Asianet Suvarna News Asianet Suvarna News

Amul Vs Nandini: ಅಮುಲ್‌ ಕಂಪನಿಯ ಏಕೈಕ ಸ್ಪರ್ಧಿ ನಂದಿನಿ ಬ್ರಾಂಡ್ ಮುಗಿಸಲು ಕೇಂದ್ರ ಸಂಚು: ಎಚ್‌ಡಿಕೆ ಸರಣಿ ಟ್ವೀಟ್

ಗುಜರಾತಿನಲ್ಲಿ ಎಂದೂ ಕೆಎಂಎಫ್ ಹಾಲು  ಮಾರಿದ್ದಿಲ್ಲ. ಅದು ಅಮುಲ್ ನ ಸ್ಥಳೀಯ ಮಾರುಕಟ್ಟೆ ಹಿತ, ಸಹಕಾರಿ ತತ್ವವನ್ನು ಗೌರವಿಸಿದೆ. ಕರ್ನಾಟಕ ನೈಜ ಸಹಕಾರ ತತ್ತ್ವ ನಂಬಿದ್ದರೆ, ಗುಜರಾತ್ ಅಸಹಕಾರವನ್ನೇ ನಂಬಿದೆ. ಬಿಜೆಪಿ ಡಬಲ್ ಎಂಜನ್ ಸರಕಾರ ನಮ್ಮ ರಾಜ್ಯದ ಹಾಲು ಉತ್ಪಾದಕರನ್ನು ಬೀದಿಗೆ ತಳ್ಳಿ ಗುಜರಾತಿಗಳ ಗುಲಾಮರನ್ನಾಗಿ ಮಾಡಲು ಹೊರಟಿದೆ ಎಂದು : ಎಚ್‌ಡಿಕೆ

Amul vs Nandini Brand HD Kumaraswamy outraged against bjp govt serial tweets rav
Author
First Published Apr 8, 2023, 12:26 PM IST

ಬೆಂಗಳೂರು (ಏ8) ಗುಜರಾತ್ ಮೂಲದ ಅಮುಲ್ ಮತ್ತು ರಾಜ್ಯದ ನಂದಿನಿ ಹಾಲು ವಿಚಾರವಾಗಿ ರಾಜ್ಯಾದ್ಯಂತ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಕೇಂದ್ರ ಸರ್ಕಾರ ನಂದಿನಿ ಬ್ರಾಂಡ್ ಅಪೋಶನ ಮಾಡಲು ಹೊರಟಿದೆ ಎಂದು ಕನ್ನಡಿಗರು ಟ್ವಿಟರ್‌ನಲ್ಲಿ #Savenandini ಹ್ಯಾಷ್ ಟ್ಯಾಗ ಬಳಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಟ್ವೀಟ್ ಮಾಡಿ ರಾಜ್ಯ, ಕೇಂದ್ರ ಸರ್ಕಾರದ ವಿರುದ್ಧ ಸರಣಿ ಟ್ವಿಟ್ ಮಾಡಿದ್ದಾರೆ.

ಕೇಂದ್ರ ಸರ್ಕಾರ ಹಿಂದಿ ಹೇರಿಕೆ ಮಾಡುವುದಲ್ಲದೆ, ಇದೀಗ ನಂದಿನಿ ಬ್ರಾಂಡ್‌ ಬದಲಿಗೆ ಅಮುಲ್ ಹೇರುತ್ತಿರುವ ವಿಚಾರವಾಗಿ ಟ್ವಿಟ್ ಮಾಡಿರುವ ಕುಮಾರಸ್ವಾಮಿಯವರು,  "ಇಲ್ಲಿನ ಡಬಲ್ ಎಂಜಿನ್ ಬಿಜೆಪಿ ಸರಕಾರ ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ತಕ್ಷಣ ರಾಜ್ಯದಲ್ಲಿ "ಅಮುಲ್ʼನ ಪ್ಯಾಕೆಟ್ ಹಾಲಿನ ಮಾರಾಟಕ್ಕೆ ತಡೆ ಒಡ್ಡಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೇ ಕೇಂದ್ರದ ಒತ್ತಾಸೆಯಿಂದ ಅಮುಲ್ ಕದ್ದುಮುಚ್ಚಿ ಹಿಂಬಾಗಿಲ ಮೂಲಕ ಬರುತ್ತಿದೆ. ಕೆಎಂಎಫ್ ಮತ್ತು ರೈತರ ಕುತ್ತಿಗೆಗೆ ಕುಣಿಕೆ ಬಿಗಿಯುತ್ತಿರುವ ಅಮುಲ್ ವಿರುದ್ಧ ಕನ್ನಡಿಗರು ಸಿಡಿದೇಳಬೇಕು ಎಂದು ಕರೆ ನೀಡಿದ್ದಾರೆ.

ಕೆಎಂಎಫ್‌ಗೆ ಸಡ್ಡು: ರಾಜ್ಯದಲ್ಲಿ ಅಮುಲ್‌ ಹೋಮ್‌ ಡೆಲಿವರಿ!

ಕನ್ನಡಗಿರು ಎಚ್ಚೆತ್ತುಕೊಳ್ಳಬೇಕು:

ಕನ್ನಡಿಗರಾದ ನಾವು ತಕ್ಷಣ ಎಚ್ಚೆತ್ತುಕೊಳ್ಳಬೇಕು. ನಂದಿನಿಯನ್ನೇ ಅವಲಂಬಿಸಿರುವ ರಾಜ್ಯದ ರೈತರ ಹಿತವನ್ನು ಆದ್ಯತೆಯಲ್ಲಿಟ್ಟುಕೊಂಡು ರಕ್ಷಿಸಿ ಉಳಿಸಿಕೊಳ್ಳಬೇಕು. ನಮ್ಮ ಜನತೆ -ಗ್ರಾಹಕರು ನಂದಿನಿ ಉತ್ಪನ್ನಗಳನ್ನಷ್ಟೇ ಆದ್ಯತೆಯ ಮೇರೆಗೆ ಬಳಸಿ ರಾಜ್ಯದ ರೈತರ  ಬದುಕನ್ನು ಕಾಪಾಡಬೇಕು. ಅಷ್ಟೇ ಅಲ್ಲ;‌ ರಾಜ್ಯ ಸರಕಾರವು ಗುಜರಾತ್ ಹಾಲು ಮಹಾಮಂಡಳಿ "ಅಮುಲ್ʼಗೆ ಬೆಂಗಳೂರಿನ ಕೋರಮಂಗಲದಲ್ಲಿ ಅತೀ ಕಡಿಮೆ ದರಕ್ಕೆ ಬೆಲೆ ಬಾಳುವ ಬೃಹತ್ ಜಾಗ ನೀಡಿದೆ. ಇಷ್ಟು ಔದಾರ್ಯ ತೋರಿದ ಕರ್ನಾಟಕ ಹಾಲು ಉತ್ಪಾದಕರು ಮತ್ತು "ಕೆಎಂಎಫ್ʼಗೆ ದೊಡ್ಡ ಖೆಡ್ಡಾ ತೋಡಲು ಅಮುಲ್ ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡಿಗರಿಗೆ ಅಮುಲ್ ಋಣಿ ಇರಬೇಕು. ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ(HD Devegowda)ರು ಪ್ರಧಾನಿ ಆಗಿದ್ದಾಗ, ಮಾಜಿ ಸಚಿವ ಎಚ್‌ಡಿ ರೇವಣ್ಣ(HD Revanna) ಅವರು ಕೆಎಂಎಫ್ (KMF)ಅಧ್ಯಕ್ಷರಾಗಿದ್ದರು. ಆಗ ಯಲಹಂಕ ಮದರ್ ಡೈರಿಯಲ್ಲಿ ವಿಶೇಷ ಐಸ್ ಕ್ರೀಮ್ ಘಟಕ ಸ್ಥಾಪಿಸಿ, ಈ ಘಟಕದಿಂದ ದಶಕಗಳಿಂದ ನಿತ್ಯವೂ  ಕೆಎಂಎಫ್ ದೊಡ್ಡ ಪ್ರಮಾಣದಲ್ಲಿ ಅಮುಲ್ ಬ್ರ್ಯಾಂಡ್ ಐಸ್ʼಕ್ರೀಮ್(Amul brand Ice cream) ತಯಾರಿಸಿ ಈಗಲೂ ಕೊಡುತ್ತಿದೆ.

ಗುಜರಾತಿನಲ್ಲಿ ನಂದಿನಿ ಹಾಲು ಯಾಕೆ ಮಾರಲ್ಲ?

ಗುಜರಾತಿನಲ್ಲಿ ಎಂದೂ ಕೆಎಂಎಫ್ ಹಾಲು  ಮಾರಿದ್ದಿಲ್ಲ. ಅದು ಅಮುಲ್ ನ ಸ್ಥಳೀಯ ಮಾರುಕಟ್ಟೆ ಹಿತ, ಸಹಕಾರಿ ತತ್ವವನ್ನು ಗೌರವಿಸಿದೆ. ಹಾಲು ಸಮೃದ್ಧಿ ಇರುವ ಯಾವುದೇ ಮಹಾಮಂಡಳದ ಸ್ಥಳೀಯ ವ್ಯಾಪ್ತಿಯಲ್ಲಿ ಕೆಎಂಎಫ್ ತನ್ನ ಹಾಲನ್ನು ಮಾರಲ್ಲ. ಕರ್ನಾಟಕ ನೈಜ ಸಹಕಾರ ತತ್ತ್ವ ನಂಬಿದ್ದರೆ, ಗುಜರಾತ್ ಅಸಹಕಾರವನ್ನೇ ನಂಬಿದೆ. ಬಿಜೆಪಿ ಡಬಲ್ ಎಂಜನ್ ಸರಕಾರ ನಮ್ಮ ರಾಜ್ಯದ ಹಾಲು ಉತ್ಪಾದಕರನ್ನು ಬೀದಿಗೆ ತಳ್ಳಿ ಗುಜರಾತಿಗಳ ಗುಲಾಮರನ್ನಾಗಿ ಮಾಡುವ ಹುನ್ನಾರ ನಡೆಸಿರುವುದು ಸ್ಪಷ್ಟ. ಇದುರೆಗೂ ಇಷ್ಟೆಲ್ಲಾ ಆದರೂ ರಾಜ್ಯ ಬಿಜೆಪಿ ಸರಕಾರದ ದಿವ್ಯಮೌನ, ಕೆಎಂಎಫ್  ನಿಷ್ಕ್ರಿಯತೆ ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದಿದ್ದಾರೆ.

ಕೆಎಂಎಫ್ ಜತೆ ಅಮುಲ್ ಅನಗತ್ಯ ಸ್ಪರ್ಧೆ ನಡೆಸಿ ದಿನದಿಂದ ದಿನಕ್ಕೆ ನಂದಿನಿ(Nandini milk)ಯನ್ನು ತುಳಿಯುವ ಹುನ್ನಾರ ನಡೆಸುತ್ತಿದೆ, ಇದು ಸ್ಪಷ್ಟ. ಸಹಕಾರಿ ಕ್ಷೇತ್ರದ ಪ್ರಸಿದ್ಧ ಸೋದರ ಸಂಸ್ಥೆಗಳ ನಡುವೆ ಅನಾರೋಗ್ಯಕರ ಪೈಪೋಟಿ ಯಾರಿಗೂ ಹಿತವಲ್ಲ.ಕೆಎಂಎಫ್ ರಾಜ್ಯದ ಸಾವಿರಾರು ಗ್ರಾಮಗಳ ಸಹಕಾರ ಸಂಘಗಳ ಮೂಲಕ ರೈತರಿಂದಲೇ ಹಾಲನ್ನು ನೇರವಾಗಿ ಖರೀದಿಸುತ್ತದೆ. 

ಹೈನುಗಾರಿಕೆಯ ಮೂಲ ಉತ್ಪನ್ನ ಹಾಲನ್ನು ತನ್ನ ಬ್ರ್ಯಾಂಡ್ʼನಲ್ಲಿಯೇ ಕರ್ನಾಟಕದಲ್ಲಿಯೇ ಮಾರಲು ಹೊರಟಿರುವ ಅಮುಲ್, ನಂದಿನಿಯನ್ನು ಆಪೋಶನ ತೆಗೆದುಕೊಳ್ಳುವುದು ಖಚಿತ. ವಿಲೀನಕ್ಕೆ, ಹಿಂದಿ ಹೇರಿಕೆಗೆ ಪ್ರಬಲ ಪ್ರತಿರೋಧ ಒಡ್ಡುತ್ತಿರುವ ಕನ್ನಡಿಗರು ಮತ್ತು ಕೆಎಂಎಫ್ʼನ ಕಥೆ ಮುಗಿಸಲೇಬೇಕು ಎಂದು ಅಮುಲ್ ಪಣ ತೊಟ್ಟಂತಿದೆ ಎಂದಿದ್ದಾರೆ.

ಅಮುಲ್‌ನ ಏಕೈಕ ಪ್ರತಿಸ್ಪರ್ಧಿ ನಂದಿನಿ ಮುಗಿಸಲು ಸಂಚು: 

ತನ್ನ ಏಕೈಕ ಪ್ರತಿಸ್ಪರ್ಧಿ ನಂದಿನಿಗೆ ಕರ್ನಾಟಕದಲ್ಲೇ ಅಡ್ಡಿ ಮಾಡಬೇಕೆನ್ನುವುದು ಅಮುಲ್ ದುರಾಲೋಚನೆ. 'ಒಂದು ದೇಶ, ಒಂದು ಅಮುಲ್, ಒಂದೇ ಹಾಲು, ಒಂದೇ ಗುಜರಾತ್ʼಎನ್ನುವುದು ಕೇಂದ್ರ ಸರಕಾರದ ಅಧಿಕೃತ ನೀತಿಯಂತಿದೆ. ಅದಕ್ಕೆ 'ಅಮುಲ್ʼಗೆ ಒತ್ತಾಸೆಯಾಗಿ ನಿಂತು ಕೆಎಂಎಫ್ ಕತ್ತು ಹಿಚುಕುತ್ತಿದೆ.ಈಗ ಅಮುಲ್ ಹಿಂಬಾಗಿಲ ಮೂಲಕ ಒಳನುಗ್ಗುತ್ತಿದೆ.

 

ನಂದಿನಿ-ಅಮುಲ್‌ ಪ್ರತ್ಯೇಕ ಅಸ್ತಿತ್ವ ಹೊಂದಿರಲಿವೆ: ಸಿಎಂ ಬೊಮ್ಮಾಯಿ ಸ್ಪಷ್ಟನೆ

ಇದು ಮೂರನೇ ಸಂಚು: 

ಕನ್ನಡಿಗರ ಜೀವನಾಡಿ ನಂದಿನಿಯನ್ನು ಮುಗಿಸಲು ಈಗ ನಡೆದಿದೆ 3ನೇ ಸಂಚು.

  • ಸಂಚು1: ಅಮುಲ್ ಜತೆ ನಂದಿನಿ ವಿಲೀನ; ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ.
  • ಸಂಚು2: ಮೊಸರಿನ ಮೇಲೆ ಹಿಂದಿಯ 'ದಹಿ' ಪದ ಮುದ್ರಣ

ಕನ್ನಡಿಗರ ತೀವ್ರ ವಿರೋಧದಿಂದ ಎರಡೂ ಸಂಚು ವಿಫಲ. 3ನೇ ಸಂಚು ಸಫಲಗೊಳಿಸಲು ಅಮುಲ್ ಮೂಲಕ ಕೇಂದ್ರ ಸರಕಾರ ಹೊರಟಿದೆ. ಕನ್ನಡಿಗರು ಎಚ್ಚೆತ್ತುಕೊಂಡು ನಂದಿನಿ ಬ್ರಾಂಡ್ ಉಳಿಸಿಕೊಳ್ಳಬೇಕು ಎಂದು ಟ್ವೀಟ್ ಮೂಲಕ ಹೋರಾಟಕ್ಕೆ ಕರೆ ನೀಡಿದ್ದಾರೆ. 

Follow Us:
Download App:
  • android
  • ios