ಮನೆ ನಿರ್ಮಿಸುವ ಉದ್ದೇಶಕ್ಕಾಗಿ ಜೆಸಿಬಿಯಿಂದ ನಿವೇಶನ ಸ್ವಚ್ಛಗೊಳಿಸುವಾಗ ಪಕ್ಕದ ಹಳೆಯ ಕಟ್ಟಡವೊಂದು ಮೊಬೈಲ್‌ ಟವರ್‌ ಸಮೇತ ಧರೆಗುರುಳಿದ್ದು, ಅದೃಷ್ಟವಶಾತ್‌ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಬೆಂಗಳೂರು (ಡಿ.9) : ಮನೆ ನಿರ್ಮಿಸುವ ಉದ್ದೇಶಕ್ಕಾಗಿ ಜೆಸಿಬಿಯಿಂದ ನಿವೇಶನ ಸ್ವಚ್ಛಗೊಳಿಸುವಾಗ ಪಕ್ಕದ ಹಳೆಯ ಕಟ್ಟಡವೊಂದು ಮೊಬೈಲ್‌ ಟವರ್‌ ಸಮೇತ ಧರೆಗುರುಳಿದ್ದು, ಅದೃಷ್ಟವಶಾತ್‌ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಲಗ್ಗೆರೆಯ ಪಾರ್ವತಿನಗರದಲ್ಲಿ ಇರುವ ಪ್ರೀತಿ ಬಾರ್ ಪಕ್ಕದಲ್ಲಿರುವ ನಿವೇಶನದ ಬಳಿ ಶುಕ್ರವಾರ ಮಧ್ಯಾಹ್ನ 1ರ ಸುಮಾರಿಗೆ ಈ ಅವಘಡ ನಡೆದಿದೆ. ನಿವೇಶನದ ಮಾಲೀಕ ಹರೀಶ್‌ ಆ ನಿವೇಶನದಲ್ಲಿ ಮನೆ ನಿರ್ಮಿಸುವ ಉದ್ದೇಶದಿಂದ ಪಾಯ ತೆಗೆಸಲು ಸಿದ್ಥತೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಜೆಸಿಬಿಯಿಂದ ನಿವೇಶನ ಸ್ವಚ್ಛಗೊಳಿಸಲು ಮುಂದಾಗಿದ್ದರು. ಅದರಂತೆ ಮಧ್ಯಾಹ್ನ ಜೆಸಿಬಿಯಿಂದ ಮಣ್ಣು ತೆಗೆಯುವಾಗ ನಿವೇಶನಕ್ಕೆಹೊಂದಿಕೊಂಡಂತೆ ಇರುವ ಹಳೆಯ ಕಟ್ಟಡದ ಪಾಯ ಕುಸಿದು ಇಡೀ ಕಟ್ಟಡ ಹಾಗೂ ಅದರ ಮೇಲಿದ್ದ ಮೊಬೈಲ್‌ ನೆಟ್‌ವರ್ಕ್‌ ಟವರ್‌ ನೆಲಕ್ಕುರುಳಿದೆ.

ದೋಚುತ್ತಿದ್ದಾಗಲೇ ಮನೆಗೆ ಬಂದು ಕಳ್ಳರನ್ನು ಕೂಡಿ ಹಾಕಿದ ಮಾಲೀಕ!

ಕೂದಲೆಳೆಯಲ್ಲಿ 11 ಜನರ ಪ್ರಾಣಾಪಾಯದಿಂದ ಪಾರು:

ಮೊಬೈಲ್ ಟವರ್‌ಗೆ ಹೊಂದಿಕೊಂಡಿರುವ ಎರಡು ಅಂತಸ್ತಿನ ಕಟ್ಟಡದಲ್ಲಿ 11 ಮಂದಿ ನೆಲೆಸಿದ್ದರು. ಟವರ್‌ ಬೀಳುವ ಮುನ್ಸೂಚನೆ ಸಿಕ್ಕ ತಕ್ಷಣ ಸ್ಥಳೀಯರು ಆ ಕಟ್ಟಡಗಳಿಂದ ನಿವಾಸಿಗಳನ್ನು ಹೊರಗೆ ಕರೆತಂದಿದ್ದಾರೆ. ಕೊಂಚ ತಡವಾಗಿದ್ದರೂ ಭಾರೀ ದುರಂತವೇ ನಡೆಯುವ ಸಾಧ್ಯತೆ ಇತ್ತು. ಅದೃಷ್ಟವಶಾತ್‌ 11 ಮಂದಿ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುಮಾರು 30 ಅಡಿ ಉದ್ದದ ಮೊಬೈಲ್‌ ಟವರ್‌ ಬಿದ್ದ ಪರಿಣಾಮ ಅಕ್ಕಪಕ್ಕದ 2 ಅಂಗಡಿಗಳಿಗೆ ಹಾನಿಯಾಗಿದೆ.

ಕಟ್ಟಡ ಕುಸಿತದ ವಿಚಾರ ತಿಳಿದ ಕೂಡಲೇ ಬಿಬಿಎಂಪಿ ಅಧಿಕಾರಿಗಳು ಹಾಗೂ ನಂದಿನಿ ಲೇಔಟ್‌ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದ್ದಾರೆ. ನಿರ್ಲಕ್ಷ್ಯದ ಆರೋಪದಡಿ ನಿವೇಶನದ ಮಾಲೀಕ ಹರೀಶ್‌ ವಿರುದ್ಧ ಬಿಬಿಎಂಪಿ ಅಧಿಕಾರಿಗಳು ನಂದಿನಿ ಲೇಔಟ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು: ವಿಳಾಸ ಕೇಳುವ ನೆಪದಲ್ಲಿ ಒಂಟಿ ಮಹಿಳೆಯರ ಸರ ಕಿತ್ತು ಪರಾರಿ ಆಗುತ್ತಿದ್ದ ರೌಡಿಶೀಟರ್ ಸೆರೆ

ವಿಡಿಯೋ ವೈರಲ್‌

ಕಟ್ಟಡ ಹಾಗೂ ಅದರ ಮೇಲಿನ ಮೊಬೈಲ್‌ ಟವರ್‌ ಧರೆಗುರುಳುವ ದೃಶ್ಯವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಕಟ್ಟಡ ಹಾಗೂ ಮೊಬೈಲ್‌ ಟವರ್‌ ಖಾಲಿ ಜಾಗಕ್ಕೆ ಉರುಳಿ ಬಿದ್ದಿದೆ. ಒಂದು ವೇಳೆ ಜನ ನಿಂತಿರುವ ಕಡೆಗೆ ಬಿದ್ದಿದ್ದಲ್ಲಿ ದೊಡ್ಡ ಅನಾಹುತವೇ ಸಂಭವಿಸುವ ಸಾಧ್ಯತೆಯಿತ್ತು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.