ಬೆಂಗಳೂರು[ಫೆ.27]: ಇತ್ತೀಚಿಗೆ ಪೌರತ್ವ ತಿದ್ದುಪಡಿ ವಿರೋಧಿ ಹೋರಾಟದಲ್ಲಿ ವಿವಾದಾತ್ಮಕ ಹೇಳಿಕೆ ಹಾಗೂ ಭಿತ್ತಿಪತ್ರ ಪ್ರದರ್ಶಿಸಿ ರಾಷ್ಟ್ರ ದ್ರೋಹ ಆರೋಪದಡಿ ಬಂಧಿತರಾಗಿರುವ ಅದ್ರ್ರಾ ಹಾಗೂ ಅಮೂಲ್ಯ ಲಿಯೋನಾ ಆತ್ಮೀಯ ಗೆಳೆತಿಯರಾಗಿದ್ದು, ಒಂದೇ ಪಿಜಿ (ಪೇಯಿಂಗ್‌ ಗೆಸ್ಟ್‌)ಯಲ್ಲಿ ಕೆಲವು ದಿನಗಳ ಕಾಲ ಒಟ್ಟಿಗೆ ನೆಲೆಸಿದ್ದರು ಎಂಬ ಸಂಗತಿ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಪಾಕಿಸ್ತಾನ ಪರ ಜಿಂದಾಬಾದ್‌ ಕೂಗಿದ ಪ್ರಕರಣದಲ್ಲಿ ಬಂಧಿತಳಾಗಿರುವ ಅಮೂಲ್ಯಳನ್ನು ಪಶ್ಚಿಮ ವಿಭಾಗದ ಪೊಲೀಸರು, ನ್ಯಾಯಾಲಯದ ಒಪ್ಪಿಗೆ ಪಡೆದು ಮತ್ತೆ ನಾಲ್ಕು ದಿನಗಳು ಸುಪರ್ದಿಗೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಸ್ವತಂತ್ರ ಕಾಶ್ಮೀರ ಭಿತ್ತಿಪತ್ರ ಪ್ರದರ್ಶಿಸಿ ಜೈಲು ಸೇರಿರುವ ಆದ್ರ್ರಾಳ ಸ್ನೇಹ ವಿಚಾರ ಬಯಲಾಗಿದೆ.

‘ಹಲವು ವರ್ಷಗಳಿಂದ ನನಗೆ ಆದ್ರ್ರಾಳೊಂದಿಗೆ ಒಡನಾಟವಿದೆ. ಸೈದ್ಧಾಂತಿಕ ನಿಲುವುಗಳು ನಮ್ಮ ಸ್ನೇಹವನ್ನು ಮತ್ತಷ್ಟುಗಟ್ಟಿಗೊಳಿಸಿತು. ನಾವು ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ಪ್ರತಿಭಟನೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದೇವು. ಕೆಲವು ದಿನಗಳ ಮಟ್ಟಿಗೆ ಒಂದೇ ಪಿಜಿಯಲ್ಲಿ ನೆಲೆಸಿದ್ದವು’ ಎಂದು ಅಮೂಲ್ಯ ಹೇಳಿಕೆ ನೀಡಿದ್ದಾಳೆ ಎನ್ನಲಾಗಿದೆ.

ಆದ್ರ್ರಾ ಜೈಲಿಗೆ ಸೇರಿದ ಬಳಿಕವೇ ನನ್ನ ಪರವಾಗಿ ಆಕೆ ದನಿ ಎತ್ತಿದ್ದು ಗೊತ್ತಾಯಿತು. ನಮ್ಮ ಮೇಲೆ ಸುಳ್ಳು ಆರೋಪ ಮಾಡಲಾಗಿದೆ. ನಾವು ತಪ್ಪು ಮಾಡಿಲ್ಲ ಎಂದು ಅಮೂಲ್ಯ ಹೇಳಿರುವುದಾಗಿ ಗೊತ್ತಾಗಿದೆ.

‘ನಾನು ಪಾಕಿಸ್ತಾನ ಪರ ಜಿಂದಾಬಾದ್‌ ಕೂಗಲು ಕಾರಣವಿದೆ. ಫ್ರೀಡಂ ಪಾರ್ಕ್ನಲ್ಲಿ ನಾನು ಭಾಷಣ ಪೂರ್ಣಗೊಳಿಸಲು ಅವಕಾಶ ನೀಡಲಿಲ್ಲ. ಹೀಗಾಗಿ ನನ್ನ ನಿಲುವನ್ನು ತಿಳಿಸಲು ಸಾಧ್ಯವಾಗಲಿಲ್ಲ. ಇದರಿಂದ ಜಿಂದಾಬಾದ್‌ ಕೂಗು ವಿವಾದಕ್ಕೆ ತಿರುಗಿತು. ನಾನು ತಪ್ಪು ಮಾಡಿಲ್ಲ. ನನ್ನ ಮಾತನ್ನು ತಪ್ಪಾಗಿ ಗ್ರಹಿಸಿ,ಅರ್ಥೈಸಲಾಗಿದೆ’ ಎಂದು ಅಮೂಲ್ಯ ಪ್ರತಿಪಾದಿಸಿರುವುದಾಗಿ ಮೂಲಗಳು ಹೇಳಿವೆ.

‘ನಾನು ಗೌರಿ ಲಂಕೇಶ್‌ ಗೌರವಿಸುತ್ತಿದ್ದೆ. ಅವರ ನಿಲುವುಗಳನ್ನು ಅನುಸರಿಸುತ್ತಿದ್ದೆ. ಅವರ ಹತ್ಯೆ ನನ್ನಲ್ಲಿ ಸಿಟ್ಟು ತರಿಸಿತು. ಸಾಮಾಜಿಕ ಜಾಲ ತಾಣಗಳಲ್ಲಿ ನನ್ನ ವಿರುದ್ಧ ವೈಯಕ್ತಿಕವಾಗಿ ಕೀಳು ಮಟ್ಟದಲ್ಲಿ ಟ್ರೋಲ್‌ ಮಾಡಲಾಯಿತು. ಇದರಿಂದ ಸಿಎಎ ವಿರೋಧಿ ಹೋರಾಟಕ್ಕೆ ಮತ್ತಷ್ಟುಪ್ರೇರೇಪಿಸಿತು. ನಾವು ಎಡಪಂಥೀಯ ವಿಚಾರಧಾರೆಗಳ ಪ್ರತಿಪಾದಿಸುವ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ. ನಮ್ಮ ಹೋರಾಟದ ಸಂವಹನಕ್ಕೆ ವಾಟ್ಸಪ್‌ ಗ್ರೂಪ್‌ ಮಾಡಿಕೊಂಡಿದ್ದೆವು’ ಎಂದು ಹೇಳಿದ್ದಾಳೆ ಎನ್ನಲಾಗಿದೆ.

ಡೇಟಿಂಗ್‌ ಆ್ಯಪ್‌ಗಳ ಬಳಕೆ?

ಸಿಎಎ ಮತ್ತು ಎನ್‌ಆರ್‌ಸಿ ವಿರೋಧಿ ಹೋರಾಟಕ್ಕೆ ಯುವ ಸಮೂಹವನ್ನು ಸೆಳೆಯಲು ಅಮೂಲ್ಯ ಲಿಯೋನಾ, ಸಾಮಾಜಿಕ ಜಾಲ ತಾಣಗಳನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಂಡಿದ್ದಳು. ವಾಟ್ಸ್‌ ಆ್ಯಪ್‌ಗಳಲ್ಲಿ ಯಂಗ್‌ ಇಂಡಿಯಾ ಹಾಗೂ ಬಿಎಸ್‌ಎಫ್‌ ಸೇರಿದಂತೆ ಮತ್ತಿರರ ಗ್ರೂಪ್‌ಗಳನ್ನು ರಚಿಸಿದ್ದ ಆಕೆ, ಹಲವು ವಿಚಾರಗಳನ್ನು ವಿನಿಮಿಯ ಮಾಡಿಕೊಂಡಿದ್ದಳು. ಅಲ್ಲದೆ ಡೇಟಿಂಗ್‌ ಆ್ಯಪ್‌ಗಳನ್ನು ಸಹ ಯುವ ಸಮೂಹವನ್ನು ಆಕರ್ಷಿಸಲು ಆಕೆ ಬಳಸಿಕೊಂಡಿದ್ದಳು ಎಂಬ ಮಾತುಗಳು ಕೇಳಿ ಬಂದಿವೆ.

ಅಮೂಲ್ಯ ಬಂಧನ ಬಳಿಕ ಆಕೆಯೊಂದಿಗೆ ವಾಟ್ಸ್‌ ಆ್ಯಪ್‌ ಸೇರಿದಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಮೆಸೇಜ್‌ಗಳನ್ನು ಕೆಲವರು ಡಿಲೀಟ್‌ ಮಾಡಿದ್ದರು. ಅದರಲ್ಲಿ ಆದ್ರ್ರಾಳಿಗೆ ಸಹ ಅಮೂಲ್ಯ ಜತೆ ವಾಯ್ಸ್ ಮೆಸೇಜ್‌ಗಳನ್ನು ಡಿಲೀಟ್‌ ಮಾಡುವಂತೆ ಕೆಲವರು ಸಲಹೆ ನೀಡಿದ್ದರು ಎಂದು ತಿಳಿದು ಬಂದಿದೆ.

ಇದನ್ನೂ ನೋಡಿ | ಇಂದಿನ ಚಿನ್ನ-ಬೆಳ್ಳಿ ದರ, ಪೆಟ್ರೋಲ್-ಡೀಸೆಲ್ ಬೆಲೆ:

"