ದೋಚುತ್ತಿದ್ದಾಗಲೇ ಮನೆಗೆ ಬಂದು ಕಳ್ಳರನ್ನು ಕೂಡಿ ಹಾಕಿದ ಮಾಲೀಕ!
ಮನೆಯಲ್ಲಿ ಯಾರೂ ಇಲ್ಲದ ವೇಳೆ ಇಬ್ಬರು ಕಳ್ಳರು ಬೀಗ ಮುರಿದು ಮನೆಯ ಒಳಗೆ ನುಗ್ಗಿ ಕಳ್ಳತನ ಮಾಡುವಾಗಲೇ ಪ್ರವಾಸ ಮುಗಿಸಿ ಮನೆಗೆ ವಾಪಾಸ್ ಬಂದ ಮಾಲೀಕನಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ!
ಬೆಂಗಳೂರು (ಡಿ.9) : ಮನೆಯಲ್ಲಿ ಯಾರೂ ಇಲ್ಲದ ವೇಳೆ ಇಬ್ಬರು ಕಳ್ಳರು ಬೀಗ ಮುರಿದು ಮನೆಯ ಒಳಗೆ ನುಗ್ಗಿ ಕಳ್ಳತನ ಮಾಡುವಾಗಲೇ ಪ್ರವಾಸ ಮುಗಿಸಿ ಮನೆಗೆ ವಾಪಾಸ್ ಬಂದ ಮಾಲೀಕನಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ!
ಮೈಸೂರಿನ ಹೆಬ್ಬಾಳದ ಕಿರಣ್(23) ಮತ್ತು ಬೆಳಗಾವಿ ಶಹಪುರದ ವಿನಯ್ ರೇವಣ್ಕರ್(24) ಬಂಧಿತರು. ಬೆಂಗಳೂರಿನ ಸದಾಶಿವನಗರದ 17ನೇ ಕ್ರಾಸ್ ನಿವಾಸಿ ಮಹೇಶ್ ರಾಮಚಂದ್(58) ಎಂಬುವವರ ಮನೆಯಲ್ಲಿ ಡಿ.5ರ ಮಧ್ಯರಾತ್ರಿ 1.30ರ ಸುಮಾರಿಗೆ ಈ ಘಟನೆ ನಡೆದಿದೆ. ಮನೆ ಮಾಲೀಕ ನೀಡಿದ ದೂರಿನ ಮೇರೆಗೆ ಸದಾಶಿವನಗರ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಏನಿದು ಪ್ರಕರಣ?:
ದೂರುದಾರ ಮಹೇಶ್ ರಾಮಚಂದ್ ಅವರು ಕುಟುಂಬ ಸಮೇತ ಡಿ.2ರಂದು ಕಾಶಿ ಪ್ರವಾಸಕ್ಕೆ ತೆರಳಿದ್ದರು. ಬಳಿಕ ಪ್ರವಾಸ ಮುಗಿಸಿ ಡಿ.5ರ ಮುಂಜಾನೆ 1.30ಕ್ಕೆ ಮನೆಗೆ ಬಂದಿದ್ದಾರೆ. ಈ ವೇಳೆ ಮನೆಯ ಬಾಗಿಲು ತೆರೆದಿರುವುದು ಗೊತ್ತಾಗಿದೆ. ಅನುಮಾನಗೊಂಡು ಮನೆ ಪ್ರವೇಶಿಸಿ ಪರಿಶೀಲಿಸಿದಾಗ ದೇವರ ಮನೆಯಲ್ಲಿ ಶೂಗಳು ಇರುವುದು ಕಂಡು ಬಂದಿದೆ. ಇದರಿಂದ ಗಾಬರಿಯಾದ ಮಹೇಶ್‌ಗೆ ಮಹಡಿ ಮೇಲೆ ಶಬ್ಧವಾಗುತ್ತಿರುವುದು ಕೇಳಿಸಿದೆ. ತಕ್ಷಣ ಮಹಡಿಗೆ ತೆರಳಿ ನೋಡಿದಾಗ ರೂಮ್‌ನಲ್ಲಿ ಇಬ್ಬರು ಅಪರಿಚಿತರು ಕಳ್ಳತನ ಮಾಡುತ್ತಿರುವುದು ಗೊತ್ತಾಗಿದೆ.
ರೂಮ್‌ನಲ್ಲಿ ಕೂಡಿ ಹಾಕಿದರು:
ಕೂಡಲೇ ಮಹೇಶ್ ಅವರು ರೂಮ್‌ನ ಬಾಗಿಲಿಗೆ ಬೀಗ ಹಾಕಿ ಅಪರಿಚಿತರನ್ನು ಆ ರೂಮ್‌ನಲ್ಲೇ ಕೂಡಿ ಹಾಕಿದ್ದಾರೆ. ಬಳಿಕ ಹೊಯ್ಸಳ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಹೊಯ್ಸಳ ಪೊಲೀಸರು, ರೂಮ್ ಬಾಗಿಲು ತೆರೆದು ಆ ಇಬ್ಬರು ಅಪರಿಚಿತರನ್ನು ವಶಕ್ಕೆ ಪಡೆದು ಕರೆದೊಯ್ದಿದ್ದಾರೆ.
ಹಾಡಹಗಲೇ ಮನೆ ಬೀಗಮುರಿದು ಕಳ್ಳತನ ಮಾಡುತ್ತಿದ್ದ ಇಬ್ಬರು ಖದೀಮರು ಅರೆಸ್ಟ್
ಬಳಿಕ ದೂರುದಾರ ಮಹೇಶ್ ಅವರು ಮನೆಯಲ್ಲಿ ಏನೇನು ಕಳುವಾಗಿದೆ ಎಂದು ಪರಿಶೀಲಿಸಿದಾಗ, ಎರಡು ಚೈನು, ಒಂದು ಐಫೋನ್ ಕಳ್ಳತನಾಗಿರುವುದು ಗೊತ್ತಾಗಿದೆ. ಈ ಸಂಬಂಧ ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುವ ಪೊಲೀಸರು, ಇಬ್ಬರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
---