ಕೆಎಂಎಫ್‌ಗೆ ಸಡ್ಡು: ರಾಜ್ಯದಲ್ಲಿ ಅಮುಲ್‌ ಹೋಮ್‌ ಡೆಲಿವರಿ!

ನಂದಿನಿ ಬ್ರ್ಯಾಂಡ್‌ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟದಲ್ಲಿ ಅಧಿಪತ್ಯ ಹೊಂದಿರುವ ಕೆಎಂಎಫ್‌ಗೆ ಸಡ್ಡು ಹೊಡೆಯಲು ಮುಂದಾಗಿರುವ ಗುಜರಾತ್‌ ಮೂಲದ ಅಮುಲ್‌, ಬೆಂಗಳೂರು ಮಾರುಕಟ್ಟೆಯಲ್ಲಿ ಆನ್‌ಲೈನ್‌ ಮೂಲಕ ಹಾಲು ಮತ್ತು ಮೊಸರು ವಿತರಣೆಗೆ ಸಜ್ಜಾಗಿದೆ. 
 

Kannadigas Slams Amul For Its Milk Distribution Plan In Bangalore And Kmf Administration gvd

ಬೆಂಗಳೂರು (ಏ.07): ನಂದಿನಿ ಬ್ರ್ಯಾಂಡ್‌ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟದಲ್ಲಿ ಅಧಿಪತ್ಯ ಹೊಂದಿರುವ ಕೆಎಂಎಫ್‌ಗೆ ಸಡ್ಡು ಹೊಡೆಯಲು ಮುಂದಾಗಿರುವ ಗುಜರಾತ್‌ ಮೂಲದ ಅಮುಲ್‌, ಬೆಂಗಳೂರು ಮಾರುಕಟ್ಟೆಯಲ್ಲಿ ಆನ್‌ಲೈನ್‌ ಮೂಲಕ ಹಾಲು ಮತ್ತು ಮೊಸರು ವಿತರಣೆಗೆ ಸಜ್ಜಾಗಿದೆ. ಗುಜರಾತ್‌ ಮೂಲದ ಹೈನೋದ್ಯಮ ಸಂಸ್ಥೆ ಅಮುಲ್‌ ಕನ್ನಡನಾಡಿನಲ್ಲಿ ಹಾಲು ಮತ್ತು ಮೊಸರು ಮಾರಾಟಕ್ಕೆ ಮುಂದಾಗಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ‘ಬಾಯ್ಕಾಟ್‌ ಅಮುಲ್‌, ಸೇವ್‌ ನಂದಿನಿ’ ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಅಭಿಯಾನ ಆರಂಭಿಸಿದ್ದಾರೆ.

‘ಅಮುಲ್‌ ಕನ್ನಡ’ ಎಂಬ ಟ್ವಿಟ್ಟರ್‌ ಖಾತೆಯಲ್ಲಿ ‘ಅಮುಲ್‌ ನಿಮಗೆ ಹಾಲು ಮತ್ತು ಮೊಸರಿನ ರೂಪದಲ್ಲಿ ಹೊಸ ತಾಜಾತನವನ್ನು ತರುತ್ತಿದೆ. ಆರ್ಡರ್‌ ಮಾಡಿದರೆ ಶೀಘ್ರದಲ್ಲೇ ನಿಮ್ಮ ಮನೆ ಬಾಗಿಲಿಗೆ ತಾಜಾ ಹಾಲು ಮತ್ತು ಮೊಸರು ಲಭ್ಯವಾಗಲಿದೆ. ಕ್ವಿಕ್‌ ಕಾಮರ್ಸ್‌ ಪ್ಲಾಟ್‌ಫಾರ್ಮ್‌ನಲ್ಲಿ ಶೀಘ್ರದಲ್ಲೇ ಲಭ್ಯವಾಗಲಿದ್ದು, ಹೆಚ್ಚಿನ ಮಾಹಿತಿ ಶೀಘ್ರದಲ್ಲೇ ಬರಲಿದೆ’ ಎಂಬಿತ್ಯಾದಿ ಮಾಹಿತಿಗಳನ್ನು ಪ್ರಕಟಿಸಲಾಗಿದೆ. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಬೆಂಗಳೂರಿನಲ್ಲಿ ಅಮುಲ್‌ ಹಾಲು, ಮೊಸರಿನ ದರ ಎಷ್ಟಿರಲಿದೆ ಎಂಬುದನ್ನು ಅಮುಲ್‌ ಸಂಸ್ಥೆ ಪ್ರಕಟಿಸಿಲ್ಲ. ಶೀಘ್ರದಲ್ಲೇ ಈ ಕುರಿತು ಮಾಹಿತಿ ಪ್ರಕಟಿಸುವುದಾಗಿ ಹೇಳಿಕೊಂಡಿದೆ. ಬೆಂಗಳೂರಿನ ಮಾರುಕಟ್ಟೆಯಲ್ಲಿ ನಂದಿನಿ ಬ್ರ್ಯಾಂಡ್‌ ಉತ್ಪನ್ನಗಳದ್ದೇ ಸಿಂಹಪಾಲಿದೆ. ಈ ನಡುವೆ ಹೈನೋದ್ಯಮದ ದೈತ್ಯ ಅಮುಲ್‌ ಯಾವ ರೀತಿ ಮಾರಾಟ ತಂತ್ರ ಅನುಸರಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.

ರಾಜ್ಯದ ಒಳಮೀಸಲಾತಿಯಿಂದ ದೇಶದಲ್ಲಿ ದೊಡ್ಡ ಬದಲಾವಣೆ: ಸಿಎಂ ಬೊಮ್ಮಾಯಿ

ಕಳೆದ ಡಿಸೆಂಬರ್‌ನಲ್ಲಿ ಮಂಡ್ಯದ ಗೆಜ್ಜಲಗೆರೆ ಮೆಗಾ ಡೇರಿ ಉದ್ಘಾಟನೆ ಮಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಕೆಎಂಎಫ್‌ ಮತ್ತು ಅಮುಲ್‌ ಜತೆಯಾಗಿ ಸಾಗಿದರೆ ಸಹಕಾರಿ ಕ್ಷೇತ್ರದಲ್ಲಿ ಅದ್ಭುತವಾದದ್ದನ್ನು ಸಾಧಿಸಬಹುದು ಎಂದು ಹೇಳಿದ್ದರು. ಇದನ್ನು ಕೆಎಂಎಫ್‌ ಮತ್ತು ಅಮುಲ್‌ ವಿಲೀನಗೊಳಿಸುವ ಹುನ್ನಾರ ಎಂದು ವ್ಯಾಖ್ಯಾನಿಸಲಾಗಿತ್ತು. ಅಲ್ಲದೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಆದರೆ, ರಾಜ್ಯ ಬಿಜೆಪಿ ನಾಯಕರು, ಸಚಿವರು ಕೆಎಂಎಫ್‌ ಮತ್ತು ಅಮುಲ್‌ ವಿಲೀನಗೊಳಿಸುವ ಪ್ರಸ್ತಾವ ಇಲ್ಲ ಎಂದು ಸ್ಪಷ್ಟೀಕರಣ ನೀಡಿದ್ದರು.

ಅಲಿಖಿತ ನಿಯಮ ಮುರಿದ ಅಮುಲ್‌: ಕಳೆದೊಂದು ತಿಂಗಳಿನಿಂದ ಕೆಎಂಎಫ್‌ನ 16 ಒಕ್ಕೂಟಗಳಲ್ಲಿ ಹಾಲು ಸಂಗ್ರಹಣೆ ನಿರೀಕ್ಷಿತ ಗುರಿ ಮುಟ್ಟುತ್ತಿಲ್ಲ. ಇತ್ತೀಚೆಗೆ ಬಮೂಲ್‌ನಲ್ಲಿ ಹಾಲು ಪೂರೈಸುವ ವಾಹನ ಚಾಲಕರ ಮುಷ್ಕರದಿಂದ ಮಾರುಕಟ್ಟೆಯಲ್ಲಿ ಹಾಲಿನ ಕೊರತೆ ಉಂಟಾಗಿತ್ತು. ಪ್ರತಿ ದಿನ ಬೆಂಗಳೂರಿನಲ್ಲಿ 15 ಲಕ್ಷ ಲೀಟರ್‌ ಹಾಲಿನ ಬೇಡಿಕೆ ಇದೆ. ಆದರೆ, ಬೇಸಿಗೆಯಲ್ಲಿ ಮೇವಿನ ಕೊರತೆಯಿಂದ ಹಾಲಿನ ಉತ್ಪಾದನೆಯೂ ಕಡಿಮೆಯಾಗಿದೆ. ಜೊತೆಗೆ ಹಾಲು ಉತ್ಪನ್ನದಾರರು ಕೂಡ ಹೆಚ್ಚಿನ ಬೆಲೆಗೆ ಖಾಸಗಿ ಡೈರಿಗಳಿಗೆ ಹಾಲು ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ ಹಾಲಿನ ಸಂಗ್ರಹಣೆ ಕೊರತೆ ಕಂಡುಬಂದಿದ್ದು ಬೇಡಿಕೆಗೆ ತಕ್ಕಂತೆ ಹಾಲು ಪೂರೈಕೆಯಾಗದಿರುವ ಲಾಭ ಪಡೆಯಲು ಅಮುಲ್‌ ಹುನ್ನಾರ ನಡೆಸಿದೆ. ಆಯಾ ರಾಜ್ಯಗಳಲ್ಲಿ ಹೆಚ್ಚುವರಿ ಹಾಲು ಲಭ್ಯವಿದ್ದಲ್ಲಿ ಆ ರಾಜ್ಯದ ಬ್ರ್ಯಾಂಡ್‌ ಹಾಲು ಹೊರತು ಇನ್ನೊಂದು ರಾಜ್ಯದ ಸಹಕಾರಿ ಬ್ರ್ಯಾಂಡ್‌ ಹಾಲನ್ನು ಮಾರಾಟ ಮಾಡುವಂತಿಲ್ಲ ಎಂಬ ಅಲಿಖಿತ ಒಪ್ಪಂದವನ್ನು ಅಮುಲ್‌ ಮುರಿದಿದ್ದು, ಬೆಂಗಳೂರು ಮಾರುಕಟ್ಟೆಗೆ ಲಗ್ಗೆ ಹಾಕಲು ಮುಂದಾಗಿದೆ ಎನ್ನಲಾಗಿದೆ.

ಶೇ.70 ನಂದಿನಿ ಪಾಲು: ಮುಕ್ತ ಮಾರುಕಟ್ಟೆಯಲ್ಲಿ ಹಾಲಿನ ಉತ್ಪನ್ನಗಳನ್ನು ಯಾರು, ಎಲ್ಲಿ ಬೇಕಾದರೂ ಮಾರಬಹುದು. ಆದರೆ ಬೆಂಗಳೂರಿನ ಹಾಲು, ಮೊಸರು ಮಾರುಕಟ್ಟೆಯಲ್ಲಿ ನಂದಿನಿ ಶೇ.70ರಷ್ಟು ಪಾಲು ಹೊಂದಿದೆ. ಯಾವುದೇ ಆತಂಕವಿಲ್ಲ. ಅಲ್ಲದೆ ಅಮುಲ್‌ನವರು ಎಷ್ಟುಲೀಟರ್‌ ಮಾರುತ್ತಾರೆ? ಒಂದು ಲೀಟರ್‌ ಹಾಲು ಅಥವಾ ಮೊಸರಿಗೆ ಎಷ್ಟುದರ ನಿಗದಿ ಮಾಡಿದ್ದಾರೆ ಎಂಬುದು ತಿಳಿದಿಲ್ಲ ಎನ್ನುತ್ತಾರೆ ಕೆಎಂಎಫ್‌ ಅಧಿಕಾರಿಗಳು.

ದೇವೇ​ಗೌ​ಡರೇ ಹಾಸನ ಕುರಿತು ತೀರ್ಮಾ​ನ ತಗೋತಾರೆ: ನಿಖಿಲ್‌ ಕುಮಾ​ರ​ಸ್ವಾಮಿ

ತೀವ್ರ ಆಕ್ರೋಶ: ಬೆಂಗಳೂರಿನಲ್ಲಿ ಹಾಲು, ಮೊಸರು ಮಾರಾಟಕ್ಕೆ ಸಜ್ಜಾಗುತ್ತಿರುವ ಅಮುಲ್‌ ಬಗ್ಗೆ ಟ್ವಿಟ್ಟರ್‌ನಲ್ಲಿ ಆಕ್ರೋಶ ತೀವ್ರಗೊಂಡಿದೆ. ನಂದಿನಿ ಹಾಲು, ಮೊಸರನ್ನಲ್ಲದೆ ಬೇರೆ ಯಾವುದೇ ಬ್ರ್ಯಾಂಡ್‌ ಬಳಸುವುದಿಲ್ಲ. ಅದರಲ್ಲೂ ‘ಗುಜ್ಜುಗಳ ಅಮುಲ್‌’ ಬಳಸೋದಿಲ್ಲ ಎಂದು ಪ್ರತಿಜ್ಞೆ ಮಾಡೋಣ ಎಂದು ಕೆಲವರು ಬರೆದುಕೊಂಡಿದ್ದಾರೆ. ಮತ್ತೊಬ್ಬರು ‘ಇಷ್ಟುದಿನ ನಂದಿನಿ ಪದಾರ್ಥಗಳು ಎಲ್ಲೆಡೆ ಸಿಗದಂತೆ ಮಾಡಿ ಕೃತಕ ಅಭಾವ ಸೃಷ್ಟಿಸಿದ್ದಕ್ಕೆ ಕಾರಣವಿದು. ಈಗ ನಂದಿನಿಯ ಜಾಗವನ್ನು ಅಮುಲ್‌ ಆಕ್ರಮಿಸಲು ಬರುತ್ತಿದೆ. ನಮ್ಮ ನಂದಿನಿಯನ್ನು ಈಗ ಕನ್ನಡಿಗರಾದ ನಾವೇ ಕಾಪಾಡಿಕೊಳ್ಳಬೇಕು. ನಂದಿನಿಯನ್ನಷ್ಟೇ ಬಳಸುವ ಮೂಲಕ ಅಮುಲ್‌ ಬಂದ ದಾರಿಗೆ ಸುಂಕವಿಲ್ಲದಂತೆ ಹಿಂದಿರುಗುವ ಹಾಗೆ ಮಾಡಬೇಕು’ ಎಂದು ತಮ್ಮ ಅಭಿಪ್ರಾಯಗಳನ್ನು ಬರೆದುಕೊಂಡಿದ್ದಾರೆ.

ಅಮುಲ್‌ ರಣತಂತ್ರ
- ಕ್ವಿಕ್‌ ಕಾಮರ್ಸ್‌ ಪ್ಲಾಟ್‌ಫಾರ್ಮ್‌ನಲ್ಲಿ ಬೆಂಗಳೂರಿನಲ್ಲಿ ಹೋಂ ಡೆಲಿವರಿ
- ಮನೆ ಬಾಗಿಲಿಗೆ ಹಾಲು, ಮೊಸರು ತಲುಪಿಸುತ್ತೇವೆ ಎಂದು ಜಾಹೀರಾತು
- ರಾಜ್ಯದಲ್ಲಿ ಹಾಲು ಉತ್ಪಾದನೆ ಕುಸಿತದ ಲಾಭ ಪಡೆಯಲು ಪ್ರಯತ್ನ?
- ಇತ್ತೀಚೆಗೆ ನಂದಿನಿ ಉತ್ಪನ್ನಗಳ ಅಭಾವ ಸೃಷ್ಟಿಗೂ ಇದೇ ಕಾರಣವೇ?

Latest Videos
Follow Us:
Download App:
  • android
  • ios