ್ರಕರಣಕ್ಕೆ ಇದೀಗ ತಿರುವು ಸಿಕ್ಕಿದೆ. SIT ತನಿಖಾಧಿಕಾರಿ ಗುಣಪಾಲ ಜೆ ಅವರ ಮುಂದೆ ಸುಜಾತಾ ಭಟ್ ನೇರವಾಗಿ ತಪ್ಪೊಪ್ಪಿಕೊಂಡಿದ್ದು, ಈ ಪ್ರಕರಣದಲ್ಲಿ ಹೇಳಲಾಗಿದ್ದ ಬಹುತೇಕ ವಿಷಯಗಳು ಕಾಲ್ಪನಿಕ ಸೃಷ್ಟಿ ಎಂದು ಬಾಂಬ್ ಸಿಡಿಸಿದ್ದಾಳೆ. ಇದರ ಜೊತೆಗೆ ಮಡಿಕೇರಿ ಮೂಲದ ವಾಸಂತಿ ಶ್ರೀವತ್ಸ ಪ್ರಕರಣ ಮತ್ತೊಂದು ತಿರುವು ಪಡೆದಿದೆ. ತನಿಖೆಯ ಮಧ್ಯೆ ಸುಜಾತಾ ಭಟ್ ನೀಡಿರುವ ಸ್ಪೋಟಕ ಹೇಳಿಕೆ ಇದೀಗ ಕುತೂಹಲ ಕೆರಳಿಸಿದೆ. ತನಿಖಾ ಅಧಿಕಾರಿಗಳ ಮುಂದೆ ಸುಜಾತಾ ಭಟ್ ವಾಸಂತಿ ಶ್ರೀವತ್ಸ ಇನ್ನೂ ಜೀವಂತವಿದ್ದಾಳೆ ಎಂದು ಹೇಳಿಕೆ ನೀಡಿದ್ದಾಳೆ. SIT ತನಿಖಾಧಿಕಾರಿಗಳ ಮುಂದೆ ಹೇಳಿಕೆ ನೀಡಿದ ವೇಳೆ, ಸುಜಾತಾ ಭಟ್, ವಾಸಂತಿ ಇನ್ನೂ ಜೀವಂತವಿದ್ದಾಳೆ ಎಂದು ಅಚ್ಚರಿಗೊಳಿಸುವ ಹೇಳಿಕೆ ನೀಡಿದ್ದಾಳೆ. ತನಿಖಾಧಿಕಾರಿಗಳ ಮುಂದೆ ಅವಳದ್ದು ಎಂದು ತೋರಿಸಲಾದ ಒಂದು ಫೋಟೋ ಕುರಿತು ಸ್ಪಷ್ಟನೆ ನೀಡುತ್ತಾ, ಅದು ಅನನ್ಯಾ ಭಟ್‌ನದು ಅಲ್ಲ, ವಾಸಂತಿಯದ್ದೇ ಫೋಟೋ ಎಂದು ಬಾಂಬ್ ಸಿಡಿಸಿದ್ದಾಳೆ.
ಇದಕ್ಕೂ ಮೊದಲು, ನದಿಯಲ್ಲಿ ಪತ್ತೆಯಾದ ಕೊಳೆತ ಶವವನ್ನು ವಾಸಂತಿಯ ಶವ ಎಂದು ಗುರುತಿಸಲಾಗಿತ್ತು. ಆದರೆ ಸುಜಾತಾ ಭಟ್, ಆ ಶವವು ವಾಸಂತಿಯದ್ದಲ್ಲ ಎಂದು ನೇರವಾಗಿ ತನಿಖಾಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾಳೆ. “ಆ ಕೊಳೆತ ಶವ ವಾಸಂತಿಯದ್ದೇ ಎಂದು ನೀವು ಹೇಗೆ ನಂಬಿದ್ರಿ? ಎಂದು ಅಧಿಕಾರಿಗಳಿಗೆಯೇ ಸುಜಾತ ಭಟ್ ಮರು ಪ್ರಶ್ನೆ ಹಾಕಿದ್ದು, ಈ ಪ್ರಶ್ನೆಯೇ ತನಿಖಾಧಿಕಾರಿಗಳನ್ನು ದಂಗಾಗುವಂತೆ ಮಾಡಿದೆ. ಸುಜಾತಾ ಭಟ್ ನೀಡಿರುವ ಈ ಹೊಸ ಹೇಳಿಕೆಯ ಹಿನ್ನೆಲೆಯಲ್ಲಿ SIT ಅಧಿಕಾರಿಗಳು ಪ್ರಕರಣವನ್ನು ಹೊಸದಾಗಿ ಪರಿಶೀಲಿಸಲು ತೀರ್ಮಾನಿಸಿದ್ದಾರೆ. ವಾಸಂತಿ ನಿಜವಾಗಿಯೂ ಮೃತಪಟ್ಟಿದ್ದಾಳೆ ಅಥವಾ ಇನ್ನೂ ಜೀವಂತವಿದ್ದಾಳೆಯೇ ಎಂಬ ಪ್ರಶ್ನೆಗೆ ಉತ್ತರ ಹುಡುಕುವ ನಿಟ್ಟಿನಲ್ಲಿ ಮುಂದಿನ ತನಿಖೆ ನಡೆಯಲಿದೆ.
ಮತ್ತೊಂದು ಕಟ್ಟುಕಥೆಯೇ?
ಮಡಿಕೇರಿ ಮೂಲದ ವಾಸಂತಿ ಪ್ರಕರಣದಲ್ಲಿ ಈಗಾಗಲೇ ಹಲವಾರು ಕಥೆಗಳು, ಅನುಮಾನಗಳು ಮತ್ತು ಗೊಂದಲಗಳು ಕೇಳಿಬಂದಿವೆ. ಇತ್ತೀಚಿನ ಸುಜಾತಾ ಭಟ್ ಹೇಳಿಕೆ ನಿಜಕ್ಕೂ ತನಿಖೆಗೆ ಬೆಳಕು ಚೆಲ್ಲುವುದೋ, ಅಥವಾ ಮತ್ತೊಂದು ಕಟ್ಟುಕಥೆಯಾಗಿಬಿಡುವುದೋ ಎಂಬ ಕುತೂಹಲ ಇದೀಗ ಹೆಚ್ಚಿದೆ.
ಪ್ರಕರಣದ ಸುತ್ತಲಿನ ರಹಸ್ಯ
- ನದಿಯಲ್ಲಿ ಪತ್ತೆಯಾದ ಶವದ ಗುರುತು ಕುರಿತ ಅನುಮಾನ.
- ಫೋಟೋಗಳ ಗೊಂದಲ – ಅನನ್ಯಾ ಭಟ್ ಫೋಟೋ ಎಂದು ತೋರಿಸಿದ್ದು ವಾಸಂತಿಯದ್ದೇ ಎಂದ ಸುಜಾತಾ
- ವಾಸಂತಿ ಇನ್ನೂ ಜೀವಂತವಿದ್ದಾಳೆ ಎಂದು ಸುಜಾತ ಹೇಳಿಕೆ.
- SIT ಮುಂದೆ ಸತ್ಯ ಒಪ್ಪಿದ ಸುಜಾತ ಹೊಸ ತನಿಖಾ ದಾರಿಗಳು.
- ತನಿಖಾಧಿಕಾರಿಯ ಮುಂದೆ ಒಪ್ಪಿಕೊಂಡ ಸುಜಾತಾ
ಸುಜಾತಾ ಭಟ್ ನಾಲ್ಕು ದಿನಗಳ ಕಾಲ ನಡೆದ ವಿಚಾರಣೆಯಲ್ಲಿ ತನಿಖಾಧಿಕಾರಿಗಳ ಪ್ರಶ್ನೆಗಳಿಗೆ ಸ್ಪಷ್ಟ ದಾಖಲೆಗಳನ್ನು ಒದಗಿಸಲಾಗದೇ, ಕೊನೆಗೆ ತಾನು ಹೇಳಿದ್ದ ಕಥೆ ಶೇಕಡಾ 80% ರಷ್ಟು ಸುಳ್ಳು ಎಂದು ಒಪ್ಪಿಕೊಂಡಿದ್ದಾಳೆ. ಅಕೆಯ ಪ್ರಕಾರ “ಭೂ ವಿವಾದ ಇರುವುದೇ ಸತ್ಯ. ಆದರೆ ಉಳಿದ ಪಾತ್ರಗಳು, ಘಟನೆಗಳು ಎಲ್ಲಾ ಕಾಲ್ಪನಿಕ. ಅನನ್ಯ ಭಟ್ ಮಿಸ್ಸಿಂಗ್ ಕಥೆ ನಾನೇ ಕಟ್ಟಿದದ್ದು.”
ಕಾಲ್ಪನಿಕ ಪಾತ್ರಗಳ ಬಯಲು
ಸುಜಾತಾ ಭಟ್ ತನ್ನ ಹೇಳಿಕೆಯಲ್ಲಿ ಅರವಿಂದ, ವಿಮಲಾ ಸೇರಿದಂತೆ ಅನೇಕ ಹೆಸರುಗಳು ಕೇವಲ ಕಾಲ್ಪನಿಕ ಪಾತ್ರಗಳು ಎಂದು ಒಪ್ಪಿಕೊಂಡಿದ್ದಾಳೆ. ತನಗೆ ಒತ್ತಾಯಪೂರ್ವಕವಾಗಿ ಈ ಕಥೆ ಹೇಳಿಸಲು ಕೆಲವರು ಪ್ರಯತ್ನಿಸಿದ್ದರೆಂದು, ತಾನೊಂದು ಷಡ್ಯಂತ್ರ ಮತ್ತು ಪಿತೂರಿಯಲ್ಲಿ ಸಿಲುಕಿದ್ದೇನೆ ಎಂದು ಆರೋಪಿಸಿದ್ದಾಳೆ.
ಭೂ ವಿವಾದದ ಅಂಶ
ಅವಳ ಹೇಳಿಕೆಯ ಪ್ರಕಾರ, ನಿಜವಾದ ವಿಚಾರ ಭೂ ವಿವಾದಕ್ಕೆ ಮಾತ್ರ ಸೀಮಿತ. ಆ ಭೂಮಿಯನ್ನು ಮತ್ತೆ ಕೆದಕಲು ಹಾಗೂ ಅದರಲ್ಲಿ ಪಾಲು ಪಡೆಯಲು ಕೆಲವರು ಈ ಕತೆಯನ್ನು ದುರುಪಯೋಗ ಮಾಡಿಕೊಂಡಿದ್ದಾರೆಂದು ಸುಜಾತಾ SIT ಮುಂದೆ ಹೇಳಿದ್ದಾಳೆ.
SIT ತನಿಖೆಯ ಪ್ರಗತಿ
ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳಿಗೆ ಸುಜಾತಾ ಕೆಲವು ಪೂರಕ ದಾಖಲೆಗಳನ್ನು ಒದಗಿಸಿದ್ದಾಳೆ. ತನಿಖಾಧಿಕಾರಿಗಳು 50 ಕ್ಕೂ ಹೆಚ್ಚು ಪುಟಗಳ ಸ್ಟೇಟ್ಮೆಂಟ್ ರಿಪೋರ್ಟ್ ಸಿದ್ಧಪಡಿಸಿರುವುದು ತಿಳಿದುಬಂದಿದೆ.
ವಿಚಾರಣೆಯ ಅಂತ್ಯದಲ್ಲಿ ಏನಾಯ್ತು
- ನಾಲ್ಕು ದಿನಗಳ ವಿಸ್ತೃತ ವಿಚಾರಣೆಯ ಬಳಿಕ SIT ಸುಜಾತಾ ಭಟ್‌ಗೆ ರಿಲೀಫ್ ನೀಡಿದೆ.
- ಯಾವುದೇ ಕಾನೂನು ಕ್ರಮ ಕೈಗೊಳ್ಳದೇ, ಮುಂದೆ ಮತ್ತೆ ವಿಚಾರಣೆಗೆ ಕರೆದರೆ ಹಾಜರಾಗಬೇಕು ಎಂಬ ಷರತ್ತಿನೊಂದಿಗೆ ಬಿಡುಗಡೆ ಮಾಡಲಾಗಿದೆ.
- ಎಲ್ಲಾ ಆರೋಪಗಳು ಸುಳ್ಳು ಎಂಬುದಾಗಿ ವೀಡಿಯೋ ಹೇಳಿಕೆ ಕೂಡ ದಾಖಲಿಸಲಾಗಿದೆ.
ಡಿಜಿಪಿ ಸೂಚನೆಯಂತೆ ರಿಲೀಫ್
ಡಿಜಿಪಿ ಪ್ರಣವ್ ಮೊಹಾಂತಿ ಅವರ ಸೂಚನೆಯಂತೆ SIT ಸುಜಾತಾ ಭಟ್ ವಿಚಾರಣೆಯನ್ನು ಬಹುತೇಕ ಮುಕ್ತಾಯಗೊಳಿಸಿದೆ. ಸುಜಾತಾ ಭಟ್ ತನಿಖಾಧಿಕಾರಿಗಳ ಮುಂದೆ ತನ್ನ ಸುಳ್ಳಿನ ಕಥೆಗಳ ಬಗ್ಗೆ ಸಂಪೂರ್ಣ ಹೇಳಿಕೆ ನೀಡಿದ್ದು, ಪ್ರಕರಣಕ್ಕೆ ಹೊಸ ತಿರುವು ನೀಡಿದೆ.
